ಅಧಿಕಾರಿಗಳ ನಿರ್ಲಕ್ಷ್ಯ: ದೊರೆಯದ ನೀರು
ದೇವದುರ್ಗ: ಪಟ್ಟಣದಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿದ ಕಿರು ನೀರು ಸರಬರಾಜು ಯೋಜನೆ ಸಾರ್ವಜನಿಕರ ಬಳಕೆಯ ನೀರಿನ ತೊಟ್ಟಿಗಳು ಜನತೆಗೆ ನೀರೊದಗಿಸದೇ ನಿಷ್ಪ್ರಯೋಜಕವಾಗಿದ್ದು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇಲ್ಲಿನ 23 ವಾರ್ಡುಗಳ ಪೈಕಿ ಕೆಲ ವಾರ್ಡುಗಳಲ್ಲಿ ಬೇಸಿಗೆಯ ಈ ದಿನಗಳಲ್ಲಿ ನೀರಿನ ಅಭಾವವಿದೆ. ಕುಡಿಯುವ ನೀರಿನ ತೊಂದರೆದಾಯಕ ಪ್ರದೇಶದಲ್ಲಿ ಪುರಸಭೆಯಿಂದ ಅವಶ್ಯ ಸಂದರ್ಭದಲ್ಲಿ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತಿದೆ. ಆದರೂ ಜನತೆಯ ಪರದಾಟ ತಪ್ಪಿಲ್ಲ.
ನೇತಾಜಿ ಓಣಿ ಮತ್ತು ದರ್ಬಾರ್ ಓಣಿಯಲ್ಲಿ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯಿಂದ ತಲಾ 2.50 ಲಕ್ಷ ವೆಚ್ಚದಲ್ಲಿ ಎರಡು ಕಿರು ನೀರು ಸರಬರಾಜು ಯೋಜನೆ ಕೊಳವೆಬಾವಿ ಕೊರೆದು, ನೀರಿನ ತೊಟ್ಟಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ ತೊಟ್ಟಿಗೆ ಕೊಳವೆ ಮಾರ್ಗದ ಸಂಪರ್ಕ ಕಲ್ಪಿಸದಿದ್ದರಿಂದ ಜನತೆಗೆ ಯೋಜನೆಯ ಲಾಭ ದೊರೆಯುತ್ತಿಲ್ಲ.
ಈ ಎರಡೂ ಕಡೆ ಕಾಮಗಾರಿ ಮುಗಿದು ತಿಂಗಳು ಕಳೆದರೂ ಜನತೆಗೆ ಮಾತ್ರ ಯೋಜನೆಯಡಿ ನೀರು ದೊರೆಯುತ್ತಿಲ್ಲ. ಅಲೆದಾಟ ತಪ್ಪಿಲ್ಲ ಎಂಬುದು ನಿವಾಸಿಗಳ ಆರೋಪ. ಅಧಿಕಾರಿಗಳ ಕಾರ್ಯವೈಖರಿಗೆ ಜನತೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಬೇಸಿಗೆಯ ದಿನಗಳಲ್ಲಿ ಸಮರ್ಪಕ ನೀರೊದಗಿಸುವ ಭರವಸೆ ಕೊಡುವ ಅಧಿಕಾರಿಗಳು ಬಹುತೇಕ ಪೂರ್ಣಗೊಂಡ ಯೋಜನೆಯ ಮೂಲಕ ನೀರೊದಗಿಸಲು ಆಸಕ್ತಿ ತೋರದಿರುವುದು ಇಲ್ಲಿ ಸಾಬೀತಾಗಿದೆ.
ಇನ್ನಾದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಿ ಈ ಎರಡೂ ಕಿರು ನೀರು ಸರಬರಾಜು ಯೋಜನೆಯ ತೊಟ್ಟಿಗಳಿಂದ ಜನತೆಗೆ ನೀರೊದಗಿಸುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

