ರಾಯಚೂರು

ಸಂಸ್ಥೆಗಳಿಗೆ ದೂರದೃಷ್ಟಿಯಿದ್ರೆ ಭವಿಷ್ಯ

Published On :

ಸಿಂಧನೂರು: ಸಂಘ ಸಂಸ್ಥೆಗಳನ್ನು ಕಟ್ಟುವ ಜನರಿಗೆ ದೂರದೃಷ್ಟಿಯ ಸಂಕಲ್ಪ, ಮಹದಾದ ಉದ್ದೇಶ ಮತ್ತು ಒಗ್ಗಟ್ಟು ಇದ್ದರೆ ಸಂಸ್ಥೆಗಳು ಉಜ್ವಲವಾಗಿ ಬೆಳೆಯುತ್ತವೆ ಎನ್ನುವುದಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸಾಕ್ಷಿಯಾಗಿದೆ ಎಂದು ವಿಶ್ರಾಂತ ಪ್ರಾಚಾರ್ಯ ಹಾಗೂ ಹಿರಿಯ ಸಾಹಿತಿ ಶಾಶ್ವತಸ್ವಾಮಿ ಮುಕ್ಕುಂದಿಮಠ ಅಭಿಪ್ರಾಯಪಟ್ಟರು.
ನಗರದ ಬಸವಪ್ರಸಾದ ನಿಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ಗೆ ನೂರು ವರ್ಷ ತುಂಬಿದ ಹಿನ್ನಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಬೆಳೆದು ಬಂದ ಬಗ್ಗೆ ಉಪನ್ಯಾಸ ನೀಡಿದರು.
ಹಿನ್ನೆಲೆ: 1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಜನ್ಮ ತಾಳಿದ ಕನ್ನಡ ಸಾಹಿತ್ಯ ಪರಿಷತ್ ಇಲ್ಲಿಯವರೆಗೆ ಬೆಳೆದು ನಿಂತಿದೆ. 80 ಸಮ್ಮೆಳನಗಳಾಗಿವೆ. ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕದಲ್ಲಿ 8 ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿದ್ದು, ಅವುಗಳಲ್ಲಿ ಜಿ.ಪಿ. ರಾಜರತ್ನಂ, ಬಿ.ಎಲ್. ನರಸಿಂಹಚಾರ್, ಆದ್ಯ ರಂಗಾಚಾರ್, ಸಿಂ.ಪಿ. ಲಿಂಗಣ್ಣ, ಸಿದ್ದಯ್ಯ ಪುರಾಣಿಕ ಮತ್ತಿತರ ಗಣ್ಯರು ಬಿ.ಎಂ. ಶ್ರೀಕಂಠಯ್ಯ ಅವರಂತಹ ದಿಗ್ಗಜರು ಸಮ್ಮೇಳನದ ಅಧ್ಯಕ್ಷರಾಗಿರುವುದು ಸಾಹಿತ್ಯ ಪ್ರೇಮಿಗಳ ಸೌಭಾಗ್ಯ ಎಂದರು. ಇತ್ತೀಚೆಗೆ ಕನ್ನಡ ಸಾಹಿತ್ಯ ಸಮ್ಮೇಳನರ ಆಯ್ಕೆಯಲ್ಲಿ ರಾಜಕೀಯ ಪ್ರಭಾವ, ಜಾತಿ ಪ್ರಭಾವ ಕಾಣಿಸಿಕೊಳ್ಳುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.
ಬಸವಕೇಂದ್ರದ ಗೌರವ ಸಲಹೆಗಾರ ಕುರಕುಂದಿ ವೀರಭದ್ರಪ್ಪ ಮಾತನಾಡಿ, ವಚನ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದೆ. ಜನರಲ್ಲಿ ಜಾಗೃತಿ ಮೂಡಿಸುವ ಸಮಾನತೆ ಬಿತ್ತುವ ಮತ್ತು ಜನರಾಡುವ ಭಾಷೆಯನ್ನೆ ದೈವತ್ವಕ್ಕೇರಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ.  ಸಾಹಿತ್ಯ ಬದುಕನ್ನು ಹಸನುಗೊಳಿಸಬೇಕೇ ಹೊರತು ಮನಸ್ಸನ್ನು ಮಲಿನ ಮಾಡಬಾರದೆಂದು ಕಿವಿಮಾತು ಹೇಳಿದರು.
ದಾಸರ ವಿಚಾರ: ಎನ್. ಶಿವನಗೌಡ ಗೊರೆಬಾಳ ಮಾತನಾಡಿ, ವಚನಕಾರರ, ದಾಸರ ವಿಚಾರಗಳನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುವ ಅಗತ್ಯವಿದೆ ಎಂದರು. ಎರಡನೇ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ವಿ. ಶರ್ಮಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ದತ್ತಿದಾನಿಗಳಾದ ಗುತ್ತಿಗೆದಾರ ಸರ್ವೋತ್ತಮ ರೆಡ್ಡಿ, ಎನ್. ಶಿವನಗೌಡ ಗೊರೇಬಾಳ ಅವರನ್ನು ಸನ್ಮಾನಿಸಲಾಯಿತು. ಪಂಪಣ್ಣ ಹಳ್ಳಿ, ಬಸವಕೇಂದ್ರದ ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲ ಶಾಂತಪ್ಪ ಚಿಂಚಿರಿಕಿ, ಕಸಾಪ ತಾಲೂಕಾಧ್ಯಕ್ಷೆ ರಮಾದೇವಿ ಶಂಭೋಜಿ ವೀರೇಶ ಗೋನವಾರ ನಿರೂಪಿಸಿದರು. ಪಂಪಯ್ಯ ಸಾಲಿಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.