ರಾಯಚೂರು

ವಿವಾಹ ನೆಪದಲ್ಲಿ ದೇವದಾಸಿ ಪದ್ಧತಿಗೆ ತಳ್ಳುವ ಯತ್ನ

Published On :

ಕನ್ನಡಪ್ರಭ ವಾರ್ತೆ  ಲಿಂಗಸ್ಗೂರು  ಮೇ 8
ಬಾಲಕಿಗೆ ವಿವಾಹ ಮಾಡುವ ನೆಪದಲ್ಲಿ ದೇವದಾಸಿ ಪದ್ಧತಿಗೆ ಒಳಪಡಿಸುವ ಪಾಲಕರ ಉದ್ದೇಶ ಅರಿತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪೊಲೀಸ್ ಹಾಗೂ ದೇವದಾಸಿ ಪುನರ್ವಸತಿ ಯೋಜನೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಬಾಲಕಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಮಾವಿನಬಾವಿ ಗ್ರಾಮದ ಹುಲಿಗೆಮ್ಮ ತಂದೆ ಶಿವಪ್ಪ ಎಂಬ 15 ವರ್ಷದ ಬಾಲಕಿಗೆ ವಿವಾಹ ಮಾಡುವ ನೆಪದಲ್ಲಿ ದೇವದಾಸಿ ಪದ್ಧತಿಗೆ ಒಳಪಡಿಸುವ ಉದ್ದೇಶ ಪಾಲಕರದ್ದಾಗಿದೆ ಎಂಬ ಗ್ರಾಮಸ್ಥರಿಂದ ದೂರವಾಣಿ ಮೂಲಕ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಪಡೆದರು.  
ಮದುವೆ ನೆಪ: ಪ್ರಭಾರಿ ಉಪನಿರ್ದೇಶಕ ಪ್ರಭಾಕರ್, ಕ್ರೈಂ ಪಿಎಸ್‌ಐ ಬಿ.ಎಸ್. ಹೊಸಳ್ಳಿ ಹಾಗೂ ದೇವದಾಸಿ ಪುನರ್ವಸತಿ ಯೋಜನೆ ಸಿಬ್ಬಂದಿಗಯೊಂದಿಗೆ ಗ್ರಾಮದ ಶಿವಪ್ಪ ಎಂಬುವರ ಮನೆಗೆ ತೆರಳಿ ವಿಚಾರಣೆ ನಡೆಸಿದರು.
ನಮ್ಮ ಹಿರಿಯ ಮಗಳಿಗೆ ವಿವಾಹವಾಗಿದ್ದು, ಈಕೆಯ ಗಂಡನ ಜೊತೆ ಕಿರಿಯ ಮಗಳು ಹುಲಿಗೆಮ್ಮಳನ್ನು ಕೊಟ್ಟು ಮತ್ತೊಂದು ಮದುವೆ ಮಾಡಲು ನಿರ್ಧರಿಸಿದ್ದೇವೆ. ದೇವರ ಗಡ್ಡಿಯಲ್ಲಿ ಮದುವೆ ಮಾಡಲು ಹೊರಟಿರುವುದಾಗಿ ಬಾಲಕಿ ತಂದೆ ಶಿವಪ್ಪ ವಿವರಣೆ ನೀಡುತ್ತಿದ್ದಂತೆ, ಹುಲಿಗೆಮ್ಮಳಿಗೆ 15 ವರ್ಷ ಇರುವ ಪ್ರಯುಕ್ತ ಮದುವೆ ಮಾಡಲು ಬರುವುದಿಲ್ಲ. ಅಲ್ಲದೆ ನಿಮ್ಮ ಹಿರಿಯ ಮಗಳು ಜೀವಂತ ಇರುವಾಗ ನಿಮ್ಮ ಅಳಿಯನಿಗೆ ಮತ್ತೊಂದು ಮದುವೆ ಮಾಡುವುದು ಕಾನೂನು ಪ್ರಕಾರ ಅಪರಾಧವಾಗುತ್ತದೆ ಎಂದು ಅಧಿಕಾರಿಗಳು ತಿಳಿ ಹೇಳಿದರು.
ಇದೇ ವೇಳೆ ಮನೆಯಲ್ಲಿ ಚೀಲ, ಗಂಟು-ಮೂಟೆ ಗಮನಿಸಿದ ಅಧಿಕಾರಿಗಳು, ದೇವದಾಸಿ ಪದ್ಧತಿ ಆಚರಣೆಗೆ ಬೇಕಾದ ವಸ್ತುಗಳ ಸುಳಿವು ಅರಿತು ಮದುವೆ ನೆಪದಲ್ಲಿ ಬಾಲಕಿಯನ್ನು ದೇವದಾಸಿ ಪದ್ಧತಿಗೆ ಒಳಪಡಿಸುವ ಅನಿಷ್ಠ ಪದ್ಧತಿ ಆಚರಿಸದೆ ಮಗಳ ಜೀವನ, ಭವಿಷ್ಯ ಹಾಳು ಮಾಡುವುದು ಸರಿಯಲ್ಲ ಎಂದು ಸಮಜಾಯಿಷಿ ನೀಡಿದರು. ಅಲ್ಲದೆ ಅಂಗನವಾಡಿ ಹಾಗೂ ದೇವದಾಸಿ ಪುನರ್ವಸತಿ ಯೋಜನೆ ಮಹಿಳಾ ಸಿಬ್ಬಂದಿ ಬಾಲಕಿ ಹುಲಿಗೆಮ್ಮಳಿಗೆ ಬಾಲ್ಯ ವಿವಾಹದಿಂದಾಗುವ ಹಾಗೂ ದೇವದಾಸಿ ಪದ್ಧತಿಯಿಂದಾಗುವ ದುಷ್ಪರಿಣಾಮಗಳ ಕುರಿತು ತಿಳಿ ಹೇಳಿ ಮನವೊಲಿಸುವ ಪ್ರಯತ್ನ ನಡೆಸಿದರು.
ಮುಚ್ಚಳಿಕೆ: ಅಲ್ಲದೆ ಬಾಲಕಿಯನ್ನು ಕುಟುಂಬದವರ ಜೊತೆ ಬಿಡುವುದರಿಂದ ಪುನಃ ಬಾಲ್ಯ ವಿವಾಹ ಹಾಗೂ ದೇವದಾಸಿ ಪದ್ಧತಿಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಪಾಲಕರು ಹಾಗೂ ಬಾಲಕಿಯನ್ನು ಲಿಂಗಸ್ಗೂರು ಪೊಲೀಸ್ ಠಾಣೆಗೆ ಕರೆತಂದು ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳಲಾಯಿತು. ನಂತರ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಭಾರಿ ಉಪನಿರ್ದೇಶಕ ಪ್ರಭಾಕರ್ ಅವರು ರಾಯಚೂರು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದು ಬಾಲಕಿ ಹುಲಿಗೆಮ್ಮಳನ್ನು ತಮ್ಮ ವಶಕ್ಕೆ ಪಡೆದು ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ವೇಳೆ ದೇವದಾಸಿ ಪುನರ್ವಸತಿ ಯೋಜನೆ ಸಿಬ್ಬಂದಿ ಸಕ್ಕುಬಾಯಿ, ಪರಶುರಾಮ, ಯಲ್ಲಮ್ಮ, ನವಜೀವನ ಮಹಿಳಾ ಒಕ್ಕೂಟದ ಮೋಕ್ಷಮ್ಮ, ಯಲ್ಲಮ್ಮ, ವಿದ್ಯಾಪಾಟೀಲ್, ದುರ್ಗಾಶ್ರೀ, ಅಕ್ಕಮ್ಮ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.