ಸೋತರೂ ಅಭಿವೃದ್ಧಿಯಲ್ಲಿ ಅನ್ಯಾಯ ಮಾಡಲ್ಲ: ಬಿಜೆಪಿ
ಕ.ಪ್ರ. ವಾರ್ತೆ, ರಾಯಚೂರು, ಮೇ 19
ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿರಬಹುದು. ಆದರೆ 4 ಲಕ್ಷಕ್ಕೂ ಹೆಚ್ಚಿನ ಮತದಾರರು ಪಕ್ಷವನ್ನು ಬೆಂಬಲಿಸಿದ್ದಾರೆ. ಅಂಥ ಮತದಾರರು ಸೇರಿದಂತೆ ಇಡೀ ಕ್ಷೇತ್ರದ ಎಲ್ಲ ಮತದಾರರ ಪ್ರಗತಿಗೆ ಕೇಂದ್ರದ ಬಿಜೆಪಿ ಸರ್ಕಾರ ಪ್ರಯತ್ನಿಸಲಿದೆ ಎಂದು ಬಿಜೆಪಿ ಮುಖಂಡ ತ್ರಿವಿಕ್ರಮ್ ಜೋಷಿ ಹೇಳಿದರು.
ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಗೆ ರಾಯಚೂರು ಕ್ಷೇತ್ರದಲ್ಲಿ ಕಡಿಮೆ ಅಂತರದಲ್ಲಿ ಸೋಲಾಗಿದೆ. ಆದರೆ ಭಾರೀ ಸಂಖ್ಯೆಯ ಮತದಾರರು ಪಕ್ಷವನ್ನು ಬೆಂಬಲಿಸಿದ್ದಾರೆ. ಕ್ಷೇತ್ರದಲ್ಲಿ ಸೋಲಾಗಿದೆ ಎಂದು ಮತದಾರರಿಗೆ ಅನ್ಯಾಯ ಮಾಡುವುದಿಲ್ಲ. ಬದಲಿಗೆ ಹಾಲಿ ನೂತನ ಸಂಸದರೊಂದಿಗೆ ಜತೆಗೂಡಿ ಅಭಿವೃದ್ಧಿ ಕಾರ್ಯಕ್ರಮಗಳ ಜಾರಿಗೆ ಶ್ರಮಿಸುವುದಾಗಿ ತಿಳಿಸಿದರು.
ಅಭಿವೃದ್ಧಿ ವಿಷಯದಲ್ಲಿ ಪಕ್ಷವು ಎಂದಿಗೂ ರಾಜಕೀಯ ಮಾಡುವುದಿಲ್ಲ. ಅಂತೆಯೇ ರಾಯಚೂರು ಕ್ಷೇತ್ರದ ಪ್ರಗತಿಗೆ ಕೇಂದ್ರದಿಂದ ಅಗತ್ಯ ಹಣಕಾಸಿನ ನೆರವು ತರುವಲ್ಲಿ ಯಾವುದೇ ರೀತಿಯಿಂದಲೂ ಪ್ರಯತ್ನಿಸಲು ಪಕ್ಷ ಬದ್ಧವಾಗಿದೆ ಎಂದು ಜೋಶಿ ಹೇಳಿದರು.
ನಿರೀಕ್ಷೆಯಂತೆಯೇ ಕಾರ್ಯನಿರ್ವಹಣೆ: ರಾಜ್ಯದಿಂದ ಒಟ್ಟು 17 ಜನ ಸಂಸದರು ಆಯ್ಕೆಯಾಗಿರುವುದು ಸಂತಸದ ಸಂಗತಿ. ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚಿನ ಸಂಖ್ಯೆಯ ಬಿಜೆಪಿ ಸಂಸದರನ್ನು ರಾಜ್ಯದಲ್ಲಿ ಆಯ್ಕೆ ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟದಲ್ಲಿ ಕನಿಷ್ಠ 4 ಸಚಿವ ಸ್ಥಾನ ದೊರೆಯುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಕೇಂದ್ರದ ಯುಪಿಎ ಸರ್ಕಾರದ ಅವಧಿಯಲ್ಲಿ ಕಂಡುಬಂದ ಅಗತ್ಯ ವಸ್ತುಗಳ ಬೆಲೆಯೇರಿಕೆ, ಹಣದುಬ್ಬರ, ಭ್ರಷ್ಟಾಚಾರದಿಂದ ಕೂಡಿದ ದುರಾಡಳಿತಕ್ಕೆ ಮತದಾರರು ತೆರೆ ಎಳೆದಿದ್ದಾರೆ. ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ್ದು ಜನರ ನಿರೀಕ್ಷೆಯಂತೆಯೇ ಸರ್ಕಾರ ಕಾರ್ಯನಿರ್ವಹಿಸುವುದರಲ್ಲಿ ಸಂದೇಹವಿಲ್ಲ ಎಂದರು.
ಅನುಮಾನ: ರಾಯಚೂರು ನಗರ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದರೂ ಅವರ ಕಾರ್ಯವೈಖರಿ ಅನುಮಾನಕ್ಕೆ ದಾರಿ ಮಾಡಿದೆ. ಅವರು ಆಯ್ಕೆಯಾದ ವೇಳೆ 47 ಸಾವಿರಕ್ಕೂ ಹೆಚ್ಚಿನ ಮತಗಳು ಜೆಡಿಎಸ್ಗೆ ಬಂದಿದ್ದವು. ಆದರೆ ಒಂದೇ ವರ್ಷದ ಅಂತರದಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ನಗರ ಕ್ಷೇತ್ರದಲ್ಲಿ ಜೆಡಿಎಸ್ಗೆ ಕೇವಲ ಅವಧಿಯಲ್ಲಿ 1726 ಮತಗಳು ಬಂದಿವೆ. ಇದು ಅವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಪರೋಕ್ಷವಾಗಿ ಬೆಂಬಲಿಸಿದ್ದಕ್ಕೆ ಸಂದೇಹವುಂಟು ಮಾಡಿದೆ ಎಂದು ಹೇಳಿದರು.
ಶೂನ್ಯ ಸಾಧನೆ: ಕಳೆದೊಂದು ವರ್ಷದಲ್ಲಿ ಅಧಿಕಾರವಧಿಯಲ್ಲಿ ಜೆಡಿಎಸ್ ಶಾಸಕ ಡಾ. ಶಿವರಾಜ್ ಪಾಟೀಲ್ ಅವರ ಸಾಧನೆ ಶೂನ್ಯ ಎಂದು ಆರೋಪಿಸಿದ ಅವರು, ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಅವರ ನಿಷ್ಕ್ರೀಯತೆ ಸಂದೇಹಕ್ಕೆ ದಾರಿ ಮಾಡಿದೆ. ಮುಂದಿನ ನಾಲ್ಕು ವರ್ಷಗಳಲ್ಲಾದರೂ ಶಾಸಕರು ಅಭಿವೃದ್ಧಿಗೆ ಮುಂದಾಗುವಂತೆ ಒತ್ತಾಯಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ 1 ವರ್ಷದ ಅವಧಿ ಪೂರೈಸಿದ್ದು, ಜಿಲ್ಲೆಗೆ ಸಂಬಂಧಿಸಿ ಸರ್ಕಾರ ಯಾವುದೇ ಮಹತ್ವದ ಯೋಜನೆ ನೀಡಿಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ 5 ಕೋಟಿ ನಿಗದಿ ಮಾಡಲಾಗಿತ್ತು. ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ 25 ಕೋಟಿ ನೀಡಿದ್ದರೂ ಅವುಗಳ ಅನುಷ್ಠಾನಕ್ಕೆ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಅಸಡ್ಡೆ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ನಾರಾಯಣಪುರ ಬಲದಂಡೆ ಕಾಲುವೆ ಮತ್ತು ತುಂಗಭದ್ರಾ ಎಡದಂಡೆ ಕಾಲುವೆಗಳಿಗೆ ಸಂಪರ್ಕ ಕಾಲುವೆ ನಿರ್ಮಿಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸುವುದಾಗಿ ಭರವಸೆ ನೀಡಿದ್ದು, ಇದುವರೆಗೆ ಅದರ ಬಗ್ಗೆ ಜಿಲ್ಲೆಯ ಶಾಸಕರು, ಕಾಂಗ್ರೆಸ್ ನಾಯಕರು ಚಕಾರವೆತ್ತಿಲ್ಲ ಎಂದು ಟೀಕಿಸಿದರು.
ತುಂಗಭದ್ರಾ ಎಡದಂಡೆ ಕಾಲುವೆಯ ಆಧುನೀಕರಣಕ್ಕೆ ಕಳೆದ ಬಿಜೆಪಿ ಸರ್ಕಾರ 1300 ಕೋಟಿ ವೆಚ್ಚ ಮಾಡಿತ್ತು. ಕಾಲುವೆಯ ಕಡೆಯ ಭಾಗದಲ್ಲಿ 400 ಕೋಟಿ ಮೊತ್ತದ ಕಾಮಗಾರಿ ಇನ್ನೂ ಕೈಗೊಳ್ಳಬೇಕಿದ್ದು ಈ ಬಗ್ಗೆ ಕಾಂಗ್ರೆಸ್ ಸರ್ಕಾರ ಅಸಡ್ಡೆ ತಾಳಿದೆ. ಈ ಮೂಲಕ ಸರ್ಕಾರ ಕಾಲುವೆಯ ಕಡೆಯ ಭಾಗದ ರೈತರಿಗೆ ನೀರು ದೊರೆಯದಂತೆ ಮಾಡಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪಕ್ಷದ ನಗರಾಧ್ಯಕ್ಷ ನರಸಪ್ಪ ಯಕ್ಲಾಸಪುರ, ಅಶ್ವತ್ಥ ರಾಜಪುರೋಹಿತ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

