20 ನಿಮಿಷ 20 ಸುದ್ದಿ
ರಾಯಚೂರು: ಕೇಂದ್ರ ಸಚಿವ ಸಂಪುಟದಲ್ಲಿ ಹೈ.ಕ.ಭಾಗದ ಜಿಲ್ಲೆಗಳಿಗೆ ಪ್ರಾಶಸ್ತ್ಯ ನೀಡುವಂತೆ ಆಗ್ರಹಿಸಿರುವ ಲೋಕಸಭೆ ಕ್ಷೇತ್ರದ ಚುನಾವಣೆಯ ಪಕ್ಷೇತರ ಅಭ್ಯರ್ಥಿಯಾಗಿದ್ದ ಚಿನ್ನಯ್ಯ ನಾಯಕ, ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿದ್ದಾರೆ.ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿರುವ ಅವರು, ಬಳ್ಳಾರಿ ಸಂಸದ ಶ್ರೀರಾಮುಲು ಅವರು ಬಡವರ ಪರ ಕಾಳಜಿ ಹೊಂದಿದ್ದು, ಅವರಿಗೆ ಸಚಿವ ಸ್ಥಾನ ನೀಡಿದಲ್ಲಿ ಬಡವರ ಶ್ರೇಯೋಭಿವೃದ್ಧಿಗೆ ನೆರವಾಗಲಿದೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ನಾಯಕ ಒತ್ತಾಯಿಸಿದ್ದಾರೆ.
ನಿರಾಶ್ರಿತರಿಗೆ ಮೂಲಸೌಲಭ್ಯ ಕಲ್ಪಿಸಲು ಆಗ್ರಹ
ರಾಯಚೂರು: ಮಾನವಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಪಕ್ಕದಲ್ಲಿ ಪುರಸಭೆಯಿಂದ ನಿರಾಶ್ರಿತರಿಗೆ ಒದಗಿಸಿದ ನಿವೇಶನಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವಂತೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಈ ಕುರಿತು ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರಿಗೆ ಮನವಿ ಸಲ್ಲಿಸಿರುವ ಸಂಘಟನೆಯವರು, ಮಾನವಿ ಪುರಸಭೆಯಿಂದ 240 ಕುಟುಂಬಗಳಿಗೆ ನಿವೇಶನ ಒದಗಿಸಿದ್ದು, ಅಲ್ಲಿ ಮೂಲಸೌಲಭ್ಯಗಳ ಕೊರತೆಯಿದೆ ಎಂದು ದೂರಿದ್ದಾರೆ.
ನಿವಾಸಿಗಳಿಗೆ ಪುರಸಭೆ ಜಾಗೆ ನೀಡಿದ್ದರೂ, ನಿವೇಶನದ ಹಕ್ಕುಪತ್ರ ಮಾತ್ರ ಒದಗಿಸಿಲ್ಲ. ಈ ಬಗ್ಗೆ ನಡೆಸಿದ ಹೋರಾಟಗಳಿಗೆ ಆಡಳಿತ ಬೆಲೆ ನೀಡಿಲ್ಲ ಎಂದು ಆರೋಪಿಸಿದೆ.
ಜಿಲ್ಲಾಡಳಿತ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕಾರಣ ಕೂಡಲೇ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು. ಮೂಲಸೌಲಭ್ಯ ಕಲ್ಪಿಸುವಂತೆ ಸಂಘಟನೆಯ ಜಿಲ್ಲಾಧ್ಯಕ್ಷ ಗಂಗಾಧರ ಸ್ವಾಮಿ, ರಾಜ್ಯ ಸಂಚಾಲಕ ಪ್ರಭುರಾಜ್ ಕೊಡ್ಲಿ, ಮಾನವಿ ತಾಲೂಕು ಅಧ್ಯಕ್ಷ ಖಾನ್ಸಾಬ್ ಮತ್ತಿತರರು ಒತ್ತಾಯಿಸಿದ್ದಾರೆ.
ವಾಲ್ಮೀಕಿ ಗೆಳೆಯರ ಬಳಗದ ಪದಾಧಿಕಾರಿಗಳು
ರಾಯಚೂರು: ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಗೆಳೆಯರ ಬಳಗದ ಪಂಚಮುಖಿ ಗಾಣದಾಳ ಗ್ರಾಮದ ಪದಾಧಿಕಾರಿಗಳ ಆಯ್ಕೆಗೆ ಈಚೆಗೆ ಸಭೆ ನಡೆಯಿತು. ಗ್ರಾಮ ಘಟಕಕ್ಕೆ ಅಧ್ಯಕ್ಷರಾಗಿ ಹನುಮಂತ ನಾಯಕ, ಉಪಾಧ್ಯಕ್ಷರಾಗಿ ರಾಮಕೃಷ್ಣ ನಾಯಕ, ಗೌರವಾಧ್ಯಕ್ಷರಾಗಿ ರಾಜಶೇಖರ ನಾಯಕ, ಕಾರ್ಯಾಧ್ಯಕ್ಷರಾಗಿ ರಂಗನಾಥ ನಾಯಕ, ಪ್ರಧಾನ ಕಾರ್ಯದರ್ಶಿಯಾಗಿ ಈರೇಶ ನಾಯಕ, ಸಂಘಟನಾ ಕಾರ್ಯದರ್ಶಿಗಳಾಗಿ ರಾಮಕೃಷ್ಣ ಬುಳ್ಳಾಪುರ, ಭೀಮಪ್ಪ ನಾಯಕ, ನರಸಿಂಹ ನಾಯಕ ಗಾಣದಾಳ ಅವರು ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯ ನರಸಿಂಹ ನಾಯಕ, ಪ್ರಮುಖರಾದ ವೀರಣ್ಣ ನಾಯಕ, ಲಕ್ಕಪ್ಪ ನಾಯಕ ಮತ್ತಿತರರು ಮಾತನಾಡಿದರು. ಗ್ರಾಮಸ್ಥರು ಪಾಲ್ಗೊಂಡಿದ್ದರು.
ಉದ್ಘಾಟನೆ...
ರಾಯಚೂರಿನ ಶಕುಂತಲಾಬಾಯಿ ರಾಮಚಂದ್ರರಾವ್ ಕಸ್ಬೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಈಚೆಗೆ ವಿದ್ಯಾರ್ಥಿ ಸಂಘ ಮತ್ತು ಕನ್ನಡ ಸಂಘಗಳ ಉದ್ಘಾಟನೆ ಸಮಾರಂಭ ಆಯೋಜಿಸಲಾಗಿತ್ತು. ದರೂರು ಬಸವರಾಜ್ ಪಾಟೀಲ್, ಆರೀಫ್ ರಾಜಾ ಸೇರಿ ಅನೇಕರು ಪಾಲ್ಗೊಂಡಿದ್ದರು.
ನಾಳೆ 2ನೇ ಹೆಚ್ಚುವರಿ ನ್ಯಾಯಾಧೀಶರಿಗೆ ಬೀಳ್ಕೊಡುಗೆ
ರಾಯಚೂರು: ನಗರದ ಜಿಲ್ಲಾ ನ್ಯಾಯಾಲಯದ ಎರಡನೇ ಹೆಚ್ಚುವರಿ ನ್ಯಾಯಾಧೀಶರಾದ ಸತ್ಯನಾರಾಯಣಾಚಾರ್ಯ ಕಾಡ್ಲೂರು ಅವರಿಗೆ ಬಿಜಾಪುರದ ಎರಡನೇ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಾಗಿ ವರ್ಗಾವಣೆಯಾದ ಹಿನ್ನೆಲೆ ಮೇ 26ರಂದು ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ. ಈ ಕುರಿತು ಪ್ರಕಟಣೆ ನೀಡಿರುವ ರಾಯಚೂರು ನ್ಯಾಯವಾದಿಗಳ ಸಂಘದ ಖಜಾಂಚಿ ಕೆ. ಪ್ರಹ್ಲಾದ ರಾವ್ ಅವರು, ಮೇ 26 ರಂದು ಬೆಳಗ್ಗೆ 11 ಗಂಟೆಗೆ ನಗರದ ನ್ಯಾಯವಾದಿಗಳ ಸಂಘದ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಸಂಘದ ಎಲ್ಲ ವಕೀಲರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಆ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಲು ಅವರು ಕೋರಿದ್ದಾರೆ.
ಬಿತ್ತನೆ ಬೀಜ ಪೂರೈಕೆಗೆ ವಾರದ ಗಡವು
ರಾಯಚೂರು: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ರೈತರಿಗೆ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ಬಿತ್ತನೆ ಬೀಜ ಸಮರ್ಪಕವಾಗಿ ಒದಗಿಸುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಒತ್ತಾಯಿಸಿದೆ. ಈ ಕುರಿತು ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿರುವ ಸಂಘವು ಈಗಾಗಲೇ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ. ಮುಂಗಾರು ಹಂಗಾಮು ಶೀಘ್ರದಲ್ಲೇ ಆರಂಭಗೊಳ್ಳಲಿದ್ದು, ಜಿಲ್ಲೆಯ 30 ರೈತ ಸಂಪರ್ಕ ಕೇಂದ್ರಗಳಲ್ಲಿ ಸಜ್ಜೆ, ಹೆಸರು, ತೊಗರಿ ಸೇರಿದಂತೆ ವಿವಿಧ ಬಿತ್ತನೆ ಬೀಜಗಳು ಇದೇ ವಾರದಲ್ಲಿ ರೈತರಿಗೆ ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಯಾವುದೇ ರೀತಿಯ ಬಿಲ್ ಸಹ ವರ್ತಕರು ರೈತರಿಗೆ ನೀಡುತ್ತಿಲ್ಲ. ಬಿಲ್ಗೆ ಬೇಡಿಕೆಯಿರಿಸುವ ರೈತರಿಗೆ ಬಿತ್ತನೆ ಬೀಜ ನೀಡುವುದಿಲ್ಲ ಎಂದು ಎಚ್ಚರಿಸುತ್ತಿದ್ದಾರೆಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಇಂಥ ವರ್ತಕರ ಹಾವಳಿ ತಡೆಗೆ ದಾಳಿ ಮಾಡಿ ಅಕ್ರಮ ಪತ್ತೆ ಮಾಡಬೇಕು. ರೈತರಿಗೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಮರ್ಪಕ ಬಿತ್ತನೆ ಬೀಜ ದೊರೆವಂತೆ ಕ್ರಮ ಕೈಗೊಳ್ಳಲು ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ನರಸಿಂಗರಾವ್ ಕುಲಕರ್ಣಿ, ಬೂದೆಯ್ಯಸ್ವಾಮಿ ಗಬ್ಬೂರು ಮತ್ತಿತರರು ಒತ್ತಾಯಿಸಿದ್ದಾರೆ.
ಅಗ್ನಿ ಶಮನ...
ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದ ಶ್ರೀಭಾಗಮ್ಮದೇವಿ ಬೆಟ್ಟದ ಮೇಲಿನ ಪವಿತ್ರ ವನದಲ್ಲಿ ಬೆಂಕಿ ಕಾಣಿಸಿಕೊಂಡು ಗ್ರಾಮಸ್ಥರು ಬೆಂಕಿ ನಂದಿಸಿದರು. ಇದರಿಂದ ಮುಂದೆ ಆಗಬಹುದಾಗಿದ್ದ ಭಾರಿ ಅನಾಹುತವನ್ನು ತಪ್ಪಿಸಿದಂತಾಗಿದೆ.
ಭಾಗಮ್ಮ ದೇವಿ ಬೆಟ್ಟದ ಪವಿತ್ರ ವನಕ್ಕೆ ಕಿಡಿಗೇಡಿಗಳ ಬೆಂಕಿ
ದೇವದುರ್ಗ: ತಾಲೂಕಿನ ಅರಕೇರಾ ಗ್ರಾಮದ ಶ್ರೀಭಾಗಮ್ಮದೇವಿ ಬೆಟ್ಟದ ಮೇಲಿನ ಪವಿತ್ರವನದಲ್ಲಿ ಬೆಂಕಿ ಕಾಣಿಸಿಕೊಂಡು ಗ್ರಾಮಸ್ಥರು ಬೆಂಕಿ ನಂದಿಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ. ಹಾಲಿ ಶಾಸಕ ಎ.ವೆಂಕಟೇಶನಾಯಕ ಅವರು ಈ ಹಿಂದೆ ಸಂಸದರಾಗಿದ್ದ ವೇಳೆ ಅಭಿವೃದ್ಧಿಪಡಿಸಿದ್ದ ಈ ಪವಿತ್ರ ವನದಲ್ಲಿ ಬೇಸಿಗೆಯ ಹಿನ್ನೆಲೆ ಒಣಗಿ ಉದುರಿದ್ದ ಎಲೆಗಳಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿದ್ದಾರೆ. ಅದರಿಂದ ಬೆಂಕಿ ಹೊತ್ತಿಕೊಂಡಿದ್ದು ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಪಂ ಸಿಬ್ಬಂದಿ ಮತ್ತು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಪವಿತ್ರ ವನಕ್ಕೆ ಬೆಂಕಿ ತಗುಲಿದ ಸುದ್ದಿ ತಿಳಿಯುತ್ತಿದ್ದಂತೆಯೇ ಆರ್ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎ. ರಾಜಶೇಖರ ನಾಯಕ, ತಿಪ್ಪನಾಯಕ ಪೊಲೀಸ್ ಪಾಟೀಲ್, ಗ್ರಾಪಂ ಮಾಜಿ ಅಧ್ಯಕ್ಷ ಕೆ. ವೀರೇಶ್, ಗ್ರಾಪಂ ಸದಸ್ಯ ನಾಗಪ್ಪ ಕುರುಕುಂದಿ ಗಂಗಯ್ಯಸ್ವಾಮಿ, ಬಸವರಾಜ ನಾಯಕ ಮತ್ತು ಗ್ರಾಮಸ್ಥರೊಂದಿಗೆ ಜತೆಗೂಡಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರು. ದೇವದುರ್ಗದ ಅಗ್ನಿಶಾಮಕ ದಳ ಸಂಪರ್ಕದ ಕೊರತೆಯಿಂದ ಗುಡ್ಡದ ಮೇಲೇರಲಾಗದೇ ಅಸಹಾಯಕ ಸ್ಥಿತಿ ಎದುರಿಸುವಂತಾಯಿತು. ಗ್ರಾಮಸ್ಥರೇ ಬೆಂಕಿ ನಂದಿಸಿದರು.
ಮುಂಗಾರು ಬಿತ್ತನೆ ಬೀಜ ವಿತರಣೆಗೆ ಆಗ್ರಹ
ದೇವದುರ್ಗ: ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿರುವ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದಿಂದ ಪ್ರತಿ ವರ್ಷದಂತೆ ಈ ವರ್ಷವೂ ಮುಂಗಾರು ಹಂಗಾಮಿಗೆ ಬಿತ್ತನೆಗೆ ಬಿತ್ತನೆ ಬೀಜಗಳನ್ನು ವಿತರಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಜಾಲಹಳ್ಳಿ ಗ್ರಾಮ ಘಟಕ ಒತ್ತಾಯಿಸಿದೆ. ತಾಲೂಕಿನಲ್ಲಿ ಈಗಾಗಲೇ ಸಣ್ಣ ಪ್ರಮಾಣದಲ್ಲಿ ಮಳೆ ಸುರಿದಿದ್ದು, ರೈತರು ತಮ್ಮ ಭೂಮಿಗಳನ್ನು ಬಿತ್ತನೆಗಾಗಿ ಸಜ್ಜುಗೊಳಿಸುತ್ತಿದ್ದಾರೆ. ಮುಂಗಾರು ಹಂಗಾಮಿನ ಮಳೆ ಮತ್ತೆ ಸುರಿದರೆ ಬಿತ್ತನೆಗಾಗಿ ಸೂರ್ಯಕಾಂತಿ, ಹತ್ತಿ ಬೀಜ, ಸಜ್ಜೆ ಮತ್ತಿತರೆ ಬೀಜಗಳಿಗೆ ಬೇಡಿಕೆ ಬರಲಿದೆ.
ಈ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳುವಂತೆ ಕೃಷಿ ಇಲಾಖೆಯನ್ನು ಒತ್ತಾಯಿಸಿದೆ. ಬೀಜ ವಿತರಿಸುವಾಗ ಉತ್ತಮ ಗುಣಮಟ್ಟದ ಬೀಜದ ಪಾಕೇಟ್ ವಿತರಿಸಬೇಕು. ಕಳೆದ ವರ್ಷದಂತೆ ವಿಳಂಬ ಮಾಡದೇ ರೈತರಿಗೆ ಯೋಗ್ಯ ಬೆಲೆಯಲ್ಲಿ ಮುಂಗಾರು ಬಿತ್ತನೆ ಬೀಜ ವಿತರಿಸಿ ಅನುಕೂಲ ಕಲ್ಪಸಬೇಕೆಂದು ಪ್ರಾಂತ ರೈತ ಸಂಘದ ಮುಖಂಡರಾದ ರವಿಚಂದ್ರ, ಬಸವರಾಜ ವಂದಲಿ, ನರಸಣ್ಣ ನಾಯಕ ಕೃಷಿ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಅಂತಿಮ ದರ್ಶನ...
ದೇವದುರ್ಗದಲ್ಲಿ ಶುಕ್ರವಾರ ನಿಧನರಾದ ಕಸಾಪ ಮಾಜಿ ಅಧ್ಯಕ್ಷ ಕೆ.ಮುರಿಗೆಪ್ಪ ಸಾಹು ಅವರ ಅಂತಿಮ ದರ್ಶನವನ್ನು ಶಾಸಕ ಎ. ವೆಂಕಟೇಶ ನಾಯಕ ಅವರು ಶನಿವಾರ ಪಡೆದರು.
ಕಸಾಪ ಮಾಜಿ ತಾಲೂಕಾಧ್ಯಕ್ಷ ಮುರಿಗೆಪ್ಪ ಸಾಹು ನಿಧನ
ದೇವದುರ್ಗ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಉದ್ಯಮಿ ಹಾಗೂ ಶಾಲಾ ಕಾಲೇಜುಗಳ ಭೂದಾನಿ ಕೆ.ಮುರಿಗೆಪ್ಪ ಸಾಹು ಅವರು ಶುಕ್ರವಾರ ರಾತ್ರಿ ರಾಯಚೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಪಟ್ಟಣದಲ್ಲಿ ನಡೆಯಿತು.
ಅಂತಿಮ ದರ್ಶನ: ಕೆ.ಮುರಿಗೆಪ್ಪ ಸಾಹು ಅವರ ಮೃತ ದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಪಟ್ಟಣದ ಅವರ ಸ್ವಗೃಹದಲ್ಲಿಡಲಾಗಿತ್ತು. ಈ ವೇಳೆ ಶಾಸಕ ಎ.ವೆಂಕಟೇಶ ನಾಯಕ, ಮಾಜಿ ಸಚಿವ ಕೆ.ಶಿವನಗೌಡ ನಾಯಕ, ಆರ್ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎ. ರಾಜಶೇಖರ ನಾಯಕ, ಮಾಜಿ ಶಾಸಕ ಸದಾಶಿವಪ್ಪಗೌಡ, ಯಲ್ಲಪ್ಪ ಅಕ್ಕರಕಿ, ವೀರಶೈವ ಸಮಾಜದ ಮಲ್ಲಿಕಾರ್ಜುನ ಪಾಟೀಲ್ ಅಂಚೆಸೂಗೂರು, ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಖಾದಿ ಗ್ರಾಮೋದ್ಯೋಗ ಸಂಘದ ಶ್ಯಾಮರಾವ್ ಕುಲಕರ್ಣಿ, ಹುಸೇನಸಾಬ್ ನೀಲವಂಜಿ, ಬಸವರಾಜ ಬಂಡೇಗುಡ್ಡ, ವೇಣುಗೋಪಾಲ ವಕೀಲರು, ಕಸಾಪ ಅಧ್ಯಕ್ಷ ನರಸಿಂಗರಾವ ಸರಕೀಲ್, ಪುರಸಭೆ ಅಧ್ಯಕ್ಷ ಫಕ್ರೋದ್ದೀನ್ ಗೌರವ ಸಲ್ಲಿಸಿದರು.
ಕಾಲು ಬಾಯಿ ರೋಗದಿಂದ ಸಾವು; ಪರಿಹಾರ ವಿತರಣೆ
ದೇವದುರ್ಗ: ರಾಜ್ಯದ ಕಾಂಗ್ರೆಸ್ ಸರ್ಕಾರವು ಕಾಲು- ಬಾಯಿ ರೋಗದಿಂದ ಕುರಿ, ಮೇಕೆ ಸಾವಿಗೀಡಾದಲ್ಲಿ ಅವುಗಳ ಮಾಲೀಕರಿಗೆ ಪರಿಹಾರ ನೀಡುವ ಕ್ರಮ ಕೈಗೊಂಡಿದೆ ಎಂದು ಶಾಸಕ ಎ.ವೆಂಕಟೇಶ ನಾಯಕ ತಿಳಿಸಿದರು.ಪಟ್ಟಣದ ಶಾಸಕರ ಭವನದಲ್ಲಿ ಶನಿವಾರ ಕಾಲುಬಾಯಿ ರೋಗದಿಂದ ಸಾವಿಗೀಡಾದ ಕುರಿ, ಮೇಕೆಗಳ ಮಾಲೀಕರಿಗೆ ಪರಿಹಾರ ಚೆಕ್ ವಿತರಿಸಿ ಮಾತನಾಡಿ, ತಾಲೂಕಿನ ಹೂವಿನಹೆಡ್ಗಿ ಗ್ರಾಮ ಸೇರಿ ವಿವಿಧೆಡೆ ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಕಾಲು- ಬಾಯಿ ರೋಗದಿಂದ ಮರಣ ಹೊಂದಿದ ಕುರಿ, ಮೇಕೆಗಳ ಮಾಲೀಕರಿಗೆ ರಾಜ್ಯ ಸರ್ಕಾರದ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಪ್ರತಿ ಕುರಿ, ಮೇಕೆಗೆ 3 ಸಾವಿರ ಪರಿಹಾರ ವಿತರಿಸಲಾಗಿದೆ ಎಂದರು.ಏಪ್ರಿಲ್ ನಂತರದಲ್ಲಿ ಪರಿಹಾರದ ಮೊತ್ತವನ್ನು ತಲಾ 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ತಾಲೂಕಿನಲ್ಲಿ ಒಟ್ಟು 57 ಕುರಿ, 99 ಮೇಕೆ ಮರಣ ಹೊಂದಿದ್ದು, 9 ಫಲಾನುಭವಿಗಳಿಗೆ ಒಟ್ಟು 4.68 ಲಕ್ಷ ಪರಿಹಾರ ವಿತರಿಸಲಾಗಿದೆ ಎಂದು ತಿಳಿಸಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 21 ಜನರಿಗೆ ತಲಾ 15 ಸಾವಿರದಂತೆ ದೌರ್ಜನ್ಯ ಪರಿಹಾರ ವಿತರಿಸಲಾಗಿದೆ ಎಂದು ಹೇಳಿದರು.
ಪರಿಹಾರ ವಿತರಣೆ..
ಕಾಲುಬಾಯಿ ರೋಗದಿಂದ ಮೃತಪಟ್ಟ ಕುರಿ, ಮೇಕೆಗಳ ಮಾಲೀಕರಿಗೆ ದೇವದುರ್ಗದಲ್ಲಿ ಶನಿವಾರ ಶಾಸಕ ವೆಂಕಟೇಶ ನಾಯಕ ಅವರು ಪರಿಹಾರದ ಚೆಕ್ ವಿತರಿಸಿದರು.
ಪರಿಶಿಷ್ಟ ಪಂಗಡ ತರಬೇತಿ ಅಭ್ಯರ್ಥಿಗಳಿಗೆ ಅರ್ಜಿ ಆಹ್ವಾನ
ರಾಯಚೂರು: ಕರ್ನಾಟಕ ಜಾನಪದ ಅಕಾಡೆಮಿಯು ಗುರುಶಿಷ್ಯ ಪರಂಪರೆಯ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ ಹಾಗೂ ಗಿರಿಜನ ಯೋಜನೆಯಡಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಗುರುಗಳಿಂದ ಅರ್ಜಿ ಕರೆಯಲಾಗಿದೆ. 2014- 15ನೇ ಸಾಲಿನಲ್ಲಿ ವಾಲಗ, ತಮಟೆ, ಚೌಡಿಕೆ, ಲಂಬಾಣಿ ವಾದ್ಯ, ನಗಾರಿ ಚಿಟಮೇಳ ಗಣೆವಾದ್ಯ ತತ್ವಪದ ಇತ್ಯಾದಿ ಕಲಾಪ್ರಕಾರಗಳಲ್ಲಿ ತರಬೇತಿ ನೀಡಲು ಗುರುಗಳಿಂದ ಅರ್ಜಿ ಕರೆಯಲಾಗಿದೆ. ಅರ್ಜಿ ನಿಯಮಗಳ ಪ್ರತಿಗಳನ್ನು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಯಚೂರು ಇವರಿಂದ ಪಡೆಯಬಹುದು. ಭರ್ತಿ ಅರ್ಜಿಗಳನ್ನು ಮೇ 31ರೊಳಗೆ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆಸಿ ರಸ್ತೆ ಬೆಂಗಳೂರು ಕಳುಹಿಸಬೇಕು.
ಕಟ್ಟೆ ಮಲ್ಲಮ್ಮದೇವಿ, ಬೀರಲಿಂಗೇಶ್ವರ ಮಹೋತ್ಸವ
ಸಿಂಧನೂರು: ತಾಲೂಕಿನ ಚಿಕ್ಕಕಡಬೂರು- ಸುಂಕನೂರು ಗ್ರಾಮದಲ್ಲಿ ಕಟ್ಟೆ ಮಲ್ಲಮ್ಮ ದೇವಿ, ಬೀರಲಿಂಗೇಶ್ವರ ಅಗ್ಗಿ ಮಹೋತ್ಸವ, ಪಟ್ಟಾಭಿಷೇಕ ಹಾಗೂ 75 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮ ನಾಳೆ ಮೇ 25ರಂದು ಜರುಗಲಿದೆ ಎಂದು ಲಿಂಗಣ್ಣ ಪೂಜಾರಿ ಬಳಗಾನೂರು ತಿಳಿಸಿದರು. Ú ರುದ್ರಮುನಿ ದೇವರು, ತಿಮ್ಮಾಪುರ ಕಲ್ಯಾಣಾಶ್ರಮದ ಮಹಾಂತಶ್ರೀ, ಯದ್ದಲದೊಡ್ಡಿ ಪೂರ್ಣಾನಂದ ಮಹಾಮುನಿಗಳು ಸಾನಿಧ್ಯ ವಹಿಸುವರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವ ಎಚ್.ಎಂ. ರೇವಣ್ಣ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಪ್ಪಳ ಸಂಸದ ಕರಡಿ ಸಂಗಣ್ಣ, ಶಾಸಕ ಪ್ರತಾಪಗೌಡ ಪಾಟೀಲ್, ದೊಡ್ಡನಗೌಡ ಪಾಟೀಲ್, ರಾಘವೇಂದ್ರ ಹಿಟ್ನಾಳ್, ಮುಖಂಡರಾದ ಕೆ.ಕರಿಯಪ್ಪ, ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಮಾನ್ವಿಯ ಎಂ. ಈರಣ್ಣ, ರಮೇಶಪ್ಪ ದಿದ್ದಿಗಿ, ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಾ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಎಂ. ದೊಡ್ಡಬಸವರಾಜ, ಮಲ್ಲನಗೌಡ ಸುಂಕನೂರು, ಬೀರಪ್ಪ ಇದ್ದರು.
ವೀರಶೈವ ಕಲ್ಯಾಣ ಮಂಟಪಕ್ಕೆ ಶಾಸಕ ಹಂಪನಗೌಡ ಚಾಲನೆ
ಸಿಂಧನೂರು: ನಗರದ ಗಂಗಾವತಿ ರಸ್ತೆಯಲ್ಲಿರುವ ವೀರಶೈವ ಸಮುದಾಯಕ್ಕೆ ಸೇರಿದ ಮೈದಾನದಲ್ಲಿ ಚಂದ್ರಮೌಳೇಶ್ವರ ದೇವಸ್ಥಾನ ಮತ್ತು ಕಲ್ಯಾಣ ಮಂಟಪ ನಿರ್ಮಾಣಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಎರಡು ಕಟ್ಟಡಗಳ ನಿರ್ಮಾಣಕ್ಕೆ ಅಂದಾಜು 2 ಕೋಟಿ ಖರ್ಚಾಗಬಹುದೆಂದು ನಿರೀಕ್ಷಿಸಲಾಗಿದ್ದು, ವೀರಶೈವ ಸಮುದಾಯದೊಳಗೆ ದೇಣಿಗೆ ಸಂಗ್ರಹಿಸಿ ಕಟ್ಟಡ ನಿರ್ಮಿಸಲಾಗುವುದು. ಈಗಾಗಲೇ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ 25 ಲಕ್ಷ ಹಣ ಮಂಜೂರಾಗಿದ್ದು, ಶಾಸಕರ ಅನುದಾನದಲ್ಲಿ ಇನ್ನೂ ಹೆಚ್ಚಿನ ಹಣ ಒದಗಿಸುವುದಾಗಿ ಭರವಸೆ ನೀಡಿದರು.
ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯ ಮಾತನಾಡಿದರು. ಶಂಕುಸ್ಥಾಪನಾ ಸಮಾರಂಭದಲ್ಲಿ ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ವೀರಶೈವ ಸಮಾಜದ ಅಧ್ಯಕ್ಷ ಅಶೋಕಗೌಡ ಗದ್ರಟಗಿ, ಚಂದ್ರಮೌಳೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಎನ್. ರಾಮನಗೌಡ, ಶಾಶ್ವತಸ್ವಾಮಿ ಮುಕ್ಕುಂದಿಮಠ, ರೌಡಕುಂದಾ ಸಂಸ್ಥಾನ ಹಿರೇಮಠದ ಮರಿಸಿದ್ದಲಿಂಗಸ್ವಾಮಿ, ಕಲ್ಮಠ ಸ್ವಾಮಿ ಮತ್ತಿತರರಿದ್ದರು.
ಸೆಪ್ಟಿಕ್ ಗುಂಡಿ ಮುಚ್ಚಿಸದಿದ್ದಕ್ಕೆ ಆಕ್ರೋಶ
ಸಿಂಧನೂರು: ಸರ್ಕಾರಿ ಜಾಗೆಯಲ್ಲಿ ಮಹಿಳಾ ಶೌಚಾಲಯ ನಿರ್ಮಿಸುವ ಸಂಬಂಧ ಸ್ವಚ್ಛತಾ ಕಾರ್ಯ ನಡೆಸಲಾಗಿದೆಯೇ ಹೊರತು, ಯಾರದೋ ಮೇಲಿನ ವೈಯಕ್ತಿಕ ದ್ವೇಷದಿಂದ ಅಲ್ಲ. ಮುದುಕಪ್ಪ ಸರ್ಜಾಪುರ ಸುಳ್ಳು ಆರೋಪ ಮಾಡುವ ಮೂಲಕ ತಮ್ಮ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಾಪಂ ಉಪಾಧ್ಯಕ್ಷ ಎಚ್. ಮಹಾಬಳೇಶ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು 7ನೇ ವಾರ್ಡಿನ ಮಹಿಳೆಯರು ಶೌಚಕ್ಕೆ ಹೋಗಲು ಹಲವು ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದರು. ಕೆಲ ದಿನಗಳ ಹಿಂದೆ ಪಂಚಾಯ್ತಿ ಕಾರ್ಯಾಲಯಕ್ಕೆ ಆಗಮಿಸಿ ಕಲುಷಿತ ನೀರು ಮತ್ತು ಮುಳ್ಳು, ಕಂಟಿಗಳಿಂದ ಕೂಡಿದ ಜಾಗೆಯನ್ನು ಸ್ವಚ್ಛಗೊಳಿಸಿ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುದುಕಪ್ಪ ಸರ್ಜಾಪುರ ಮನೆಯ ಹಿಂದೆ ಇರುವ ಸರ್ಕಾರಿ ಜಾಗೆಯಲ್ಲಿ ಮಹಿಳೆಯರು, ಸಾರ್ವಜನಿಕರ ಸಮಕ್ಷಮದಲ್ಲಿ ಶೌಚಾಲಯ ಸ್ವಚ್ಛ ಮಾಡಲಾಗಿದೆ. ಇದನ್ನೆ ನೆಪವಾಗಿಟ್ಟುಕೊಂಡು ಅವರು ತಮ್ಮ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲಸ ನಿರ್ವಹಿಸಲಾಗಿದೆ ಹೊರತು, ದುರುದ್ದೇಶದಿಂದ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿವಾಹ ಭೋಜನ...
ಸಿಂಧನೂರಿನ ಸುಂಕನೂರು ಗ್ರಾಮದಲ್ಲಿ ಕಟ್ಟೆ ಮಲ್ಲಮ್ಮದೇವಿ, ಬೀರಲಿಂಗೇಶ್ವರ ಅಗ್ಗಿ ಮಹೋತ್ಸವ ಹಾಗೂ ಪಟ್ಟಾಭಿಷೇಕ, 75 ಜೋಡಿಗಳ ಸಾಮೂಹಿಕ ವಿವಾಹ ಸಮಾರಂಭ ಕಾರ್ಯಕ್ಕಾಗಿ ಅಡುಗೆ ತಯಾರಿ ನಡೆದ ಸಂದರ್ಭ.
ಕ್ಷುಲ್ಲಕ ಕಾರಣಕ್ಕೆ ಜಗಳ; ಹಲವರಿಗೆ ಗಾಯ
ಸಿಂಧನೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಮಾರಾಮಾರಿ ಘಟನೆಯಲ್ಲಿ ನಾಲ್ಕು ಜನರು ತೀವ್ರವಾಗಿ ಗಾಯಗೊಂಡ ಘಟನೆ ನಗರದ ಮಂಜುನಾಥ ಚಿತ್ರಮಂದಿರದ ಎದುರುಗಡೆ ಶುಕ್ರವಾರ ರಾತ್ರಿ ಜರುಗಿದೆ.ಸುಕಾಲಪೇಟೆ ರಸ್ತೆಯ ಮಂಜುನಾಥ ಟಾಕೀಸ್ ಎದುರಿಗೆ ಖಾರ ಕುಟ್ಟುವ ಅಂಗಡಿಯ ಸದಾನಂದ ಸಾವಜಿ ಅವರು ಚಿತ್ರಮಂದಿರ ಎದುರುಗಡೆಯ ತಮ್ಮ ಜಾಗದಲ್ಲಿ ಕಲ್ಲು ಬಂಡೆಗಳನ್ನು ಹಾಕಿದ್ದು, ಅದನ್ನು ಅಲ್ಲಿಂದ ತೆರವುಗೊಳಿಸುವಂತೆ ಎಸ್.ಬಿ. ತಿಮ್ಮಯ್ಯ ಹೇಳಿದ್ದಕ್ಕೆ ಸದಾನಂದ ಅವರು ಇಟ್ಟಿಗೆಯಿಂದ ಹೊಡೆದಿದ್ದಾರೆ. ಇದನ್ನು ಕಂಡು ಬಿಡಿಸಲು ಹೋದ ಘಟನೆಯಲ್ಲಿ ಕಾಂಗ್ರೆಸ್ ಮುಖಂಡ ಭಂಗಿ ವೆಂಕೋಬಣ್ಣ ಅವರ ಪುತ್ರ ಕರುಣಾಕರ ಭಂಗಿ ವಕೀಲ ಸೇರಿದಂತೆ ವೆಂಕೋಬಣ್ಣ, ಗಂಗಾಧರ ಭಂಗಿ, ಮಲ್ಲಪ್ಪ ಏಳುಕುರಿ ಅವರ ಮೇಲೆ ಹಲ್ಲೆ ನಡೆಸಿದ್ದು ಇವರೆಲ್ಲರಿಗೂ ಗಾಯಗಳಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದಾನಂದ ನಂತರ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿರುವುದರಿಂದ ರಿಸರ್ವ್ ವಾಹನ ಸಮೇತ ಪೊಲೀಸರು ಬೀಡುಬಿಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

