ರಾಯಚೂರು

ಹಾರುಬೂದಿ ಬಳಕೆ ಪೂರಕ ಪರಿಸರ ಪೂರಕ

Published On :

ಕನ್ನಡಪ್ರಭ ವಾರ್ತೆ  ರಾಯಚೂರು  ಮೇ 24
ದೇಶದ ಥರ್ಮಲ್ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯಾಗುವ ಹಾರುಬೂದಿಯನ್ನು ಪರಿಸರದ ಪುನರುಜ್ಜೀವನಕ್ಕೆ ಬಳಸಬಹುದಾಗಿದೆ. ಯುಎಸ್‌ಎನಲ್ಲಿ ಈ ದಿಸೆಯಲ್ಲಿ ನಡೆದ ಸಂಶೋಧನೆಗಳು ಯಶಸ್ವಿಯಾಗಿದ್ದು ದೇಶದಲ್ಲಿಯೂ ಹಾರುಬೂದಿಯನ್ನು ಕೆಲವೆಡೆ ಬಳಸಿ ಪರಿಸರ ಸಂರಕ್ಷಣೆ ಕೈಗೊಳ್ಳಲಾಗಿದೆ ಎಂದು ಎನ್‌ಟಿಪಿಸಿಯ ಹಾರುಬೂದಿ ನಿರ್ವಹಣೆ ವಿಭಾಗದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಡಾ. ಶಿವಕುಮಾರ್ ದುಬೆ ಹೇಳಿದರು.
ನಗರದಲ್ಲಿ ಶನಿವಾರ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮತ್ತು ಕಟ್ಟಡ ನಿರ್ಮಾಣದಲ್ಲಿ ಹಾರುಬೂದಿಯ ಲಾಭದಾಯಕ ಬಳಕೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಎರಡನೇ ದಿನದ ಗೋಷ್ಠಿಯಲ್ಲಿ ಗಣಿಗಾರಿಕೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಹಾರುಬೂದಿಯ ಬಳಕೆ ಕುರಿತು ಅವರು ವಿಷಯ ಮಂಡಿಸಿದರು.
ಅಮೆರಿಕದಲ್ಲಿ ಅನೇಕ ಕಡೆಯಿರುವ ಥರ್ಮಲ್ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯಾಗುವ ಹಾರುಬೂದಿಯನ್ನು ಅಲ್ಲಿನ ತಂತ್ರಜ್ಞರು ಸುತ್ತಲಿನ ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಬಳಕೆ ಮಾಡಿ ಯಶಸ್ಸು ಕಂಡಿದ್ದಾರೆ. ಹಾರುಬೂದಿಯ ಸಮರ್ಪಕ ನಿರ್ವಹಣೆಯಲ್ಲಿ ವಿದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಜತೆಗೆ ಪರಿಸರ ಸಂರಕ್ಷಣೆಯಲ್ಲಿಯೂ ಹಾರುಬೂದಿ ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಸಾಬೀತು ಮಾಡಿದ್ದಾರೆ ಎಂದರು.
ಸಸ್ಯ ಬೆಳೆಯಲು ಬಳಕೆ: ಅಮೆರಿಕದಲ್ಲಿ ಹಾರುಬೂದಿಯನ್ನು ಬಳಸಿ ವಿವಿಧ ಜಾತಿ ಸಸ್ಯಗಳನ್ನು ಬೆಳೆಸಲಾಗಿದೆ. ಹಾಗೆಯೇ ಕಲ್ಲಿದ್ದಲು ಗಣಿಗಳಲ್ಲಿ ಗಣಿಗಾರಿಕೆ ನಂತರ ಉಂಟಾಗುವ ಆಳದ ತಗ್ಗುಗಳಿಗೆ ಹಾರುಬೂದಿಯನ್ನು ತುಂಬುವ ಮೂಲಕ ಪರಿಸರಕ್ಕೆ ಜೀವ ತುಂಬಿ ಗಿಡಮರಗಳನ್ನು ಬೆಳೆಸಲಾಗುತ್ತಿದೆ ಎಂದರು.
ದೇಶದಲ್ಲಿ ಸಹ ಅಂಥದ್ದೇ ಮಾದರಿಯಲ್ಲಿ ಪರಿಸರ ಸಂರಕ್ಷಣೆ ಕಾರ್ಯವನ್ನು ಹಲವೆಡೆ ಥರ್ಮಲ್ ಘಟಕಗಳಲ್ಲಿ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಆಂಧ್ರದ ವಿಜಯವಾಡ ಥರ್ಮಲ್ ವಿದ್ಯುತ್ ಕೇಂದ್ರದ ಸುತ್ತಲೂ ಹಾರುಬೂದಿ ಬಳಸಿ ಜತ್ರೋಪಾ 10 ಎಕರೆ ಪ್ರದೇಶದಲ್ಲಿ ಬೆಳೆದಿದ್ದು ಅದರಿಂದಾಗಿ ಹಾರುಬೂದಿ ಬಳಕೆ ಕೃಷಿಯಲ್ಲಿಯೂ ಸಾಧ್ಯ ಎಂಬುದು ಸಾಬೀತಾಗಿದೆ ಎಂದು ತಿಳಿಸಿದರು.
ಮಣ್ಣಿನ ಸವಕಳಿ ತಡೆ ಸಾಧ್ಯ: ಅದೇ ರೀತಿ ದೇಶದ ಕರ್ಬಾ ಥರ್ಮಲ್ ವಿದ್ಯುತ್ ಕೇಂದ್ರ, ಬದರಪುರ ಥರ್ಮಲ್ ವಿದ್ಯುತ್ ಕೇಂದ್ರಗಳ ಸುತ್ತಲೂ ಹಾರುಬೂದಿ ಬಳಕೆ ಮಾಡಿ ಆಯ್ದ ಸಸ್ಯಗಳನ್ನು ಬೆಳೆಸಲಾಗಿದೆ. ಹಾರುಬೂದಿಯ ಬಳಕೆಯಿಂದ ಮಣ್ಣಿನ ಸವಕಳಿ ತಡೆಯಬಹುದು. ಆ ಮೂಲಕ ಫಲವತ್ತತೆ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ಹೇಳಿದರು.
ವಿದೇಶದಲ್ಲಿ ಹಾರುಬೂದಿಯನ್ನು ಮರಳಿ ಪಡೆದು ಪರಿಸರ ಪುನರುಜ್ಜೀವನಕ್ಕೆ ಬಳಸುವ ಭರವಸೆ ನೀಡಿದವರಿಗೆ ಮಾತ್ರ ಕಲ್ಲಿದ್ದಲು ಗಣಿಗಾರಿಕೆಗೆ ನಡೆಸಲು ಅವಕಾಶ ನೀಡಲಾಗುತ್ತದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿ,  ಆ ಮೂಲಕ ಪರಿಸರಕ್ಕೆ ಜೀವ ತುಂಬುವ ಕಾರ್ಯಕ್ಕೆ ಅಲ್ಲಿನವರು ಹೆಚ್ಚಿನ ಒತ್ತು ನೀಡುತ್ತಿದ್ದಾರೆಂದು ಹೇಳಿದರು.
ಮನಬಂದಂತೆ ವಿಲೇವಾರಿ- ಆತಂಕ: ನಂತರ ನಡೆದ ಗೋಷ್ಠಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಸೈನ್ಸ್‌ನ ಅನಿಲ್ ಶರ್ಮಾ ತ್ಯಾಜ್ಯ ನಿರ್ವಹಣೆಯಲ್ಲಿ ಹಾರುಬೂದಿಯ ಬಳಕೆಯ ಕುರಿತು ಮಾತನಾಡಿ, ಇಂದಿನ ದಿನಮಾನದಲ್ಲಿ ಘನ ತ್ಯಾಜ್ಯ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಜನಸಂಖ್ಯೆಯ ಹೆಚ್ಚಳ ಹಾಗೂ ಕೈಗಾರಿಕೆಗಳ ಹೆಚ್ಚಿನ ಸ್ಥಾಪನೆ ಮತ್ತು ಪ್ರಗತಿಯಿಂದಾಗಿ ತ್ಯಾಜ್ಯ ನಿರ್ವಹಣೆ ಕಷ್ಟಕರವಾಗಿದ್ದು, ಈ ಹಿನ್ನೆಲೆಯಲ್ಲಿ ಮನಬಂದಂತೆ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ ಪರಿಸರಕ್ಕೆ ಆತಂಕ ಸೃಷ್ಟಿಸಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಸ್ತೆ ನಿರ್ಮಾಣಕ್ಕೂ ಬಳಕೆ: ಅದರಲ್ಲೂ ಮಹಾನಗರಗಳಲ್ಲಿ ತ್ಯಾಜ್ಯ ನಿರ್ವಹಣೆ ಸ್ಥಳೀಯ ಆಡಳಿತಗಳಿಗೆ ಸವಾಲಾಗುತ್ತಿದ್ದು, ನಿರ್ವಹಣೆಗೆಂದೇ ಕೋಟ್ಯಂತರ ರು. ವೆಚ್ಚ ಮಾಡಲಾಗುತ್ತಿದೆ. ಆದರೆ ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದಲ್ಲಿ ಹಾರುಬೂದಿಯನ್ನು ತ್ಯಾಜ್ಯದೊಂದಿಗೆ ಮಿಶ್ರಣ ಮಾಡಿ ಬಳಸಿ ಉತ್ತಮ ರಸ್ತೆಗಳನ್ನು ನಿರ್ಮಿಸಬಹುದಾಗಿದೆ ಎಂಬುದು ಈಗಾಗಲೇ ಸಾಬೀತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯವಾಡದ ಗ್ರೀನ್ ವೇ ಬಿಲ್ಡಿಂಗ್ ಮೆಟಿರಿಯಲ್ ಪ್ರೈ.ಲಿ. ಕಂಪನಿಯ ಎಂಡಿ ಡಾ. ಸುರೇಶ್‌ಬಾಬು ಸಡಿನೇನಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಎಂ.ಎಸ್. ರಾಮಯ್ಯ ತಾಂತ್ರಿಕ ಮಹಾವಿದ್ಯಾಲಯದ ಪ್ರೊಫೆಸರ್ ಡಾ. ಪ್ರಭಾಕರ್ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.