'ಖಾತ್ರಿ' ಬಾಕಿ ಕೂಲಿ, ಕೆಲಸ ನೀಡಲೇಕೆ ಹಿಂದೇಟು?
ಕನ್ನಡಪ್ರಭ ವಾರ್ತೆ ರಾಯಚೂರು ಮೇ 27
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ಜಿಲ್ಲಾ ಪಂಚಾಯಿತಿಯಿಂದ ಕೂಲಿ ಪಾವತಿಸುವಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ(ಗ್ರಾಕೂಸ್) ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಎದುರು ಧರಣಿ ನಡೆಸಿ ಜಿಪಂ ಸಿಇಒಗೆ ದೂರು ಸಲ್ಲಿಸಿ, ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಿದ ಕೂಲಿಕಾರ್ಮಿಕರಿಗೆ ಕೂಲಿ ನೀಡುತ್ತಿಲ್ಲ. ಹಾಗೆಯೇ ಕಾರ್ಮಿಕರಿಗೆ ಕೂಲಿ ಕೆಲಸವನ್ನೂ ನೀಡುತ್ತಿಲ್ಲ. ನಿರುದ್ಯೋಗ ಭತ್ಯೆ ನೀಡದೇ ಸತಾಯಿಸಲಾಗುತ್ತಿದೆ ಎಂದು ದೂರಿದರು.
ಸಮಸ್ಯೆಗಳಿಗೆ ಸ್ಪಂದಿಸಿಲ್ಲ: ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯು ಕಳೆದ ಏ.25ರಂದು ಜಿಪಂ ಎದುರು ಹೋರಾಟ ನಡೆಸಿ 1 ಕೋಟಿಗೂ ಹೆಚ್ಚಿನ ಕೂಲಿ ಮೊತ್ತ ಬಾಕಿ ಉಳಿಸಿಕೊಂಡಿರುವ ಬಗ್ಗೆ ಆರೋಪಿಸಿ ಪಾವತಿಗೆ ಒತ್ತಾಯಿಸಿತ್ತು. ಹಾಗೆಯೇ ಕೂಲಿಕಾರ್ಮಿಕರು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಲಾಗಿತ್ತು. ಆದರೆ ಇದುವರೆಗೆ ಅಂಥ ಸಮಸ್ಯೆಗಳ ಪರಿಹಾರಕ್ಕೆ ಆಡಳಿತ ಯತ್ನಿಸಿಲ್ಲ ಎಂದು ಆರೋಪಿಸಿದರು. ಕಳೆದ ಬಾರಿ ಹೋರಾಟದ ವೇಳೆ ಜಿಪಂ ಸಿಇಒ, ಯೋಜನಾ ನಿರ್ದೇಶಕರು, ಉಪಕಾರ್ಯದರ್ಶಿಗಳು ಒಂದು ತಿಂಗಳಲ್ಲಿ ಕೂಲಿಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದ್ದರು. ಆದರೆ ಅವರು ನೀಡಿದ್ದ ಭರವಸೆ ಹುಸಿಗೊಳಿಸಿದ್ದಾರೆಂದು ಟೀಕಿಸಿದರು.
ಕೂಲಿಯೂ ಇಲ್ಲ, ಕೆಲಸವೂ ಇಲ್ಲ: ಉದ್ಯೋಗ ಖಾತ್ರಿ ಯೋಜನೆ ಅಡಿ ಮಾನವಿ ತಾಲೂಕಿನ ಕುರ್ಡಿ, ಜಾನೇಕಲ್, ಅಮೀನಗಡ ಮತ್ತಿತರೆಡೆ ಕಾರ್ಯನಿರ್ವಹಿಸಿದ ಕೂಲಿಕಾರ್ಮಿಕರಿಗೆ ಗ್ರಾಪಂನಿಂದ ಕೂಲಿ ಮೊತ್ತ ಪಾವತಿಯಾಗಿಲ್ಲ. ಕೆಲಸಕ್ಕಾಗಿ ಅರ್ಜಿ ಸಲ್ಲಿಸಿದ ಕೂಲಿಕಾರ್ಮಿಕರಿಗೆ ಕೆಲಸ ಸಹ ನೀಡುತ್ತಿಲ್ಲ ಎಂದು ಆರೋಪಿಸಿದರು.
ಕೂಲಿ ಕಾರ್ಮಿಕರಿಗೆ ಕೇವಲ ಕೃಷಿ ಹೊಂಡ ಮತ್ತು ಅರಣ್ಯೀಕರಣ ಕಾಮಗಾರಿ ವಹಿಸಲಾಗುತ್ತಿದೆ. ಕೆಲಸಕ್ಕೆ ತೆರಳಿದವರಿಗೆ ಮರಳಿ ಕಳಿಸಲಾಗುತ್ತಿದೆ. ಗ್ರಾಪಂ ಪಿಡಿಒಗಳು ಅನಗತ್ಯ ನೆಪವೊಡ್ಡುವ ಮೂಲಕ ಕೆಲಸವಿಲ್ಲ ಎಂದು ಹೇಳಿದ ಅನೇಕ ಉದಾಹರಣೆಗಳಿವೆ ಎಂದು ಟೀಕಿಸಿದರು.
ಮಾನವಿ, ದೇವದುರ್ಗ ತಾಲೂಕಲ್ಲಿ..: ಮಾನವಿ ತಾಲೂಕಿನ ಜಾನೇಕಲ್ ಗ್ರಾಪಂ ಪಿಡಿಒ ಕೂಲಿಕಾರ್ಮಿಕರಿಗೆ ಕೆಲಸ ನೀಡದೆ, ಕೂಲಿಯನ್ನು ಪಾವತಿಸದೇ ಸತಾಯಿಸುತ್ತಿದ್ದಾರೆ. ಅದೇ ರೀತಿ ದೇವದುರ್ಗದ ದೇವತಗಲ್ ಗ್ರಾಮದಲ್ಲಿ ಕೂಲಿಕಾರ್ಮಿಕರಿಗೆ ಭೂ ಅಭಿವೃದ್ಧಿಯ ಕೆಲಸ ನೀಡಲಾಗಿದೆ ಎಂದು ದೂರಿದರು. ದೇವತಗಲ್ ಗ್ರಾಪಂನಿಂದ ಭೂ ಅಭಿವೃದ್ಧಿ ಕೆಲಸ ಆಯ್ಕೆ ಮಾಡಿಕೊಂಡು ಅದನ್ನು ಕೂಲಿಕಾರ್ಮಿಕರಿಗೆ ನೀಡಿದ್ದು, ಆ ಪ್ರದೇಶದಲ್ಲಿ ಬಹುದೊಡ್ಡ ಕಲ್ಲುಗಳಿದ್ದು ಅವುಗಳನ್ನು ತೆರವುಗೊಳಿಸುವ ಮಾಡುವಂತೆ ಸೂಚಿಸಲಾಗುತ್ತಿದೆ. ಅದಕ್ಕೆ ಒಪ್ಪದಿದ್ದಲ್ಲಿ ಉದ್ಯೋಗ ಖಾತ್ರಿ ಅಡಿ ಬೇರೆ ಕೆಲಸವಿಲ್ಲ ಎಂದು ಕಾರ್ಮಿಕರಿಗೆ ಮರಳಿ ಕಳಿಸುವ ಎಚ್ಚರಿಕೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಕ್ರಮಕ್ಕೆ ಆಗ್ರಹ: ಈ ನಿಟ್ಟಿನಲ್ಲಿ ಗ್ರಾಪಂ ಅಧಿಕಾರಿಗಳು ಕಾರ್ಯವೈಖರಿ ಖಂಡಿಸಿದ ಗ್ರಾಕೂಸ್ ಕಾರ್ಯಕರ್ತರು, ಕೂಡಲೇ ವಿವಿಧ ಗ್ರಾಪಂಗಳಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾರ್ಯನಿರ್ವಹಿಸಿದವರ ಬಾಕಿ ಕೂಲಿ ಹಣ ಪಾವತಿಸಬೇಕು. ನಿರುದ್ಯೋಗ ಭತ್ಯೆ ನೀಡಬೇಕು. ಹಾಗೆಯೇ ಕೂಲಿಕಾರ್ಮಿಕರಿಗೆ ಕೆಲಸ ನೀಡಬೇಕು. ನಷ್ಟ ಪರಿಹಾರಕ್ಕೆ ಆಗ್ರಹಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಶರಣಗೌಡ, ವೆಂಕಟೇಶ್, ವಿದ್ಯಾ ಪಾಟೀಲ್, ಗುರುರಾಜ್ ಪಾಟೀಲ್, ಅಂಜನೇಯ, ಸರಸ್ವತೆಮ್ಮ, ಯಲ್ಲಮ್ಮ, ಚಿನ್ನಮ್ಮ, ಮರಿಯಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

