ರಾಯಚೂರು

ಗುಡಿಸಲು ನಿವಾಸಿಗಳ ತೆರವಿಗೆ ವಿರೋಧ

Published On :

ಕ.ಪ್ರ. ವಾರ್ತೆ , ರಾಯಚೂರು , ಮೇ 29
ಇಲ್ಲಿನ ಜಲಾಲ್ ಸಾಬ್ ಗುಡ್ಡದ ಬಳಿಯ ನಿವಾಸಿಗಳನ್ನು ತೆರವುಗೊಳಿಸುವ ತಾಲೂಕು ಆಡಳಿತದ ಕ್ರಮವನ್ನು ಖಂಡಿಸಿ, ತೆರವು ಕೈಗೊಳ್ಳದಂತೆ ಒತ್ತಾಯಿಸಿ ನಗರದಲ್ಲಿ ಗುರುವಾರ ನಿವಾಸಿಗಳು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನಿವಾಸಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ನಗರದ ಜಲಾಲ್ ಸಾಬ್ ಗುಡ್ಡದ ಬಳಿ ಕಳೆದ ಅನೇಕ ವರ್ಷಗಳಿಂದ ತಾವು ವಾಸವಾಗಿದ್ದು, ಎಲ್ಲರೂ ಬಡಕೂಲಿ ಕಾರ್ಮಿಕರಿದ್ದು ಬೇರೆಡೆಗೆ ನಿವೇಶನಗಳಿಲ್ಲ ಎಂದು ದೂರಿದರು.
ಎಲ್ಲ ಕುಟುಂಬಗಳು ಬೀದಿಪಾಲು: ಆರ್ಥಿಕವಾಗಿ ತೀರಾ ಹಿಂದುಳಿದ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತ ಜನಾಂಗದವರಾಗಿರುವ ತಾವು ಜೋಪಡಿಗಳನ್ನು ಜಲಾಲ್ ಸಾಬ್ ಗುಡ್ಡದ ಬಳಿ ಸ್ಥಾಪಿಸಿಕೊಂಡು ಜೀವನ ನಡೆಸುತ್ತಿದ್ದು, ಕೆಲ ವ್ಯಕ್ತಿಗಳು ಇತ್ತೀಚೆಗೆ ತಮ್ಮ ವಿರುದ್ಧ ಒತ್ತುವರಿಯ ಆರೋಪ ಮಾಡಿ ತೆರವಿಗೆ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ದೂರಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಬಡ ಕುಟುಂಬಗಳೇ ಹೆಚ್ಚಾಗಿರುವ ಜಲಾಲ್ ಸಾಬ್ ಗುಡ್ಡದ ಬಳಿಯ ಪ್ರದೇಶದಿಂದ ನಿವಾಸಿಗಳನ್ನು ತೆರವುಗೊಳಿಸಲು ತಹಸೀಲ್ದಾರ್ ಕಚೇರಿಯ ಅಧಿಕಾರಿಗಳು ಮುಂದಾಗಿದ್ದು, ಅದರಿಂದ ಸಂಕಷ್ಟದಲ್ಲಿ ಬದುಕು ಕಳೆಯುತ್ತಿರುವುದಾಗಿ ದೂರಿ, ಜೋಪಡಿಗಳನ್ನು ತೆರವುಗೊಳಿಸಿದರೆ ನಿವೇಶನಗಳಿಲ್ಲದ ಎಲ್ಲ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದು ಆರೋಪಿಸಿದರು.
ಕೂಡಲೇ ತೆರವು ಕಾರ್ಯ ಕೈಗೊಳ್ಳದಂತೆ ತಹಸೀಲ್ದಾರ್ ಅವರಿಗೆ ಸೂಚಿಸಬೇಕು. ಸರ್ಕಾರದಿಂದ ವಿವಿಧ ಸವಲತ್ತು ತಮಗೆ ದೊರಕಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಅಹೋರಾತ್ರಿ ಧರಣಿ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭ ನಿವಾಸಿಗಳಾದ ಯಂಕಮ್ಮ ವಡ್ಡರ್, ರಾಜಮ್ಮ, ಭರತ್, ವಿಜಯಲಕ್ಷ್ಮೀ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.