ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ
ಕ.ಪ್ರ. ವಾರ್ತೆ ಲಿಂಗಸ್ಗೂರು ಮೇ 30
ಪ್ರಸಕ್ತ 2014-15ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದ್ದು, ಮೇ 31ರಂದು ಶಾಲಾ ಪ್ರಾರಂಭೋತ್ಸವ ದಿನ ಆಚರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಾಂತಗೌಡ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ತಾಲೂಕಿನಲ್ಲಿ 317 ಸರ್ಕಾರಿ ಪ್ರಾಥಮಿಕ ಶಾಲೆಗಳು, 40 ಪ್ರೌಢಶಾಲೆಗಳು, 8 ಅನುದಾನಿತ ಪ್ರಾಥಮಿಕ ಶಾಲೆಗಳು, 10 ಅನುದಾನಿತ ಪ್ರೌಢಶಾಲೆಗಳು, 55 ಅನುದಾನ ರಹಿತ ಪ್ರಾಥಮಿಕ ಶಾಲೆಗಳು, 20 ಅನುದಾನ ರಹಿತ ಪ್ರೌಢಶಾಲೆಗಳು, 4 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಸೇರಿದಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಮೇ 31ರಿಂದ ಆರಂಭಗೊಳ್ಳಲಿವೆ. ಪ್ರತಿಯೊಂದು ಶಾಲೆಗಳಲ್ಲಿ ತಳಿರು- ತೋರಣ ಕಟ್ಟುವ ಮೂಲಕ ಹಬ್ಬದ ವಾತಾವರಣ ನಿರ್ಮಾಣ ಮಾಡುವ ಜೊತೆಗೆ ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಪ್ರವೇಶೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಂದು ಪಾಲಕರೊಂದಿಗೆ ಎಸ್ಡಿಎಂಸಿ ಸಭೆ ಕರೆಯಲಾಗುವುದು.
ಮೇ 30ರಿಂದ ಶಾಲೆಗಳ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕ್ಲಸ್ಟರ್ ಮಟ್ಟದಲ್ಲಿ ಸಿಆರ್ಪಿ, ಶಿಕ್ಷಣ ಸಂಯೋಜಕರು, ಬಿಆರ್ಪಿ, ಬಿಆರ್ಸಿ ಕೋ-ಆರ್ಡಿನೇಟರ್ ತಂಡದಿಂದ ಮಿಂಚಿನ ಸಂಚಾರ ನಡೆಸಿ ಶಿಕ್ಷಕರು ಮತ್ತು ಮಕ್ಕಳ ಹಾಜರಾತಿ ಕುರಿತು ಪರಿಶೀಲನೆ ನಡೆಸಲಾಗುವುದು. ಕಳೆದ 2013-14ನೇ ಸಾಲಿನ ಪ್ರವೇಶೋತ್ಸವದಲ್ಲಿ 1ನೇ ತರಗತಿಗೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 7116 ಮಕ್ಕಳು, ಅನುದಾನಿತ ಶಾಲೆಗಳಲ್ಲಿ 433 ಮಕ್ಕಳು ಹಾಗೂ ಅನುದಾನ ರಹಿತ ಶಾಲೆಗಳಲ್ಲಿ 2022 ಮಕ್ಕಳು ಸೇರಿದಂತೆ ಒಟ್ಟು 9571 ಮಕ್ಕಳು ದಾಖಲಾತಿ ಹೊಂದಿದ್ದರು. ಈ ಬಾರಿಯ 2014-15ನೇ ಸಾಲಿನ ಪ್ರವೇಶೋತ್ಸವದಲ್ಲಿ 1ನೇ ತರಗತಿಗೆ ಸುಮಾರು 10 ಸಾವಿರ ಮಕ್ಕಳು ದಾಖಲಾತಿ ಹೊಂದುವ ನಿರೀಕ್ಷೆ ಹೊಂದಲಾಗಿದೆ.
ಈಗಾಗಲೇ ತಾಲೂಕಿನ ಪ್ರತಿಯೊಂದು ಶಾಲೆಗಳಿಗೆ ಶೇ.100ರಷ್ಟು ಸಮವಸ್ತ್ರ ಪೂರೈಕೆ ಮಾಡಲಾಗಿದ್ದು, ಶೇ.84ರಷ್ಟು ಪಠ್ಯಪುಸ್ತಕ ವಿತರಣೆ ಮಾಡಲಾಗಿದೆ. ಮೇ 31ರಂದು ಶಾಲಾ ಪ್ರಾರಂಭೋತ್ಸವ ನಿಮಿತ್ತ ಮಕ್ಕಳಿಗೆ ಸಿಹಿ ಊಟದ ವ್ಯವಸ್ಥೆ ಕಲ್ಪಿಸಲಾಗುವುದೆಂದು ಬಿಇಒ ಶಾಂತಗೌಡ ಪಾಟೀಲ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

