ರಾಯಚೂರು

ಎನ್ನೆಲ್‌ಬಿಸಿ ನವೀಕರಣಕ್ಕೆ ತಾತ್ಕಾಲಿಕ ತಡೆ

Published On :

ಕ.ಪ್ರ. ವಾರ್ತೆ    ಹುಣಸಗಿ    ಮೇ 30
ನಾರಾಯಣಪುರ ಎಡದಂಡೆ ನಾಲೆಯ 60ನೇ ಕಿಮೀ ಅಂದರೆ ಸಾಕು ಎಲ್ಲರ ಕಣ್ಣು ಹುಬ್ಬೇರುತ್ತದೆ. ಏಕೆಂದರೆ- 1990ರಿಂದ 2005ರ ಅವಧಿಯಲ್ಲಿ ಅನೇಕ ಬಾರಿ ಈ ಭಾಗದಲ್ಲಿ ಕಾಲುವೆ ಒಡೆದು ರೈತರಿಗೆ ನೂರಾರು ಕೋಟಿ ಹಾನಿ ಮಾಡಿದ ಕುಖ್ಯಾತಿಯಂದ ಹೆಸರು ಮಾಡಿದೆ.
ಕಾಲುವೆ ಒಡೆದರೆ ಅಗತೀರ್ಥ, ಬೈಚಬಾಳ, ತೆಗಳ್ಳಿ, ಶಾಖಾಪುರ ಗ್ರಾಮಗಳ ಜನವಸತಿಗೂ ಹಾನಿಯಾಗುವ ಸಂಭವವಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಹಳೆಯ ಕಾಲುವೆ ಬಿರುಕು ಬಿಟ್ಟಿದ್ದು ನೀರಾವರಿ ಸಚಿವ, ಶಾಸಕರು ಮತ್ತು ಅಧಿಕಾರಿಗಳ ನಿದ್ದೆಗೆಡಿಸಿದೆ.
ನವೀಕರಣ ಕಾಮಗಾರಿಯನ್ನು ಬಹು ಅಚ್ಚುಕಟ್ಟಾಗಿ ನಡೆಸಬೇಕಿದ್ದು, ನೀರಾವರಿ ತಂತ್ರಜ್ಞರ ಮೊರೆ ಹೋಗಿರುವುದರಿಂದ ತಾತ್ಕಾಲಿಕವಾಗಿ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಹುಣಸಗಿಯ ಕಾರ್ಯಪಾಲಕ ಅಭಿಯಂತರ ಅರುಣಕುಮಾರ ಬಾರಿಕೇರಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮ.ರೆಹಮಾನ್‌ಸಾಬ್ ಹೇಳಿದ್ದಾರೆ.
ಸುದೀರ್ಘ ಚರ್ಚೆ: ಕಾಲುವೆಯು ಅಲ್ಲಿಯ ಗುಡ್ಡವನ್ನು ಸುತ್ತುವರಿದಿದ್ದು, ಪ್ರತಿ ವರ್ಷ ಕುಸಿದು ಸಮಸ್ಯೆ ತಂದೊಡ್ಡಿ, ಅಧಿಕಾರಿಗಳು ಮತ್ತು ರೈತರ ನಿದ್ದೆಗೆಡಿಸುತ್ತಿದೆ. ಇದಕ್ಕಾಗಿ ನಿಗಮದ ನೀರಾವರಿ ತಂತ್ರಜ್ಞರು ನೂರಾರು ವರದಿಗಳನ್ನೂ ಕೊಟ್ಟಿದ್ದಾರೆ. ಅದರಂತೆ 60 ಕಿ.ಮೀ.ನಲ್ಲಿ ಈಗಲೂ ನವೀಕರಣ ಕೈಗೊಂಡಿಲ್ಲ. ಇದಕ್ಕೆ ಕಾರಣವಿಷ್ಟೇ, ನವೀಕರಣ ಮಾಡಬೇಕೋ ಅಥವಾ ಮತ್ತೆ ಹೊಸದಾಗಿ ಗುಡ್ಡದ ನಡುವೆ ಓಪನ್ ಕಟಿಂಗ್ ಮಾಡಿ ನೀರು ಹರಿಸಬೇಕೇ ಎಂಬುದರ ಚರ್ಚೆ ನಡೆದಿದೆ.
ಇದೀಗ ನವೀಕರಣಕ್ಕೆ ಮುಂದಾಗಿರುವ ಸಮಯದಲ್ಲೇ ಕಂಡುಬಂದಿರುವ ಬಿರುಕುಗಳು ನವೀಕರಣದ ನಂತರವೂ ಮುಂದುವರಿದರೆ ಹೇಗೆ, ಮತ್ತೆ ಕಾಲುವೆ ಕುಸಿತದ ಭೀತಿ ಉಂಟಾಗುವದೇ ಎಂದು ಎಂಜಿನಿಯರುಗಳು, ಗುತ್ತಿಗೆದಾರರು ಹಿರಿಯ ಅಧಿಕಾರಿಗಳ ಅನುಮತಿಗಾಗಿ ಕಾಯುತ್ತಿದ್ದಾರೆಎಂದು ತಿಳಿದುಬಂದಿದೆ.
ಗುತ್ತಿಗೆದಾರರ ಆತಂಕ: ಇದೀಗ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ಎರಡು ವರ್ಷಗಳ ಕೆಳಗೆ, ಕಾಲುವೆ ನವೀಕರಣ ಮಾಡಿದ್ದಾರೆ. ಅವರು ಮಾಡಿರುವ ಕೆಲಸದಲ್ಲಿ ಈವರೆಗೆ ದೋಷ ಕಂಡು ಬಂದಿಲ್ಲ. ಬಿರುಕು ಬಿಟ್ಟಿರುವ ಭಾಗವನ್ನು ತೆಗೆದು ಹಾಕಿ, ಕಾಲುವೆ ನವೀಕರಣ ಕೈಗೊಂಡ ನಂತರ ಮತ್ತೆ ಬಿರುಕು ಬಿಟ್ಟರೆ ನಮಗೆ ಕೆಟ್ಟ ಹೆಸರು ಬರುತ್ತದೆ ಎನ್ನುತ್ತಿದ್ದಾರೆ ಗುತ್ತಿಗೆದಾರರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.