ಬಿಜೆಪಿಗೆ ಮಾರುತ್ತರ ನೀಡಿದ ಬಿಎಸ್ವೈ
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.2
ಅದು ಶಿವಮೊಗ್ಗದ ಎನ್ಇಎಸ್ ಮೈದಾನ, ಕಳೆದ ವಾರವಷ್ಟೇ ಬಿಜೆಪಿಯ ಪಂಚಪಾಂಡವರೆನಿಸಿಕೊಂಡು ಕರೆಸಿಕೊಳ್ಳುತ್ತಿರುವ ನಾಯಕರು ಬಿಎಸ್ವೈ ವಿರುದ್ಧ ಗುಡುಗಿಹೋದ ಹಾಗೂ ಶಕ್ತಿ ಪ್ರದರ್ಶನ ನಡೆಸಿದ್ದ ಸ್ಥಳ. ಇದೇ ಸ್ಥಳದಲ್ಲಿ ಮಂಗಳವಾರ ಹಠಕಟ್ಟಿ ಕೆಜೆಪಿ ಶಕ್ತಿ ಪ್ರದರ್ಶನ ನಡೆಸಿತು. ಅದೇ ಬಿಜೆಪಿ ನಾಯಕರ ಹೇಳಿಕೆಗೆ ಮಾರುತ್ತರ ನೀಡುವ ಸರದಿ ಬಿಎಸ್ವೈರದ್ದಾಗಿತ್ತು.
ಕಿಕ್ಕಿರಿದು ತುಂಬಿದ್ದ ಮೈದಾನದಲ್ಲಿ ಬಿಎಸ್ವೈ ಅಬ್ಬರಿಸಿದರು. ಅಂದು ಕೆಣಕಿದ್ದ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
ಮಾರುತ್ತರ: ಸಭೆಯಲ್ಲೂ ಕೂಡ ತಮ್ಮ ಕಾರ್ಯತಂತ್ರ ಪ್ರಸ್ತಾಪಿಸಿದ ಬಿಎಸ್ವೈ, ಇದೇ ಸ್ಥಳದಲ್ಲಿ ಬಿಜೆಪಿ ನಾಯಕರು ನನ್ನ ಮೇಲೆ ಟೀಕಾ ಪ್ರಹಾರ ಮಾಡಿದ್ದರು. ಹೀಗಾಗಿಯೇ ಇಲ್ಲೇ ಸಮಾವೇಶ ಮಾಡುತ್ತಿದ್ದೇನೆ. ಚುನಾವಣೆ ನಂತರ ಅವರ ಸ್ಥಿತಿ ಏನೆಂಬುದು ಗೊತ್ತಾಗುತ್ತದೆ ಎಂದು ಗುಡುಗುವ ಮೂಲಕ ಬಿ.ಎಸ್. ಯಡಿಯೂರಪ್ಪ ಬಿಜೆಪಿ ನಾಯಕರ ಟೀಕಾಪ್ರಹಾರಕ್ಕೆ ಮಾರುತ್ತರ ನೀಡಿದರು.
ಕೆಜೆಪಿ ಉತ್ತರ: ಬಿಜೆಪಿ ಸೇರಿಸಿದ್ದ ಕಾರ್ಯಕರ್ತರ ಸಂಖ್ಯೆಯ ಮೂರು ಪಟ್ಟು ಜನರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸಿದ ಕೆಜೆಪಿ ಮುಖಂಡರು, ಮುಂದೆ ಪೈಪೋಟಿ ಇನ್ನೂ ಇದೆ ಎಂದು ತೋರಿಸುವ ಪ್ರಯತ್ನ ಮಾಡಿದರು.
ಇನ್ನೊಂದೆಡೆ ಯಡಿಯೂರಪ್ಪನವರು ಜೈಲಿಗೆ ಹೋಗಲು ನಾವು ಕಾರಣರಲ್ಲ, ಅವರು ಮಾಡಿದ ಭ್ರಷ್ಟಾಚಾರ ಕಾರಣ ಎಂದು ಪದೇ ಪದೇ ಪ್ರಸ್ತಾಪಿಸಿರುವ ಬಿಜೆಪಿ ನಾಯಕರ ಹೇಳಿಕೆಯೇ ಬಿಎಸ್ವೈ ಸಿಟ್ಟು ಮತ್ತಷ್ಟು ನೆತ್ತಿಗೇರಲು ಕಾರಣವಾಗಿದೆ ಎಂಬುದಕ್ಕೆ ಈ ಸಮಾವೇಶ ಸಾಕ್ಷಿಯಾಯಿತು.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಮುಕ್ತವಾಗಿರುವ ಸಂಬಂಧ ನ್ಯಾಯಾಮೂರ್ತಿಗಳ ತೀರ್ಪಿನ ಸಾರಾಂಶ ಓದಿ ಹೇಳಿದ ಬಿಎಸ್ವೈ, ಬಿಜೆಪಿ ನಾಯಕರನ್ನು ತಿವಿದರು.
ಇದು ಸಮಾವೇಶದ ಒಂದು ಭಾಗವಾದರೆ, ತಾವು ಸಿಎಂ ಸ್ಥಾನದಿಂದ ಕೆಳಗಿಳಿದ ನಂತರ ಶಿವಮೊಗ್ಗದ ಅಭಿವೃದ್ಧಿ ಕಥೆ ಏನೆಂಬುದನ್ನು ಜನರ ಮುಂದಿಡುವ ಪ್ರಯತ್ನ ಮಾಡಿದರು. ತಮ್ಮ ಅವಧಿಯ ನಂತರ ಶಿವಮೊಗ್ಗ ನಗರಕ್ಕೆ ಯಾವುದೇ ಯೋಜನೆ ತಾರದೇ ಇರುವುದು ಹಾಗೂ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿರುವುದನ್ನು ಪ್ರಸ್ತಾಪಿಸಿದರಲ್ಲದೇ, ಗಾಂಧಿ ಪಾರ್ಕ್ ಉದ್ಘಾಟನೆ ಪ್ರಕರಣ ಜನರ ಮನಸ್ಸಿನಿಂದ ಮಾಸದಂತೆ ಮತ್ತೊಮ್ಮೆ ಪ್ರಸ್ತಾಪಿಸಿದ್ದು ವಿಶೇಷವಾಗಿತ್ತು.
ಈಶ್ವರಪ್ಪ ಜಾತಕ ಬಿಚ್ಚಿಡಲು ಯತ್ನ
ವೇದಿಕೆಯಲ್ಲಿ ಬಿಎಸ್ವೈ ಆಪ್ತ ಗುರುಮೂರ್ತಿಯವರು ಭಾಷಣ ಮಾಡುವ ವೇಳೆ ಭಾವೋದ್ವೇಗಕ್ಕೊಳಗಾಗಿ ಡಿಸಿಎಂ ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ್ ಬಗ್ಗೆ ಕೆಲವು ದಾಖಲೆ ಹೊರಗೆಡಹುದಾಗಿ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಡಯಾಸ್ನತ್ತ ಆಗಮಿಸಿದ ಬಿಎಸ್ವೈ ಗುರುಮೂರ್ತಿಯವರನ್ನು ಸಮಾಧಾನಿಸಿ ತಾವೇ ಮೈಕ್ ಕೈಗೆತ್ತಿಕೊಂಡ ಪ್ರಸಂಗ ನಡೆಯಿತು.
ಈಶ್ವರಪ್ಪ ಹಗುರವಾಗಿ ಮಾತನಾಡುವುದನ್ನು ಮೊದಲು ನಿಲ್ಲಿಸಲಿ. ಈಗ ನಾವು ಪಕ್ಷ ಬಿಟ್ಟು ಬಂದಾಗಿದೆ, ಅವರು ಅವರ ಪಕ್ಷ ಸಂಘಟನೆ ಮಾಡಿಕೊಳ್ಳಲಿ. ಮೇ 5ರ ನಂತರ ಒಂದೇ ವೇದಿಕೆಯಲ್ಲಿ ಸೇರಿ ಚರ್ಚೆ ನಡೆಸೋಣ. ಅವರೂ ಹೇಳಬೇಕಾಗಿದ್ದನ್ನು ಹೇಳಲಿ, ನಾನೂ ಹೇಳುವುದಿದೆ, ಅದನ್ನು ಅಲ್ಲಿ ಹೇಳುತ್ತೇನೆ ಎಂದರು. ಇಷ್ಟು ಹೇಳಿ ದಾಖಲೆ ಬಹಿರಂಗದ ಸನ್ನಿವೇಶವನ್ನು ಮುಂದೂಡಿದರು.
ಇಷ್ಟಾದರೂ ಗುರುಮೂರ್ತಿ ಕೆಲವು ಸೂಕ್ಷ್ಮಗಳನ್ನು ನಂತರ ಬಹಿರಂಗಪಡಿಸಿದರು. ಈಶ್ವರಪ್ಪ ಪುತ್ರ 10 ಬಾರಿ ದುಬೈ ಪ್ರಯಾಣ ಹಾಗೂ ರಾಜಸ್ಥಾನದ ಗ್ರಾನೈಟ್ ವ್ಯವಹಾರದ ಕುರಿತು ಸೂಚ್ಯವಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

