ಶಿವಮೊಗ್ಗ

ಆಯನೂರು ಡಿಸಿಎಂ ಈಶ್ವರಪ್ಪರನ್ನ ಟೀಕಿಸಲಿ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.4
ರಾಜ್ಯ ಸಭಾ ಸದಸ್ಯ ಆಯನೂರು ಮಂಜುನಾಥ್ ಅವರು ನಮ್ಮ ಪಕ್ಷದವರ ಸಂಸ್ಕೃತಿಯನ್ನು ಟೀಕಿಸುವ ಬದಲು ಅವರದೇ ಪಕ್ಷದಲ್ಲಿರುವ ಡಿಸಿಎಂ ಈಶ್ವರಪ್ಪ ಅವರಿಗೆ ಸಂಸ್ಕೃತಿ ಇದೆಯೇ ಎಂದು ನೋಡಿಕೊಳ್ಳಲಿ ಎಂದು ಕೆಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಪಿ. ಪುರುಷೋತ್ತಮ್ ತಿರುಗೇಟು ನೀಡಿದರು.
ಸಂಘ ಪರಿವಾರದ ಕಾರ್ಯಕರ್ತರನ್ನು ಜೀತದಾಳುಗಳು ಎಂದು ಟೀಕಿಸುವ ಆಯನೂರು ಮಂಜುನಾಥ್ ಅವರು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ನಾನೂ ಸಹ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕ. ನನ್ನಂತಹ ನೂರಾರು ಸ್ವಯಂ ಸೇವಕರಿಗೆ ಅನುಮಾನಗಳಿವೆ. ಅದನ್ನು ಬಗೆಹರಿಸಲಿ ಎಂದರು.
ನಗರದಲ್ಲಿ ಗುರುವಾರ ಪಕ್ಷದ ಕಚೇರಿಯಲ್ಲಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಭಾಷೆಯ ಮೇಲೆ ಹಿಡಿತವಿರಲಿ: ಶಿವಮೊಗ್ಗದ ರಾಜಕೀಯ ಸಂಸ್ಕೃತಿ ಬಗ್ಗೆ ಮಾತನಾಡಿದ ಆಯನೂರು ಮಂಜುನಾಥ್ ಅವರು ಭಾಷೆಯ ಮೇಲೆ ಹಿಡಿತವಿರಲಿ ಎಂದಿದ್ದಾರೆ. ಅದು ಒಪ್ಪುವಂತಹ ವಿಷಯವೇ. ಆದರೆ, ಡಿಸಿಎಂ ಈಶ್ವರಪ್ಪ ಅವರು ತಲೆ ಕತ್ತರಿಸಿ, ಕೈ ಕಡಿಯಿರಿ ಎಂದು ಹೇಳಿದ ಬಗ್ಗೆ ಆಯನೂರು ಅಭಿಪ್ರಾಯವೇನು ಎಂದು ಪ್ರಶ್ನಿಸಿದರು.
ಪ್ರಮುಖರು ಉತ್ತರಿಸಲಿ: ಯಡಿಯೂರಪ್ಪ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಬಂದ ಕೂಡಲೇ ಅವರನನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು. ಆದರೆ, ಈಶ್ವರಪ್ಪ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದು, ನೋಟು ಎಣಿಸುವ ಯಂತ್ರ ಸಿಕ್ಕರೂ ಕ್ರಮ ಕೈಗೊಳ್ಳಲಿಲ್ಲ. ಈ ಪ್ರಶ್ನೆಗೆ ಸಂಘಪರಿವಾರದ ಪ್ರಮುಖರು ಉತ್ತರಿಸಬೇಕು ಎಂದರು.
ಈಶ್ವರಪ್ಪ ಅವರು ಮಾಡಿರುವ ಆಸ್ತಿಗಳ ವಿವರ ಪಡೆಯುತ್ತಿದ್ದೇವೆ. ಸದ್ಯವೇ ಬಹಿರಂಗಪಡಿಸುತ್ತೇನೆ ಎಂದರು.
ಕೃಷ್ಣಭಟ್ ಅಕ್ರಮ: ವಿಧಾನ ಪರಿಷತ್ ಸದಸ್ಯ ಪಿ.ವಿ. ಕೃಷ್ಣಭಟ್ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಆದರೆ, ತೀರ್ಥಹಳ್ಳಿ ತಾಲೂಕಿನ ವಿಳಾಸ ನೀಡಿ ಸರ್ಕಾರಿ ಸೌಲಭ್ಯ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಪುರುಷೋತ್ತಮ್ ಆರೋಪಿಸಿದರು.
ಹಿರಿಯರಾದ ಕೃಷ್ಣಭಟ್ ಅವರ ಬಗ್ಗೆ ಗೌರವವಿದೆ. ಆದರೂ ಅವರು ಬೆಂಗಳೂರಿನಲ್ಲಿ ಜಿ. ಕೆಟಗರಿ ಸೈಟ್ ಪಡೆದಿರುವುದು ನಿಜವಲ್ಲವೇ ಎಂದು ಪ್ರಶ್ನಿಸಿದರು.
ಸಂಘಪರಿವಾರದ ಶಿವಮೊಗ್ಗದ ಕೆಲವರು ಹಾಗೂ ಬೆಂಗಳೂರಿನ ಕೆಲವು ಮುಖಂಡರ ಕಾರಣದಿಂದ ಈ ಎಲ್ಲಾ ಗೊಂದಲಗಳು ಉಂಟಾಗಿವೆ ಎಂದರು.
ಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಜ್ಯೋತಿಪ್ರಕಾಶ್, ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ರುದ್ರೇಗೌಡ ಸೇರಿದಂತೆ ಹಲವರು ಇದ್ದರು.
ನಾನು ಸ್ವಯಂಸೇವಕ: ಕೆ.ಪಿ. ಪುರುಷೋತ್ತಮ್ ಅವರು, ನಾನು ಈಗಲೂ ಸಹ ಆರ್‌ಎಸ್‌ಎಸ್‌ಸ್ವಯಂ ಸೇವಕ. ಪರಿವಾರದೊಂದಿಗೆ ಸಂಪರ್ಕ ಕಡಿದುಕೊಂಡಿಲ್ಲ ಎಂದು ಹೇಳಿಕೊಂಡರು.
ಸಮಯದ ಅಭಾವದಿಂದ ಆರ್‌ಎಸ್‌ಎಸ್ ಶಾಖೆಗೆ ಹೋಗಲು ಆಗಿಲ್ಲ. ಗೋಲ್ವಾಳ್ಕರ್ ಅವರು ಹೇಳಿದಂತೆ ನಾನು ಎಲ್ಲೇ ಇದ್ದರೂ, ಯಾವ ಪಕ್ಷದಲ್ಲೇ ಇದ್ದರೂ ಸ್ವಯಂ ಸೇವಕನೇ ಎಂದರು.
ಹಾಗಾದರೆ ಗೋಹತ್ಯೆ ನಿಷೇದ ಕಾಯ್ದೆಯ ಬಗ್ಗೆ ನಿಮ್ಮ ವೈಯಕ್ತಿಕ ಹಾಗೂ ಕೆಜೆಪಿಯ ನಿಲವೇನು ಎಂದು ಕೇಳಿದಾಗ ಉತ್ತರಿಸದೇ ಜಾರಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.