ಶಿವಮೊಗ್ಗ

ನಿಯಮ ಪಾಲಿಸದಿರುವುದೇ ಅಪಘಾತಕ್ಕೆ ಕಾರಣ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಏ.4
ಪ್ರಸ್ತುತ ದಿನಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬ ವಾಹನ ಸವಾರರು ಪಾಲಿಸಲೇಬೇಕು ಎಂದು ಹಿರಿಯ ಮೋಟಾರು ವಾಹನ ನಿಯಂತ್ರಣ ಅಧಿಕಾರಿ ಎಸ್.ಜಿ. ಬಣಕಾರ್ ಹೇಳಿದರು.
ಕುವೆಂಪು ವಿಶ್ವವಿದ್ಯಾನಿಲಯ, ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಯುವ ರೆಡ್‌ಕ್ರಾಸ್ ಘಟಕ ಉದ್ಘಾಟನಾ, ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಪಾಲಿಸದಿರುವುದೇ ಬಹುತೇಕ ಅಪಘಾತಗಳಿಗೆ ಕಾರಣ. ಹೆಚ್ಚಾಗಿ ವಿದ್ಯಾರ್ಥಿಗಳೇ ಸಂಚಾರಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದಾಖಲೆ ಜತೆಯಲ್ಲಿರಲಿ: ಪ್ರತಿಯೊಬ್ಬ ವಾಹನ ಸವಾರರು, ಚಾಲನ ಪರವಾನಗಿ ಪತ್ರ, ವಾಹನ ವಿಮೆ, ವಾಹನದ ಮೂಲ ದಾಖಲಾತಿಗಳೊಂದಿಗೆ ವಾಹನ ಚಾಲನೆ ಮಾಡಬೇಕು. ಅದರೊಂದಿಗೆ ತಮ್ಮ ಸುರಕ್ಷತೆಯನ್ನು ಮನಗಂಡು ವಾಹನ ಚಾಲನೆ ಮಾಡಬೇಕು ಎಂದ ಅವರು, ವಿದ್ಯಾರ್ಥಿಗಳು ವೇಗವಾಗಿ ಬೈಕ್ ಚಾಲನೆ ಮಾಡುವುದು ಅಪಘಾತಕ್ಕೆ ಎಡೆಮಾಡಿಕೊಡುತ್ತದೆ. ನಿಧಾನವಾಗಿ ಕ್ರಮಿಸುವುದರಿಂದ ಯಾವುದೇ ಅಪಘಾತ ನಡೆಯುವುದಿಲ್ಲ ಎಂದರು.
ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಸಂಚಾರಿ ನಿಯಮಗಳನ್ನು ಪಾಲಿಸದವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅವಶ್ಯಕತೆಗನುಗುಣವಾಗಿ ವಾಹನಗಳನ್ನು ಉಪಯೋಗಿಸಿಕೊಳ್ಳಬೇಕೇ ಹೊರತು, ದುಂದು ವೆಚ್ಚ ಮಾಡುವುದಕ್ಕೆ ಅವಕಾಶ ನೀಡಬಾರದು ಎಂದರಲ್ಲದೇ, ಸಂಚಾರಿ ಠಾಣಾ ಅಧಿಕಾರಿಗಳು ಕೆಲ ರಸ್ತೆಗಳಲ್ಲಿ ವಾಹನ ತಪಾಸಣೆ ಮಾಡುವಾಗ ಯುವಕರು ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ವೇಗವಾಗಿ ಚಾಲನೆ ಮಾಡಿ ಅಪಘಾತಕ್ಕಿಡಾಗುತ್ತಾರೆ. ಉದಾಹರಣೆಗೆ ಕಳೆದ ಕೆಲ ದಿನಗಳ ಹಿಂದೆ ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ನಡೆದ ಅಪಘಾತವೇ ಕಾರಣ ಎಂದು ತಿಳಿಸಿದರು.
ಪ್ರಯಾಣ ಮಾಡಲು ಸಮೂಹ ಸಾರಿಗೆಗಳನ್ನು ಹೆಚ್ಚಾಗಿ ಬಳಸಿ, ಇಂಧನ ಉಳಿತಾಯ ಮಾಡುವುದಕ್ಕೆ ಮೊದಲ ಆದ್ಯತೆ ನೀಡಬೇಕು ಎಂದರು.
ಜಾಗ್ರತೆ ಇರಲಿ: ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಮಾತನಾಡಿ, ರಸ್ತೆ ಅಪಘಾತಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪಾದಚಾರಿಗಳು, ಚಾಲಕರು ಎಚ್ಚರದಿಂದ ಚಲಿಸಬೇಕು. ಪ್ರತಿನಿತ್ಯ ಒಂದಿಲ್ಲೊಂದು ರಸ್ತೆ ಅಪಘಾತ ಪ್ರಕರಣಗಳನ್ನು ನಗರದಲ್ಲಿ ಕಾಣುತ್ತಿದ್ದೇವೆ. ಅವುಗಳಲ್ಲಿ ಹೆಚ್ಚಾಗಿ ಯುವಕರೇ ಅಪಘಾತಕ್ಕಿಡಾಗುತ್ತಿರುವುದು ದುರಂತ ಎಂದರು.
ಸಂಚಾರಿ ವ್ಯವಸ್ಥೆಯಲ್ಲಿ ಸಾಕಷ್ಟು ತಾಂತ್ರಿಕ ದೋಷಗಳು ಕಂಡು ಬರುತ್ತಿರುವುದರಿಂದ ಸಂಚಾರಿ ಇಲಾಖೆ ಅಧಿಕಾರಿಗಳು ಇವುಗಳನ್ನು ಸರಪಡಿಸಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎ. ನಾಗರಾಜ್, ಮೋಟಾರ್ ವಾಹನ ನಿಯಂತ್ರಣಾಕಾರಿ ಹರ್ಷ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.