ಶಿವಮೊಗ್ಗ

ಅಖಾಡದಲ್ಲಿ ಗುದ್ದಾಡಲು ಜಟ್ಟಿಗಳು ರೆಡಿ

Published On :

ಕ.ಪ್ರ.ವಾರ್ತೆ ಶಿವಮೊಗ್ಗ   ಏ.5  
ಚುನಾವಣಾ ಅಖಾಡಕ್ಕಳಿದ ಜಟ್ಟಿಗಳ ಹೆಸರು ಬಹುತೇಕ ನಿಚ್ಚಳವಾದಂತಾಗಿದೆ.
ಶುಕ್ರವಾರ ಜೆಡಿಎಸ್, ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಸ್ಪರ್ಧಾಕಣ ರಂಗೇರಿದೆ. ಅಭ್ಯರ್ಥಿಗಳ ವಿಚಾರದಲ್ಲಿ ಅಂತೆ ಕಂತೆಗಳ ಸಂತೆಗೆ ತೆರೆಬಿದ್ದಂತಾಗಿದ್ದು, ಇನ್ನೇನಿದ್ದರೂ ಸಮೀಕರಣದ ಲೆಕ್ಕಾಚಾರ ಶುರುವಾಗಲಿದೆ.
  ಶಿವಮೊಗ್ಗ
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಡಿಸಿಎಂ ಈಶ್ವರಪ್ಪ ವಿರುದ್ಧ ಕಾಂಗ್ರೆಸ್‌ನಿಂದ ಎದುರಾಳಿಯಾಗಿ ಕೆ.ಬಿ. ಪ್ರಸನ್ನಕುಮಾರ್ ಸ್ಪರ್ಧಿಸುವುದು ಖಚಿತವಾಗಿದೆ.
   ಬ್ರಾಹ್ಮಣ ಸಮುದಾಯದ ಮುಖಂಡ, ಹಾಲಿ ನಗರಸಭಾ ಸದಸ್ಯರಾದ ಪ್ರಸನ್ನಕುಮಾರ್ ಅವರನ್ನು ಕಣಕ್ಕಿಳಿಸುವ ಮೂಲಕ ಕೆಎಸ್ ಈಶ್ವರಪ್ಪರನ್ನು ಹಣಿಯಲು ಕಾಂಗ್ರೆಸ್ ಖೆಡ್ಡಾ ಸಿದ್ಧಪಡಿಸಿದೆ. ಇನ್ನೊಂದೆಡೆ ಜೆಡಿಎಸ್ ಶ್ರೀಕಾಂತ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಕೆಜೆಪಿಯಿಂದ ಉದ್ಯಮಿ ರುದ್ರೇಗೌಡ ಅವರ ಹೆಸರು ಈಗಾಗಲೇ ಅಖೈರುಗೊಂಡಿದೆ.
ಸ್ನೇಹಿತರ ಸವಾಲ್
ಶಿಕಾರಿಪುರದಲ್ಲಿ ಬಿ.ಎಸ್. ಯಡಿಯೂರಪ್ಪನವರ ಎದುರಾಳಿಯಾಗಿ ಅವರ ಹಳೆಯ ಸ್ನೇಹಿತ ಶಾಂತವೀರಪ್ಪ ಗೌಡರ ಹೆಸರು ಅಂತಿಮಗೊಂಡಿದೆ. 2-3 ದಶಕಗಳ ಕಾಲ ಒಟ್ಟಿಗೆ ಬಿಜೆಪಿ ಕಟ್ಟಿದ್ದ ಸ್ನೇಹಿತರು ಮುಂದಿನ ಚುನಾವಣೆಯಲ್ಲಿ ಎದುರಾಳಿಗಳು.
  ವಿಶೇಷವೆಂದರೆ ಈಗ ಇಬ್ಬರೂ ಬಿಜೆಪಿಯಲ್ಲಿಲ್ಲ. ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಲಿಲ್ಲ ಎಂಬ ಕಾರಣಕ್ಕೆ ಬಿಎಸ್‌ವೈ ಮೇಲೆ ಮುನಿಸಿಕೊಂಡ ಶಾಂತವೀರಪ್ಪ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು.
  ವಿಶೇಷವೆಂದರೆ, ಶಾಂತವೀರಪ್ಪ ಗೌಡರು ಕ್ಷೇತ್ರದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿರುವ ಸಾಧು ವೀರಶೈವ ಸಮಾಜಕ್ಕೆ ಸೇರಿದವರು.
ಭದ್ರಾವತಿಗೆ ಅಪ್ಪಾಜಿ
ಭದ್ರಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ ಎಂಬ ಸಸ್ಪೆನ್ಸ್ ಮುಂದುವರಿದಿದೆ.
   ಇಲ್ಲಿನ ಪ್ರಭಾವಿ ಮುಖಂಡ ಹಾಗೂ ಜೆಡಿಎಸ್ ಅಭ್ಯರ್ಥಿ ಅಪ್ಪಾಜಿ ಗೌಡರನ್ನು ಕಳೆದ ಚುನಾವಣೆಯಲ್ಲಿ ಮಣಿಸಿದ್ದ ಬಿ.ಕೆ. ಸಂಗೇಶ್ ಅವರ ಬದಲು ಬೇರೆಯವರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆ ನಡೆದಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಡೆ ಕುತೂಹಲಕಾರಿಯಾಗಿದೆ. ಇನ್ನೊಂದೆಡೆ ಶುಕ್ರವಾರ ಅಪ್ಪಾಜಿ ಗೌಡರಿಗೆ ಜೆಡಿಎಸ್ ಟಿಕೆಟ್ ಖಚಿತ ಪಡಿಸಿದ್ದರೆ, ಬಿಜೆಪಿ ಮತ್ತು ಕೆಜೆಪಿ ಇನ್ನೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ.
  ಶಿವಮೊಗ್ಗ ಗ್ರಾಮಾಂತರ
ಹಾಲಿ ಶಾಸಕ ಬಿಜೆಪಿಯ ಕೆ.ಜಿ. ಕುಮಾರಸ್ವಾಮಿಯವರಿಗೆ ಟಿಕೆಟ್ ದೊರೆತಿದೆ. ಕುಮಾರಸ್ವಾಮಿಯವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಗಾಳಿ ಸುದ್ದಿ ಹಬ್ಬಿತ್ತಾದರೂ ಅಂತಿಮವಾಗಿ ಟಿಕೆಟ್ ಪಡೆದುಕೊಳ್ಳುವಲ್ಲಿ ಹಾಲಿ ಶಾಸಕರು ಸಫಲರಾಗಿದ್ದಾರೆ.
 ಎದುರಾಳಿಗಳಾಗಿ ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿ ಶಾರದಾ ಪೂರ್ಯನಾಯ್ಕ, ಕಾಂಗ್ರೆಸ್‌ನಿಂದ ಹಿರಿಯ ಹುರಿಯಾಳು ಕರಿಯಣ್ಣ ಹೆಸರು ಅಂತಿಮಗೊಂಡಿದೆ. ಕೆಜೆಪಿಯಿಂದ 79ರ ಹರೆಯದ ಬಸವಣ್ಯಪ್ಪ ಹೆಸರು ಈಗಾಗಲೇ ಪ್ರಕಟವಾಗಿದೆ.
 ಸಾಗರದಲ್ಲಿ ಕಾಗೋಡು
ಸಾಗರದಲ್ಲಿ ನಿರೀಕ್ಷೆಯಂತೆ ಕಾಗೋಡು ತಿಮ್ಮಪ್ಪ ಹೆಸರು ಖಚಿತವಾಗಿದೆ. ವಿಶೇಷವೆಂದರೆ ಮೊದಲ ಪಟ್ಟಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಕೆಜೆಪಿಯಿಂದ ಬಿ.ಆರ್. ಜಯಂತ್ ಹೆಸರು ಮುಂಚಿತವಾಗಿ ನಿರ್ಧರಿಸಲಾಗಿದೆ.
  ಸಹೋದರರ ಸವಾಲ್
2008 ಚುನಾವಣೆಯನ್ನು ನೆನಪಿಸುವಂತೆ ಸೊರಬ ಕ್ಷೇತ್ರ ಸಿದ್ಧಗೊಂಡಿದೆ. ಕಾಂಗ್ರೆಸ್‌ನಿಂದ ಕುಮಾರ ಬಂಗಾರಪ್ಪ, ಜೆಡಿಎಸ್‌ನಿಂದ ಮಧು ಬಂಗಾರಪ್ಪ ಹೆಸರು ಅಂತಿಮಗೊಳಿಸಲಾಗಿದೆ. ಕೆಜೆಪಿಯಿಂದ ಈಗಾಗಲೇ ಹರತಾಳು ಹಾಲಪ್ಪ ಪ್ರಚಾರ ಕಾರ್ಯದಲ್ಲಿ ಮುಳುಗಿದ್ದರೆ, ಬಿಜೆಪಿಗೆ ಅಭ್ಯರ್ಥಿ ಸಿಕ್ಕಿಲ್ಲ.
 ಕಿಮ್ಮನೆ, ಆರಗ
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯ ಅಭ್ಯರ್ಥಿಗಳೇ ಮತ್ತೆ ಸ್ಪರ್ಧೆಗಿಳಿದಿದ್ದಾರೆ. ಹಾಲಿ ಶಾಸಕ ಕಿಮ್ಮನೆ ರತ್ನಾಕರ್ ಅವರಿಗೆ ಬಿಜೆಪಿಯಿಂದ ಆರಗ ಜ್ಞಾನೇಂದ್ರ ಎದುರಾಳಿ. ಕೆಜೆಪಿಯಿಂದ ಮಂಜುನಾಥ ಗೌಡ ಹೆಸರು ಅಂತಿಮಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.