ಶಿವಮೊಗ್ಗ

ಬೂದಿ ಮುಚ್ಚಿದ ಕೆಂಡದಂತಿರುವ ಬದನೆಹಾಳ್

Published On :

-ಆನಂದರಾಮನ್ ಎಲ್.
ಭದ್ರಾವತಿ:
ತಾಲೂಕಿನ ಬದನೆಹಾಳ್ ಗ್ರಾಮದಲ್ಲಿ ನೀರವತೆ ಮನೆ ಮಾಡಿದೆ. ಸಂಜೆಯಾದರೆ ಅಂಗಡಿ ಮುಂಗಟ್ಟುಗಳ ಮುಂದೆ ಸೇರುತ್ತಿದ್ದ ಜನ, ಕಟ್ಟೆಗಳ ಮೇಲೆ ಕುಳಿತು ಹರಟುತ್ತಿದ್ದ ಜನ ಕಣ್ಣಿಗೆ ಕಾಣದೆ ಎಲ್ಲೆಲ್ಲೂ ನಿಶ್ಯಬ್ದತೆ ಕಂಡುಬರುತ್ತಿದೆ.
ಪೊಲೀಸರ ಸಂಚಾರ ಸೋಮವಾರ ಮಧ್ಯಾಹ್ನವೇ ಸ್ತಬ್ದವಾಗಿದ್ದರೂ ಜನ ಮನೆಯ ಹೊರಗೆ ಬಾರದೆ ಒಳಗೆ ಕುಳಿತಿದ್ದರು. ಇದ್ದ 60 ಕುಟುಂಬಗಳ ಪೈಕಿ 37 ಪುರುಷರು ಮತ್ತು 25 ಮಹಿಳೆಯರನ್ನು ಪೊಲೀಸರು ಭಾನುವಾರ ಸಂಭವಿಸಿದ ಅರಣ್ಯ ಇಲಾಖೆ ಮತ್ತು ಗ್ರಾಮಸ್ಥರ ನಡುವಿನ ಘರ್ಷಣೆಗೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಮತ್ತಷ್ಟು ಜನ ಬಂಧನದ ಹೆದರಿಕೆಯಿಂದ ಕಾಡಿನ ಕಡೆ ಓಡಿದ್ದಾರೆ. ಹೀಗಾಗಿ ಹಳ್ಳಿಯಲ್ಲಿ ಅಳಿದುಳಿದ ಜನ ಮನೆಯೊಳಗೆ ಅಗುಳಿಹಾಕಿ ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಸುಮಾರು ಐವತ್ತು ವರ್ಷಗಳ ಹಿಂದೆ ಬಂಡಿಗುಡ್ಡ ಸುಣ್ಣದ ಕಲ್ಲಿನ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅಲ್ಲಿನ ಗಣಿ ಮುಚ್ಚಿದ್ದರಿಂದ ಕಾಡಿಗೆ ಬಂದು ಕಾಡನ್ನು ಕಡಿದು ಸಾಗುವಳಿ ಮಾಡತೊಡಗಿದರು. ಅರಣ್ಯ ಇಲಾಖೆಯ ಸರ್ವೆ ನಂ.35 ಮತ್ತು ಸರ್ವೆ ನಂ.7ರಲ್ಲಿ ಇವರನ್ನು ಬಗರ್‌ಹುಕುಂ ಸಾಗುವಳಿದಾರರೆಂದು ಗುರುತಿಸಿ ಸರ್ವೆ ನಂ.35ರಲ್ಲಿ ಸಾಗುವಳಿ ಮಾಡುವವರಿಗೆ ಪಹಣಿ ನೀಡಿ ಸಕ್ರಮಗೊಳಿಸಲಾಯಿತು. ಸರ್ವೆ ನಂ.7ರಲ್ಲಿ ಸಾಗುವಳಿ ಚೀಟಿ ಮಾತ್ರ ನೀಡಿ ಅವರನ್ನು ಬಗರ್ ಹುಕುಂ ಸಾಗುವಳಿದಾರರೆಂದು ಮುಂದುವರೆಸಲಾಯಿತು. ಅಲ್ಲಿಂದ ಇಲ್ಲಿಯವರೆಗೆ ತಲೆಮಾರುಗಳು ಸಾಗುವಳಿ ಮಾಡಿಕೊಂಡು ಗದ್ದೆ ತೋಟಗಳನ್ನು ಮಾಡಿಕೊಂಡು ಬಂದಿದ್ದಾರೆ. 25 ವರ್ಷಗಳ ಹಿಂದೆ ಸಾಗುವಳಿದಾರರಿಗೆ ಒಕ್ಕಲೆಬ್ಬಿಸುವ ಯತ್ನವನ್ನು ಅರಣ್ಯ ಇಲಾಖೆ ಮಾಡಿತಾದರೂ ಅದು ಯಶಸ್ವಿಯಾಗಲಿಲ್ಲ. ಈಗ ಪುನಃ ಅರಣ್ಯ ಇಲಾಖೆ ತನ್ನ ಅಟ್ಟಹಾಸ ತೋರಲು ಮುಂದಾಗಿದೆ ಎನ್ನುತ್ತಾರೆ ಅಂದು ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಸಾಗುವಳಿದಾರ ಮಾದಯ್ಯ.
ಮನೆ ಕೆಡುವ ಪ್ರಸ್ತಾವನೆ: ಸರ್ವೆ ನಂ.7ರಲ್ಲಿ ಸುಮಾರು 850 ಎಕರೆ ಜಮೀನು ಇದೆ. ಅದರಲ್ಲಿ ಮನೆಗಳನ್ನೂ ಕಟ್ಟಿಕೊಂಡಿದ್ದಾರೆ. ಅರಣ್ಯ ಇಲಾಖೆ ಜಮೀನು ವಶಪಡಿಸಿಕೊಳ್ಳುವುದರೊಂದಿಗೆ ಮನೆಗಳನ್ನೂ ಕೆಡವುವ ಪ್ರಸ್ತಾವನೆ ಮಾಡಿದಾಗ ಗ್ರಾಮಸ್ಥರು ರೊಚ್ಚಿಗೆದ್ದು ಇಲಾಖೆಯ ಯಂತ್ರಗಳಿಗೆ ಬೆಂಕಿಯಿಟ್ಟರೆಂದು ವಿವರಿಸಿದರು ವಯೋವೃದ್ಧರಾದ ತಮ್ಮಯ್ಯ. ತಮ್ಮ ಮೂರು ಮಕ್ಕಳು ಇದುವರೆಗೆ ಕಣ್ಮರೆಯಾಗಿದ್ದಾರೆಂದು ಸುದ್ದಿಗಾರರಲ್ಲಿ ಅಳಲು ತೋಡಿಕೊಂಡುರು. ತಾವು ಬಾಲಕರಾಗಿದ್ದಾಗ ಗ್ರಾಮಕ್ಕೆ ಬಂದು ನೆಲಸಿದ್ದು ಈಗ ಎರಡು ತಲೆಮಾರು ಇಲ್ಲಿ ಸಾಗುವಳಿ ಮಾಡಿದ್ದನ್ನು ಕಂಡಿರುವುದಾಗಿ ಹೇಳುತ್ತಾರೆ ತಮಿಳುನಾಡಿನಿಂದ ವಲಸೆಬಂದ ಗಣಿಕಾರ್ಮಿಕ ಅಳಗಪ್ಪ.
ಬೆದರಿಕೆ: ಗ್ರಾಮಸ್ಥರು ಗ್ರಾಮ ತ್ಯಜಿಸದಿದ್ದರೆ ವನ್ಯಮೃಗಗಳನ್ನು ತಂದು ಬಿಡುವ ಬೆದರಿಕೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಒಡ್ಡಿದ್ದಾರೆಂದು ಗ್ರಾಮದ ಹೆಣ್ಣುಮಕ್ಕಳು ಸುದ್ದಿಗಾರರಿಗೆ ತಿಳಿಸಿದರು. ಕೇಂದ್ರ ಸರ್ಕಾರದ ಉದ್ಯೋಗಖಾತ್ರಿ ಯೋಜನೆಯಲ್ಲಿ ಗ್ರಾಮಸ್ಥರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತಿಲ್ಲ ಈ ಅರಣ್ಯ ಇಲಾಖೆ ಅಧಿಕಾರಿಗಳು ಎಂದು ಗ್ರಾಮದ ಮಹಿಳೆಯರು ದೂರಿದರು. ಗ್ರಾಮದಲ್ಲಿ ನಡೆದಿರುವ ಗೋಲಿಬಾರ್‌ನಿಂದಾಗಿ ಮಕ್ಕಳು ಶಾಲೆಗೆ ಹೋಗಲು ಹೆದರಿ ಮನೆಯಲ್ಲಿ ಕುಳಿತಿವೆ ಎಂದು ಗೋಳಿಟ್ಟರು.
ತಲೆಮಾರುಗಳಿಂದ ಸಾಗುವಳಿ ಮಾಡುತ್ತಿರುವ ಜಮೀನು ಮತ್ತು ವಾಸ ಮಾಡುತ್ತಿರುವ ಮನೆಗಳನ್ನು ನಾವು ಬಿಡುವುದಿಲ್ಲ. ರೈತಸಂಘದ ನೆರವಿನೊಂದಿಗೆ ಹೋರಾಟ ರೂಪಿಸುತ್ತೇವೆ. ನಮ್ಮ ತುತ್ತಿನ ಚೀಲ ತುಂಬಿಸುತ್ತಿರುವ ಜಮೀನನ್ನು ಬಿಡುವುದಾದರೂ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ಆಶ್ವಾಸನೆ: ಮಹಿಳೆಯರು ಮಕ್ಕಳನ್ನು ಲೆಕ್ಕಿಸದೆ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರನ್ನು ಬಳಸಿ ಗೋಲಿಬಾರ್ ಮಾಡಿದ್ದಾರೆ. ಕುಮಾರ್ ಎಂಬ ಯುವಕನಿಗೆ ಕಾಲಿಗೆ ಗುಂಡು ತಗುಲಿ ಆತನು ಆಸ್ಪತ್ರೆಗೆ ದಾಖಲಾಗಿದ್ದಾನೆ. ನಮ್ಮ ಹಕ್ಕನ್ನು ನಾವು ಕೇಳುವುದು ತಪ್ಪೇ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉಪವಿಭಾಗಾಧಿಕಾರಿಗಳ ಎದುರು ಯಂತ್ರಗಳನ್ನು ಬಳಸಿ ಜಮೀನನ್ನು ಒಕ್ಕಲೆಬ್ಬಿಸುವ ಕಾರ್ಯಾಚರಣೆ ಸ್ಥಗಿತಗೊಳಿಸುವ ಆಶ್ವಾಸನೆ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆಂದು ಗ್ರಾಮಸ್ಥರು ದೂರಿದರು.
ಪರಿಹಾರ ಸಿಗದು: ಶೋಷಿತ ಸಾಗುವಳಿದಾರರು ಜನಪ್ರತಿನಿಧಿಗಳ ಬಳಿ ತಮ್ಮ ಅಳಲನ್ನು ತೋಡಿಕೊಳ್ಳಲು ಹೋದರೆ ಅವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಏನೂ ಮಾಡಲಾಗದು ಎಂದು ಕೈಚೆಲ್ಲುತ್ತಾರಾದ್ದರಿಂದ ಅಲ್ಲಿಯೂ ಪರಿಹಾರ ಸಿಗದು. ಅರಣ್ಯ ಇಲಾಖೆ ಅಧಿಕಾರಿಗಳು ಈ ವಿಷಯದ ಬಗ್ಗೆ ಸ್ಪಷ್ಟ ನಿಲವನ್ನು ತೆಗೆದುಕೊಳ್ಳುವಲ್ಲಿ ಮೀನಮೇಷ ಎಣಿಸುತ್ತಿದ್ದಾರೆ. ಜಮೀನು ಕಳೆದುಕೊಂಡರೆ ಸಾಮೊಂದೇ ದಾರಿ ಎನ್ನುತ್ತಾರೆ ಸಾಗುವಳಿದಾರರು.
ಗ್ರಾಮ ಸಮಿತಿ ಸಭೆ: ಅರಣ್ಯ ಇಲಾಖೆ ಅಧಿಕಾರಿಗಳು ಈ ರೀತಿಯ ದೌರ್ಜನ್ಯ ಮಾಡಿರುವುದು ಖಂಡನೀಯವೆಂದು ರಾಜ್ಯ ರೈತಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಗಂಗಾಧರ ತಿಳಿಸಿದ್ದಾರೆ. ಇಂತಹ ಕ್ರಮ ಕೈಗೊಳ್ಳುವ ಮೊದಲು ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಬೇಕಿತ್ತು. ಅವರೊಂದಿಗೆ ಸ್ಥಳೀಯವಾಗಿ ಅರಣ್ಯ ಗ್ರಾಮ ಸಮಿತಿ ಸಭೆ ನಡೆಸಬೇಕಿತ್ತು. ಅದರೆ ಅರಣ್ಯ ಇಲಾಖೆ ಅಧಿಕಾರಿಗಳು ಇದಾವುದನ್ನೂ ಮಾಡದೆ ಚುನಾವಣಾ ವೇಳೆ ತೆರವು ಕಾರ್ಯಾಚರಣೆ ಮಾಡಿರುವುದು ಸರಿಯಲ್ಲ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಮಂಗಳವಾರ ರಾತ್ರಿ ಬದನೆಹಾಳ್ ಗ್ರಾಮದಲ್ಲಿ ಶಾಂತಿಸಭೆ ನಡೆಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತಿತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಗಂಗಾಧರ್ ತಿಳಿಸಿದ್ದಾರೆ.

ದೌರ್ಜನ್ಯ ಖಂಡನೀಯ
ಅರಣ್ಯ ಇಲಾಖೆಯವರು ಈ ರೀತಿಯ ದೌರ್ಜನ್ಯ ಮಾಡಿರುವು ಖಂಡನೀಯ. ಇಂತಹ ಕ್ರಮ ತೆಗೆದುಕೊಳ್ಳುವ ಮೊದಲು ದೊಡ್ಡ ಮ್ಟಟದ ಅಧಿಕಾರಿಗಳನ್ನು ಭೇಟಿ ಮಾಡಬೇಕಿತ್ತು. ಅದರೊಂದಿಗೆ ಸ್ಥಳೀಯವಾಗಿ ಅರಣ್ಯ ಗ್ರಾಮ ಸಮಿತಿ ಸಭೆ ನಡೆಸಬೇಕಿತ್ತು. ನಂತರ ಒತ್ತುವರಿ ತೆರವು ಮಾಡುವ ಅವಕಾಶವಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಇದಾವುದನ್ನೂ ಮಾಡಿಲ್ಲ. ಅಲ್ಲದೇ, ಚುನಾವಣೆ ವೇಳೆ ತೆರವು ಕಾರ್ಯಚರಣೆ ಮಾಡಿರುವುದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಗ್ರಾಮದಲ್ಲಿ ಶಾಂತಿ ನೆಲೆಸುವಂತೆ ಅರಣ್ಯ ಅಧಿಕಾರಿಗಳು ಮತ್ತಿತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎನ್ನುತ್ತಾರೆ ರೈತ ಮುಖಂಡ ಕೆ.ಟಿ. ಗಂಗಾಧರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.