ಕ್ಷುಲ್ಲಕ ಕಾರಣಕ್ಕೆ ಸುಳ್ಳು ಕೇಸು ದಾಖಲು
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.8
ಇದೊಂದು ಕಳ್ಳ ಪೊಲೀಸ್ ಕತೆ. ಕಳ್ಳನೇ ಹೋಗಿ ಪೊಲೀಸರ ಬಳಿ ನನಗೆ ರಕ್ಷಣೆ ನೀಡಿ ಎಂದು ಅಂಗಲಾಚಿರುವ ಕತೆ.
ಶಿವಮೊಗ್ಗ ತಾಲೂಕಿನ ಚೋರಡಿ ಗ್ರಾಪಂ ವ್ಯಾಪ್ತಿಯ ಹೊರಬೈಲು ಗ್ರಾಮದಲ್ಲಿ ಇಂತಹದ್ದೊಂದು ನಿಜ ಘಟನೆ ನಡೆದಿದೆ. ಗ್ರಾಮದ ವ್ಯಕ್ತಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಸುಳ್ಳು ಕೇಸು ದಾಖಲಿಸಿ ಗ್ರಾಮಸ್ಥರನ್ನು ಪೊಲೀಸರು ಬಂಧಿಸಲಿದ್ದಾರೆ ಎಂಬ ವದಂತಿ ತೇಲಿ ಬಿಟ್ಟಿರುವುದೇ ಇಷ್ಟಕ್ಕೆಲ್ಲಾ ಕಾರಣ ಎನ್ನಲಾಗಿದೆ.
ಏನಿದು ಕಥೆ?: ಹೊರಬೈಲು ಗ್ರಾಮದ ಸರ್ವೆ ನಂ.12ರಲ್ಲಿನ ಸರ್ಕಾರಿ ಜಮೀನಿನಲ್ಲಿ ಶಿವಮೊಗ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರೈತರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಗೋದಾವೊಂದನ್ನು ಕಳೆದ ನಾಲ್ಕು ತಿಂಗಳಿನಿಂದ ನಿರ್ಮಿಸಲಾಗುತ್ತಿದೆ. ಈ ಸರ್ಕಾರಿ ಜಾಗ ತನಗೆ ಸೇರಿದ್ದು ಎಂದು ಗ್ರಾಮದ ವ್ಯಕ್ತಿಯೊಬ್ಬ ಕ್ಯಾತೆ ತೆಗೆದಿದ್ದಾನೆ. ಆದರೆ ಯಾವುದೇ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಗೋದಾಮು ನಿರ್ಮಾಣ ಮುಂದುವರೆಸಲಾಗಿತ್ತು.
ತಗಾದೆ: ಇದನ್ನು ಸಹಿಸದ ವ್ಯಕ್ತಿ ಜಮೀನು ತನ್ನದು ಎಂದು ಹೇಳಿಕೊಂಡು ಬೇರೆ ಗ್ರಾಮದ ಕೆಲವರನ್ನು ಕರೆಸಿ ಗ್ರಾಮದವರೊಂದಿಗೆ ತಗಾದೆ ತೆಗೆಸಿದ್ದಾನೆ. ಜೊತೆಗೆ ಈ ಸಂದರ್ಭದಲ್ಲಿ ಗೋದಾಮಿಗೆ ಕ್ಯೂರಿಂಗ್ ಮಾಡಲು ನೀರು ಹಾಯಿಸುತ್ತಿದ್ದ ಯುವಕನೊಬ್ಬನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ವೇಳೆ ಮಧ್ಯ ಪ್ರವೇಶಿಸಿದ ಗ್ರಾಮಸ್ಥರ ಮೇಲೆ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಕುಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಟ್ಟ ವದಂತಿ: ಘಟನೆ ನಂತರ ಹಲ್ಲೆ ನಡೆಸಿದವರೇ ಶಿವಮೊಗ್ಗ ಡಿವೈಎಸ್‌ಪಿ ಅವರ ಬಳಿ ತಮ್ಮ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು, ನಂತರದಲ್ಲಿ ವದಂತಿಗಳನ್ನು ಹರಿಯಬಿಡಲಾಗಿದೆ.
ಘಟನೆ ಭಾನುವಾರ ಸಂಭವಿಸಿದ್ದು, ಸೋಮವಾರ ಬೆಳಗ್ಗೆಯೇ ಪೊಲೀಸರು ಆಗಮಿಸಿ ಗ್ರಾಮದ ಎಲ್ಲರನ್ನೂ ಬಂಧಿಸುತ್ತಾರೆ ಎಂದು ವದಂತಿ ಹಬ್ಬಿಸಲಾಗಿತ್ತು. ಜೊತೆಗೆ ಮಹಿಳೆಯರನ್ನೂ ಬಂಧಿಸಿ ಕರೆದೊಯ್ಯಲಿದ್ದಾರೆ. ಸೋಮವಾರ ಬೆಳಗ್ಗೆಯೇ ವಾರೆಂಟ್ ತಂದು ಪೊಲೀಸರು ಬಂಧಿಸುತ್ತಾರೆ ಎನ್ನುವ ಗಾಳಿಸುದ್ದಿಯನ್ನೂ ತೇಲಿ ಬಿಡಲಾಗಿತ್ತು. ಗ್ರಾಮದ ಯಾರ ಬಳಿಯೂ ಎಲ್ಲಿ ದೂರು ದಾಖಲಾಗಿದೆ ಎನ್ನುವ ಬಗ್ಗೆ ಯಾವ ಮಾಹಿತಿಯೂ ಇರಲಿಲ್ಲ.
ಇಡೀ ಊರಿನವರನ್ನೇ ಯಾವುದೇ ತಪ್ಪಿಲ್ಲದಿದ್ದರೂ ಬಂಧಿಸುತ್ತಾರೆ ಎನ್ನುವ ವದಂತಿ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆಯೇ ಗ್ರಾಮದ ಬಹುತೇಕ ಮಂದಿ ಜಾಗ ಖಾಲಿ ಮಾಡಿದ್ದರು. ಇದರಿಂದಾಗಿ ಸುಮಾರು 65 ಮನೆಗಳನ್ನು ಹೊಂದಿರುವ ಇಡೀ ಗ್ರಾಮ ಯಾವುದೇ ಚಟುವಟಿಕೆ ಇಲ್ಲದೆ ಬಿಕೋ ಎನ್ನುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

