ಬೀದಿಗೆ ಬಂದ ಕಾಂಗ್ರೆಸ್ ಭಿನ್ನಮತ
ಕ.ಪ್ರ.ವಾರ್ತೆ,ಶಿವಮೊಗ್ಗ, ಏ.8
ಮುಂದಿನ ಚುನಾವಣೆಗೆ ಸಮರೋಪಾದಿಯಲ್ಲಿ ಸಜ್ಜಾಗಬೇಕಾದ ಕಾಂಗ್ರೆಸ್ನಲ್ಲಿ ಇದೀಗ ಭಿನ್ನಮತ ಹೊಗೆಯಾಡಲು ಆರಂಭಿಸಿದ್ದು, ಕೆಲವು ಕಡೆಗೆ ಬೀದಿಗೆ ಬಂದಿದೆ.
ಈಗಾಗಲೇ ಶಿಕಾರಿಪುರದಲ್ಲಿ ಶಾಂತವೀರನಾಯ್ಕ ಅವರಿಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದು, ಇತ್ತ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆ ಅಸಮಾಧಾನ ಆಸ್ಫೋಟಗೊಂಡಿದೆ. ಕಾರ್ಯಕರ್ತರು ಬೀದಿಗಿಳಿದಿದ್ದಾರೆ.
ಪ್ರತಿಭಟನೆ: ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಶಾಸಕ ಕರಿಯಣ್ಣರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಸೋಮವಾರ ಆ ಭಾಗದ ಕಾಂಗ್ರೆಸ್ ಮುಖಂಡರು ನಗರದ ಪಿಎಲ್ಡಿ ಬ್ಯಾಂಕ್ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗ ದಿಢೀರ್ ಪ್ರತಿಭಟನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.
ಬಾರಿ ಪೈಪೋಟಿ: ಕಾಂಗ್ರೆಸ್ ಮುಖಂಡರ ವಿರುದ್ಧ ಧಿಕ್ಕಾರ ಕೂಗಿದ ಕಾರ್ಯಕರ್ತರು, ರಸ್ತೆ ತಡೆ ನಡೆಸಲೂ ಮುಂದಾದರು. ಇದರಿಂದ ಪಿಎಲ್ಡಿ ಬ್ಯಾಂಕ್ ರಸ್ತೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಯಿತು. ಈ ಕ್ಷೇತ್ರದಲ್ಲಿ ಪಕ್ಷದ ಯುವ ನಾಯಕ ರವಿಕುಮಾರ್ ಆಕಾಂಕ್ಷಿಯಾಗಿದ್ದರು. ಟಿಕೆಟ್ಗಾಗಿ ಅರ್ಜಿಯನ್ನೂ ಸಲ್ಲಿಸಿದ್ದರು. ಇಬ್ಬರ ನಡುವೆ ಟಿಕೆಟ್ಗಾಗಿ ಬಾರಿ ಪೈಪೋಟಿ ಇತ್ತು. ಕೊನೆಗೆ ಕಾಂಗ್ರೆಸ್ ವರಿಷ್ಠರು ಕರಿಯಣ್ಣ ಅವರ ಹೆಸರು ಘೋಷಿಸಿದ್ದರು.
ಸಂಘಟನೆಗೆ ಹಿನ್ನಡೆ: ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಗಳಿಂದ ಕಾಂಗ್ರೆಸ್ ಸತತವಾಗಿ ಪರಾಭವಗೊಳ್ಳುತ್ತಾ ಬಂದಿದೆ. ಕಳೆದ ಚುನಾವಣೆಯಲ್ಲಿ ಕರಿಯಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಸುಮಾರು 25 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದು, ಪಕ್ಷದ ಸಂಘಟನೆಗೆ ತೀರಾ ಹಿನ್ನಡೆಯಾಗಿದೆ ಎಂದು ಪ್ರತಿಭಟನಾಕಾರರು ಮನವಿಯಲ್ಲಿ ವಿವರಿಸಿದ್ದಾರೆ.
ನಿಮಯ ಉಲ್ಲಂಘನೆ: ಕಾಂಗ್ರೆಸ್ ನಿಯಮದಂತೆ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲು ಕಂಡವರಿಗೆ ಟಿಕೆಟ್ ನೀಡುವಂತಿಲ್ಲ. ಆದರೆ ಈ ನಿಮಯ ಉಲ್ಲಂಘನೆಯಾಗಿದೆ ಎಂಬುದು ಇವರ ಆರೋಪ. ಈ ಬಾರಿಯ ಚುನಾವಣೆಯಲ್ಲಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಆದರೆ ಈ ಹಿಂದೆ ಸೋತಿದ್ದವರಿಗೆ ಟಿಕೆಟ್ ನೀಡಿರುವುದರಿಂದ ಕಾರ್ಯಕರ್ತರು ಅಸಮಾಧಾನ ಹೊಂದುವಂತಾಗಿದೆ.
ಕೂಡಲೇ ಪಕ್ಷ ಗ್ರಾಮಾಂತರ ಕ್ಷೇತ್ರದಲ್ಲಿ ಹೊಸಬರಿಗೆ ಟಿಕೆಟ್ ನೀಡಬೇಕು. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಕಾಂಗ್ರೆಸ್ ಮುಖಂಡರು ಗಮನಹರಿಸಬೇಕು. ಹೊಸಬರಿಗೆ ಟಿಕೆಟ್ ನೀಡಿದರಷ್ಟೇ ಶತಾಯಗತಾಯ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಕೊಡುತ್ತೇವೆ ಎಂದು ಪ್ರತಿಭಟನಾಕಾರರು ಹೇಳಿದರು.
ಅಗಸವಳ್ಳಿ ಗ್ರಾಮದ ಗ್ರಾಪಂ ಮಾಜಿ ಉಪಾಧ್ಯಕ್ಷ ಮುನೇಶ್ವರ, ತಾಪಂ ಮಾಜಿ ಸದಸ್ಯ ರುದ್ರಪ್ಪ, ಮಂಡಲ ಪಂಚಾಯಿತಿ ಮಾಜಿ ಅಧ್ಯಕ್ಷ ನಿಧಿಗೆ ಮುರುಗೇಶ್, ಮುಖಂಡ ಕೆ.ಜಿ. ಮಲ್ಲಿಕಾರ್ಜುನ, ತ್ಯಾಜವಳ್ಳಿ ವೀರೇಶಪ್ಪ, ವೆಂಕಟೇಶ್ ಪ್ರತಿಭಟನೆಯಲ್ಲಿ ಇದ್ದರು.
ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾದ ಜಿಲ್ಲಾ ಕಾಂಗ್ರೆಸ್ ಮುಖಂಡರು ಪ್ರತಿಭಟನಾಕಾರರ ಮನವಿ ಸ್ವೀಕರಿಸಿ,
ಇದನ್ನು ಪಕ್ಷದ ಹೈಕಮಾಂಡ್ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯ ಓಘ ತಗ್ಗಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

