ಈಶ್ವರಪ್ಪ ವಿರುದ್ಧ ತಣ್ಣಗಾಗದ ಆಕ್ರೋಶ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.12
ಉಪಮುಖ್ಯಮಂತ್ರಿ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪನವರ ವಿವಾದಿತ ಹೇಳಿಕೆ ವಿರುದ್ಧವಾಗಿ ವ್ಯಕ್ತವಾಗುತ್ತಿರುವ ಆಕ್ರೋಶ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ.
ಈ ಮಧ್ಯೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕವು ಈಶ್ವರಪ್ಪ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್ ಪಿಸಿಆರ್ ದಾಖಲಿಸಿದ್ದ ಬೆನ್ನಲ್ಲಿಯೇ ಚುನಾವಣಾ ಆಯೋಗ ಕೂಡ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.
ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರ ಸೂಚನೆ ಮೇರೆಗೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರ - 113ರ ಫ್ಲೈಯಿಂಗ್‌ಕ್ವ್ಸಾಡ್ ತಂಡ -4ರ ಮುಖ್ಯಸ್ಥರು ಕೋಟೆ ಠಾಣೆಯಲ್ಲಿ ಈ ಪ್ರಕರಣ ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೋಮು ಪ್ರಚೋದನಕಾರಿ ಭಾಷಣಕ್ಕೆ ಸಂಬಂಧಿಸಿದಂತೆ ಕೆ.ಎಸ್. ಈಶ್ವರಪ್ಪ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮೂರು ಕಲಂ ಹಾಗೂ ಪ್ರಜಾಪ್ರತಿನಿಧಿ ಕಾಯ್ದೆಯಡಿ ಚುನಾವಣಾ ಆಯೋಗ ದೂರು ದಾಖಲಿಸಿಕೊಂಡಿದೆ.
ಐಪಿಸಿ ಕಲಂ 153 (ಎ) (ಧರ್ಮ, ಜಾತಿ, ಜನಾಂಗದ ಆಧಾರದ ಮೇಲೆ ಗುಂಪುಗಳ ನಡುವೆ ವೈಮನಸ್ಸು ಸೃಷ್ಟಿಸುವುದು), 295 (ಎ) (ಉದ್ದೇಶಪೂರ್ವಕವಾಗಿ, ದುರುದ್ದೇಶದಿಂದ ಕೋಮು ಪ್ರಚೋದನೆ ಭಾವನೆ ಕೆರಳಿಸುವುದು), 298 (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಹಾಗೂ ಪ್ರಜಾಪ್ರತಿನಿಧಿ ಕಾಯ್ದೆ ಕಲಂ 125ರ ಅಡಿ ದೂರು ದಾಖಲಿಸಲಾಗಿದೆ.
ಸಾಬೀತಾದರೆ 3 ವರ್ಷ ಜೈಲು: ಐಪಿಸಿ ಕಲಂ 153 (ಎ) ಹಾಗೂ 295 (ಎ)ರ ಅಡಿ ಆರೋಪ ಸಾಬೀತಾದರೆ ಮೂರು ವರ್ಷ ಕಾರಾಗೃಹ ವಾಸ ಅಥವಾ ದಂಡ ವಿಧಿಸಬಹುದಾಗಿದೆ. ಅಥವಾ ಏಕಕಾಲಕ್ಕೆ ಶಿಕ್ಷೆ ಹಾಗೂ ದಂಡ ಎರಡನ್ನು ಕೂಡ ವಿಧಿಸಬಹುದಾಗಿದೆ.
ಕಲಂ 298ರ ಅಡಿ 1 ವರ್ಷ ಶಿಕ್ಷೆ ವಿಧಿಸಬಹುದಾಗಿದೆ ಎಂಬುದು ಕಾನೂನು ಪಂಡಿತರ ವಿವರಣೆ.
ಒಟ್ಟಾರೆ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಸಾಮರಸ್ಯಕ್ಕೆ ಭಂಗ ತಂದ ಆರೋಪಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಿರುದ್ಧ ಕಾನೂನು ಉರುಳು ಬಿಗಿಯಾಗುತ್ತಿದೆ.
ಜಮ್ಯಿತ್ ಓಲಮಾ- ಎ- ಹಿಂದ್ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಆಸೀಫ್ ಮಸೂದ್, ಈಶ್ವರಪ್ಪನವರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮುಸ್ಲಿರ ಬೆಲೆ ಕಳೆಯುವುದಕ್ಕಿಂತ ಹೆಚ್ಚಾಗಿ ಬ್ರಾಹ್ಮಣರ ಮರ್ಯಾದೆ ಬೀದಿಪಾಲು ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.
ಉಪಮುಖ್ಯಮಂತ್ರಿಯಾಗಿ ಇಂತಹ ಜಾತಿ ರಾಜಕಾರಣ ಜನರಲ್ಲಿ ವಿಷದ ಬೀಜ ಬಿತ್ತುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಆಸೀಫ್ ಮಸೂದ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

