ಗೆಲ್ಲುವ ಜೊತೆಗೆ ಗೆಲ್ಲಿಸುವ ಹೊಣೆಗಾರಿಕೆ...
ಶಿವಮೊಗ್ಗ: ಏಳು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಶಿವಮೊಗ್ಗ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ರಾಜಕೀಯ ಕಾವು ಏರಹತ್ತಿದೆ. ವಿಶೇಷವೆಂದರೆ, ಇಲ್ಲಿ ಮೂರು ಪ್ರಮುಖ ರಾಜಕೀಯ ಮುತ್ಸದಿಗಳು ಈ ಬಾರಿ ಹೊಸ ಸವಾಲು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.
ತಾವು ಗೆಲ್ಲಬೇಕು, ಜೊತೆಗೆ ತಮ್ಮೊಂದಿಗೆ ಇತರನ್ನೂ ಗೆಲ್ಲಿಸಿಕೊಳ್ಳಬೇಕು. ಇದಕ್ಕಾಗಿ ಅವರು ತಮ್ಮ ಸಂಪೂರ್ಣ ಶ್ರಮ, ಚಾಣಾಕ್ಷತೆಯನ್ನು ಪ್ರದರ್ಶಿಸಬೇಕಾಗಿದೆಯಲ್ಲದೇ, ಬತ್ತಳಿಕೆಯಲ್ಲಿರುವ ಅಸ್ತ್ರಗಳನ್ನು ಪ್ರಯೋಗಿಸುವ ಸಂದರ್ಭ ಒದಗಿಬಂದಿದೆ.
ಯಾರು ಆ ಮೂವರು: ಕಾಂಗ್ರೆಸ್ನ ಹಿರಿಯಜ್ಜ ಕಾಗೋಡು ತಿಮ್ಮಪ್ಪ, ಹೊಸ ಪಕ್ಷ ಕಟ್ಟಿಕೊಂಡು ಕಣಕ್ಕಿಳಿದಿರುವ ಹಠವಾದಿ ಯಡಿಯೂರಪ್ಪ ಹಾಗೂ ಛಿದ್ರವಾದ ಬಿಜೆಪಿಯನ್ನು ಮತ್ತೆ ಒಟ್ಟುಗೂಡಿಸಬೇಕಾಗಿರುವ ಈಶ್ವರಪ್ಪನವರೇ ಈ ಚುನಾವಣೆಯಲ್ಲಿ ವಿಶೇಷ ಹೊಣೆಗಾರಿಕೆ ಹೊತ್ತವರು.
ಆಡಳಿತ ವಿರೋಧಿ ಅಲೆ: ಕಾಗೋಡು ತಿಮ್ಮಪ್ಪ ಜಿಲ್ಲೆಯ ಮಟ್ಟಿಗೆ ಕಾಂಗ್ರೆಸ್ ಪಾಲಿನ ಸ್ಟಾರ್ ಕ್ಯಾಂಪೇನರ್. ಜಿಲ್ಲೆಯ ಯಾವುದೇ ಮೂಲೆಗೆ ತೆರಳಿದರೂ ಅವರ ಪ್ರಭಾವ ಇದ್ದೇ ಇದೆ. ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡು ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆ ಅವರಿಗೆ ಸಂದಿದೆ. ವಿಶೇಷವೆಂದರೆ, ಸದ್ಯಕ್ಕೆ ಜಿಲ್ಲೆಯಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡುವ ಶಕ್ತಿ ಇರುವ ಕಾಂಗ್ರೆಸ್ನ ಏಕೈಕ ನಾಯಕ ಕಾಗೋಡು ತಿಮ್ಮಪ್ಪ.
ಜವಾಬ್ದಾರಿ, ಸವಾಲು: ಕಾಂಗ್ರೆಸ್ ಎಂಬ ಹಡಗಿನಲ್ಲಿ ನಾಯಕರು ಹತ್ತಾರು, ಒಬ್ಬೊಬ್ಬರದ್ದು ಒಂದೊಂದು ದಿಕ್ಕು. ಅವರಲ್ಲಿನ ವೈಮನಸ್ಯಗಳನ್ನು ದೂರ ಮಾಡಿ ಚುನಾವಣೆಗೆ ಸಜ್ಜು ಮಾಡಲು ಕಾಗೋಡು ಈಗಾಗಲೆ ಹೊರಟಿದ್ದಾರೆ. ಇದರ ಒಂದು ಪ್ರಯತ್ನ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಯಶ ಕಂಡಿದೆ. ಸಾಗರದಲ್ಲಿ ಹಾಲಿ ಬಿಜೆಪಿ ಶಾಸಕರಿದ್ದು, ಅಲ್ಲಿ ಮತ್ತೆ ಕಾಂಗ್ರೆಸ್ನ್ನು ಎತ್ತುವ ಸ್ವಂತ ಜವಾಬ್ದಾರಿ, ಸವಾಲು ಅವರ ಮೇಲಿದೆ.
ಹೊಸದಾಗಿ ಸಂಘಟನೆ: ಇನ್ನು ಬಿ.ಎಸ್. ಯಡಿಯೂರಪ್ಪನವರ ವಿಚಾರಕ್ಕೆ ಬಂದರೆ, ಕೆಜೆಪಿ ಹೊಸ ಪಕ್ಷ. ನೆಲೆ ಕಂಡುಕೊಳ್ಳಲು ಹೋರಾಟ ನಡೆಸಲಾಗುತ್ತಿದೆ. ಇಷ್ಟು ದಿನಗಳವರೆಗೆ ಬಿಜೆಪಿಯ ಬಲಿಷ್ಠ ಸಂಘಟನೆ ಎಂಬ ಅಸ್ತ್ರದೊಂದಿಗೆ ನಾಯಕನಾಗಿ ಬೆಳೆದುಬಂದ ಯಡಿಯೂರಪ್ಪನವರಿಗೆ ಈಗ ಆ ಅಸ್ತ್ರವಿಲ್ಲ, ಹೊಸದಾಗಿ ಸಂಘಟನೆ ಕಟ್ಟಬೇಕಾಗಿದೆ. ಸ್ಥಳೀಯವಾಗಿ ನಾಯಕರನ್ನು ಹುಟ್ಟಿಹಾಕುವ ಸವಾಲು ಬೇರೆ. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನೂ ಸೃಷ್ಟಿ ಮಾಡಬೇಕಾದ ಅನಿವಾರ್ಯತೆ. ವಿಶೇಷವೆಂದರೆ, ಇದೆಲ್ಲವನ್ನೂ ಮಾಡಿತೋರಿಸುತ್ತೇನೆಂಬ ಅತಿಯಾದ ಆತ್ಮವಿಶ್ವಾಸ ಯಡಿಯೂರಪ್ಪನವರಲ್ಲಿದೆ. ಇಷ್ಟುದಿನಗಳ ರಾಜಕೀಯ ಯಾತ್ರೆಯ ಶಕ್ತಿಯನ್ನು ಸಂಪೂರ್ಣ ಧಾರೆ ಎರೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಶಿಕಾರಿಪುರ ಸೇರಿದಂತೆ ಕನಿಷ್ಠ 3-4 ಕ್ಷೇತ್ರಗಳನ್ನು ಬಾಚಿಕೊಳ್ಳುವ ಗುರಿಯೊಂದಿಗೆ ಹೊರಟಿರುವ ಯಡಿಯೂರಪ್ಪನವರಿಗೆ ಮತ್ತೊಂದು ಸವಾಲು ಎದುರಿಗಿದೆ. ಬೇರೆ ಬೇರೆ ಪಕ್ಷದ ನಾಯಕರನ್ನು ಒಂದು ವೇದಿಕೆಯಲ್ಲಿ ತರುವುದೇ ದೊಡ್ಡ ಸಮಸ್ಯೆಯಾಗಿದೆ. ಒಂದು ಮಾತಿನಲ್ಲಿ ಹೇಳುವುದಾದರೆ, ಕಪ್ಪೆಗಳನ್ನು ಒಂದು ತಕ್ಕಡಿಯಲ್ಲಿ ಕೂಡಿಡಲು ಸಾಧ್ಯವಿಲ್ಲದ ರೀತಿ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಎಸ್ವೈ ನಂಬಿ ಜಿಲ್ಲೆಯಲ್ಲಿ ಪಕ್ಷಕ್ಕೆ ಬಂದ ಅನೇಕರು ಈಗಾಗಲೇ ಜಾಗ ಖಾಲಿಮಾಡಿದ್ದಾರೆ. ಒಟ್ಟಾರೆ ಹೊಸಪಡೆಯನ್ನು ಕಟ್ಟಿಕೊಂಡು ಅಂಗಳಕ್ಕಿಳಿಯುವ ಉತ್ಸಾಹದಲ್ಲಿ ಯಡಿಯೂರಪ್ಪನವರಿದ್ದಾರೆ.
ಶಿವಮೊಗ್ಗದಲ್ಲಿ ಗೆದ್ದು ತೋರಿಸಲಿ ಎಂಬ ಯಡಿಯೂರಪ್ಪನವರ ಸವಾಲು ಸ್ವೀಕರಿಸಿರುವ ಕೆ.ಎಸ್. ಈಶ್ವರಪ್ಪನವರಿಗೆ ಅತಿ ದೊಡ್ಡ ಹೊಣೆಗಾರಿಕೆ ಇದೆ. ಜಿಲ್ಲೆಯ ಎಲ್ಲಾ ಕಡೆ ಸಂಘಟನೆ ಇದ್ದರೂ ತೀರ್ಥಹಳ್ಳಿ ಹೊರತು ಪಡಿಸಿ ಮತ್ತೆಲ್ಲೂ ವರ್ಚಸ್ವಿ ಅಭ್ಯರ್ಥಿಗಳಿಲ್ಲ.
ಕಳೆದ ಬಾರಿ ಬಿಜೆಪಿ ಕೈ ಹಿಡಿದಿದ್ದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಈ ಬಾರಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ಇನ್ನೊಂದೆಡೆ ಸಾಗರ, ಸೊರಬ, ಶಿಕಾರಿಪುರದಲ್ಲಿ ಹೊಸ ಅಭ್ಯರ್ಥಿಗಳು. ಇದಕ್ಕಿಂತ ಮುಖ್ಯವಾಗಿ ಶಿವಮೊಗ್ಗದಲ್ಲೇ ಅನೇಕ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಈಶ್ವರಪ್ಪನವರಿಗೆ ಬಂದೊದಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಕ್ಯಾಬಿನೆಟ್ ಸಚಿವ ಸ್ಥಾನ ಅನುಭವಿಸಿರುವ ಈಶ್ವರಪ್ಪನವರು ತಮ್ಮ ಗೆಲುವಿಗಾಗಿ ಹೋರಾಟ ನಡೆಸುವ ಜೊತೆಗೆ ಇತರನ್ನು ಗೆಲ್ಲಿಸಿಕೊಂಡು ಬರುವ ಛಾತಿ ಹೊಂದಿದ್ದಾರಾದರೂ, ಅವರು ಬೇರೆ ಕ್ಷೇತ್ರಗಳಿಗೆ ತಮ್ಮ ಎಷ್ಟು ಸಮಯ ಕೊಡುತ್ತಾರೆಂಬುದು ಮುಖ್ಯವಾಗುತ್ತದೆ.
ವಿಶೇಷವೆಂದರೆ ಈ ಮೂರು ನಾಯಕರಿಗೆ ಈ ಚುನಾವಣೆ ಪ್ರತಿಷ್ಠೆ ಪ್ರಶ್ನೆ. ಕಲ್ಲುಮುಳ್ಳಿನ ದಾರಿಯ ನಡುವೆ ತಮ್ಮ ನಾಯಕತ್ವದ ಪಕ್ವತೆ ತೋರಿಸುವ ಒಂದು ಅಗ್ನಿಪರೀಕ್ಷೆ.
- ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

