ಒಳಗೊಳಗೆ ಶುರುವಾಗ್ತಿದೆ ಹಠ ರಾಜಕೀಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.19
ಚುನಾವಣೆಯ ಎರಡು ಹಂತ ಮುಗಿದಿದೆ. ಅಭ್ಯರ್ಥಿಗಳ ಆಯ್ಕೆ ನಡೆದಿದ್ದೂ ಆಯ್ತು, ನಾಮಪತ್ರ ಸಲ್ಲಿಸಿದ್ದೂ ಆಯ್ತು. ಇನ್ನೇನಿದ್ದರೂ ಅಖಾಡದಲ್ಲಿ ಜಟ್ಟಿಗಳ ಕುಸ್ತಿ. ಈ ಮಧ್ಯೆಯೇ ರಾಜಕೀಯ ಪಕ್ಷಗಳ ಟಿಕೆಟ್ ಸಿಗದೇ ನಿರಾಶರಾಗಿ ಕೆಲವರು ಪಕ್ಷೇತರರಾಗಿ ಕಣಕ್ಕಿಳಿದರೆ, ಮತ್ತೆ ಕೆಲವರು ನಿಷ್ಠೂರವಾದಿಗಳಾಗಿ ತಮ್ಮನ್ನು ಕಡೆಗಣಿಸಿದಕ್ಕೆ ಸಿಟ್ಟು- ಸೇಡುಗಳಿಂದ ಕುದಿಯುತ್ತಿದ್ದಾರೆ, ಪಕ್ಷಕ್ಕೆ ಪಾಠ ಕಲಿಸಲು ಹಠತೊಟ್ಟಿದ್ದಾರೆ.
ರೆಬಲ್ ಸ್ಟಾರ್ಸ್: ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಬಿ. ಪ್ರಸನ್ನಕುಮಾರ್ ಟಿಕೆಟ್ ಪಡೆದು ನಾಮಪತ್ರ ಸಲ್ಲಿಸಿದ್ದಾರೆ. ಈ ಮಧ್ಯೆ ಕಾಂಗ್ರೆಸ್ ಟಿಕೆಟ್ಗೆ ಇನ್ನಿಲ್ಲದ ಪ್ರಯತ್ನಪಟ್ಟಿದ್ದ ನಗರಸಭಾ ಸದಸ್ಯ ಯೋಗೇಶ್, ಕೆ.ದಿವಾಕರ್, ಪಕ್ಷದ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ್ ಈಗ ಮುಗುಮ್ಮಾಗಿದ್ದಾರೆ. ಆರ್.ಪ್ರಸನ್ನಕುಮಾರ್ ಅನಿವಾರ್ಯವಾಗಿ ಪಕ್ಷದ ಪರ ಪ್ರಚಾರದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹೋರಾಟ ವ್ಯರ್ಥ: ಈ ಸಂದರ್ಭದಲ್ಲಿ ವೈ.ಎಚ್.ನಾಗರಾಜ್ ಬಗ್ಗೆ ಪ್ರಸ್ತಾಪಿಸಲೇ ಬೇಕು. ಚುನಾವಣೆಯ ದೂರದೃಷ್ಟಿಯನ್ನಿಟ್ಟುಕೊಂಡೇ ಸಭೆ ಸಮಾರಂಭಗಳು, ಪ್ರತಿಭಟನೆಗಳನ್ನು ಸೋಕಿಸಿಸುತ್ತಾ ಓಡಾಡಿಕೊಂಡಿದ್ದ ಅವರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರಂತೆ. ಆದರೆ, ಪಕ್ಷ ಅವರನ್ನು ರಾಜಕಾರಣಿ ಎಂದು ಪರಿಗಣಿಸೇ ಇಲ್ಲ ಎಂದು ಆ ಪಕ್ಷದ ಮುಖಂಡರು ಹೇಳಿಕೆ ನೀಡಿದ್ದಾರೆ. ವೈ.ಎಚ್.ನಾಗರಾಜ್ ಈಗ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ.
ಸಂಗಮೇಶ್ ಛಲ: ಭದ್ರಾವತಿಯಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಸಂಗಮೇಶ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದೇ ಅವರ ಪರಮೋಚ್ಚ ಗುರಿ. ಈ ಮಧ್ಯೆ ಕಾಂಗ್ರೆಸ್ ಮುಖಂಡರು ವಿವಿಧ ಹುದ್ದೆಯ ಆಮಿಷ ಒಡ್ಡಿ ಸಂಗಮೇಶ್ ಮನವೊಲಿಸಲು ಮುಂದಾಗಿದ್ದಾರೆ.
ಸಾಗರದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಇನ್ನಿಲ್ಲದ ಹೋರಾಟ ಮಾಡಿದ ಬೇಳೂರು ಗೋಪಾಲಕೃಷ್ಣ ಕೈಸುಟ್ಟುಕೊಂಡು ಜೆಡಿಎಸ್ನಿಂದ ಕಣಕ್ಕಿಳಿದರು. ಇನ್ನೊಂದೆಡೆ ಬಿಜೆಪಿಯಿಂದ ಶರಾವತಿ ಸಿ ರಾವ್ ಟಿಕೆಟ್ ಪಡೆದಿದ್ದರಿಂದ ಪಕ್ಷದ ಇತರ ನಾಯಕರಲ್ಲಿ ಸಣ್ಣದಾದ ಅಸಮಾಧಾನ ಎದ್ದಿದೆ. ಅದೇ ರೀತಿ ಬಿಜೆಪಿ ಟಿಕೆಟ್ಗಾಗಿಯೇ ಜೆಡಿಎಸ್ ತೊರೆದು ಬಿಜೆಪಿ ಸೇರಿದ್ದ ಅರುಣ್ ಪ್ರಸಾದ್ ಬಂದ ದಾರಿಗೆ ಸುಂಕವಿಲ್ಲವೆಂದು ಪುನಃ ಜೆಡಿಎಸ್ಗೆ ಸೇರಿದ್ದು, ಪಕ್ಷವು ಜವಾಬ್ದಾರಿಯನ್ನು ಘೋಷಿಸಿದೆ.
ಬಂಡಾಯ ಶಮನ: ಶಿಕಾರಿಪುರದಲ್ಲಿ ಕಾಂಗ್ರೆಸ್ನ ಶಾಂತವೀರಪ್ಪ ಗೌಡ ವಿರುದ್ಧ ಎದ್ದಿದ್ದ ಅಸಮಾಧಾನ ತಣ್ಣಗಾಗಿದೆ. ಪ್ರತ್ಯೇಕವಾಗಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಹಾಕುವುದಾಗಿ ಸರಣಿ ಸಭೆ ನಡೆಸಿದ್ದ ಮೂಲ ಕಾಂಗ್ರೆಸ್ ಮುಖಂಡರು ಕೊನೆಗೆ ಪ್ರಯತ್ನಗಳನ್ನೆಲ್ಲಾ ಕೈಬಿಟ್ಟು ತಣ್ಣಗಾದರು.
ಹುಲ್ತಿಕೊಪ್ಪ ಕೆಂಡ: ಸೊರಬದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹುಲ್ತಿಕೊಪ್ಪ ಶ್ರೀಧರ್ ಕೆಂಡವಾಗಿದ್ದಾರೆ. ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದ ಅವರು 2004ರಿಂದ ಬಿಜೆಪಿ ಸಂಘಟನೆಗೆ ಕೆಲಸ ಮಾಡಿದೆ. ನನ್ನ ಸ್ವಂತ ಕಾರಿನಲ್ಲಿ ಓಡಾಡಿ ನನ್ನ ಜೇಬಿನಿಂದ ಹಣ ಖರ್ಚು ಮಾಡಿ ಪಕ್ಷದ ಕೆಲಸ ಮಾಡಿದೆ. ಈ ಹಿಂದೆಯೇ ವಿವಿಧ ಚುನಾವಣೆಗಳಲ್ಲಿ ಆಕಾಂಕ್ಷಿಯಾದಾಗ ಪಕ್ಷದ ನಾಯಕರು ಸಮಾಧಾನ ಮಾಡಿದರು. ಈ ಬಾರಿಯೂ ಅಂತಿಮ ಹಂತದಲ್ಲಿ ಕೈಕೊಟ್ಟರು. ಹೀಗಾಗಿ ಮುಂದೆ ಏನುಮಾಡಬೇಕೆಂದು ಇನ್ನೆರಡು ದಿನಗಳಲ್ಲಿ ನಿರ್ಧರಿಸುವುದಾಗಿ ತಿಳಿಸಿದರು. ಅವರು ಜಿಲ್ಲೆಯ ಅತಿ ಹೆಚ್ಚಿನ ಮತದಾರರನ್ನು ಹೊಂದಿರುವ ಸಮುದಾಯವಾದ ಈಡಿಗ ಸಂಘಟನೆಯ ಅಧ್ಯಕ್ಷರಾಗಿದ್ದಾರೆ ಎಂಬುದು ಪ್ರಮುಖಾಂಶ.
(ಅ)ಶೋಕ ನಾಯ್ಕ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ನ ಪ್ರಬಲ ಟಿಕೆಟ್ ಆಕಾಂಕ್ಷಿ ರವಿಕುಮಾರ್ ಮುನಿಸಿಕೊಂಡಿದ್ದಾರೆ. ಕರಿಯಣ್ಣನವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಪಕ್ಷದ ಕಚೇರಿ ಎದುರು ಒಂದು ಸುತ್ತಿನ ಪ್ರತಿಭಟನೆಯೂ ನಡೆಯಿತು. ಈ ಕ್ಷೇತ್ರದ ಕೆಜೆಪಿ ಟಿಕೆಟ್ ಆಕಾಂಕ್ಷಿ ಅಶೋಕ ನಾಯ್ಕ ಒಬ್ಬ ಪ್ರಬಲ ನಾಯಕ. ಕ್ಷೇತ್ರದ ತುಂಬೆಲ್ಲಾ ಓಡಾಡಿ ಬಿಜೆಪಿ ಸಂಘಟಿಸಿದ್ದರು. ನಂತರ ಕೆಜೆಪಿ ಟಿಕೆಟ್ ಖಚಿತತೆ ಮೇಲೆ ತಮ್ಮ ಸಂಪೂರ್ಣ ಶಕ್ತಿ ಧಾರೆ ಎರೆದು ಅಖಾಡಕ್ಕೆ ಧುಮುಕಲು ಮುಂದಾಗಿದ್ದರು. ಆದರೆ, ಬಸವಣ್ಯಪ್ಪನವರಿಗೆ ಕೆಜೆಪಿ ಟಿಕೆಟ್ ಒಲಿಯಿತು. ಹೀಗಾಗಿ ಬಿಜೆಪಿಯು ಅಶೋಕ್ನಾಯ್ಕರನ್ನು ಮತ್ತೆ ಸೆಳೆಯಿತು. ಇದೀಗ ತಮಗಿಂತ ದುರ್ಬಲವಾಗಿರುವ(ಸದ್ಯದ ಸ್ಥಿತಿ) ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಅಶೋಕ್ ನಾಯ್ಕ್ ಓಡಾಡಬೇಕಾಗಿದೆ.
ಈ ಮಧ್ಯೆ ಕನ್ನಡಪ್ರಭದೊಂದಿಗೆ ಮಾತನಾಡಿದ ಅಶೋಕ್ ನಾಯ್ಕ, ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದಾಗಿ ಹೇಳಿದ್ದಾರೆ.
ಹಾನಿ ಎಷ್ಟು: ಅಶೋಕ್ ನಾಯ್ಕರಾಗಲಿ, ಹುಲ್ತಿಕೊಪ್ಪ ಶ್ರೀಧರ್ ಆಗಲಿ, ಅರುಣ್ ಪ್ರಸಾದ್ ಆಗಲೀ ಸಂಘಟಕರೆಂಬುದರಲ್ಲಿ ಅನುಮಾನವಿಲ್ಲ. ಒಬ್ಬೊಬ್ಬರದ್ದು ಒಂದು ರೀತಿಯ ಚಾಕಚಕ್ಯತೆ. ಒಂದರ್ಥದಲ್ಲಿ ಬಲಶಾಲಿಗಳೇ. ಇವರನ್ನು ನಡುನೀರಲ್ಲಿ ಕೈಬಿಟ್ಟ ಪಕ್ಷಗಳಿಗಂತೂ ಒಂದಲ್ಲ ಒಂದು ರೀತಿ ಇವರುಗಳು ಹಾನಿ ಮಾಡುವುದು ಖಚಿತ.
-ಶ್ರೀಕಾಂತ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

