ಶಿವಮೊಗ್ಗ

ನಾನು ಗೆಲ್ಲುವುದಿಲ್ಲ, ಸೋಲುವುದೂ ಇಲ್ಲ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ,  ಏ.19
ನಾನು ಚುನಾವಣೆಯಲ್ಲಿ ಗೆಲ್ಲುವುದಿಲ್ಲ. ಆದರೆ ಸೋಲುವುದೂ ಇಲ್ಲ. ಭ್ರಷ್ಟ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವುದೇ ನನ್ನ ಪ್ರಯತ್ನ...
ಲೋಕಸತ್ತಾ ಪಕ್ಷದಿಂದ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಹೋರಾಟಗಾರ ಟಿ.ಆರ್. ಕೃಷ್ಣಪ್ಪ ಅವರ ಮಾತುಗಳಿವು.
ಒಂದು ಓಟಿನೊಂದಿಗೆ, ಒಂದು ನೋಟು ಕೇಳುತ್ತಿರುವ ಟಿ.ಆರ್. ಕೃಷ್ಣಪ್ಪ ಒಂದು ಊಟವನ್ನೂ ಸಹ ಕೇಳುತ್ತಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ದಿನಕ್ಕೆ ಒಮ್ಮೆ ಮಾತ್ರ ಊಟ ಮಾಡುತ್ತಿದ್ದೇನೆ. ಬೆಳಗಿನ ಉಪಹಾರ, ರಾತ್ರಿ ಊಟ ಬಿಟ್ಟಿದ್ದೇನೆ. ಮಧ್ಯಾಹ್ನದ ಊಟವನ್ನು ಮತದಾರರೇ ಕೊಡಿಸಬೇಕು. ಆಗ ಮಾತ್ರ ಊಟ ಎಂದು ಅವರು ತೀರ್ಮಾನಿಸಿದ್ದಾರೆ.
ಆಸ್ತಿ ದಾನ ಮಾಡುವರೇ? ನಗರದ ಪ್ರವಾಸಿ ಮಂದಿರದ ಎದುರು ಬಿ.ಎಚ್. ರಸ್ತೆಯಲ್ಲಿ ವ್ಯಾಯಾಮ ಮಾಡುವ ಮೂಲಕ ಪಕ್ಷದ ಪರ ಪ್ರಚಾರ ಮಾಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಾನು ಬಡವ. ಆದರೂ ನನ್ನಲ್ಲಿರುವ ಒಂದು ಎಕರೆ ಬಗರ್‌ಹುಕುಂ ಭೂಮಿಯನ್ನು ಮುಸ್ಲಿಂ ಅಥವಾ ಕ್ರೈಸ್ತ ಸಮುದಾಯದ ಒಬ್ಬರಿಗೆ ಕೊಡಲು ಸಿದ್ಧನಿದ್ದೇನೆ. ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕಾಗೋಡು ತಿಮ್ಮಪ್ಪ, ಜೆಡಿಎಸ್ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರು ತಮ್ಮ ಬಳಿ ಇರುವ ಆಸ್ತಿಯ ಒಂದು ಪಾಲನ್ನಾದರೂ ದಾನ ನೀಡುವರೇ ಎಂದು ಪ್ರಶ್ನಿಸಿದರು.
ನಾನು ಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದರಿಂದ ಭೂಮಿ ದಾನ ಮಾಡಲು ಮುಂದಾಗಿದ್ದೇನೆ. ಇದೇ ಹಿನ್ನೆಲೆಯಿಂದ ಬಂದಿರುವ ಕಾಗೋಡು ತಿಮ್ಮಪ್ಪ ದಾನ ಮಾಡಲಿ ಎಂದು ಸವಾಲೆಸೆದರು.
ವ್ಯಾಯಾಮ ಮಾಡಿದ್ದಕ್ಕೂ ಕಾರಣ ನೀಡಿದ ಅವರು, ದೇಹ ಸದೃಢವಾಗಿದ್ದರೆ ಮನಸ್ಸು ಸದೃಢವಾಗಿರುತ್ತದೆ. ದೇಹವನ್ನು ದೇಶಕ್ಕೆ ಹೋಲಿಸಿದರೆ ದೇಶವೂ ಸಹ ಸುಸ್ಥಿತಿಯಲ್ಲಿಡಬೇಕು. ಭ್ರಷ್ಟಾಚಾರರಹಿತವಾಗಿರಬೇಕು. ಅದಕ್ಕಾಗಿ ವ್ಯಾಯಾಮ ಮಾಡುವುದರ ಮೂಲಕ ಪ್ರಚಾರ ಮಾಡಿದ್ದೇನೆ ಎಂದರು. ನಾವು ಭ್ರಷ್ಟಾಚಾರ ವಿರೋಧಿಯಾಗಿದ್ದರೆ ಮಾತ್ರ ದೇಶ ಭ್ರಷ್ಟಾಚಾರರಹಿತವಾಗಿರುತ್ತದೆ ಎಂದರು.
ನೋಟು ಕೊಡುತ್ತೇವೆ: ಬೇರೆ ಅಭ್ಯರ್ಥಿಗಳಂತೆ ನಾವೂ ಸಹ ಮತದಾರರಿಗೆ ನೋಟು ಕೊಡುತ್ತೇವೆ ಎಂದು ಅವರು ಪ್ರಚಾರಕ್ಕಾಗಿ ಮುದ್ರಿಸಿದ ನೋಟಿನ ಪ್ರತಿಗಳನ್ನು ತೋರಿಸಿದರು. ಅದರಲ್ಲಿ ಸೊನ್ನೆ ಎಂದು ಬರೆದಿತ್ತು.
ಎಷ್ಟು ಬೇಕಾದರೂ ನೋಟು ಕೊಡಲು ಸಿದ್ಧರಿದ್ದೇವೆ ಎಂದು ಅವರು ಇಂದಿನ ಚುನಾವಣಾ ಭ್ರಷ್ಟಾಚಾರದ ವಿಡಂಬನೆ ಮಾಡಿದರು.

ರಸ್ತೆ ಬದಿಯಲ್ಲಿಯೇ ಸಭೆ
ಲೋಕಸತ್ತಾ ಪಕ್ಷದ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಅಭ್ಯರ್ಥಿಗಳ ಸಭೆ ಇದೇ ಬಿ.ಎಚ್. ರಸ್ತೆಯಲ್ಲಿ ಬದಿಯಲ್ಲಿಯೇ, ಒಂದು ಮರದ ಕೆಳಗೆ ನಡೆಯಿತು. ಮಾಧ್ಯಮದವರೊಂದಿಗೆ ಮಾತನಾಡಿದ ನಂತರ ಅಲ್ಲೇ ಮರದ ಕೆಳಗೆ ಚಾಪೆ ಹಾಸಿ ಕುಳಿತು ಸಭೆ ನಡೆಸಿದರು. ಸಾಗರ ಕ್ಷೇತ್ರದ ಅಭ್ಯರ್ಥಿ ಕೃಷ್ಣಪ್ಪ, ಭದ್ರಾವತಿ ಕ್ಷೇತ್ರದ ಎಸ್. ವೆಂಕಟೇಶಮೂರ್ತಿ, ಚಿಕ್ಕಮಗಳೂರು ಜಿಲ್ಲೆ ಕಡೂರು ಕ್ಷೇತ್ರದ ಬಿ.ಎಂ. ಮಧು, ತರೀಕೆರೆ ಕ್ಷೇತ್ರದ ತೀರ್ಥಪ್ಪ ಬಳ್ಳಾವರ ಹಾಗೂ ಲೋಕಸತ್ತಾ ಪಕ್ಷದ ಮಾಧ್ಯಮ ಸಮನ್ವಯಕಾರ ಆನಂದ ರಾ. ಯಾದವಾಡ ಸೇರಿದಂತೆ ಹಲವರು ಈ ಸಭೆಯಲ್ಲಿದ್ದರು. ಪಕ್ಷದ ಪ್ರಚಾರ ಬಗ್ಗೆ ಚರ್ಚಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.