ಶಿವಮೊಗ್ಗ

ಕಾಗೋಡುಗೆ ಭಯ ಕಾಡುತ್ತಿದೆ: ಬೇಳೂರು

Published On :

ಕ.ಪ್ರ.ವಾರ್ತೆ, ಸಾಗರ, ಏ.20
ಕ್ಷೇತ್ರದಲ್ಲಿ ಎರಡು ಬಾರಿ ಸೋತಿರುವ ಕಾಗೋಡು ತಿಮ್ಮಪ್ಪನವರಿಗೆ ಈ ಬಾರಿ ನನ್ನ ಭಯ ಕಾಡುತ್ತಿದೆ ಎಂದು ಜೆಡಿಎಸ್ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ಟೀಕಿಸಿದರು.
ಪಟ್ಟಣದಲ್ಲಿ ಶನಿವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ, ಸೋಲಿನ ಭೀತಿಯಿಂದ ಕಾಗೋಡು ತಿಮ್ಮಪ್ಪನವರು ಇತರ ಪಕ್ಷದ ಮುಖಂಡರ ಮನೆಯನ್ನು ನಡುರಾತ್ರಿ ತಟ್ಟಿ ಮತ ನೀಡಿ ಎಂದು ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಮಸ್ಯೆಗೆ ಸ್ಪಂದನೆ: ಕಣ್ಣು ಕಾಣದವರು, ವಯಸ್ಸಾದವರು ಕ್ಷೇತ್ರದ ಅಭಿವೃದ್ಧಿ ಆಗಿಲ್ಲ, ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಯಾವ ರೀತಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಎನ್ನುವುದನ್ನು ಜನರೇ ಹೇಳುತ್ತಾರೆ. ಅಭಿವೃದ್ಧಿ ಜೊತೆಗೆ ಸಾರ್ವಜನಿಕರ ಸ್ಪಂದನೆ ನನ್ನ ಉದ್ದೇಶ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿಯೇ ಇದು ನನ್ನ ಕೊನೆ ಚುನಾವಣೆ ಎಂದು ಹೇಳುತ್ತಿದ್ದ ಕಾಗೋಡು ಈ ಬಾರಿ ನನ್ನದು ಕೊನೆ ಚುನಾವಣೆ ಎಂದು ಮತ್ತೆ ಕಣಕ್ಕೆ ಇಳಿದಿದ್ದಾರೆ. ಕಾಗೋಡು ತಿಮ್ಮಪ್ಪ ಜನರನ್ನು ಎಷ್ಟು ಸಾರಿ ಮೂರ್ಖರನ್ನಾಗಿ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಕಾಗೋಡು ಒಂದು ಕಾಲದಲ್ಲಿ ಜನರಿಗೆ ಕೈಮುಗಿಯುವುದಿಲ್ಲ, ದೇವರಿಗೆ ಕೈಮುಗಿಯುವುದಿಲ್ಲ, ಮಠಮಂದಿರಗಳಿಗೆ ಭೇಟಿ ನೀಡುವುದಿಲ್ಲ ಎನ್ನುತ್ತಿದ್ದರು ಈಗ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದರೆ ಅವರಿಗೆ ಬೇಳೂರು ಭಯ ಎಷ್ಟು ಇದೆ ಎನ್ನುವುದು ಅರ್ಥವಾಗುತ್ತದೆ ಎಂದರು.
5 ಕ್ಷೇತ್ರಗಳಲ್ಲಿ ಜಯ: ಒಂದು ಕಡೆ ಸಿಬಿಐನಿಂದ ಬಚಾವಾಗಲು ಯಡಿಯೂರಪ್ಪ ಬಿಜೆಪಿಯನ್ನು ಇಬ್ಬಾಗ ಮಾಡಿ ಕೆಜೆಪಿ ಸ್ಥಾಪಿಸಿಕೊಂಡು ಕಾಂಗ್ರೆಸ್ಸಿಗೆ ನೆರವಾಗುತ್ತಿದ್ದರೆ, ಸಂಘ ಪರಿವಾರದಿಂದ ಬಂದಿರುವ ಕೆ.ಎಸ್. ಈಶ್ವರಪ್ಪ ಆಡುತ್ತಿರುವ ಕಡಿ, ಕೊಚ್ಚು ಎನ್ನುವ ಮಾತು ಅವರ ನೈತಿಕತೆಯನ್ನು ಎತ್ತಿ ತೋರಿಸುತ್ತದೆ. ಇನ್ನು ಕಾಂಗ್ರೆಸ್ ಟಿಕೆಟ್ ಹಂಚಿಕೆಯಲ್ಲಿ ಎದ್ದಿರುವ ಅಸಮಾಧಾನಿಂದ ಪಕ್ಷವು ಅತ್ಯಂತ ಕೆಳಹಂತವನ್ನು ತಲುಪಿದೆ. ಪ್ರಸ್ತುತ ರಾಜ್ಯದಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದು, ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ನಿಚ್ಚಳವಾಗಿದೆ. ಜಿಲ್ಲೆಯಲ್ಲಿ ಪಕ್ಷ ಕನಿಷ್ಠ 5 ಕ್ಷೇತ್ರದಲ್ಲಿ ಜಯಗಳಿಸಲಿದೆ ಎಂದು ಹೇಳಿದರು.
ಬೇರೆ ಬೇರೆ ಪಕ್ಷಗಳಿಂದ ಬಂದ ಹಲವು ಮುಖಂಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಪಕ್ಷದ ತಾ. ಅಧ್ಯಕ್ಷ ಕೆ. ಅರುಣಪ್ರಸಾದ್, ಕಾರ್ಯಾಧ್ಯಕ್ಷ ಬಸವರಾಜ ಗೌಡ, ನಗರ ಘಟಕದ ಅಧ್ಯಕ್ಷ ಎಸ್.ಎಲ್. ಮಂಜುನಾಥ್ ಮಾತನಾಡಿದರು.
ಪ್ರಮುಖರಾದ ಚಾಬೂಸಾಬ್, ರಾಜಮ್ಮ, ಜಯಲಕ್ಷ್ಮೀ ನಾರಾಯಣಪ್ಪ, ರೋಹಿಣಿ ನಾಗರಾಜ್, ಉಮಾವತಿ, ಮಹಾದೇವಮ್ಮ, ರೇಣುಕಮ್ಮ, ಇಕ್ಬಾಲ್, ಎಚ್.ಕೆ. ಅಣ್ಣಪ್ಪ, ಜಾಕೀರ್, ತಾಹೀರ್, ಎಂ.ಜಿ. ದೀನದಯಾಳ್, ಪ್ರೇಮಸಾಗರ್, ಕಲಸೆ ಚಂದ್ರಪ್ಪ, ಅಮೃತರಾಸ್, ತಿಮ್ಮಪ್ಪ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.