ನೀರು ಹರಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಶಿವಮೊಗ್ಗ: ನಾಲೆ ಕೊನೆಯ ಭಾಗಕ್ಕೆ ಸರಿಯಾಗಿ ನೀರು ಹರಿಯದೆ ಬೆಳೆಗಳು ಒಣಗುತ್ತಿದ್ದು ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿ ಭದ್ರಾ ಎಡ ನಾಲೆಯ ಕೊನೆಯ ಭಾಗದ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಅಚ್ಚುಕಟ್ಟು ಪ್ರದೇಶದ ರೈತರಿಗೆ ಕಟ್ಟು ನೀರು ಪದ್ದತಿಯಲ್ಲಿ ನೀರು ಕೊಡಲಾಗುತ್ತಿದೆ. ಇದರಿಂದ ನಾಲೆಯ ಕೊನೆಯ ಭಾಗಕ್ಕೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂಬುದು ರೈತರ ಅಳಲು.
ತಮಗಾಗುತ್ತಿರುವ ಸಮಸ್ಯೆ ಬಗ್ಗೆ ಮಲವಗೊಪ್ಪದಲ್ಲಿರುವ ಭದ್ರಾ ಅಚ್ಚುಕಟ್ಟು ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ ಗಮನಕ್ಕೆ ತರಲಾಗಿತ್ತು. ನಂತರ ಹೆಚ್ಚುವರಿಯಾಗಿ 8 ದಿವಸ ನೀರು ಹರಿಸಲಾಗಿತ್ತು. ಆದಾಗ್ಯೂ ನಾಲೆಯ ಕೊನೆಯ ಭಾಗದ ಪ್ರದೇಶಗಳಾದ ಸಂತೆಕಡೂರು, ಕಾಚಿನಕಟ್ಟೆ, ವಡ್ಡಿನಕೊಪ್ಪ, ಸೋಗಾನೆ, ಮಂಡೇನಕೊಪ್ಪ, ಹರಿಗೆ ಗ್ರಾಮಗಳಿಗೆ ನೀರು ತಲುಪಿಲ್ಲ ಎಂದು ರೈತ ಮುಖಂಡರು ತಿಳಿಸಿದರು.
ನೀರನ್ನು ನಿಲ್ಲಿಸಲಾಗಿದೆ: ನೀರು ಕೊನೆ ಭಾಗಕ್ಕೆ ತಲುಪದ ಕಾರಣ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ವಿವಿಧ ಫಸಲು ಹಾಗೂ ತೋಟದ ಬೆಳೆಗಳು ಒಣಗುವ ಹಂತಕ್ಕೆ ಬಂದಿವೆ. ಬೆಳೆಗಾರರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾ ನಿರತ ರೈತರು ತಿಳಿಸಿದರು. 12ರಂದು ನಾಲೆಗೆ ಹರಿಸಲಾಗುತ್ತಿದ್ದ ನೀರನ್ನು ನಿಲ್ಲಿಸಲಾಗಿದೆ.
ನೀರು ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವ್ಯಕ್ತಪಡಿಸಿದರಲ್ಲದೇ, ಕೊನೆಯ ಭಾಗದ ರೈತರಿಗೆ ಅನುಕೂಲ ಕಲ್ಪಿಸಿ ಕೊಡುವ ಉದ್ದೇಶದಿಂದ 23ರ ಮಧ್ಯರಾತ್ರಿಯಿಂದ ನೀರು ಹರಿಸಲಾಗುತ್ತಿದೆ. ಈ ನೀರು ನಾಲೆಯ ಕೊನೆಯ ಭಾಗಕ್ಕೆ ತಲುಪುವವರೆಗೂ ಅಧಿಕಾರಿಗಳು ಗಮನಿಸಬೇಕು. ಅಗತ್ಯವಾದರೆ ಪೊಲೀಸ್ ಭದ್ರತೆಯನ್ನೂ ಕಲ್ಪಿಸಬೇಕು. ಈ ಮೂಲಕ ಒಣಗುತ್ತಿರುವ ಫಸಲು ರಕ್ಷಣೆಗೆ ಮುಂದಾಗಬೇಕು ಎಂದು ರೈತರು ಜಿಲ್ಲಾಧಿಕಾರಿಯವರನ್ನು ಒತ್ತಾಯಿಸಿದರು.
ಕೂಡಲೇ ಜಿಲ್ಲಾಧಿಕಾರಿಯವರು ನಾಲೆಯ ಕೊನೆಯ ಹಂತದಲ್ಲಿರುವ ತೋಟ, ಗದ್ದೆಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ರೈತರ ಸಮಸ್ಯೆಯನ್ನರಿತು ಪರಿಹಾರೋಪಾಯ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತ ರೈತರು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

