ಕಣದಿಂದ ಹಿಂದೆ ಸರಿದ ಬಿಎಸ್ಆರ್ ಅಭ್ಯರ್ಥಿ
ಸೊರಬ: ಕ್ಷೇತ್ರದ ಬಿಎಸ್ಆರ್ ಕಾಂಗ್ರೆಸ್ ಅಭ್ಯರ್ಥಿ ಬಿ. ಚಂದ್ರೆಗೌಡ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಬಿಜೆಪಿಯಲ್ಲಿದ್ದು ನಂತರ ಬಿಎಸ್ಆರ್ ಕಾಂಗ್ರೆಸ್ಗೆ ಸೇರ್ಪಡೆಗೊಂಡ ಅವರು ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜಿಲ್ಲಾ ಉಪಾಧ್ಯಕ್ಷರೂ ಆಗಿದ್ದರು. ಪ್ರಸಕ್ತ ಚುನಾವಣೆ ವೇಳೆ ಬಿಎಸ್ಆರ್ ಕಾಂಗ್ರೆಸ್ನಿಂದ ಸ್ಪರ್ಧೆಗೆ ಬಯಸಿದ್ದು, ಇಚ್ಚೆಯಂತೆ ಪಕ್ಷದಿಂದ ಬಿ ಫಾರಂ ದೊರೆತು ಚುನಾವಣಾ ಕಣದಲ್ಲಿದ್ದರು. ಆದರೆ ಈಗ ಪಕ್ಷದ ಅಸಹಕಾರದ ಹಿನ್ನೆಲೆಯಲ್ಲಿ ಪಕ್ಷ ತೊರೆದು ಚುನಾವಣಾ ಚಟುವಟಿಕೆಗಳಿಂದ ತಟಸ್ಥವಾಗಿ ಉಳಿಯುತ್ತೇನೆ ಎಂದು ಪತ್ರಿಕಾಗೋಷ್ಠಿ ಕರೆದು ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಆರ್ಥಿಕ ಬೆಂಬಲವಿಲ್ಲ: ಮೊದಲು ಕೆಲ ನಿಬಂದನೆಗಳನ್ನಿರಿಸಿ ಚುನಾವಣೆಗೆ ಸ್ಪರ್ಧಿಸಲು ನಾನು ಒಪ್ಪಿದ್ದೆ, ಆದರೆ ಪಕ್ಷ ಹೇಳಿದಂತೆ ನಡೆದುಕೊಳ್ಳಲಿಲ್ಲ, ಪ್ರಸಕ್ತ ಸನ್ನಿವೇಶದಲ್ಲಿ ಆರ್ಥಿಕ ಬೆಂಬಲವಿಲ್ಲದೆ ಚುನಾವಣೆ ಎದುರಿಸುವುದು ಸುಲಭದ ಮಾತಲ್ಲ, ಶೇ.50 ನಾನು, ಉಳಿದ ಶೇ.50 ಪಕ್ಷ ಭರಿಸಿ, ಚುನಾವಣೆ ಎದುರಿಸಬೇಕು ಎಂದಾಗಿತ್ತು. ಆದರೆ ಬಿಫಾರಂ ನೀಡಿದ ಬಳಿಕ ಪಕ್ಷದಿಂದ ಸಲಹೆಯೂ ಇಲ್ಲ, ಸಹಕಾರವನ್ನೂ ನೀಡಿಲ್ಲ, ಕೊನೆಪಕ್ಷ ಇತ್ತ ಕ್ಷೇತ್ರಕ್ಕೆ ಎಡತಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷದ ಅಸಹಕಾರ ಗಮನಿಸಿದರೆ ಒಳ ಒಪ್ಪಂದವಾದಂತೆ ಕಾಣುತ್ತಿದ್ದು, ನಾನು ಅನಾವಶ್ಯಕ ಜನತೆಗೆ ದ್ರೋಹವೆಸಗುವ ಪಕ್ಷದ ಇಂತಹ ಒಳ ಒಪ್ಪಂದಗಳಿಗೆ ರಾಜಿಯಾಗಲು ಸಿದ್ಧವಿಲ್ಲ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಈಗಾಗಲೇ ರಾಜಿನಾಮೆ ಸಲ್ಲಿಸಿದ್ದು, ಚುನಾವಣಾ ಕಣದಿಂದ ತಟಸ್ಥನಾಗಿ ಉಳಿಯಲು ನಿರ್ಧರಿಸಿದ್ದೇನೆ ಎಂದರು.
ಮುಂದೆ ಯಾವ ಪಕ್ಷಕ್ಕೆ ಕೈಜೋಡಿಸುವ ಇರಾದೆ ಎಂದು ಕೇಳಿದ್ದಕ್ಕೆ, ಪ್ರಸಕ್ತ ಚುನಾವಣೆಗೆ ಒಬ್ಬರನ್ನ ಬೆಂಬಲಿಸುವುದಂತೂ ನಿಜ, ಮೊದಲಿನಿಂದಲೂ ಅಭಿವೃದ್ಧಿ ಹರಿಕಾರರಲ್ಲದ ಬಂಗಾರಪ್ಪ ಕುಟುಂಬಕ್ಕೆ ನನ್ನ ಸಹಕಾರವಿಲ್ಲ. ಅವರಿಬ್ಬರನ್ನು ಹೊರತು ಪಡಿಸಿ ಇನ್ನೊಬ್ಬರಿಗೆ ಬೆಂಬಲಿಸಿ, ಗೆಲ್ಲಿಸುವುದೂ ಹೌದು ಎಂದ ಅವರು ಕಾರ್ಯಕರ್ತರ ಆಕಾಂಕ್ಷೆಯಂತೆ ಸಭೆ ಸೇರಿ ಮುಂದಿನ ತೀರ್ಮಾನ ತಿಳಿಸುವುದಾಗಿ ಹೇಳಿದರು.
ಪಕ್ಷದ ಬ್ಲಾಕ್ ಕಾರ್ಯದರ್ಶಿಗಳಾದ ಆನಂದ ಬಿ. ನಾಯ್ಕ, ಕೃಷ್ಣಕುಮಾರ್, ಎಚ್.ಎಸ್. ಬಸವರಾಜಪ್ಪ ತತ್ತೂರು, ಈಶ್ವರಪ್ಪ ತತ್ತೂರು, ರಾಜು ದೇವತಿಕೊಪ್ಪ, ಮಧು ಕುಮ್ಮೂರು, ಪುಟ್ನಳ್ಳಿ ರಮೇಶ್, ಮಾರುತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

