ಸಿಬ್ಬಂದಿಗೆ ಚುನಾವಣಾ ಪೂರ್ವ ತರಬೇತಿ
ಶಿವಮೊಗ್ಗ: ಅತ್ತ ಅಭ್ಯರ್ಥಿಗಳು ಚುನಾವಣೆಗೆ ತಯಾರಿ ನಡೆಸುತ್ತಿರುವಂತೆಯೆ ಇತ್ತ ಚುನಾವಣೆಯನ್ನು ಯಶಸ್ವಿಯಾಗಿಸುವ ಹೊಣೆಹೊತ್ತ ಸಿಬ್ಬಂದಿ ಹಾಗೂ ಅಧಿಕಾರಿಗಳೂ ಭರ್ಜರಿ ತಯಾರಿ ನಡೆಸಿದ್ದಾರೆ.
ಚುನಾವಣಾ ಆಯೋಗ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಿಸೈಡಿಂಗ್, ಬೂತ್ಮಟ್ಟದ ಅಧಿಕಾರಿಗಳಿಗೆ ತರಬೇತಿಯನ್ನು ಮಂಗಳವಾರ ಹಮ್ಮಿಕೊಂಡಿತ್ತು. ಕುವೆಂಪು ರಂಗಮಂದಿರದಲ್ಲಿ ನಡೆದ ಸಭೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯ ಮತದಾನ ಪ್ರಕ್ರಿಯೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತಲ್ಲದೇ, ಗೊಂದಲಗಳನ್ನು ಬಗೆಹರಿಸಲಾಯಿತು.
ಮತದಾನದ ಪ್ರಕ್ರಿಯೆ: 992 ಅಧಿಕಾರಿಗಳಿಗೆ ತರಬೇತಿ ನೀಡಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಎಸ್.ಎಚ್. ರವಿಕುಮಾರ್ ಮತ್ತು ರಮೇಶ್ ಮತದಾನ ಪ್ರಕ್ರಿಯೆ ಸಾಮಾನ್ಯ ನಿಯಮ ಮತ್ತು ಕರ್ತವ್ಯದ ಕುರಿತು ವಿವರಣೆ ನೀಡಿದರು.
ತರಬೇತಿ ಮೂರು ಹಂತದಲ್ಲಿ ನಡೆಯಲಿದ್ದು, ಮತದಾನದ ಪ್ರಕ್ರಿಯೆಯಲ್ಲಿ ಅನುಸರಿಸಬೇಕಾದ ಸಾಮಾನ್ಯ ನಿಯಮ, ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರ ಉಪಯೋಗಿಸುವ ರೀತಿ, ಪ್ರಿಸೈಡಿಂಗ್ ಅಧಿಕಾರಿಗಳ ಕರ್ತವ್ಯ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿವರವಾದ ಮಾಹಿತಿ ನೀಡಿದರು.
ಪೂರ್ವಭಾವಿ ಸಿದ್ಧತೆ: ಮತದಾನ ಪ್ರಕ್ರಿಯೆ ಆರಂಭವಾಗುವ ನಿಗದಿತ ಸಮಯಕ್ಕೆ 1ಗಂಟೆ ಮುಂಚಿತವಾಗಿ ಎಲ್ಲಾ ರೀತಿಯಲ್ಲೂ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಯಾವುದೇ ಗೊಂದಲ, ಗಡಿಬಿಡಿಗೆ ಅವಕಾಶವಾಗದಂತೆ ಎಚ್ಚರವಹಿಸಿ ನಿಗದಿತ ಸಮಯಕ್ಕೆ ಸರಿಯಾಗಿ ಮತದಾನ ಆರಂಭಿಸಿ.
ನಿಗದಿತ ಸಮಯಕ್ಕಿಂತ ತಡವಾಗಿ ಅಥವಾ ಮುಂಚಿತವಾಗಿ ಮತದಾನ ಪ್ರಕ್ರಿಯೆ ಆರಂಭಿಸಬೇಡಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ವಿಪುಲ್ ಬನ್ಸಲ್, ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಗಿರೀಶ್, ಸಹಾಯಕ ಚುನಾವಣಾಧಿಕಾರಿ ತಹಸೀಲ್ದಾರ್ ಕೊಟ್ರೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸ್ವಯಂಚಾಲಿತ ಟೈಮರ್: ಮತಯಂತ್ರದ ಕಂಟ್ರೋಲ್ ಯೂನಿಟ್ನಲ್ಲಿ ಸ್ವಯಂಚಾಲಿತ ಟೈಮರ್ ಅಳವಡಿಸಲಾಗಿರುತ್ತದೆ. ಮತಯಂತ್ರ ಚಾಲನೆ ಮಾಡಿದ ಸಮಯವನ್ನು ಇದು ತೋರಿಸುತ್ತದೆ.
ಯಾವಾಗಬೇಕಾದರೂ ಇದನ್ನು ಪರಿಶೀಲನೆ ನಡೆಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಬೆಳಿಗ್ಗೆ 7 ಗಂಟೆಗೆ ಸರಿಯಾಗಿ ಮತದಾನ ಪ್ರಕ್ರಿಯೆ ಆರಂಭಿಸಬೇಕು ಎಂದು ರವಿಕುಮಾರ್ ತಿಳಿಸಿದರು.
ಮುನ್ನೆಚ್ಚರಿಕೆ ಕ್ರಮ: ಮತದಾನ ಕೊಠಡಿಯಲ್ಲಿ ಅಭ್ಯರ್ಥಿ ಕಡೆಯ ಏಜೆಂಟರು ಕುಳಿತುಕೊಳ್ಳಲು ಸೂಕ್ತ ಆಸನದ ವ್ಯವಸ್ಥೆ ಮಾಡಬೇಕು. ಹಾಗೆಯೇ ನಿರ್ದಿಷ್ಟ ಸ್ಥಳದಲ್ಲಿಯೇ ಪಿಆರ್ಓ, ಎಪಿಆರ್ಓ ಸೇರಿದಂತೆ ಇತರೆ ಸಿಬ್ಬಂದಿ ಕುಳಿತುಕೊಳ್ಳಬೇಕು. ಮತಯಂತ್ರದಲ್ಲಿ ಮತದಾರರು ಮತದಾನ ಮಾಡುವುದು ಇತರರಿಗೆ ಗೊತ್ತಾಗದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸೂಚನೆಗಳು: ಚುನಾವಣೆಗೆ ಸಂಬಂಧಿಸಿದ ಪ್ರಕಟಣಾ ಪತ್ರಗಳನ್ನು ಸೂಕ್ತ ಸ್ಥಳದಲ್ಲಿ ಅಂಟಿಸಬೇಕು.
ಚುನಾವಣಾ ಪ್ರದೇಶ ನಿರ್ಧರಿಸಬೇಕು. ಈ ಪ್ರದೇಶದಲ್ಲಿ ಯಾವುದೇ ರೀತಿಯ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡಬಾರದು. ವಾಹನ ನಿಲುಗಡೆ ನಿರ್ಬಂಧಿಸಬೇಕು. ಮತದಾರರು ಈ ಪ್ರದೇಶದೊಳಗೆ ಬರಲು ಅವಕಾಶ ನೀಡಬೇಕು ಎಂಬಿತ್ಯಾದಿ ಸೂಚನೆಗಳನ್ನು ನೀಡಿದರು.
ಮತದಾನ ಆರಂಭಕ್ಕೂ ಮುನ್ನ ಅಣಕು ಮತದಾನ ಮಾಡುವುದು ಕಡ್ಡಾಯವಾಗಿದೆ. ಸಿಬ್ಬಂದಿ ಸಮನ್ವಯ, ಹೊಂದಾಣಿಕೆಯಿಂದ ಕರ್ತವ್ಯ ನಿರ್ವಹಣೆ ಮಾಡಬೇಕು.
ಯಾವುದೇ ಗೊಂದಲಕ್ಕೆ ಆಸ್ಪದವಾಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು. ನಂತರ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಅಪರ ಜಿಲ್ಲಾಧಿಕಾರಿ ಶ್ರೀರಂಗಯ್ಯ ಸಿಬ್ಬಂದಿಗೆ ಕೆಲ ಸಲಹೆ-ಸೂಚನೆಗಳನ್ನು ಇದೇ ಸಂದರ್ಭದಲ್ಲಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

