ಪ್ರಜ್ಞಾವಂತಿಕೆ ಇಲ್ಲದ ಪ್ರಜಾರಾಜ್ಯ ಅಸಾಧ್ಯ
ಕನ್ನಡಪ್ರಭ ವಾರ್ತೆ, ಸಾಗರ, ಏ.25
ಮತ ಚಲಾಯಿಸುವಾಗ ಎಲ್ಲಿಯವರೆಗೆ ನಾವು ಪ್ರಜ್ಞಾವಂತಿಕೆ ಮೆರೆಯುವುದಿಲ್ಲವೋ ಅಲ್ಲಿಯವರೆಗೆ ಉತ್ತಮ ಪ್ರಜಾರಾಜ್ಯ ನಿರ್ಮಾಣವಾಗುವುದಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.
ಇಲ್ಲಿನ ಸಹೃದಯ ಬಳಗ ಹಾಗೂ ತಾಲೂಕು ಇತಿಹಾಸ ವೇದಿಕೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಜಿ. ನಾಗೇಶ್ ಬರೆದಿರುವ ಡಾ.ಎಚ್. ಗಣಪತಿಯಪ್ಪ ಅವರ ಕುರಿತ ಹೋರಾಟದ ಹೆಜ್ಜೆಗಳು ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ತಪ್ಪನ್ನು ಪ್ರಶ್ನಿಸಿ: ಮತ ಚಲಾಯಿಸುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಅರ್ಹರನ್ನು ಆಯ್ಕೆ ಮಾಡಿ ಕಳಿಸಿದಾಗ ಮಾತ್ರ ನಮ್ಮ ಮತಕ್ಕೆ ಬೆಲೆ ಬರುತ್ತದೆ. ಮತ ನೀಡುವ ನಾವು ರಾಜಕಾರಣಿಗಳ ಬಾಲ ಹಿಡಿದುಕೊಂಡು ಹೋಗುತ್ತಿದ್ದೇವೆ. ಮತ ನೀಡಿದವರಿಗೆ ಬಹುಪರಾಕ್ ಹೇಳುವುದನ್ನು ಬಿಟ್ಟು, ತಪ್ಪು ಮಾಡಿದಾಗ ಅವರನ್ನು ಹಿಡಿದು ಪ್ರಶ್ನಿಸುವ ಕೆಲಸ ನಮ್ಮಿಂದ ಆಗಬೇಕು ಎಂದರು.
ಮತ ನೀಡುವ ಪ್ರತಿಯೊಬ್ಬ ಪ್ರಜೆಗೂ ಐದು ಎಕರೆ ಖುಷ್ಕಿ ಜಮೀನು ಸಿಗುವಂತಹ ಕಾನೂನು ಜಾರಿಗೆ ಬರಬೇಕು ಎಂದ ಅವರು, ಹೋರಾಟದ ಮೂಲಕ ಭೂಸುಧಾರಣಾ ಕಾಯ್ದೆ ಜಾರಿಗೆ ಬಂತು. ಆದರೆ ಭೂಮಿತಿ ಶಾಸನ ಜಾರಿಗೆ ಬಾರದೆ ಇಸಿಝಡ್‌ನಂತಹ ಸಂಸ್ಥೆಗಳು, ಶ್ರೀಮಂತರು ನೂರಾರು ಎಕರೆ ಜಮೀನು ಹೊಂದಲು ಸಾಧ್ಯವಾಯಿತು. ಭೂಮಿತಿ ಶಾಸನ ಜಾರಿಗೆ ಬರಲು ಕಾಗೋಡು ಸತ್ಯಾಗ್ರಹ ಮಾದರಿಯಲ್ಲಿಯೆ ಇನ್ನೊಂದು ಹೋರಾಟ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.
ವಂಚಕರ ಸಂಖ್ಯೆ ಹೆಚ್ಚಳ: ಪುಸ್ತಕ ಕುರಿತು ಸಾಹಿತಿ ಡಾ. ನಾ.ಡಿಸೋಜ ಮಾತನಾಡಿ, ಸಮಾಜವನ್ನು ಉದ್ಧಾರ ಮಾಡುತ್ತೇವೆ ಎಂದು ಸೋಗು ಹಾಕಿಕೊಂಡು ಜನರನ್ನು ವಂಚಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಸಮಾಜ ಪರಿವರ್ತನೆ ದೃಷ್ಟಿಯಲ್ಲಿ ಸಮುದಾಯವನ್ನು ಗಮನದಲ್ಲಿ ಇರಿಸಿಕೊಂಡು ಇಟ್ಟ ಒಂದೊಂದು ಹೆಜ್ಜೆಯೂ ಪರಿಣಾಮಕಾರಿಯಾಗಿರುತ್ತದೆ. ಅಂತಹ ಕೆಲಸವನ್ನು ಕಾಗೋಡು ಸತ್ಯಾಗ್ರಹದ ಮೂಲಕ ಗಣಪತಿಯಪ್ಪ ಮಾಡಿದ್ದಾರೆ ಎಂದು ಹೇಳಿದರು.
ಇತಿಹಾಸ ವೇದಿಕೆ ಅಧ್ಯಕ್ಷ ಡಾ. ವೆಂಕಟೇಶ್ ಜೋಯಿಸ್ ಅಧ್ಯಕ್ಷತೆ ವಹಿಸಿದ್ದರು. ಎಚ್. ಗಣಪತಿಯಪ್ಪ, ಎಸ್.ಕೆ. ಮಂಜುನಾಥ್ ಶೇಟ್, ಅಶ್ವಿನಿಕುಮಾರ್, ಲೇಖಕ ಜಿ. ನಾಗೇಶ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

