ಶಿವಮೊಗ್ಗ

ಕೆಜೆಪಿ, ಬಿಜೆಪಿಗೆ ನೀಡುವ ಮತ ವ್ಯರ್ಥ

Published On :

ಕ.ಪ್ರ.ವಾರ್ತ್ಣೆಶಿವಮೊಗ್ಗ್ಣಏ.27
ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿಯ ಈಶ್ವರಪ್ಪ ಹಾಗೂ ಕೆಜೆಪಿಯ  ಯಡಿಯೂರಪ್ಪ ಜೈಲಿಗೆ ಹೋಗಲಿದ್ದು ಅವರಿಗೆ ನೀಡಲಿರುವ ಮತ ವ್ಯರ್ಥವಾಗಲಿದೆ. ಆದ್ದರಿಂದ ಶಿವಮೊಗ್ಗ  ನಗರದ ಜನ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
 ನಗರದ ಎನ್‌ಡಿವಿ ಹಾಸ್ಟೆಲ್ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಪಕ್ಷದ ಪ್ರಚಾರ ಸಭೆಯಲ್ಲಿ ಅವರು, ಹಣ ಸ್ವೀಕಾರ ಪ್ರಕರಣದಲ್ಲಿ ಈಶ್ವರಪ್ಪ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶ ನೀಡಿದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆಸಿದ ಭ್ರಷ್ಟಾಚಾರದ ಅನೇಕ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿ ಬಾಕಿ ಇದೆ. ಇಂದಲ್ಲ ನಾಳೆ ತನಿಖೆ ಪೂರ್ಣಗೊಂಡು ಆರೋಪ ಸಾಬೀತಾಗಿ ಅವರಿಬ್ಬರೂ ಜೈಲು ಶಿಕ್ಷೆ ಅನುಭವಿಸಲಿದ್ದಾರೆ ಎಂದರು.
ಪರಸ್ಪರ ದೋಷಾರೋಪ: ಒಂದು ಕಾಲದಲ್ಲಿ ಸಹೋದರರ ಹಾಗೆ ಇದ್ದ ಈಶ್ವರಪ್ಪ ಮತ್ತು ಯಡಿಯೂರಪ್ಪ ಇಂದು ಪರಸ್ಪರ ದೋಷಾರೋಪ ಮಾಡುತ್ತಿದ್ದಾರೆ. ಯಡಿಯೂರಪ್ಪ ಸ್ವಯಂಕೃತಾಪರಾಧದಿಂದ ಜೈಲಿಗೆ ಹೋದರು ಎಂದು ಈಶ್ವರಪ್ಪ ಹೇಳಿದರೆ, ಈಶ್ವರಪ್ಪ ಒಬ್ಬ ರಾಕ್ಷಸ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ. ಭ್ರಷ್ಟಾಚಾರ ಹಾಗೂ ಅಕ್ರಮ ಗಳಿಕೆಯಲ್ಲಿ ಇಬ್ಬರೂ ಸಮಬಲರಾಗಿದ್ದು ಬೇರೆ ಪಕ್ಷಗಳ ವಿರುದ್ಧ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದರು.
 ಕಾಂಗ್ರೆಸ್ ವಿರುದ್ಧವೂ ಹರಿಹಾಯ್ದ ಕುಮಾರಸ್ವಾಮಿ, ಚುನಾವಣೆಗೆ ಸಂಬಂಧಿಸಿದಂತೆ ಆ ಪಕ್ಷ ನೀಡುತ್ತಿರುವ ಜಾಹೀರಾತಿನಲ್ಲಿ ಕರ್ನಾಟಕದ ಅಭಿವೃದ್ಧಿಗೆ ಕಾಂಗ್ರೆಸ್ ಮತ ನೀಡಿ ಎಂದು ಹೇಳಿ ಸೋನಿಯಾ ಹಾಗೂ ರಾಹುಲ್ ಗಾಂಧಿ ಅವರ ಭಾವಚಿತ್ರ ಹಾಕಿದೆ. ಇದು ರಾಜ್ಯದ ಕಾಂಗ್ರೆಸ್ ನಾಯಕರ ಪೈಕಿ ಒಬ್ಬರಿಗೂ ಕರ್ನಾಟಕವನ್ನು ಮುನ್ನಡೆಸುವ ಶಕ್ತಿ ಮತ್ತು ಸ್ವಾಭಿಮಾನ ಇಲ್ಲ ಎಂಬುದನ್ನು ತೋರಿಸುತ್ತದೆ ಎಂದು ವ್ಯಂಗ್ಯವಾಡಿದರು.
   ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ, ಸೊರಬ ಅಭ್ಯರ್ಥಿ ಮಧು ಬಂಗಾರಪ್ಪ, ಮುಖಂಡ ಜಿ. ಮಾದಪ್ಪ, ನಗರಸಭಾ ಸದಸ್ಯ ನಾಗರಾಜ ಕಂಕಾರಿ, ಪಾಲಾಕ್ಷಿ, ಕೇಬಲ್ ಬಾಬು ಸೇರಿದಂತೆ ಹಲವರು ಇದ್ದರು.
ಸಾಗರ
ಜೆಡಿಎಸ್ ತಾಲೂಕು ಘಟಕ ಶನಿವಾರ ಪಟ್ಟಣದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ್ದ ಮತದಾರರಿಗೆ ನಿರಾಸೆ ಉಂಟಾಯಿತು.
ಸಭೆಗೆ ಆಗಮಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಲಿಕ್ಯಾಪ್ಟರ್‌ನಲ್ಲಿನ ತಾಂತ್ರಿಕ ದೋಷದ ಕಾರಣದಿಂದ ನಿಗದಿತ ಸಮಯಕ್ಕೆ ಸಾಗರ ತಲುಪಲು ಸಾಧ್ಯವಾಗದೇ ದೂರದ ಚನ್ನಗಿರಿಯಿಂದ ಮೊಬೈಲ್ ಮೂಲಕವೇ ಇಲ್ಲಿ ಸೇರಿದ್ದ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಘಟನೆ ನಡೆಯಿತು.
ಕಾಂಗ್ರೆಸ್ ಹಾಗೂ ಬಿಜೆಪಿ ಅಡಕೆ ಬೆಳೆಗಾರರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಲೆನಾಡಿನ ಅಡಕೆ ಬೆಳೆಗಾರರ ಸಂಕಷ್ಟವನ್ನು ನಿವಾರಣೆ ಮಾಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದರು.
ಇಚ್ಛಾಶಕ್ತಿ ಇಲ್ಲ: ಇದಕ್ಕೂ ಮೊದಲು ಪ್ರಚಾರ ಸಭೆ ಉದ್ಘಾಟಿಸಿದ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು, ಕಾಗೋಡು ತಿಮ್ಮಪ್ಪನವರು ಜನಬೆಂಬಲವನ್ನು ಕಳೆದುಕೊಂಡು ನಮ್ಮ ಮೇಲೆ ಇಲ್ಲದ ಆರೋಪ ಮಾಡುತ್ತಿದ್ದಾರೆ. ಅವರಿಗೆ ನಿಜವಾಗಿ ಇಚ್ಛಾಶಕ್ತಿ ಇದ್ದಿದ್ದರೆ ಹಿಂದೆಯೇ ಸಾಗರ ಪಟ್ಟಣಕ್ಕೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ತರಬಹುದಿತ್ತು. ತುಮರಿ ಸೇತುವೆ ನಿರ್ಮಾಣ ಮಾಡಬಹುದಿತ್ತು ಎಂದರು.
ಪಕ್ಷದ ತಾ. ಅಧ್ಯಕ್ಷ ಕೆ. ಅರುಣಪ್ರಸಾದ್, ಕಾರ್ಯಾಧ್ಯಕ್ಷ ಬಸವರಾಜಗೌಡ, ಪ್ರಮುಖರಾದ ಎಸ್.ಎಲ್. ಮಂಜುನಾಥ್, ಜಾಕೀರ್, ಪ್ರೇಮಸಾಗರ್, ಕಲಸೆ ಚಂದ್ರಪ್ಪ, ಹಜರತ್ ಉಮ್ಮಾ ಸಾಬ್, ಎಂ.ಕೆ. ತಿಮ್ಮಪ್ಪ, ಹಸೀನಾ ಪವರನ್, ಉಮಾವತಿ, ರೋಹಿಣಿ ನಾಗರಾಜ್, ಇಕ್ಬಾಲ್ ಸಾಬ್, ಜಯಲಕ್ಷ್ಮೀ ನಾರಾಯಣಪ್ಪ, ಎಂ.ಜಿ. ದೀನದಯಾಳು ಹಾಜರಿದ್ದರು.
ಹೊಸನಗರ
ಹಿಂದುಳಿದ ವರ್ಗದವರ ನಾಯಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪರ ಕನಸಿನ ಸರ್ಕಾರ ನೀಡುವುದು ನಮ್ಮ ಗುರಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಪಟ್ಟಣದ ನೆಹರು ಮೈದಾನದಲ್ಲಿ ನಡೆದ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿ, ಜೆಡಿಎಸ್ ಎಂದು ರೈತಪರವಾಗಿದ್ದು ಪಕ್ಷಕ್ಕೆ ಹೆಚ್ಚಿನ ಮತ ನೀಡುವುದರ ಮೂಲಕ ಶಕ್ತಿ ತುಂಬುವಂತೆ ಮನವಿ ಮಾಡಿದರು.
ಬಗರ್‌ಹುಕಂ ಪರಿಹಾರ: ಈ ಭಾಗದಲ್ಲಿ ಪ್ರಮುಖ ಸಮಸ್ಯೆಯಾಗಿ 60 ವರ್ಷಗಳಿಂದ ಜೀವಂತವಾಗಿರುವ ಬಗರ್‌ಹುಕುಂಗೆ ಜೆಡಿಎಸ್ ಅಧಿಕಾರಕ್ಕೆ ಬಂದರೆ ಕೆಲವೇ ದಿನಗಳಲ್ಲಿ ಪರಿಹಾರ ಕಂಡುಹಿಡಿಯಲಾಗುವುದು. ಅಲ್ಲದೆ ರೈತರ ಎಲ್ಲ ರೀತಿಯ ಸಾಲವನ್ನು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮನ್ನಾ ಮಾಡುವುದು ಖಚಿತ ಎಂದು ಘೋಷಿಸಿದರು.
  ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಬರುತ್ತಿರುವ ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ರಾಜ್ಯದಲ್ಲಿ ಪ್ರವಾಸ ಮಾಡಿದ್ದು ಕಾಂಗ್ರೆಸ್ ತನ್ನ ನೆಲೆ ಕಳೆದುಕೊಂಡಿರುವುದು ಕಂಡುಬರುತ್ತಿದೆ. ಜೆಡಿಎಸ್‌ಗೆ ಹೋದಲೆಲ್ಲ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಅಧಿಕಾರ ಹಿಡಿಯುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಅಭ್ಯರ್ಥಿ ಶಾಸಕ ಬೇಳೂರು ಗೋಪಾಲಕೃಷ್ಣ, ತೀರ್ಥಹಳ್ಳಿ ಜೆಡಿಎಸ್ ಅಭ್ಯರ್ಥಿ ಮದನ್, ಪ್ರಮುಖರಾದ ಕೆ.ಎಂ. ಕೃಷ್ಣಮೂರ್ತಿ, ಅರುಣಪ್ರಸಾದ್, ಎಂ.ವಿ. ಜಯರಾಂ, ಬಿ.ಜಿ. ನಾಗರಾಜ್, ಸುಮತಿ ಪೂಜಾರ್, ಶ್ರೀಧರ ಉಡುಪ, ಚರಿತಾ ಗಣೇಶ್, ಆರ್.ಎ. ಚಾಬುಸಾಬ್, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ತೀರ್ಥಹಳ್ಳಿ
ಬಿಜೆಪಿ ಸರ್ಕಾರದ ಆಳ್ವಿಕೆಯಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ. ಕಾಂಗ್ರೆಸ್ ವಿ ರೋಧ ಪಕ್ಷವಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ. ಚುನಾವಣಾ ಸಮೀಕ್ಷೆಯಿಂದ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಜೆಡಿಎಸ್ ಪರ ಗಾಳಿ ಬೀಸುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಳಿದರು.     
   ಶನಿವಾರ ಸಂಜೆ ತೀರ್ಥಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಆರ್. ಮದನ್ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಿ ಮತಯಾಚಿಸಿದ ಅವರು ಸ್ವತಂತ್ರವಾಗಿ ಜೆಡಿಎಸ್ ಆಡಳಿತ ನಡೆಸಲು ಅನುವಾಗುವಂತೆ ಜನತೆ ಆಶೀರ್ವಾದ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 ಮಲೆನಾಡು ಭಾಗದ ಅಡಿಕೆ ಬೆಳೆಗಾರರ ಸಂಕಷ್ಟಗಳಿಗೆ ಸ್ಪಂದಿಸಲೆಂದೇ ಗೋರಕ್‌ಸಿಂಗ್ ವರದಿ ಬಂದಿದ್ದಾದರೂ ಕೇಂದ್ರ ಸರ್ಕಾರ ಇನ್ನೂ ನೆರವಿಗೆ ಬಂದಿಲ್ಲ ಎಂದವರು ಟೀಕಿಸಿದರು.
ಮಧು ಬಂಗಾರಪ್ಪ, ಗೋಪಾಲಗೌಡರ ಪುತ್ರ ರಾಮಮನೋಹರ್ ಮಾತನಾಡಿದರು. ಜಿಲ್ಲಾ, ತಾಲೂಕು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.
       ಶಿಕಾರಿಪುರ
ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಅಧಿಕಾರದ ಗದ್ದುಗೆಯೇರಲಿದ್ದು, ಕ್ಷೇತ್ರದ ಅಭ್ಯರ್ಥಿ ಹೊಳೆಬಸಪ್ಪ ಬಳಿಗಾರ್ ಉನ್ನತ ಸಚಿವ ಸ್ಥಾನವನ್ನು ಅಲಕಂರಿಸಲಿದ್ದಾರೆ ಎಂದು ಜಾತ್ಯತೀತ ಜನತಾದಳದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
 ಶನಿವಾರ ಪಟ್ಟಣದ ಬಯಲು ರಂಗಮಂದಿರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿಯ ಚುನಾವಣೆ ಇತಿಹಾಸವನ್ನು ನಿರ್ಮಿಸಲಿದ್ದು ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಅಪೇಕ್ಷೆಯಂತೆ ಕ್ಷೇತ್ರದ ಮತದಾರರು ಬಳಿಗಾರರನ್ನು ಅತೀ ಹೆಚ್ಚಿನ ಮತದ ಅಂತರದಿಂದ ಜಯಗಳಿಸುವಂತೆ ಮನವಿ ಮಾಡಿದರು.
 ಜೆಡಿಎಸ್ ಸರ್ಕಾರ ರಾಜ್ಯದಲ್ಲಿ ಸಾಲ ನೀಡುವ ಯೋಜನೆಯನ್ನು ಜಾರಿಗೊಳಿಸುವುದಾಗಿ ತಿಳಿಸಿದ ಅವರು, ತುಂಗಭದ್ರಾ ಜಲಾಶಯದಿಂದ ಅಂಜನಾಪುರ ಜಲಾಶಯಕ್ಕೆ ನೇರವಾಗಿ ನೀರಾವರಿ ಸೌಲಭ್ಯ, ರೈತರ ಸಾಲ ಸಂಪೂರ್ಣ ಮನ್ನಾ ಮತ್ತಿತರ ಬರವಸೆಗಳ ಸುರಿಮಳೆಗೈದರು.
 ಜೆಡಿಎಸ್ ಯುವಘಟಕದ ರಾಜ್ಯಾದ್ಯಕ್ಷ ಮಧುಬಂಗಾರಪ್ಪ ಮಾತನಾಡಿ,ದಿ.ಬಂಗಾರಪ್ಪನವರ ಕೊನೆ ಆಸೆಯಂತೆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಬಳಿಗಾರರನ್ನು ಆಯ್ಕೆ ಮಾಡಲಾಗಿದ್ದು ಬಳಿಗಾರ್ ವ್ಯಕ್ತಿತ್ವದ ಮೂಲಕ ಬಂಗಾರಪ್ಪನವರನ್ನು ಕಾಣಬಹುದಾಗಿದೆ ಎಂದರು.
 ಅಭ್ಯರ್ಥಿ ಹೊಳೆಬಸಪ್ಪ ಬಳಿಗಾರ್ ಮಾತನಾಡಿ, ಕೆಎಎಸ್‌ನಂತಹ ಉನ್ನತ ಉದ್ಯೋಗ ತ್ಯಜಿಸಿ ಸಾರ್ವಜನಿಕ ಸೇವೆಗೆ ಬಂದಿದ್ದೇನೆ.
   ಇಲ್ಲಿಯೇ ಕಡೆತನಕ ಸೇವೆ ಸಲ್ಲಿಸುವ ಉದ್ದೇಶದಿಂದ ಬಂದ ನನ್ನ ಕೈ ಬಿಡದಂತೆ ಮನವಿ ಮಾಡಿದರು.
 ರಾಜ್ಯ ಸಂಚಾಲಕ ತನ್ವೀರ್ ಅಹ್ಮದ್, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ ರಾಮಯ್ಯ, ತಾ.ಅಧ್ಯಕ್ಷ ನಾಗನಗೌಡ ಪಾಟೀಲ್, ಶಿರಾಳಕೊಪ್ಪ ಬ್ಲಾಕ್ ಅಧ್ಯಕ್ಷ ಚಂದ್ರಶೇಖರಪ್ಪ,ಕಾರ್ಯದರ್ಶಿ ಗಜೇಂದ್ರ, ಜಯಾನಾಯ್ಕ, ರಶೀದಾ ಬೇಗಂ, ಬಿಳಕಿ ನಾಗರಾಜಗೌಡ, ಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಲ್ಲಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.