ಬಿಜೆಪಿ ಮಣಿಸಲು ಕಾಂಗ್ರೆಸ್ ಹೊಂಚು
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.27
ರಾಜ್ಯಾದ್ಯಂತ ಕಾಂಗ್ರೆಸ್ ಗಾಳಿ ಬೀಸುತ್ತಿದೆ ಎಂದು ಜನರು ನಂಬಿಕೊಂಡಿದ್ದಾರೆ. ಆದರೆ, ಜಿಲ್ಲೆಯ ಮಟ್ಟಿಗೆ ಮಾತ್ರ ಅದು ಮಿಶ್ರ ಗಾಳಿ. ಇದರ ನಡುವೆಯೇ ಸ್ವಾತಂತ್ರ್ಯ ಹೋರಾಟದ ಇತಿಹಾಸ ಹೊಂದಿರುವ ಕಾಂಗ್ರೆಸ್ ಮೊದಲಿನ ವೈಭವದ ದಿನಗಳನ್ನು ನೋಡಲು ಕಾತರಿಸುತ್ತಿದೆ. ಆದರೆ, ಅಂದಿನಂತೆ ಇಂದು ಕ್ಲೀನ್ ಸ್ವೀಪ್ ಮಾಡುವ ಸಾಮರ್ಥ್ಯ ಕಾಂಗ್ರೆಸ್ಗೆ ಉಳಿದಿಲ್ಲ.
ಇಲ್ಲಿ ಪರಿಸ್ಥಿತಿ ಮೊದಲಿನಂತಿಲ್ಲ. ಕಾಂಗ್ರೆಸ್ ವಿರೋಧಿಗಳು ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ನೀಡಿದ ಪೆಟ್ಟನ್ನು ಕಾಂಗ್ರೆಸ್ಸಿಗರು ಇನ್ನೂ ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಜೆಡಿಎಸ್ ಬಲವರ್ಧನೆ ಮಾಡಿಕೊಳ್ಳುತ್ತಿದೆ. ಇದರ ಜತೆಗೆ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಜನತಾ ಪಕ್ಷವೂ ನಿದ್ದೆಗೆಡಿಸುತ್ತಿದೆ.
ಇದರ ಜತೆಗೆ ಪಕ್ಷದ ಒಳಗೇ ಇರುವ ಭಿನ್ನಾಭಿಪ್ರಾಯಗಳು ಅಭ್ಯರ್ಥಿಗಳನ್ನು ಹೈರಾಣು ಮಾಡುತ್ತಿದೆ.
ಇನ್ನಿಲ್ಲದ ಪ್ರಯತ್ನ: ಜಿಲ್ಲೆಯಲ್ಲಿ ಬೇರುಬಿಟ್ಟ ಬಿಜೆಪಿಯ ಬುಡವನ್ನು ಅಲುಗಾಡಿಸಲು ಒದಗಿಬಂದ ಅವಕಾಶವನ್ನು ಬಳಸಿಕೊಳ್ಳಲು ಕಾಂಗ್ರೆಸ್ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆ, ಕೆಜೆಪಿ ಅಬ್ಬರದ ನಡುವೆಯೇ ಪಾರುಪತ್ಯ ಸಾಧಿಸಲು ಪಕ್ಷ ಪ್ರಯತ್ನ ನಡೆಸುತ್ತಿದೆ. ಈ ಮಧ್ಯೆ ಪಕ್ಷಕ್ಕೆ ಅನೇಕ ಸವಾಲುಗಳೂ ಇವೆ. ಅಂದುಕೊಂಡಷ್ಟು ಸುಲಭವಲ್ಲ ಎಂಬುದೂ ತಿಳಿದಿದೆ.
ಒಂದು ಕಾಲದಲ್ಲಿ ಶಿವಮೊಗ್ಗ ಕಾಂಗ್ರೆಸ್ನ ಭದ್ರಕೋಟೆ. ಆದರೆ, ಬರುಬರುತ್ತಾ ಬಿಜೆಪಿಯ ಕಬಂದ ಬಾಹುವಿನ ಒಳಗೆ ಕಳೆದು ಹೋಯಿತು. ಕಳೆದ ಚುನಾವಣೆಯಲ್ಲಿ ಭದ್ರಾವತಿ, ತೀರ್ಥಹಳ್ಳಿ ಕ್ಷೇತ್ರಗಳು ಕಾಂಗ್ರೆಸ್ ಮಾನ ಉಳಿಸಿದ್ದವು. ಈ ಬಾರಿ ಹೇಗಾದರೂ ತನ್ನ ಹಳೆಯ ಛಾಪನ್ನು ಮರು ಸ್ಥಾಪಿಸಲು ಪಕ್ಷದ ಮುಖಂಡರು ಪ್ರಯತ್ನ ನಡೆಸಿದ್ದಾರಾದರೂ ನಾಯಕರು- ಅಭ್ಯರ್ಥಿಗಳ ಪ್ರತಿಷ್ಠೆಯಿಂದ ನಿರೀಕ್ಷಿತ ಫಲಿತಾಂಶ ಸಿಗದಿದ್ದರೆ ಆಚ್ಚರಿಯೇನಲ್ಲ.
ಪಕ್ಷದ ನಿರೀಕ್ಷೆ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಪೈಕಿ ಒಂದು ಕಡೆ ಸುಲಭ ಜಯ, ಮೂರು ಕಡೆ ಪ್ರಯಾಸದ ಗೆಲುವು, ಮತ್ತೆ ಎರಡು ಕಡೆ ಕಠಿಣ ಸವಾಲು ಇದ್ದರೆ ಒಂದು ಕ್ಷೇತ್ರದಲ್ಲಿ ಯುದ್ಧಕ್ಕೆ ಮುನ್ನವೇ ಗೆಲುವಿನ ಆಸೆ ಕೈಬಿಟ್ಟಿದೆ.
ಸಾಗರ ಕ್ಷೇತ್ರದಲ್ಲಿ ಸುಲಭ ಗೆಲುವು ದಾಖಲಿಸುವ ನಿರೀಕ್ಷೆಯಲ್ಲಿದ್ದಾರೆ. ಕೊನೆ ಹಂತದಲ್ಲಿ ಕೊಂಚ ಗಲಿಬಿಲಿ ಇದ್ದರೂ ಗೆಲುವು ಖಚಿತ, ಅಂತರ ಕಡಿಮೆಯಾಗಬಹುದಷ್ಟೇ ಎಂದು ಪಕ್ಷದ ಮುಖಂಡರು ಹೇಳುತ್ತಾರೆ. ಬೇಳೂರು ಗೋಪಾಲಕೃಷ್ಣ ಎಷ್ಟು ಈಡಿಗ ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುತ್ತಾರೆನ್ನುವ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ ಎಂಬ ವಿಶ್ಲೇಷಣೆ ಇದೆ.
ತೀರ್ಥಹಳ್ಳಿಯಲ್ಲಿ ಸುಲಭವಲ್ಲ: ಕಳೆದ ಬಾರಿ ಗೆಲುವು ಸಾಧಿಸಿದ್ದ ತೀರ್ಥಹಳ್ಳಿ ಕ್ಷೇತ್ರ ಈ ಬಾರಿ ಸುಲಭ ತುತ್ತೇನಲ್ಲ ಎಂಬುದನ್ನು ಆ ಪಕ್ಷದ ಮುಖಂಡರು ಅರಿತಿರುವಂತಿದೆ. ಈಡಿಗ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಅಶೋಕ ಮೂರ್ತಿಯವರು ಗಳಿಸುವ ಮತಗಳ ಆಧಾರದ ಮೇಲೆ ಕಾಂಗ್ರೆಸ್ ಭವಿಷ್ಯ ಅಡಗಿದೆ. ಇನ್ನೊಂದೆಡೆ ಕೆಜೆಪಿ ಅಭ್ಯರ್ಥಿ ಮಂಜುನಾಥ ಗೌಡರು ಗೆಲುವಿಗೆ ಅಡ್ಡಾಗಾಲಾದರೂ ಅಚ್ಚರಿ ಏನಿಲ್ಲ ಎನ್ನಲಾಗುತ್ತಿದೆ.
ಸೊರಬದಲ್ಲಿ ಕುಮಾರ್ ಬಂಗಾರಪ್ಪನವರು ಚುನಾವಣೆಗಾಗಿ ನಡೆಸಿದ ತಯಾರಿಯಿಂದಾಗಿ ಅವರ ಗೆಲುವು ಸುಲಭ ಎಂದೇ ಭಾವಿಸಲಾಗುತ್ತಿತ್ತು.
ಆದರೆ, ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪನವರು ತಮ್ಮ ಕುಟುಂಬದ ಸದಸ್ಯರನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಪ್ರಚಾರ ಕಾಂಗ್ರೆಸ್ನ ಓಟದ ವೇಗ ತಗ್ಗಿಸಿದೆ. ಇನ್ನೊಂದೆಡೆ ಈಡಿಗ ಸಮುದಾಯ ಹೊರತಾಗಿನ ಓಟುಗಳು ಒಂದೇಕಡೆ ಸೇರಿದರೂ ಕಾಂಗ್ರೆಸ್ ಗೆಲುವಿಗೆ ಇನ್ನಷ್ಟು ಬೆವರು ಹರಿಸಬೇಕಾದೀತು.
ಶಿಕಾರಿಪುರದಲ್ಲಿ ಬಿ.ಎಸ್. ಯಡಿಯೂರಪ್ಪನವರ ಎದುರಾಳಿಯಾಗಿ ಶಾಂತವೀರಪ್ಪಗೌಡ ಅಭ್ಯರ್ಥಿಯಾದಾಗ ಪಕ್ಷದೊಳಗೆ ಭಿನ್ನಮತ ಭುಗಿಲೆದ್ದಿತ್ತು. ಕೊನೆಗೆ ಅದನ್ನು ತಣ್ಣಗಾಗಿಸುವಷ್ಟರಲ್ಲಿ ಬಿಎಸ್ವೈ ಅವರನ್ನು ಒಮ್ಮೆ ಸೋಲಿಸಿದ್ದ ಮಹಾಲಿಂಗಪ್ಪ ಕೆಜೆಪಿ ತೆಕ್ಕೆಗೆ ಜಾರಿದ್ದರು. ಇದು ಕಾಂಗ್ರೆಸ್ನ ಗೆಲುವಿನ ಕನಸಿಗೂ ಧಕ್ಕೆ ತರುವ ಬೆಳವಣಿಗೆ.
ಪ್ರಬಲ ಸ್ಪರ್ಧೆ: ಭದ್ರಾವತಿಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಸಂಗಮೇಶ್ ಅವರಿಗೆ ಈ ಬಾರಿ ಟಿಕೆಟ್ ನಿರಾಕರಿಸಿದ್ದೇ ಪಕ್ಷಕ್ಕೆ ಮುಳುವಾಗಿದೆ ಎಂಬುದನ್ನು ಪಕ್ಷದ ಜಿಲ್ಲಾ ಮುಖಂಡರು ಒಪ್ಪಿಕೊಳ್ಳುತ್ತಾರೆ.
ಇಲ್ಲಿ ಪಕ್ಷ ಮುಂಚೂಣಿಗೆ ಬರುವುದು ಅಷ್ಟು ಸುಲಭವಲ್ಲ ಎಂಬುದೂ ಸಹ ತಿಳಿದುಹೋಗಿದೆ. ಅಭ್ಯರ್ಥಿ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ನ ಅಪ್ಪಾಜಿ ಅವರಿಂದ ಪ್ರಭಲ ಪೈಪೋಟಿ ಎದುರಿಸುತ್ತಿದ್ದಾರೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ಕರಿಯಣ್ಣನವರು ಗ್ರಾಮೀಣ ಭಾಗದಲ್ಲಿ ಪಕ್ಷವನ್ನು ಕಟ್ಟಿದವರು. ಅದರಲ್ಲೂ ಹೊಳೆಹೊನ್ನೂರು ಭಾಗದಲ್ಲಿ ತಮ್ಮ ಪ್ರಭಾವಲಯವನ್ನು ಹೊಂದಿದ್ದಾರೆ. ಇವರಿಗೆ ಕೆಜೆಪಿ- ಜೆಡಿಎಸ್ನಿಂದ ಸಮಾನ ಪೈಪೋಟಿಯೆಂದು ಭಾವಿಸಲಾಗಿದೆ. ಇಲ್ಲೂ ಕೂಡ ಪಕ್ಷ ಸಾಕಷ್ಟು ಶ್ರಮ ವಹಿಸಬೇಕಾಗಿದೆ ಎಂಬುದು ಪಕ್ಷದ ನಾಯಕರ ಅಂಬೋಣ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಸ್. ಈಶ್ವರಪ್ಪನವರನ್ನು ಮಣಿಸಲು ಪಕ್ಷ ಹೂಡಿದ್ದು ಬ್ರಾಹ್ಮಣ ಸಮುದಾಯದ ಕೆ.ಬಿ. ಪ್ರಸನ್ನಕುಮಾರ್ ಅವರನ್ನು.
ಅಭ್ಯರ್ಥಿ ಹೊಸ ಮುಖ, ಭ್ರಷ್ಟಾಚಾರದ ಕಳಂಕ ಇಲ್ಲ ಎಂಬುದೇ ಪಕ್ಷದ ಪ್ರಮುಖ ಅಸ್ತ್ರ. ಆದರೆ, ಪಕ್ಷದೊಳಗಿನ ಬೇಗುದಿಯನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಅಭ್ಯರ್ಥಿ ಹಾಗೂ ಪಕ್ಷದ ಮುಖಂಡರು, ನಗರಸಭಾ ಕಾಂಗ್ರೆಸ್ ಸದಸ್ಯರ ನಡುವೆಯೇ ಇನ್ನೂ ತಾಳಮೇಳ ಕೂಡಿಲ್ಲ. ಹೀಗಾಗಿ ಇಲ್ಲೂ ಪಕ್ಷ ಏದುಸಿರು ಬಿಡುತ್ತಿದೆ.
ಹೊನ್ನಾಳಿ ಚಂದ್ರು/ ಶ್ರೀಕಾಂತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

