ಪ್ರಧಾನಿಯವರೇ ಹೆದರಬೇಡಿ ನಾವಿದ್ದೇವೆ: ಬಿಜೆಪಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.30
ಪ್ರಧಾನ ಮಂತ್ರಿಯವರೇ, ನಡುಗಬೇಡಿ. ಪಾಕಿಸ್ತಾನ ಹಾಗೂ ಚೀನಾ ಸೇನೆಯನ್ನು ಹಿಮ್ಮೆಟ್ಟಿಸಿ. ಈ ವಿಚಾರದಲ್ಲಿ ಬಿಜೆಪಿ ನಿಮ್ಮೊಂದಿಗಿರುತ್ತದೆ. ಹಿಂದೂಸ್ತಾನದ ಸಮಸ್ತರೂ ನಿಮ್ಮನ್ನು ಬೆಂಬಲಿಸುತ್ತಾರೆ ಎಂದು ರಾಷ್ಟ್ರೀಯ ಬಿಜೆಪಿ ಮನಮೋಹನ್ ಸಿಂಗ್ ಅವರಿಗೆ ಕರೆಕೊಟ್ಟಿದೆ.
ತೀರ್ಥಹಳ್ಳಿಯಲ್ಲಿ ಮಂಗಳವಾರ ಬಿಜೆಪಿ ಅಭ್ಯರ್ಥಿ ಆರಗ ಜ್ಞಾನೇಂದ್ರ ಪರ ಮಾತಯಾಚಿಸಿದ ಪಕ್ಷದ ರಾಷ್ಟ್ರಾಧ್ಯಕ್ಷ ರಾಜನಾಥ ಸಿಂಗ್ ಹರಿತ ಮಾತುಗಳಿಂದ ಪ್ರಧಾನಿಯನ್ನು ತಿವಿದರಲ್ಲದೆ, ದೇಶವನ್ನು ರಕ್ಷಿಸುವ ವಿಚಾರದಲ್ಲಿ ಬಿಜೆಪಿ ಯಾವುದೇ ರಾಜಕೀಯ ಮಾಡದೇ, ಪ್ರಧಾನಿಯವರ ಗಟ್ಟಿ ನಿರ್ಧಾರವನ್ನು ಬೆಂಬಲಿಸುತ್ತದೆ ಎಂದರು.
ಭಾರತದೊಳಕ್ಕೆ ನುಗ್ಗಿರುವ ಚೀನಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವವರೆಗೆ ಆ ದೇಶದೊಂದಿಗೆ ಯಾವುದೇ ರಾಜತಾಂತ್ರಿಕ ಸಂಬಂಧ ಬೆಳೆಸಬಾರದು ಎಂದ ಅವರು, ನೆರೆಯ ದೇಶಗಳಾದ ಚೀನಾ ಹಾಗೂ ಪಾಕಿಸ್ತಾನ ಭಾರತದ ಮೇಲೆ ಪದೆ ಪದೇ ಉದ್ಧಟತನದಿಂತ ವರ್ತಿಸುತ್ತಿವೆ. ಚೀನಾ ಸೈನಿಕರು ಭಾರತದ ಗಡಿಯೊಳಕ್ಕೆ 19 ಕಿ.ಮೀ. ಪ್ರದೇಶದೊಳಕ್ಕೆ ನುಗ್ಗಿ ಬಂದು, ಐದು ಕ್ಯಾಂಪ್ಗಳನ್ನು ಹಾಕಿದ್ದಾರೆ. ಆದರೂ ಕೇಂದ್ರ ಸರ್ಕಾರ ಯಾವುದೇ ಪ್ರತಿರೋಧ ತೋರುತ್ತಿಲ್ಲ ಎಂದು ದೂರಿದರು.
ಈ ಸಂದರ್ಭದಲ್ಲಿ ನಮ್ಮ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಚೀನಾ ಪ್ರವಾಸ ಮಾಡುವುದಾಗಿ ಹೇಳುತ್ತಾರೆ. ಅಲ್ಲಿನ ಪ್ರಧಾನಿ ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಇದಕ್ಕಿಂತ ದೌರ್ಭಾಗ್ಯ ಇನ್ಯಾವುದಿದೆ ಎಂದು ಪ್ರಶ್ನಿಸಿದರು.
ಪಾಕ್ ಸೈನಿಕರು ಭಾರತದ ಗಡಿಯೊಳಗೆ ಬಂದು ನಮ್ಮ ಸೈನಿಕರ ರುಂಡ ಕತ್ತರಿಸಿ ಕೊಂಡೊಯ್ದರೆ, ನಮ್ಮ ಪ್ರಧಾನಿ ಚಕಾರವೆತ್ತುವುದಿಲ್ಲ. ಅಂದು ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡಿದ್ದರೆ ಇಂದು ಪಾಕಿಸ್ತಾನದ ಜೈಲಿನಲ್ಲಿ ನಮ್ಮ ಸರಬ್ಜತ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಿರಲಿಲ್ಲ ಎಂದರು.
ಪ್ರಧಾನಿಗಳ ಕ್ರೂರ ಹಾಸ್ಯ: ಸೋಮವಾರ ಹುಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರ ಮಾಡಿದ ಪ್ರಧಾನಿ ಮನಮೋಹನ್ ಸಿಂಗ್, ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಅಧಿಕಾರ ನೀಡಿದರೆ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೇಳಿರುವುದು ಕ್ರೂರ ಹಾಸ್ಯವೆಂದು ಲೇವಡಿ ಮಾಡಿದರು.
ಪ್ರಧಾನಿ ಕಣ್ಗಾವಲಿನಲ್ಲಿರುವವ ಕೇಂದ್ರ ಸರ್ಕಾರ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ನಾಯಕತ್ವದ ಯುಪಿಎ ಸರ್ಕಾರದಲ್ಲೇ 5,500 ಲಕ್ಷ ಕೋಟಿ ಹಗರಣಗಳು ನಡೆದಿರುವಾಗ ಕರ್ನಾಟಕದಲ್ಲಿ ಭ್ರಷ್ಟ ಮುಕ್ತ ಆಡಳಿತ ನೀಡುತ್ತೇವೆ ಎಂದು ಪ್ರಧಾನಿ ಹೇಳುವುದು ಹಾಸ್ಯವಲ್ಲದೇ ಮತ್ತೇನು ಎಂದು ಪ್ರಶ್ನಿಸಿದರು.
ಸಿಬಿಐ ಮಿಸ್ಯೂಸ್: ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿಬಿಐಯನ್ನು ಬಳಸಿಕೊಳ್ಳುತ್ತಿದೆ. ಈ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಕೂಡ ಛಾಟಿ ಬೀಸಿದೆ ಎಂದ ಅವರು ಪ್ರಧಾನಿ ಕಚೇರಿ ಅಧಿಕಾರಿಗಳು, ಕಾನೂನು ಸಚಿವರೇ ಖುದ್ದಾಗಿ ಸುಪ್ರಿಂ ಕೋರ್ಟ್ಗೆ ಸಿಬಿಐ ಸಲ್ಲಿಸಬೇಕಾದ ವರದಿಯನ್ನು ಪರಿಶೀಲಿಸಿ, ಶೇ.20ರಷ್ಟು ತಿದ್ದುಪಡಿ ಮಾಡಿಸಿರುವುದು ಸಾಬೀತಾಗಿದೆ.
ಪ್ರಧಾನಿಯವರೂ ಪಾಲುದಾರರಾಗಬೇಕಿದ್ದ ವರದಿಯಲ್ಲಿ ಪ್ರಮುಖರ ಹೆಸರನ್ನು ಕೈಬಿಟ್ಟಿರುವುದು ನಾಚಿಕೆಗೇಡು ಎಂದು ಛೇಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

