ಶಿವಮೊಗ್ಗ ಜಿಲ್ಲೆಯಲ್ಲಿ ಸಣ್ಣ ಪಕ್ಷಗಳ ಮಿಂಚು
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.30
ಪ್ರಮುಖ ಪಕ್ಷಗಳನ್ನು ಹೊರತುಪಡಿಸಿ ಇತರೆ ಪಕ್ಷಗಳ ಅಭ್ಯರ್ಥಿಗಳೂ ಸಹ ಮತದಾರರ ಗಮನ ಸೆಳೆಯುತ್ತಿದ್ದಾರೆ. ಈ ಬಾರಿ ಹಳೆಯ ಪಕ್ಷಗಳಲ್ಲದೇ ಹಲವು ಹೊಸ ಪಕ್ಷಗಳ ಅಭ್ಯರ್ಥಿಗಳೂ ಕಣದಲ್ಲಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಇವರು ಮಲೆನಾಡಿನಲ್ಲಿ ತಾವೇ ಎಂದು ಮೆರೆಯುತ್ತಿರುವ ಹಲವು ಅಭ್ಯರ್ಥಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಬಹಳಷ್ಟು ಪಕ್ಷಗಳು ಪರಿಚಿತವೇ. ಜತೆಗೆ ಶಿವಮೊಗ್ಗದ ಜನತೆ ಕಂಡು ಕೇಳರಿಯದ ಪಕ್ಷಗಳು ಈ ಬಾರಿ ಕಣದಲ್ಲಿವೆ. ಈ ಪಕ್ಷದಿಂದ ಕಣಕ್ಕಿಳಿದಿರುವವರು ಬಹುತೇಕ ಹೊಸಬರೇ ಆಗಿದ್ದಾರೆ.
ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿಎಸ್ ಹೊರತುಪಡಿಸಿ ವಿವಿಧ ಪಕ್ಷಗಳ 22 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ರಾಮುಲು ಹವಾ: ಬಿಎಸ್ಆರ್ ಕಾಂಗ್ರೆಸ್ ಪಕ್ಷವು ಈ ಮೊದಲು ಎಲ್ಲಾ ಕ್ಷೇತ್ರದಿಂದಲೂ ಕಣಕ್ಕಿಳಿಯಲು ನಿರ್ಧರಿಸಿತ್ತು. ಆದರೆ, ಚುನಾವಣೆ ಹತ್ತಿರ ಬರುತ್ತಿದ್ದಂತೆ ಪಕ್ಷದ ಮುಖಂಡರಿಗೆ ಕಾರ್ಯಕರ್ತರನ್ನು ಜತೆಗೆ ಹಿಡಿದಿಟ್ಟುಕೊಳ್ಳಲು ಆಗಲಿಲ್ಲ. ಸ್ವಾಭಿಮಾನಿ ಯಾತ್ರೆ ಸಂದರ್ಭದಲ್ಲಿ ಶ್ರೀರಾಮುಲು ಅವರು ಜಿಲ್ಲೆಗೆ ಭೇಟಿ ನೀಡಿ ಬೃಹತ್ ಸಮಾವೇಶ ನಡೆಸಿದ್ದರು. ಅದೂ ಫಲ ನೀಡಲಿಲ್ಲ.
ರಾಜ್ಯಮಟ್ಟದಲ್ಲಿ ಶಿವಮೊಗ್ಗದವರೇ ಆದ ಕೆ.ಆರ್. ವೆಂಕಟೇಶ್ ಅವರು ಯುವ ಘಟಕದ ರಾಜ್ಯ ಅಧ್ಯಕ್ಷ ಸ್ಥಾನ ತ್ಯಜಿಸಿ ಕೆಜೆಪಿ ಸೇರಿದರು. ಜಿಲ್ಲಾ ಮಟ್ಟದಲ್ಲಿಯೂ ಸಹ ಹಲವು ಪ್ರಮುಖರು ವಿವಿಧ ಪಕ್ಷಕ್ಕೆ ವಲಸೆ ಹೋದರು.
ಬಹಳ ಪ್ರಮುಖವಾಗಿ ಶಿಕಾರಿಪುರದಲ್ಲಿ ಕಣಕ್ಕಿಳಿದಿದ್ದ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಫಕೀರಪ್ಪ ಅವರು ಮತದಾನ ಕೆಲವೇ ದಿನಗಳಿರುವಂತೆ ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ದೊಡ್ಡ ಪೆಟ್ಟಾಗಿದೆ.
ಜಿಲ್ಲೆಯ ಅಭ್ಯರ್ಥಿಗಳಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಆಶಾಕಿರಣವಾಗಿರುವುದು ತೀರ್ಥಹಳ್ಳಿ ಕ್ಷೇತ್ರದ ಅಭ್ಯರ್ಥಿ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೋಕ್ ಮೂರ್ತಿ. ಆದರೂ ಅವರು ಭಾರಿ ಪೈಪೋಟಿ ಎದುರಿಸಬೇಕಾಗಿದೆ.
ಇನ್ನು ಭದ್ರಾವತಿಯಲ್ಲಿ ಬಾಲಕೃಷ್ಣ. ಎಂ, ಸೊರಬದಲ್ಲಿ ಒಮ್ಮೆ ಬಂಗಾರಪ್ಪ ಅವರ ವಿರುದ್ಧ ಸ್ಪರ್ಧಿಸಿ ಗಣನೀಯ ಸಾಧನೆ ಮಾಡಿದ್ದ ಬಾಸೂರು ಚಂದ್ರಪ್ಪಗೌಡ, ಸಾಗರದಲ್ಲಿ ಗಣೇಶ್ ಬೇಬೆಳ್ಳಿ ಕಣದಲ್ಲಿದ್ದಾರೆ.
ಶಿವಮೊಗ್ಗ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿಲ್ಲ.
ಹಿಂದುಳಿದ ಶಕ್ತಿ: ಬಹುಜನ ಸಮಾಜ ಪಕ್ಷವು ಜಿಲ್ಲೆಯಲ್ಲಿ ಹಿಂದುಳಿದ ಶಕ್ತಿಯನ್ನು ಮತವಾಗಿ ಪರಿವರ್ತಿಸಲು ಪ್ರಯಾಸ ಪಡುತ್ತಿದೆ. ಏಕೈಕ ನಿರೀಕ್ಷೆ ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದ ವೀರೇಶ್ ಕ್ಯಾತಿನಕೊಪ್ಪ. ಆದರೆ, ಪರಿಸ್ಥಿತಿ ಸುಲಭವಾಗಿಲ್ಲ.
ಭದ್ರಾವತಿಯಲ್ಲಿ ಸುರೇಶ್, ತೀರ್ಥಹಳ್ಳಿಯಲ್ಲಿ ಕುಣಾಜಿ ಮಂಜುನಾಥ್, ಸೊರಬದಲ್ಲಿ ಗುಡ್ಡಪ್ಪ, ಸಾಗರದಲ್ಲಿ ಕೆ.ಎನ್. ವೆಂಕಟೇಶ್, ಶಿಕಾರಿಪುರದಲ್ಲಿ ಶೇಖರಪ್ಪ ಎಚ್. ಕಣದಲ್ಲಿದ್ದಾರೆ. ಶಿವಮೊಗ್ಗದಲ್ಲಿ ಕಣದಲ್ಲಿಲ್ಲ.
ಸಂಯುಕ್ತ ಬಲ: ಜಿಲ್ಲೆಯವರೇ ಆದ ಮುಖ್ಯಮಂತ್ರಿ ಜೆ.ಎಚ್. ಪಟೇಲರು ರಾಜ್ಯದಲ್ಲಿ ಹುಟ್ಟುಹಾಕಿದ್ದ ಸಂಯುಕ್ತ ಜನತಾದಳ ಅಸ್ತಿತ್ವಕ್ಕೆ ಹೋರಾಟ ನಡೆಸುತ್ತಿದೆ. ಪ್ರಭಲ ಪಕ್ಷಗಳ ಪೈಪೋಟಿ ಎದುರು ಕಾರ್ಯಕರ್ತರ ಕೊರತೆ ಎದುರಿಸುತ್ತಿದೆ. ಈ ನಡುವೆಯೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ ಯಾದವ್ ಅವರು ಸಾಗರಕ್ಕೆ ಬಂದು ತಮ್ಮ ಅಭ್ಯರ್ಥಿ ದಿನೇಶ್ ಬರದವಳ್ಳಿ ಪರ ಪ್ರಚಾರ ನಡೆಸಿ ಅಚ್ಚರಿ ಮೂಡಿಸಿದರು.
ಸೊರಬದ ದಂಡಾವತಿ ವಿರೋಧಿ ಹೋರಾಟದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ ನ್ಯಾಯವಾದಿ ಕಲ್ಪನಾ ಎ. ನಾಡಿಗ್ ಶರ್ಮಾ ಅವರು ಭದ್ರಾವತಿಯಿಂದ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಚಂದ್ರಾನಾಯ್ಕಾ(ಗ್ರಾಮಾಂತರ), ಮಂಜುನಾಥ್ ಪಟೇಲ್ ತ್ಯಾಜವಳ್ಳಿ (ಶಿವಮೊಗ್ಗ), ಬೆಹಳ್ಳಿ ನಾಗರಾಜು (ತೀರ್ಥಹಳ್ಳಿ), ಕೆ.ಎಸ್. ಸತ್ಯಾನಾರಾಯಣ (ಸೊರಬ) ಕಣದಲ್ಲಿದ್ದಾರೆ.
ಸ್ಪರ್ಧೆಯ ಮಿಂಚು: ಜಿಲ್ಲೆಯಲ್ಲಿ ಗಮನ ಸೆಳೆದಿರುವುದು ಸೋಷಿಯಲಿಸ್ಟ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷ.
ಮುಸ್ಲಿಂ ಮತದಾರರನ್ನೇ ದೃಷ್ಟಿಯಲ್ಲಿಟ್ಟುಕೊಂಡು ರಾಜಕೀಯ ಮಾಡುತ್ತಿರುವ ಈ ಪಕ್ಷವು ಶಿವಮೊಗ್ಗ ನಗರಸಭೆಗೆ ಒಬ್ಬ ಪ್ರತಿನಿಧಿಯನ್ನು ಕಳುಹಿಸಿದೆ. ಈ ಯಶಸ್ಸಿನ ಆಧಾರದ ಮೇಲೆ ಶಿವಮೊಗ್ಗ ನಗರ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇತರೆ ಪಕ್ಷಗಳ ಅಭ್ಯರ್ಥಿಗಳು ಈ ಪಕ್ಷದ ಚಟುವಟಿಕೆಯನ್ನು ಗಮನಿಸಿಯೇ ತಮ್ಮ ಕಾರ್ಯತಂತ್ರ ರೂಪಿಸುತ್ತಿರುವುದು ಸುಳ್ಳಲ್ಲ.
ಒಂದು ಓಟು, ಜತೆಗೆ ಒಂದು ನೋಟು ಕೊಡಿ ಎಂದು ಪ್ರಚಾರ ಮಾಡುತ್ತಿರುವ ಲೋಕಸತ್ತಾ ಪಕ್ಷದ ಅಭ್ಯರ್ಥಿಗಳು ಎರಡು ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ. ಭದ್ರಾವತಿಯಲ್ಲಿ ಎಸ್. ವೆಂಕಟೇಶ್ ಮೂರ್ತಿ ಸ್ಪರ್ಧೆಯಲ್ಲಿದ್ದರೆ, ಸಾಗರ ಕ್ಷೇತ್ರದಲ್ಲಿ ಏಕಾಂಕಿ ಹೋರಾಟಗಳ ಸರದಾರ ಟಿ.ಆರ್. ಕೃಷ್ಣಪ್ಪ ಸ್ಪರ್ಧಿಸುತ್ತಿದ್ದಾರೆ.
ಕಾರ್ಮಿಕ ಚಳವಳಿ ತೀವ್ರವಾಗಿರುವ ಭದ್ರಾವತಿಯಲ್ಲಿ ಸಿಪಿಐ (ಮಾಕ್ಸಿಸ್ಟ್) ಪಕ್ಷದ ಮೂರ್ತಿ ಪಿ. ಮತದಾರರ ಬೆಂಬಲ ನಿರೀಕ್ಷಿಸಿದ್ದರೆ, ರಾಮವಿಲಾಸ್ ಪಾಸ್ವಾನ್ ನೇತೃತ್ವದ ಲೋಕಜನಶಕ್ತಿ ಪಕ್ಷದ ಅಭ್ಯರ್ಥಿಯಾಗಿ ಬಿ.ಆರ್. ಕರಿಬಸಪ್ಪ ಅವರು ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
-ಹೊನ್ನಾಳಿ ಚಂದ್ರಶೇಖರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

