ಶಿವಮೊಗ್ಗ

ಬಿಡದ ವರ್ಷಧಾರೆಗೆ ತತ್ತರಿಸಿದ ಸಾಗರ

Published On :

ಸಾಗರ: ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಇಡೀ ತಾಲೂಕು ತತ್ತರಗೊಂಡಿದೆ.
ಗುರುವಾರ ಬೆಳಗ್ಗೆ 10 ಗಂಟೆಯವರೆಗೆ ಎಡಬಿಡದೆ ಸುರಿದ ಮಳೆಯಿಂದಾಗಿ ಪಟ್ಟಣದ ಬಹುತೇಕ ರಸ್ತೆಗಳಲ್ಲಿ ನೀರು ತುಂಬಿಕೊಂಡಿತ್ತು. ಅನೇಕ ಮನೆಗಳಿಗೆ ನೀರು ನುಗ್ಗಿ ಗೋಡೆ ಕುಸಿದಿದೆ. ಕೆಲವರು ನೀರುನೊಳಗೆ ಸಿಲುಕಿಕೊಂಡು ಸಾರ್ವಜನಿಕರ ಸಮಯಪ್ರಜ್ಞೆಯಿಂದ ಅಪಾಯದಿಂದ ಪಾರು ಮಾಡಿದ ಘಟನೆಯೂ ನಡೆದಿದೆ.
ಪಟ್ಟಣದ ಮಾರ್ಕೆಟ್ ರಸ್ತೆ, ಇಕ್ಕೇರಿ ರಸ್ತೆ, ಎಸ್ಬಿಎಂ ರಸ್ತೆ, ಕೆಳದಿರಸ್ತೆಗಳಲ್ಲಿ ನೀರು ತುಂಬಿಕೊಂಡು ಜನ ಹಾಗೂ ವಾಹನ ಸಂಚಾರ ದುಸ್ತರವಾಗಿತ್ತು. ವರದಾನದಿಯಲ್ಲಿ ಏಕಾಏಕಿಯಾಗಿ ಬಂದ ಪ್ರವಾಹದಿಂದ ಶ್ರೀರಾಮಪುರ ಬಡಾವಣೆಯಲ್ಲಿ ವುಡನ್ ವರ್ಕ್ಸ್ವೊಂದಕ್ಕೆ ನೀರು ನುಗ್ಗಿದ ಪರಿಣಾಮ ಒಳಗೆ ಕೆಲಸ ಮಾಡುತ್ತಿದ್ದ ಚನ್ನಯ್ಯ ಆಚಾರ್ ಹಾಗೂ ಶಶಿ ಎಂಬುವವರು ಸಿಲುಕಿದ್ದರು. ನಗರಸಭೆ ಮಾಜಿ ಸದಸ್ಯ ಡಿ. ತುಕಾರಾಂ ಹಾಗೂ ಸ್ನೇಹಿತರು ಅವರನ್ನು ನೀರಿನ ಸೆಳೆತದಿಂದ ಪಾರು ಮಾಡಿದರು.
ಯಂತ್ರೋಪಕರಣಗಳು ಜಲಾವೃತ: ಈ ಸಂದರ್ಭದಲ್ಲಿ ಕಾಂಪೋಂಡ್ ಕುಸಿದಿದ್ದರಿಂದ ಚನ್ನಯ್ಯ ಆಚಾರ್ ಹಾಗೂ ಶಶಿಯವರ ಕಾಲಿನ ಮೇಲೆ ಕಲ್ಲುಬಿದ್ದು ಗಾಯಗಳಾಗಿವೆ. ಅಂಗಡಿಯಲ್ಲಿದ್ದ ಲಕ್ಷಾಂತರ ರುಪಾಯಿ ಮೌಲ್ಯದ ಯಂತ್ರೋಪಕರಣಗಳು ಜಲಾವೃತಗೊಂಡಿದ್ದಲ್ಲದೆ ಮರಮಟ್ಟುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ.
ಮನೆಗೆ ನುಗ್ಗಿದ ನೀರು: ಜೋಸೆಫ್ ನಗರದಲ್ಲಿ ಜೈನುಲ್ಲಾ ಎಂಬುವವರ ಮನೆಯ ಗೋಡೆ ಭಾಗಶ- ಕುಸಿದಿದ್ದರೆ, ಎಸ್.ಎನ್.ನಗರ ಹೊಸಬಡಾವಣೆಯ ಇಂದಿರಾಗಾಂಧಿ ಕಾಲೇಜು ಸಮೀಪ ಸೈಕಲ್ ಶಾಪ್ ಮುನ್ನಾ ಹಾಗೂ ಮುಜಾಹಿದ್ದೀನ್ ಎಂಬುವವರ ಮನೆಯ ಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ. ಘಟನೆ ವೇಳೆ ಮನೆಯಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಾಂಧಿನಗರದಲ್ಲಿಯೂ ಮೂರ್ನಾಲ್ಕು ಮನೆಯೊಳಗೆ ನೀರು ನುಗ್ಗಿದೆ. ಭದ್ರಕಾಳಿ ದೇವಸ್ಥಾನದ ಸಮೀಪ ವರದಾನದಿ ಪ್ರವಾಹದಿಂದಾಗಿ ಪೊಲೀಸ್ ಬಸವರಾಜ್, ಪ್ರಶಾಂತ ಹುಲೇಕಲ್ಲು, ಸರ್ವೋತ್ತಮ ಪ್ರಭು ಎಂಬುವವರ ಮನೆಗೆ ನೀರು ನುಗ್ಗಿದೆ.
ಕಂಬಳಿಕೊಪ್ಪ ಗ್ರಾಮದ ಕೆರೆಯ ಕೋಡಿ ಒಡೆದ ಪರಿಣಾಮ ನೀರು ರಸ್ತೆಯ ಮೇಲೆ ಹರಿಯಲಾರಂಭಿಸಿದೆ. ಜೊತೆಗೆ ಅಕ್ಕಪಕ್ಕದ ಗದ್ದೆ ಹಾಗೂ ಅಡಕೆ ತೋಟಗಳಿಗೂ ನೀರು ನುಗ್ಗಿದೆ. ಪಡವಗೋಡು ಹಾಗೂ ಚಿಪ್ಪಳಿ ಲಿಂಗದಹಳ್ಳಿ ಗ್ರಾಮದಲ್ಲಿಯೂ ಕೆರೆ ನೀರು ಉಕ್ಕಿ ರಸ್ತೆ ಮೇಲೆ ಹರಿಯುತ್ತಿದೆ. ಪಟ್ಟಣದ ಗಣಪತಿಕರೆ ಉಕ್ಕಿ ಅಕ್ಕಪಕ್ಕದ ಜಮೀನುಗಳಲ್ಲಿ ನೀರು ತುಂಬಿಕೊಂಡಿದೆ.
ಆನಂದಪುರಂ ಹೋಬಳಿಯ ಕೊಲ್ಲಿಬಚ್ಚಲು ಡ್ಯಾಂ ತುಂಬಿ ರಾಷ್ಟ್ರೀಯ ಹೆದ್ದಾರಿ ಮೇಲೆ ನೀರು ಹರಿಯಲಾರಂಭಿಸಿದೆ. ಇಲ್ಲಿನ ಸಿದ್ದೇಶ್ವರ ಕಾಲೋನಿಯಲ್ಲಿ ರಸ್ತೆಯ ನೀರು ಮನೆಗಳಿಗೆ ನುಗ್ಗಿದೆ. ಕಾಲೋನಿಯ ಗುಂಡಣ್ಣ, ಮಾರುತಿ, ಈಶ್ವರ, ನಾಗರಾಜ್, ಅಬ್ಬಾಸ್ ಎಂಬುವವರ ಮನೆಗೆ ನೀರು ನುಗ್ಗಿದ್ದು, ಮನೆಯೊಳಗಿದ್ದ ವಸ್ತುಗಳು ನೀರುಪಾಲಾಗಿದೆ.
ಬೆಳೆ ಹಾನಿ: ಆಚಾಪುರ ಗ್ರಾಪಂ ವ್ಯಾಪ್ತಿಯ ಹೊಳ್ಳೂರು, ಗಿಳಾಲಗುಂಡಿ, ಹೊಸೂರು ಗ್ರಾಪಂ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪ, ಶಾಂತಿನಗರ ಇನ್ನಿತರ ಭಾಗಗಳಲ್ಲಿ ಜಮೀನಿಗೆ ನೀರು ನುಗ್ಗಿದ್ದು, ಅಪಾರ ಬೆಳೆಹನಿ ಸಂಭವಿಸಿದೆ.
ತಾಳಗುಪ್ಪ ಹೋಬಳಿಯಲ್ಲಿ ಸಾವಿರಾರು ಎಕರೆ ಕೃಷಿಭೂಮಿ ವರದಾನದಿ ಪ್ರವಾಹದಿಂದ ಜಲಾವೃತಗೊಂಡಿದೆ. ಕಾನ್ಲೆ - ಸೈದೂರು ಸಂಪರ್ಕ ಸೇತುವೆಯ ಮೇಲೆ ಪ್ರವಾಹದ ನೀರು ಬಂದಿದ್ದರಿಂದ ಸಂಪರ್ಕ ಕಡಿತಗೊಂಡಿದೆ. ಬೀಸನಗದ್ದೆ ಗ್ರಾಮದ ಸುತ್ತಲೂ ನೀರಿನ ಪ್ರಮಾಣ ಜಾಸ್ತಿಯಾಗಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.