ಬೇಕಾಬಿಟ್ಟಿ ಗ್ರಾಮ ಸಹಾಯಕ ಹುದ್ದೆ ನೇಮಕಾತಿ: ಆರೋಪ
ಕ.ಪ್ರ.ವಾರ್ತೆ, ಸಾಗರ, ಆ.1
ಗ್ರಾಮ ಸಹಾಯಕ ಹುದ್ದೆ ನೇಮಕಾತಿಯಲ್ಲಿ ಸರ್ಕಾರದ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ. ಬೇಕಾಬಿಟ್ಟಿಯಾಗಿ ಆಯ್ಕೆ ಪ್ರಕ್ರಿಯೆ ನಡೆಯುವುದನ್ನು ತಡೆಹಿಡಿಯಬೇಕು ಎಂದು ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ತಹಸೀಲ್ದಾರ್ ಮೂಲಕ ಗ್ರಾಮ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಈಗಾಗಲೇ ಅರ್ಜಿ ಆಹ್ವಾನಿಸಿದ್ದು, ಆಯ್ಕೆ ಪ್ರಕ್ರಿಯೆ ಆ.2ಕ್ಕೆ ಪ್ರಾರಂಭಗೊಳ್ಳಲಿದೆ. ತಾಲೂಕಿನ ವಿವಿಧ ವೃತ್ತಗಳಲ್ಲಿ 37 ಜನ ಗ್ರಾಮ ಸಹಾಯಕ ಹುದ್ದೆಗೆ ಸಾವಿರಾರು ಜನರು ಅರ್ಜಿ ಸಲ್ಲಿಸಿದ್ದು, ಪ್ರತಿ ವೃತ್ತದಿಂದ ನಾಲ್ಕು ಜನರಿಗೆ ಈಗಾಗಲೇ ಸಂದರ್ಶನಕ್ಕೆ ಸಂಬಂಧಪಟ್ಟ ಪತ್ರಗಳನ್ನು ತಹಸೀಲ್ದಾರ್ ಕಚೇರಿಯಿಂದ ರವಾನಿಸಲಾಗಿದೆ ಎಂದು ಪ್ರತಿಭಟನಾಕಾರರ ತಿಳಿಸಿದರು.
19 ವರ್ಷದವರಿಗೂ ಸಂದರ್ಶನ: ಆದರೆ ಸಂದರ್ಶನಕ್ಕೆ ಹಾಜರಾಗುವಂತೆ ಅರ್ಜಿ ಸಲ್ಲಿಸಿದ ಅನೇಕರು ಆಯಾ ವೃತ್ತಕ್ಕೆ ಸೇರಿದವರಲ್ಲ. ಜೊತೆಗೆ ವಯಸ್ಸಿನ ಮಿತಿಯನ್ನು ಪರಿಗಣಿಸಿಲ್ಲ. ಜಾತಿವಾರು ಆಯ್ಕೆ ಪ್ರಕ್ರಿಯೆ ನಡೆಸುವ ಸೂಚನೆ ಇದ್ದರೂ ತಹಸೀಲ್ದಾರ್ ಕಚೇರಿಯಲ್ಲಿ ನಿಯಮವನ್ನು ಉಲ್ಲಂಘಿಸಲಾಗಿದೆ. ಅರ್ಜಿದಾರರ ವಯಸ್ಸು 25 ಮೀರಿರಬೇಕು ಎಂಬ ನಿಯಮವಿದ್ದರೂ 19 ವರ್ಷದವರನ್ನು ಸಹ ಸಂದರ್ಶನಕ್ಕೆ ಹಾಜರಾಗುವಂತೆ ಪತ್ರ ಕಳಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಅನುಮಾನಗಳಿಗೆ ಕಾರಣ: ಸ್ಥಳೀಯವಾಗಿ ವಾಸಿಸುವವರು ಅರ್ಜಿಯನ್ನು ಸಲ್ಲಿಸಿದ್ದರೂ ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಆಯಾ ವೃತ್ತಕ್ಕೆ ಸಂಬಂಧಪಟ್ಟವರನ್ನು ಹುದ್ದೆ ನೇಮಕಾತಿ ಸಂದರ್ಭದಲ್ಲಿ ಪರಿಗಣಿಸಬೇಕು ಎಂಬ ಸ್ಪಷ್ಟವಾದ ನಿಯಮವಿದ್ದರೂ ಬೇರೆ ವೃತ್ತದವರನ್ನು ಸಂದರ್ಶನಕ್ಕೆ ಆಹ್ವಾನಿಸಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ನಿಯಮಾವಳಿ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆಯದೆ ಇರುವುದರಿಂದ ಆ.2ರಂದು ನಡೆಯಲಿರುವ ಸಂದರ್ಶನವನ್ನು ತಡೆಹಿಡಿದು ಅರ್ಹರನ್ನು ನೇಮಕ ಮಾಡಿಕೊಳ್ಳಲು ಸೂಚನೆ ನೀಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ರಾಜಶೇಖರ ಗಾಳಿಪುರ, ಸತೀಶ್, ಮಂಜಪ್ಪ ಬರದವಳ್ಳಿ, ಪ್ರಕಾಶ್ಗೌಡ, ಆನಂದ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

