ಉಪ್ಪಾರ ಸಮುದಾಯಕ್ಕೆ 15 ಲಕ್ಷ
ಕ.ಪ್ರ.ವಾರ್ತೆ ಶಿವಮೊಗ್ಗ ಆ.4
ಉಪ್ಪಾರ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರದಿಂದ 15 ಲಕ್ಷ ಅನುದಾನ ನೀಡಲಾಗುವುದು. ಮುಂದಿನ ಬಜೆಟ್ನಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಮತ್ತಷ್ಟು ಹಣ ಮೀಸಲಿಡಲು ಪ್ರಯತ್ನಿಸಲಾಗುವುದು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಭರವಸೆ ನೀಡಿದರು.
ಶ್ರೀ ಭಗಿರಥ ಉಪ್ಪಾರ ಯುವಸೇನೆ ಭಾನುವಾರ ನಗರದ ಉಪ್ಪಾರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಶ್ರೀ ಭಗಿರಥ ಉಪ್ಪಾರ ಯುವಸೇವೆ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೇಲೆತ್ತಬೇಕು: ದೇಶದಲ್ಲಿ ಮೇಲ್ವರ್ಗದ ಜನ ಎನಿಸಿಕೊಂಡವರು ಏನು ಬೇಕೋ ಅದನ್ನು ಪಡೆದುಕೊಳ್ಳುತ್ತಲೇ ಇದ್ದಾರೆ. ಆದರೆ, ಇವರಿಂದ ಕೆಳವರ್ಗದ ಜನರನ್ನು ಮೇಲೆತ್ತುವ ಕೆಲಸ ಮಾತ್ರ ಆಗುತ್ತಿಲ್ಲ. ಆದರಿಂದ ಮೇಲ್ವರ್ಗದ ಜನರಿಂದ ತುಳಿತಕ್ಕೊಳಗಾದ ಜನರನ್ನು ಮೇಲೆತ್ತುವ ಕೆಲಸ ಆಗಬೇಕು. ಅದು ಕರ್ತವ್ಯ ಕೂಡ ಹೌದು ಎಂದರು.
ಕಳೆದ 5 ಸಾವಿರ ವರ್ಷಗಳಿಂದ ಸಮಾಜದಲ್ಲಿ ಕೆಳವರ್ಗವನ್ನು ಕಡೆಗಣಿಸಲಾಗಿದ್ದು, ಇವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಎಲ್ಲರಿಂದ ಆಗಬೇಕೆಂಬ ಅವರು, ದಶಕಗಳ ಹಿಂದೆ ಸಮಾಜದಲ್ಲಿ ತುಳಿತಕ್ಕೊಳಗಾದ ಸಮುದಾಯವನ್ನು ಅಂಬೇಡ್ಕರ್, ಬಸವಣ್ಣ ಮತ್ತು ಬುದ್ಧರಂತಹ ಮಹಾನ್ ವ್ಯಕ್ತಿಗಳು ಮೇಲೆತ್ತುವ ಕೆಲಸ ಮಾಡಿದ್ದರು. ಆದರೆ, ಅವರ ಪರಿವರ್ತನ ಹಾದಿ ಪೂರ್ಣಪ್ರಮಾಣದಲ್ಲಿ ಸಾಗಲಿಲ್ಲ. ಆದರೆ, ಅವರ ತತ್ವಗಳನ್ನು ಇಂದಿನವರು ಅಳವಡಿಸಿಕೊಳ್ಳುವ ಮೂಲಕ ಮುಂದಿನ ದಿನಗಳಲ್ಲಿ ಬದಲಾವಣೆ ತರಬಹುದು ಎಂದು ತಿಳಿಸಿದರು.
ಫ್ಲೆಕ್ಸ್, ಬ್ಯಾನರ್ನಿಂದ ಸಾಧ್ಯವಿಲ್ಲ: ಒಂದು ವೇಳೆ ಅಂಬೇಡ್ಕರ್ ಮತ್ತು ಲೋಹಿಯಾ ಈ ದೇಶಕ್ಕೆ ಲಭ್ಯವಾಗದಿದ್ದರೆ ಏನೆಲ್ಲಾ ಅನಾಹುತಗಳು ಸಂಭವಿಸುತ್ತಿತ್ತು ಎಂದು ಕಲ್ಪನೆ ಮಾಡಿಕೊಂಡರೆ ಭಯವಾಗುತ್ತದೆ ಎಂದ ಅವರು, ಇಂದಿನ ಯುವ ಸಮೂಹ, ಫ್ಲೆಕ್ಸ್, ಬ್ಯಾನರ್ಗಳು ಹಾಕಿಕೊಳ್ಳುವುದರಿಂದ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದರ ಬದಲೂ ಅಂಬೇಡ್ಕರ್ ಚಿಂತನೆಗಳನ್ನೊಳಗೊಂಡ ಪುಸ್ತಕಗಳನ್ನು ಓದುವುದರಿಂದ ಹೊಸ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಚಾಮರಾಜನಗರ ಶಾಸಕ ಪುಟ್ಟರಂಗ ಶೆಟ್ಟಿ, ಉಪ್ಪಾರ ಸಮಾಜ ವಿದ್ಯೆಗೆ ಹೆಚ್ಚು ಆದ್ಯತೆ ನೀಡಬೇಕು. ಮಖ್ಯವಾಹಿನಿಗೆ ಬರುವ ಪ್ರಯತ್ನ ಮಾಡಬೇಕು. ಒಗಟ್ಟಿನಿಂದ ಸಮುದಾಯವನ್ನು ಸಂಘಟಿಸಬೇಕು. ಸದ್ಯದಲ್ಲೇ ಜಾತಿ ಜನಗಣತಿ ಬರಲಿದೆ. ಈ ವೇಳೆ ಸಮುದಾಯದ ಉಪಪಂಗಡಗಳನ್ನು ನಮೂದಿಸದೆ ಉಪ್ಪಾರ ಸಮಾಜ ಎಂದೆ ನಮೂದಿಸಿ ಎಂದು ಕರೆ ನೀಡಿದರು.
ಇದೇ ವೇಳೆ ಹಲವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಶ್ರೀ ಭಗಿರಥ ಉಪ್ಪಾರ ಯುವಸೇನೆಯ ಕೆ. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು. ಜೆಡಿಎಸ್ ಜಿಲ್ಲಾಧ್ಯಕ್ಷ ಶ್ರೀಕಾಂತ್, ನಗರಸಭಾ ಸದಸ್ಯ ನಾಗರಾಜ್ ಕಂಕಾರಿ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಎನ್. ಮಂಜುನಾಥ್, ಕಾಂಗ್ರೆಸ್ ಕಾರ್ಮಿಕ ವಿಭಾಗದ ದೇವೇಂದ್ರಪ್ಪ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

