ಹೆಬ್ಬೆ ತಿರುವು ಯೋಜನೆ: ತಿಂಗಳೊಳಗೆ ಪ್ರಕಟಣೆ
ಕ.ಪ್ರ.ವಾರ್ತೆ , ಕಡೂರು , ಆ.4
ನೀರಾವರಿಗೆ ತಾವು ಪ್ರಥಮ ಆದ್ಯತೆ ನೀಡಲಿದ್ದು ಕಡೂರು ತಾಲೂಕಿನ ಜನರ ಬಹು ದಶಕಗಳ ಕನಸಾಗಿರುವ ಹೆಬ್ಬೆತಿರುವು ಯೋಜನೆ ಜಾರಿಗೆ ಆಗಸ್ಟ್ನಲ್ಲಿಯೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಶಾಸಕ ವೈ.ಎಸ್.ವಿ.ದತ್ತ ಹೇಳಿದರು.
ಕಡೂರು ಪಟ್ಟಣದಲ್ಲಿ ಕಸಾಪ, ಅಡಿಕೆ ಬೆಳೆಗಾರರ ಸಂಘ, ರೋಟರಿ, ಲಯನ್ಸ್, ವಾಣಿಜ್ಯೋದ್ಯಮಿಗಳ ಸಂಘ, ವಕೀಲರ ಸಂಘಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಕಡೂರು ಕ್ಷೇತ್ರದ ಪ್ರಸ್ತುತ ಭವಿಷ್ಯದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಿ ಮಾತನಾಡುತ್ತಿದ್ದರು.
ರು. 50 ಕೋಟಿ ಬಿಡುಗಡೆ: ಸಂವಾದದಲ್ಲಿ ಮಾಜಿ ಪುರಸಭಾಧ್ಯಕ್ಷ ಜನರಲ್ ತಿಮ್ಮಯ್ಯನವರ ಪ್ರಶ್ನೆಗೆ ಉತ್ತರಿಸಿದ ದತ್ತ, ಹೆಬ್ಬೆ ತಿರುವು ಯೋಜನೆ ಸುಮಾರು 50 ಕೋಟಿ ರು. ಬಿಡುಗಡೆಯಾಗುವ ಮೂಲಕ ಪ್ರಕಟಣೆ ಹೊರಬೀಳಲಿದೆ ಎಂದರು.
ಭದ್ರಾ ಮೇಲ್ದಂಡೆ ಯೋಜನೆಯಿಂದ ಯಗಟಿ, ಚೌಳಹಿರಿಯೂರು, ಹಿರೇನಲ್ಲೂರು ಪ್ರದೇಶದಕ್ಕೆ ನೀರು ತರುವ ಪ್ರಯತ್ನ ಮಾಡುತ್ತೇನೆ. ಹೇಮಾವತಿಯಿಂದ ಪಂಚನಹಳ್ಳಿ,ನಿಡುವಳ್ಳಿ ಮತ್ತು ಗಂಗನಹಳ್ಳಿ ಕೆರೆಗಳಿಗೆ ಪೈಪ್ಲೈನ್ ಅಳವಡಿಸಿದ್ದು ಶೀಘ್ರದಲ್ಲಿಯೇ ನೀರು ಬರಲಿದೆ. ಅಲ್ಲದೆ ವಿಷ್ಣುಸಮುದ್ರಕ್ಕೆ ಕರಗಡದಿಂದ ನೀರು ಹರಿಯಲಿದೆ ಎಂದರು.
ಒಳಚರಂಡಿ ವ್ಯವಸ್ಥೆ: ಕಡೂರು ಹಾಗು ಬೀರೂರು ಪಟ್ಟಣಗಳ ಒಳಚರಂಡಿ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದು ಸರ್ಕಾರದಿಂದ ಬೀರೂರು ಪಟ್ಟಣಕ್ಕೆ 15 ಕೋಟಿ ರು. ಮಂಜೂರಾಗಿದೆ. ಅದರಂತೆ ಕಡೂರು ಪಟ್ಟಣಕ್ಕೆ 20 ಕೋಟಿ ರು. ಅವಶ್ಯಕತೆ ಇದ್ದು ಶೀಘ್ರದಲ್ಲಿಯೇ ಮಂಜೂರು ಮಾಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ರೈಲ್ವೆ ಗೂಡ್ಸ್ಶೆಡ್ ಉಳಿಸಿಕೊಳ್ಳುವ ಬಗ್ಗೆ ಮುಂದಿನ 15 ದಿನದೊಳಗೆ ಮೈಸೂರು ರೈಲ್ವೆ ವಿಭಾಗೀಯ ಮತ್ತು ಹುಬ್ಬಳ್ಳಿಯ ರೈಲ್ವೆ ವಿಭಾಗೀಯ ಕಚೇರಿಗೆ ಲಾರಿ ಮಾಲೀಕರನ್ನು ಕರೆದೊಯ್ದು ಶೆಡ್ಡನ್ನು ಕಡೂರಿನಲ್ಲಿಯೇ ಉಳಿಸಲು ಒತ್ತಾಯಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಸಂವಾದ ಕಾರ್ಯಕ್ರಮದಲ್ಲಿ ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಜಿಲ್ಲಾಧ್ಯಕ್ಷ ಎನ್.ಎಸ್.ಶಿವಸ್ವಾಮಿ, ವೈ.ಎಸ್. ರವಿಪ್ರಕಾಶ್, ರೋಟರಿ ಅಧ್ಯಕ್ಷ ಶಿವಾನಂದಯ್ಯ, ಲಯನ್ಸ್ ಅಧ್ಯಕ್ಷ ನರೇಂದ್ರ, ವಕೀಲರ ಸಂಘದ ಅಧ್ಯಕ್ಷ ದೇವರಾಜ್, ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ನಾಗರಾಜ್, ಕಾಫಿ ಭೆಳೆಗಾರರ ಸಂಘದ ಅಧ್ಯಕ್ಷ ಶಿವಶಂಕರಪ್ಪ, ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

