ಶಿವಮೊಗ್ಗ

ಕೊಳೆ ಅಡಕೆ ಸುರಿದು ಪ್ರತಿಭಟನಾ ಸಭೆ

Published On :

ಕ.ಪ್ರ.ವಾರ್ತೆ ಸಾಗರ ಆ.12
ಅಡಕೆ ಕೊಳೆರೋಗದಿಂದ ಆತಂಕಗೊಂಡಿರುವ ಬೆಳೆಗಾರರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತಕ್ಷಣ ಧಾವಿಸಬೇಕು. ಸಾಂಪ್ರದಾಯಿಕ ಅಡಕೆ ಬೆಳೆಗಾರರು ಕೃಷಿಯಿಂದ ವಿಮುಖವಾಗುವ ಮುನ್ನ ಕೊಳೆರೋಗದಿಂದ ಹಾನಿಗೊಳಗಾದ ತೋಟಗಳಿಗೆ ಎಕರೆಗೆ ಹೆಚ್ಚು ಪರಿಹಾರಧನ ವಿತರಿಸಬೇಕು ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್. ಜಯಂತ್ ಒತ್ತಾಯಿಸಿದ್ದಾರೆ.
ಇಲ್ಲಿನ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದಿಂದ ಸೋಮವಾರ ಅಡಕೆ ಕೊಳೆರೋಗಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಸಾಗರ, ಸೊರಬ, ಹೊಸನಗರ ಪ್ರಾಂತ್ಯದ ಅಡಕೆ ಬೆಳೆಗಾರರು ಉಪವಿಭಾಗಾಧಿಕಾರಿ ಕಚೇರಿ ಎದುರು ಕೊಳೆ ಅಡಕೆ ಸುರಿದು ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 13,700 ಎಕರೆ ಅಡಕೆ ತೋಟವಿದ್ದು, ಬಹುತೇಕ ತೋಟಗಳಲ್ಲಿ ಶೇ.100ರಷ್ಟು ಅಡಕೆ ಉದುರಿದೆ. ಬೆಳೆಗಾರರು ತಾವು ದುಡಿದಿದ್ದನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ.
ನಾಚಿಕೆಗೇಡಿನ ಸಂಗತಿ: ಕೊಳೆರೋಗಕ್ಕೆ ಪರಿಹಾರ ನೀಡಲು ಈತನಕ ಬಿಡುಗಡೆಯಾಗಿರುವ ಹಣ ಕೇವಲ 2.37 ಲಕ್ಷ ರುಪಾಯಿ ಎನ್ನುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅಡಕೆ ಬೆಳೆ ಹಾನಿಗೆ ಸಂಬಂಧಪಟ್ಟಂತೆ ನೀಡುವ ಪರಿಹಾರಕ್ಕೆ ಯಾವುದೆ ಮಾನದಂಡವಿಲ್ಲವಾಗಿದೆ. ಇಂತಹ ಅವೈಜ್ಞಾನಿಕ ಮಾನದಂಡ ಇರಿಸಿಕೊಂಡು ಪರಿಹಾರ ನೀಡಿದರೆ ಬೆಳೆಗಾರರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಖಂಡನೀಯ: ಬೆಳೆಗಾರರು ಕಂಗಾಲಾಗಿರುವ ಸಂದರ್ಭದಲ್ಲಿ ಅಧಿಕಾರಿಗಳು ಅವರ ಪರವಾಗಿ ನಿಲ್ಲುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಕೆಲವು ಅಧಿಕಾರಿಗಳು ಬೆಳೆಗಾರರು ಆತಂಕದಲ್ಲಿದ್ದರೂ ತಮ್ಮ ಸ್ವ ಪ್ರತಿಷ್ಟೆ ಮೆರೆಯುತ್ತಿರುವುದು ಖಂಡನೀಯ. ಜನಶಕ್ತಿ ಪ್ರದರ್ಶಿಸದೆ ಹೋದರೆ ಅಧಿಕಾರಿಗಳು ಸಂವಿಧಾನವನ್ನು ಕೊಲೆ ಮಾಡುತ್ತಾರೆ. ಸಾಗರ ಪ್ರಾಂತ್ಯದಲ್ಲಿ ಕೊಳೆಯಿಂದ ಹಾನಿಗೊಳಗಾದ ತೋಟಗಳಿಗೆ ಭೇಟಿ ನೀಡಿ ನಷ್ಟದ ತಯಾರಿಸಿ, ಸೂಕ್ತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂದು ಹೇಳಿದರು.
ಸಹಾಯಧನ ನೀಡಬೇಕು: ಸರ್ಕಾರ ತಕ್ಷಣ ಹೆಕ್ಟೇರ್‌ಗೆ 5 ಸಾವಿರ ರುಪಾಯಿನಂತೆ ಕೊಳೆರೋಗ ಸಿಂಪಡಣೆಗೆ ಸಹಾಯಧನವನ್ನು ನೀಡಬೇಕು. ಕೇಂದ್ರ ಸರ್ಕಾರದ ಗೃಹಸಚಿವಾಲಯದ ಆದೇಶದಂತೆ ಶೇ.50ಕ್ಕೂ ಹೆಚ್ಚು ಬೆಳೆ ನಷ್ಟವಾಗಿದ್ದರೆ ಹೆಕ್ಟೇರ್‌ಗೆ 12 ಸಾವಿರ ರುಪಾಯಿ ಪರಿಹಾರ ನೀಡಲು ಅವಕಾಶವಿದ್ದು, ಅದರಂತೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು. ತೋಟಗಾರಿಕೆ ಇಲಾಖೆಯಿಂದ ಪ್ರತಿ ಅಡಕೆ ಮರದಲ್ಲಿ ಕೊಳೆರೋಗದಿಂದ ನಷ್ಟವಾದ ಅಡಕೆ ಬೆಳೆಯನ್ನು ಅಂದಾಜು ಮಾಡಿಸಬೇಕು. ಹಾನಿಗೊಳಗಾದ ಅಡಕೆಗೆ ಮಾರುಕಟ್ಟೆ ಬೆಲೆಯಂತೆ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಕೆ.ಎಚ್. ಶ್ರೀನಿವಾಸ್ ಮಾತನಾಡಿ, ಬೆಳೆಗಾರರು ಸಂಕಷ್ಟದಲ್ಲಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೆರವಿಗೆ ಬರಬೇಕಾದದ್ದು ಅವರ ಧರ್ಮವಾಗಿದೆ. ಅಡಕೆಯನ್ನೆ ನಂಬಿಕೊಂಡು ಬದುಕುತ್ತಿರುವ ಬೆಳೆಗಾರರು ಬೀದಿಗಳಿದು ಪ್ರತಿಭಟಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. ಈಗಾಗಲೆ ವಿಧಾನಸಭಾಧ್ಯಕ್ಷರು ರೋಗಗ್ರಸ್ತ ತೋಟಗಳಿಗೆ ಭೇಟಿ ನೀಡಿ ಹಾನಿ ಅಂದಾಜಿಸಿದ್ದಾರೆ. ತಕ್ಷಣ ಅವರು ಸರ್ಕಾರಕ್ಕೆ ನಿರ್ದೇಶನ ನೀಡಿ ಪರಿಹಾರದ ಹಣವನ್ನು ಬಿಡುಗಡೆ ಮಾಡಲು ಸೂಚನೆ ನೀಡಬೇಕು ಎಂದು ಹೇಳಿದರು.
ಇಂತಹ ಸ್ಥಿತಿಯಲ್ಲಿ ಬೆಳೆಗಾರರು ಸಂಘಟಿತವಾಗಿ ತಮ್ಮ ಹಕ್ಕುಗಳನ್ನು ದಕ್ಕಿಸಿಕೊಳ್ಳಲು ಹೋರಾಟ ಮಾಡುವ ಅಗತ್ಯವಿದೆ. ಸರ್ಕಾರ ನಮ್ಮ ಮನವಿಗೆ ಸ್ಪಂದಿಸಿ ಪರಿಹಾರಧನವನ್ನು ತಕ್ಷಣ ಬಿಡುಗಡೆ ಮಾಡದಿದ್ದರೆ ಸಾಗರದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿ ಬೆಳೆಗಾರರ ಸಂಕಷ್ಟವನ್ನು ಆಳುವವರಿಗೆ ತಿಳಿಸಿಕೊಡಲಾಗುವುದು. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗೋರಖ್ ಸಿಂಗ್ ವರದಿ ಜಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬೆಳೆಗಾರರ ಸಂಘದ ಪ್ರಮುಖ ವ.ಶಂ. ರಾಮಚಂದ್ರ ಭಟ್, ರಾಧಾಕೃಷ್ಣ, ಕಟ್ಟಿನಕೆರೆ ಸೀತಾರಾಮಯ್ಯ, ಬಿ.ಎಚ್. ರಾಘವೇಂದ್ರ, ಎಂ.ಸಿ. ರತ್ನಾಕರ ಗೌಡ, ಎಲ್.ಟಿ. ತಿಮ್ಮಪ್ಪ, ಈಳಿ ನಾರಾಯಣಪ್ಪ, ಸಿ. ಗೋಪಾಲಕೃಷ್ಣರಾವ್, ಕಲಸೆ ಚಂದ್ರಪ್ಪ, ಕೆ.ಸಿ. ದೇವಪ್ಪ, ಕೆ.ಎಸ್. ಸುಬ್ರಾವ್, ಗಣಪತಿ ಭಟ್, ಇಂದೂಧರಗೌಡ, ವಿಜಯಕುಮಾರ್ ವಿ.ಕೆ., ಜಗದೀಶ್‌ಗೌಡ ಇದ್ದರು.

ಎಕರೆಗೆ 15 ಸಾವಿರ ಪರಿಹಾರ ನೀಡಲು ಚರ್ಚೆ
ಕ.ಪ್ರ.ವಾರ್ತೆ ಸಾಗರ ಆ.12
ಅಡಕೆ ಕೊಳೆ ರೋಗಕ್ಕೆ ಸಂಬಂಧಪಟ್ಟಂತೆ ಎಕರೆಗೆ 15 ಸಾವಿರ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ನೆರೆಪರಿಹಾರಕ್ಕೆ ಸಂಬಂಧಪಟ್ಟಂತೆ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಅಡಕೆ ಕೊಳೆರೋಗದ ಜೊತೆಗೆ ಹಲವು ತೋಟಗಳಲ್ಲಿ ಬೇರುಹುಳು, ಕಾಂಡಕೊರಕ ರೋಗ, ಹಳದಿ ಎಲೆ ರೋಗ ಕಾಣಿಸಿಕೊಂಡಿದೆ. ಈ ಬಗ್ಗೆ ತೋಟಗಾರಿಕೆ ಅಧಿಕಾರಿಗಳಲ್ಲಿ ವರದಿ ಕೇಳಲಾಗಿದ್ದು, ಅವರಿಗೆ ನ್ಯಾಯಸಮ್ಮತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ಧವಿದೆ. ಪರಿಹಾರ ನೀಡಲು ಹಣಕಾಸಿನ ಸಮಸ್ಯೆ ಇಲ್ಲ. ಕೊಳೆರೋಗ ಬಾಧಿತ ತೋಟಗಳಿಗೆ ಬೋರ್ಡೋ ದ್ರಾವಣಕ್ಕೆ ಶೇ.100 ಸಬ್ಸಿಡಿ ಕೊಡುವ ನಿಟ್ಟಿನಲ್ಲಿಯೂ ಗಮನ ಹರಿಸಲಾಗಿದೆ ಎಂದು ಹೇಳಿದರು.
ದೇವಸ್ಥಾನ ಪುನರ್ ನಿರ್ಮಾಣ: ತಾಲೂಕಿನ ವರದಾಮೂಲ ದೇವಸ್ಥಾನವನ್ನು 20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲು ಚಿಂತನೆ ನಡೆಸಲಾಗಿದೆ. ಇದರ ಜೊತೆಗೆ
ಸಾಗರದ ಮಹಾಗಣಪತಿ ದೇವಸ್ಥಾನ ಪುನರ್ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 62 ಲಕ್ಷ ವೆಚ್ಚದ ಯೋಜನೆ ಸಿದ್ಧಪಡಿಸಿದ್ದು, ಈಗಾಗಲೇ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ತಾಂತ್ರಿಕ ಅನುಮೋದನೆ ಸಿಕ್ಕತಕ್ಷಣ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಆನಂದಪುರಂ, ತಾಳಗುಪ್ಪ, ಕಾರ್ಗಲ್ ಹಾಗೂ ಜೋಗದಲ್ಲಿ ಸುಸಜ್ಜಿತ ಪೊಲೀಸ್ ಠಾಣೆ ನಿರ್ಮಾಣದ ಉದ್ದೇಶ ಹೊಂದಲಾಗಿದೆ. ಸಾಗರ ಸೇರಿದಂತೆ ತಾಲೂಕಿನ ಬೇರೆಬೇರೆ ಭಾಗಗಳಲ್ಲಿ ಶಿಥಿಲಾವಸ್ಥೆಯಲ್ಲಿರುವ ಪೊಲೀಸ್ ವಸತಿಗೃಹ ಪುನರ್ ನಿರ್ಮಾಣ ಹಾಗೂ ರಿಪೇರಿಗೆ ಯೋಜನೆ ಸಿದ್ಧಪಡಿಸಿದ್ದು, ಅದನ್ನು ಲೋಕೋಪಯೋಗಿ ಇಲಾಖೆ ಮೂಲಕ ನಿರ್ವಹಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ರಸ್ತೆ ರಿಪೇರಿ ಕಾರ್ಯ: ಸಾಗರ- ಹೊಸನಗರ ವ್ಯಾಪ್ತಿಯಲ್ಲಿ ವಿಪರೀತ ಮಳೆಯಿಂದ ಹಾನಿಗೊಳಗಾದ ರಸ್ತೆಗಳನ್ನು ರಿಪೇರಿ ಮಾಡುವ ಕಾರ್ಯ ತಕ್ಷಣ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಡಾ.ಬಿ. ಉದಯಕುಮಾರ್ ಶೆಟ್ಟಿ, ತಹಸೀಲ್ದಾರ್ ಆರ್. ರಾಜಣ್ಣ, ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಡಿ.ಕೆ. ತಿಮ್ಮಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಡಾ. ಸದಾಶಿವ,
ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಸದಸ್ಯರಾದ ಪ್ರಕಾಶ್ ಲ್ಯಾವಿಗೆರೆ, ಹರೀಶ್ ಗಂಟೆ, ಜಿಲ್ಲಾ ಪಂಚಾಯಿತಿ ಸದಸ್ಯ ರತ್ನಾಕರ ಹೊನಗೋಡು, ಲಲಿತಾ ನಾರಾಯಣ್, ಪದ್ಮಾವತಿ ಚಂದ್ರಕುಮಾರ್, ಸುಮಂಗಲ ರಾಮಕೃಷ್ಣ ಇನ್ನಿತರರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.