ಶಿವಮೊಗ್ಗ

ಮಲೆನಾಡಿಗೆ ಅಪ್ಪಳಿಸಿದ ಕೊಳೆ ರೋಗ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಆ.16
ಮಲೆನಾಡಿನ ಕರಾವಳಿಯಾದ್ಯಂತ ಈಗ ಯುದ್ಧಾನಂತರದ ಸ್ಥಿತಿ. ಇದು ಜಲಯುದ್ಧ. ಯಾವತ್ತೂ ಬಾರದಷ್ಟು ಮಳೆ ಬಂದಿರುವುದರಿಂದ ಯುದ್ಧಭೂಮಿಯಲ್ಲಿ ಗಾಯಗೊಂಡಿರುವ ಸೈನಿಕರು ಬಿದ್ದಿರುವಂತೆ ಎಲ್ಲೆ ನೋಡಿದರಲ್ಲಿ ನೆಲಕ್ಕುಳಿದ ಮರ, ಉದುರುತ್ತಿರುವ ಕಾಯಿ, ಬಾಗಿದ ಸಸಿಗಳು ಕಾಣುತ್ತಿವೆ. ಕೊಳೆರೋಗವೆಂಬ ಶತ್ರು ಈಗ ವಿಜೃಂಬಿಸುತ್ತಿದೆ. ಅಡಕೆ ಬೆಳೆ ಅತ್ಯಂತ ಹೆಚ್ಚು ಹಾನಿಗೀಡಾಗಿದೆ.
ಇನ್ನು ಅಡಕೆ ಉಳಿಸಿಕೊಳ್ಳುವುದಂತೂ ಅಸಾಧ್ಯದ ಮಾತು. ಒಮ್ಮೆ ಕೊಳೆ ರೋಗ ಬಂತೆಂದರೆ ಮುಂದಿನ ಒಂದು ವರ್ಷ ಫಸಲು ಬರುವುದಿಲ್ಲ. ಮರವನ್ನಾದರೂ ಉಳಿಸಿಕೊಳ್ಳೋಣವೆಂದು ತೀರ್ಮಾನಿಸಿ ಔಷಧಿ ಸಿಂಪರಣೆ ಮಾಡಲು ಹೊರಟರೆ ಮಳೆ ಅವಕಾಶವನ್ನೇ ಕೊಡುತ್ತಿಲ್ಲ.
ಮಲೆನಾಡಿನಲ್ಲಿ ಮಳೆಯಾಯಿತೆಂದರೆ ಇಡೀ ರಾಜ್ಯಕ್ಕೆ ಖುಷಿ. ಏಕೆಂದರೆ ಬಹುತೇಕ ಮಲೆನಾಡಿನಲ್ಲೇ ಹುಟ್ಟುವ ನದಿಗಳು ತುಂಬಿ ಹರಿಯುತ್ತವೆ. ಕೆರೆಕಟ್ಟೆಗಳು ತುಂಬುತ್ತವೆ. ಜಲಾಶಯಗಳು ಭರ್ತಿಯಾಗುತ್ತವೆ. ಈ ಭಾರಿ ಪರಿಸ್ಥಿತಿ ವಿಚಿತ್ರ. ನಾಲ್ಕು ತಿಂಗಳಲ್ಲಿ ಬರಬೇಕಿತ್ತ ಮಳೆ ಎರಡೇ ತಿಂಗಳಲ್ಲಿ ಸುರಿದಿದೆ. ಜಲಾಶಯಗಳು ತಿಂಗಳು ಮುಂಚೆಯೇ ಭರ್ತಿಯಾಗಿವೆ.
ಆದರೆ, ಮಲೆನಾಡಿನ ಪರಿಸ್ಥಿತಿ ಮಾತ್ರ ಭೀಕರ. ಸತತ ಮಳೆ ಸುರಿದಿದ್ದರಿಂದ ತೋಟಗಾರಿಕೆ ಬೆಳೆಗೆ ಅಪಾರ ಹಾನಿಯಾಗಿದೆ. ಬಹುತೇಕ ಎಲ್ಲಾ ಬೆಳೆಗಳಿಗೆ ಈಗ ಕೊಳೆರೋಗ ಅಪ್ಪಳಿಸಿದ್ದು, ರೈತರು ಕಂಗಾಲಾಗಿ ನೋಡುವ ಪರಿಸ್ಥಿತಿ ಎದುರಾಗಿದೆ.
ಮರಗಳೇ ಕೊಳೆಯುತ್ತಿವೆ: ನೋಡುನೋಡುತ್ತಿದ್ದಂತೆ ಮರ ಕಪ್ಪಾಗುತ್ತದೆ. ಅಡಕೆ ಎಳೆ ಕಾಯಿಗಳು ಕಪ್ಪಾಗಿ ಉದುರಲಾರಂಭಿಸುತ್ತವೆ. ಮರವೇ ಕೊಳೆತು ನೆಲಕ್ಕುರುಳುತ್ತದೆ. ಸತತ ಮಳೆಯ ಕಾರಣ ತಾಪಮಾನ ಸಾಮಾನ್ಯ ಸ್ಥಿತಿಗಿಂತ ಕೆಳಗಿದೆ. ಮನೆಯಲ್ಲಿ ಬಟ್ಟೆ ಒಣಗುವುದಕ್ಕೇ ದಿನಗಟ್ಟಲೆ ತೆಗೆದುಕೊಳ್ಳುವ ಈ ಸಂದರ್ಭದಲ್ಲಿ ಬಯಲಿನಲ್ಲಿ ನಿಂತ ಮರಗಳ ಸ್ಥಿತಿ ಇನ್ನೂ ಗಂಭೀರ.
ಶತಮಾನದ ಔಷಧ: ಕೊಳೆರೋಗ ತಡೆಯಲು ಸೂಕ್ತ ಸಂಶೋಧನೆಗಳೇ ಆಗಿಲ್ಲ. ಕೋಲ್‌ಮನ್ ಎಂಬ ಬ್ರಿಟೀಶ್ ಅಧಿಕಾರಿ ಎಷ್ಟೋ ವರ್ಷಗಳ ಹಿಂದೆ ಕಂಡುಹಿಡಿದ ಬೋರ್ಡೋ ಮಿಶ್ರಣವನ್ನೇ ಇವತ್ತಿಗೂ ಸಿಂಪರಣೆ ಮಾಡಲಾಗುತ್ತಿದೆ. ಇದು ಸುಣ್ಣ- ಮೈಲುತುತ್ತವನ್ನು ಹೊಂದಿದ ಮಿಶ್ರಣ. ಇತ್ತೀಚೆಗೆ ರೈತರೇ ಕಂಡುಹಿಡಿದ ಬಯೋಫೈಟ್ ಎಂಬ ಔಷಧಿ ಇದೆ. ಆದರೆ ಇದನ್ನು ಬಳಸಿದ ನಂತರ ಆಗುವ ಪರಿಣಾಮಗಳ ಬಗ್ಗೆ ಇವತ್ತಿಗೂ ಸಂಶೋಧನೆಗಳು ಆಗಿಲ್ಲ. ಬೋರ್ಡೋ ಮಿಶ್ರಣ ಅಥವಾ ಬಯೋಫೈಡ್ ಸಿಂಪಡಣೆಗೆ ಈ ಬಾರಿ ಅವಕಾಶವೇ ಆಗಿಲ್ಲ. ಒಂದು ಎಕರೆ ಅಡಕೆ ತೋಟಕ್ಕೆ ಸಿಂಪರಣೆ ಮಾಡಲು ನಾಲ್ಕೈದು ದಿನಗಳು ಬೇಕು. ಇಷ್ಟು ದಿನ ಮಳೆ ಬಿಡುವು ನೀಡಿದ್ದೇ ಕಡಿಮೆ. ಬಿಡುವು ನೀಡಿದಾಗ ಸಿಂಪಡಿಸಿದರೂ ನಂತರ ತಕ್ಷಣ ಬರುವ ಮಳೆಯಲ್ಲಿ ತೊಳೆದುಹೋಗುತ್ತಿದೆ. ಹಾಗಾಗಿ ಈ ಬಾರಿ ಕೊಳೆ ರೋಗ ಮಲೆನಾಡಿ, ಕರಾವಳಿಯಾದ್ಯಂತ ವ್ಯಾಪಕವಾಗಿ ಹಬ್ಬಿದೆ. 45,000 ಹೆಕ್ಟೇರ್ ಪ್ರದೇಶ: ತೋಟಗಾರಿಕೆ ಇಲಾಖೆ ಉಪನಿರ್ದೇಶಕ ವಿಶ್ವನಾಥ್ ಅವರೇ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ, ಶಿವಮೊಗ್ಗ ಜಿಲ್ಲೆಯರುವ 45,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಅಡಕೆ ಬೆಳೆ ಪೈಕಿ 12,896 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ. ಸಾಗರ, ಸೊರಬ, ತೀರ್ಥಹಳ್ಳಿ ತಾಲೂಕುಗಲ್ಲಿ ಅರ್ಧಕ್ಕರ್ಧ ಮರಗಳು ಹಾನಿಯಾಗಿರುವುದನ್ನು ಗಮನಿಸಿದರೆ ಹಾನಿಯಾಗಿರುವ ಪ್ರದೇಶ ಇನ್ನಷ್ಟು ಹೆಚ್ಚು ಎಂಬುದು -ಕನ್ನಡಪ್ರಭ-ವು ಈ ಮೂರು ತಾಲೂಕುಗಳ ತೋಟಗಳನ್ನು ನೋಡಿದಾಗ ಗೊತ್ತಾಯಿತು. ಕುಡುಮಲ್ಲಿಗೆಯ ನಾಗರಾಜ್ ಅವರಂತೂ, ಸರ್ಕಾರ ಈಗ ನೆರವಿಗೆ ಬಾರದಿದ್ದರೆ ಮರಗಳನ್ನೂ ಉಳಿಸಿಕೊಳ್ಳುವುದು ಕಷ್ಟ ಎನ್ನುತ್ತಾರೆ.
 ಜಿಲ್ಲಾಧಿಕಾರಿಗೆ ಬಿಜೆಪಿ ಇಂದು ವರದಿ ಪುಟ 4ರಲ್ಲಿ

ಇವರೇನಂತಾರೆ?
ಅಡಕೆ ಕೊಳೆ ರೋಗಕ್ಕೆ ಸಂಬಂಧಪಟ್ಟಂತೆ ಎಕರೆಗೆ 15 ಸಾವಿರ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಲಾಗುವುದು. ಈ ಬಗ್ಗೆ ತೋಟಗಾರಿಕೆ ಅಧಿಕಾರಿಗಳಲ್ಲಿ ವರದಿ ಕೇಳಲಾಗಿದ್ದು, ಅವರಿಗೆ ನ್ಯಾಯಸಮ್ಮತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಬದ್ದವಿದೆ. ಕೊಳೆರೋಗ ಬಾಧಿತ ತೋಟಗಳಿಗೆ ಬೋರ್ಡೋ ದ್ರಾವಣಕ್ಕೆ ಶೇ.100 ಸಬ್ಸಿಡಿ ಕೊಡುವ ನಿಟ್ಟಿನಲ್ಲಿಯೂ ಗಮನ ಹರಿಸಲಾಗಿದೆ.
-ಕಾಗೋಡು ತಿಮ್ಮಪ್ಪ, ವಿಧಾನಸಭಾಧ್ಯಕ್ಷ

ರಾಜ್ಯ ಸರ್ಕಾರ ಕೂಡಲೇ ಮ್ಯಾಮ್ಕೋಸ್, ಕ್ಯಾಂಪ್ಕೋ ಇತ್ಯಾದಿ ಅಡಕೆ ಬೆಳೆಗಾರರ ಸಂಸ್ಥೆಗಳ ಸಭೆ ಕರೆಯಬೇಕು. ಕೊಳೆರೋಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಯಾವುದೇ ಸರ್ಕಾರ ರೈತರ ವಿಷಯದಲ್ಲಿ ರಾಜಕೀಯ ಮಾಡಬಾರದು. ಈ ಕೂಡಲೇ ಸಚಿವ ಕಿಮ್ಮನೆ ಅವರು ಹಾನಿಗೀಡಾದ ತೋಟಗಳಿಗೆ ಭೇಟಿ ನೀಡಿ ಅವರಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು.
-ಕೆ.ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

ಅಡಕೆ ಮರಗಳು ಧರಾಶಾಹಿಯಾಗಿರುವ ಹೊತ್ತಿನಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಈಗ ಪರಿಶೀಲನೆಗೆ ಆಗಮಿಸಿದ್ದಾರೆ. ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ. ಪರಶಿವಮೂರ್ತಿ ಅವರ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳ ತಂಡವು ಶುಕ್ರವಾರ ಸಾಗರ ತಾಲೂಕಿನ ಹಲವು ಅಡಕೆ ತೋಟಗಳಿಗೆ ಭೇಟಿ ನೀಡಿದ್ದು, ಶನಿವಾರ ತೀರ್ಥಹಳ್ಳಿ ಕ್ಷೇತ್ರದಲ್ಲಿ ಸಂಚಾರ ನಡೆಸಲಿದ್ದಾರೆ. ನಂತರ ಅವರು ಕರಾವಳಿ ಪ್ರದೇಶಕ್ಕೆ ತೆರಳುವರು. ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್ ಅವರ ಸೂಚನೆ ಮೇರೆಗೆ ಈ ತಂಡ ಆಗಮಿಸಿದೆ ಎಂದು ಜಿಲ್ಲಾ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೆಗ್ಡೆ ಹೇಳಿದ್ದಾರೆ.
- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.