ಗಾರ್ಮೆಂಟ್ ಉದ್ಯಮಕ್ಕೆ 'ತೆಲಂಗಾಣ' ಬಿಸಿ
ಕ.ಪ್ರ.ವಾರ್ತೆ ಮೊಳಕಾಲ್ಮುರು ಆ.17
ಪ್ರತ್ಯೇಕ ತೆಲಂಗಾಣ ಮಾಡಲು ಉದ್ದೇಶಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸೀಮಾಂಧ್ರದ ಹಲವು ಕಡೆಗಳಲ್ಲಿ ನಡೆಯತ್ತಿರುವ ಪ್ರತಿಭಟನೆಯಿಂದ ಮೊಳಕಾಲ್ಮುರು ಪಟ್ಟಣದ ಮಾರ್ಗವಾಗಿ ಆಂಧ್ರದ ಹಲವು ಪ್ರದೇಶಗಳಿಗೆ ತೆರಳುತ್ತಿದ್ದ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಇದರಿಂದಾಗಿ ಆಂಧ್ರದಿಂದ ಬರುವ ಪ್ರಯಾಣಿಕರು ಹಾಗೂ ಮೊಳಕಾಲ್ಮುರು ಪಟ್ಟಣದಿಂದ ಆಂಧ್ರಕ್ಕೆ ತೆರಳುವ ಪ್ರಯಾಣಿಕರು ವಾಹನ ಸಂಚಾರವಿಲ್ಲದೆ ಪರದಾಡುವಂತ ಸ್ಥಿತಿ ಕಂಡುಬರುತ್ತಿದೆ. ಕಳೆದ 15 ದಿನದಿಂದ ಸ್ಥಗಿತಗೊಂಡಿರುವ ಬಸ್ ಸಂಚಾರದಿಂದ ಇಲ್ಲಿನ ಜನತೆಗೆ ನಿತ್ಯದ ಕೆಲಸ ಕಾರ್ಯ ನಿರ್ವಹಿಸಿಕೊಳ್ಳುವಲ್ಲಿ ಅಡಚಣೆಯಾಗುತ್ತಿದೆ.
ಮೊಳಕಾಲ್ಮುರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ಜನ ಪಕ್ಕದ ಆಂಧ್ರದ ಹಲವು ಕಡೆಗಳಲ್ಲಿ ಸಂಬಂಧ ಬೆಳೆಸಿಕೊಂಡಿದ್ದು, ಸಂಬಂಧಿಕರನ್ನು ಭೇಟಿ ಮಾಡಲು ಪ್ರಯಾಸಪಡುವಂತಾಗಿದೆ.
ಗಾರ್ಮೆಂಟ್ ಉದ್ಯಮ: ಪ್ರಮುಖವಾಗಿ ಪಟ್ಟಣದಲ್ಲಿ ನಡೆಯತ್ತಿರುವ ಗಾರ್ಮೆಂಟ್ ಉದ್ಯಮದ ಕಾರ್ಮಿಕರು ರಾಯದುರ್ಗದಿಂದ ಸಿದ್ಧ ಉಡುಪು ತಯಾರಿಕೆಗೆ ಬೇಕಾದ ಕಚ್ಚಾ ಮಾಲುನ್ನು ತಂದು ಮತ್ತೆ ತಯಾರಾದ ಉಡುಪುಗಳನ್ನು ರಾಯದುರ್ಗಕ್ಕೆ ಕಳಿಸುತ್ತಿದ್ದರು.
ಆದರೆ ಈಗ ಕಚ್ಚಾಮಾಲನ್ನು ತರಲೂ ಸಹ ಕಾರ್ಮಿಕರು ಪರದಾಡುವಂತಾಗಿದೆ. ಅಲ್ಲದೆ ಪಟ್ಟಣದ ರೇಷ್ಮೆ ಸೀರೆ ತಯಾರಿಸಲೂ ಕೂಡಾ ಪಕ್ಕದ ರಾಯದುರ್ಗದಿಂದ ಕಚ್ಚಾಮಾಲನ್ನು ತಂದು ಸೀರೆಗೆ ಬಳಸಲಾಗುತ್ತಿದ್ದು, ಪ್ರತಿಭಟನೆಯಿಂದಾಗಿ ಇಲ್ಲಿನ ಕೈಮಗ್ಗ ಕಾರ್ಮಿಕರೂ ಸಹ ತೊಂದರೆ ಅನುಭವಿಸುವಂತಾಗಿದೆ. ರಾಯದುರ್ಗಕ್ಕೆ ತೆರಳುವ ಪ್ರಯಾಣಿಕರು ಆಟೋಗಳಲ್ಲಿ ಸಂಚಾರ ಮಾಡುವುದು ಕಂಡುಬರುತ್ತಿದೆ.
ಪಟ್ಟಣದಿಂದ ಗಡಿಭಾಗದ ಚೆಕ್ಪೋಸ್ಟ್ವರೆಗೆ ಮಾತ್ರ ಇಲ್ಲಿನ ಆಟೋಗಳು ತೆರಳುತ್ತಿವೆ. ಅಲ್ಲಿಂದ ಬೇರೆ ಆಟೋ ಹಿಡಿದು ರಾಯದುರ್ಗಕ್ಕೆ ತೆರಳಲು ಬೇರೆ ವಾಹನಕ್ಕೆ ಅಲೆಯಬೇಕಾಗಿದೆ. ವಾಹನ ಸಿಗದೇ ಹೋದರೆ ನಡೆದೇ ಸಾಗುವ ಸ್ಥಿತಿ ನಿರ್ಮಾಣವಾಗಿದೆ. ನಿತ್ಯದ ವ್ಯಾಪರಸ್ಥರಿಗೂ ಓಡಾಡುವುದು ತೊಂದೆರೆಯಾಗಿದೆ. ಒಟ್ಟಾರೆ ಪಕ್ಕದ ಆಂಧ್ರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಿಸಿ ಮೊಳಕಾಲ್ಮುರು ಪಟ್ಟಣಕ್ಕೂ ತಟ್ಟಿದೆ ಎಂಬುದಂತೂ ಸತ್ಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

