ಹಾಸ್ಟೆಲ್ಗಳಲ್ಲಿ ಚಾಲ್ತಿಗೊಳ್ಳದ ಬಯೋವುಟ್ರಿಕ್
ಕ.ಪ್ರ ವಾರ್ತೆ ಚಿತ್ರದುರ್ಗ ಆ.17
ಹಾಸ್ಟೆಲ್ಗಳ ಸುಧಾರಣೆ ಮಾಡುವ ನಿಟ್ಟಿನಲ್ಲಿ ಬಯೋವುಟ್ರಿಕ್, ಸೋಲಾರ್ ಲೈಟಿಂಗ್, ಹೀಟರ್, ಶುದ್ಧ ಕುಡಿಯುವ ನೀರಿನ ಅಕ್ವಾಗಾರ್ಡ್ ಅಳವಡಿಸಿದ್ದರೂ ಬಳಕೆ ಮಾಡದಿರುವುದರಿಂದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತಿಲ್ಲ ಎಂದು ಜಿಪಂ ಸಿಇಒ ಕೆ.ಎಂ. ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿನ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್ಗಳ ಹಾಗೂ ವಸತಿ ಶಾಲೆಗಳ ಮೇಲ್ವಿಚಾರಕರಿಗೆ ಏರ್ಪಡಿಸಲಾದ ಹಾಸ್ಟೆಲ್ಗಳ ಸುಧಾರಣೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಹಾಜರಾತಿ ನೀಡಲು ಸೂಚನೆ: ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ಹಾಸ್ಟೆಲ್ಗಳಲ್ಲಿ ಸೋಲಾರ್ ಹೀಟರ್, ದೀಪಗಳು, ಅಕ್ವಾಗಾರ್ಡ್ ಸರಬರಾಜು ಮಾಡಲಾಗಿದೆ.
ಕೂಡಲೇ ಇವುಗಳನ್ನು ಅಳವಡಿಸಿ ಬಳಕೆ ಮಾಡಿಕೊಳ್ಳಬೇಕು ಮತ್ತು ಕಡ್ಡಾಯವಾಗಿ ಬಯೋವುಟ್ರಿಕ್ ಮೂಲಕ ವಿದ್ಯಾರ್ಥಿಗಳ ಹಾಜರಾತಿ ವರದಿ ನೀಡಲು ಹಾಸ್ಟೆಲ್ ಮೇಲ್ವಿಚಾರಕರಿಗೆ ಸೂಚನೆ ನೀಡಿದರು. ವಿದ್ಯಾರ್ಥಿನಿಲಯಗಳಲ್ಲಿ ಬಹುತೇಕ ಬಡ ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದು, ಅವರಿಗೆ ಉತ್ತಮ ಸೌಕರ್ಯ ಕಲ್ಪಿಸಬೇಕೆಂದು ಸರ್ಕಾರ ಕೋಟಿಗಟ್ಟಲೆ ಹಣ ವೆಚ್ಚ ಮಾಡಿ ಮೂಲ ಸೌಕರ್ಯ ಕಲ್ಪಿಸಿದೆ.
ಆದರೆ, ಕೆಲವು ಹಾಸ್ಟೆಲ್ಗಳನ್ನು ಹೊರತುಪಡಿಸಿ ಬಹುತೇಕ ಹಾಸ್ಟೆಲ್ಗಳಲ್ಲಿ ಇವುಗಳ ಬಳಕೆ ಸರಿಯಾಗಿ ಆಗುತ್ತಿಲ್ಲ. ಎಲ್ಲಾ ಹಾಸ್ಟೆಲ್ಗಳಲ್ಲಿ ಬಯೋವುಟ್ರಿಕ್ ಅಳವಡಿಸಲಾಗಿದೆ. ಕಾರ್ಯಗತವಾಗಿರುವುದು ಬೆರಳೆಣಿಕೆಯಷ್ಟು ಹಾಸ್ಟೆಲ್ಗಳಲ್ಲಿ ಮಾತ್ರ, ಉಳಿದ ಹಾಸ್ಟೆಲ್ಗಳಲ್ಲಿ ಇದರ ಸಂಪರ್ಕವನ್ನೇ ಕಡಿದು ಹಾಕಲಾಗಿದೆ ಎಂದು ತಿಳಿಸಿದರು.
ಕಟ್ಟಡದ ಸಮಸ್ಯೆಯಿಂದ ಕೆಲವು ವಸತಿ ಶಾಲೆಗಳು, ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದು, ಒಂದು ಕೊಠಡಿಯಲ್ಲಿ 25 ರಿಂದ 50 ವಿದ್ಯಾರ್ಥಿಗಳು ಇರಬೇಕಾಗಿದೆ. ಎಲ್ಲಿ ಕೊಠಡಿಯ ಕೊರತೆಯಿಂದ ಸಮಸ್ಯೆಯನ್ನು ಎದುರಿಸಲಾಗುತ್ತಿದೆ ಎಂಬುದನ್ನು ವರದಿ ಮಾಡಬೇಕು.
ಕೆಲವು ಕಡೆ ವಾರಗಟ್ಟಲೆ ಕುಡಿಯುವ ನೀರಿನ ತೊಂದರೆ ಇದ್ದರೂ ಕ್ರಮ ಕೈಗೊಂಡಿರುವುದಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ತಕ್ಷಣವೇ ವರದಿ ಮಾಡಿದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ.
ಶುಚಿತ್ವಕ್ಕೆ ಕ್ರಮ: ಅಗತ್ಯವಿದ್ದಲ್ಲಿ ಪಂಚಾಯತ್ ರಾಜ್ ಎಂಜಿನಿಯರ್ಗಳನ್ನು ಕಳುಹಿಸಿ ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ನೀರಿನ ಸಮಸ್ಯೆ ಇದ್ದಲ್ಲಿ ಮಕ್ಕಳು ಶುಚಿತ್ವ ಕಾಪಾಡಿಕೊಳ್ಳುವುದಾದರೂ ಯಾವ ರೀತಿ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದರು.
ನೀಡಿದ ನಂಬರ್ ಸಿಗುವುದಿಲ್ಲ: ಕೆಲವರು ಯಾರದೋ ಕೈಲಿ ಕೀ ಕೊಟ್ಟು ಆಹಾರ ಧಾನ್ಯ ನೀಡಲು ಹೇಳಿ ಹೊರಟು ಹೋಗುತ್ತಾರೆ.
ಇದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹಾಸ್ಟೆಲ್ಗಳಲ್ಲಿನ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಕರೆ ಮಾಡಿ ತಿಳಿಸಿದಾಗ ವಸ್ತುಸ್ಥಿತಿ ಅರಿಯಲು ಇವರನ್ನು ಸಂಪರ್ಕಿಸಲು ಕರೆ ಮಾಡಿದರೆ ನೀಡಿದ ಸಂಖ್ಯೆ ಸಂಪರ್ಕಕ್ಕೆ ಸಿಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಾಸ್ಟೆಲ್ಗಳಲ್ಲಿನ ವಿದ್ಯಾರ್ಥಿಗಳಿಗೆ ಎಲ್ಲ ಸೌಕರ್ಯ ಸಿಗಬೇಕು. ಇದರಿಂದ ಅವರ ವ್ಯಾಸಂಗ ಉತ್ತಮವಾಗಬೇಕು. ಇದಕ್ಕೆ ಬೇಕಾದ ಅನುದಾನ ನೀಡಲಾಗುತ್ತದೆ.
ಹಾಸ್ಟೆಲ್ಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಮತ್ತು ಶುದ್ಧ ಕುಡಿಯುವ ನೀರು, ವಿದ್ಯುತ್ ದೀಪಗಳ ವ್ಯವಸ್ಥೆ, ಗುಣಮಟ್ಟದ ಆಹಾರ, ದಿನನಿತ್ಯದ ಅಡುಗೆಗೆ ತಾಜಾ ತರಕಾರಿಗಳ ಬಳಕೆ. ಆಹಾರ ಧಾನ್ಯ ಶೇಖರಣಾ ಕೊಠಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ಕಾಂಪೌಂಡ್ ವ್ಯವಸ್ಥೆ ಮಾಡಿಕೊಂಡು ಕರಿಬೇವು ಸೇರಿದಂತೆ ಅನೇಕ ತರಕಾರಿಗಳನ್ನು ಬೆಳೆಯಬಹುದು ಎಂದು ಸಲಹೆ ನೀಡಿದರು.
ಹಾಸ್ಟೆಲ್ ಮೇಲ್ವಿಚಾರಕರು ವಾರಕ್ಕೊಮ್ಮೆ ತಾವು ಕಾರ್ಯ ನಿರ್ವಹಿಸಿದ ವರದಿಯನ್ನು ನನಗೆ ಇ ಮೇಲ್ ಮಾಡಬೇಕು. ಕಂಪ್ಯೂಟರ್ ಜ್ಞಾನ ಇಲ್ಲದವರಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ.
ಮತ್ತು ನಿಮ್ಮ ಕರ್ತವ್ಯ ನಿರ್ವಹಣೆಯ ದಿನಚರಿಯನ್ನು ಪ್ರತಿ ತಿಂಗಳು ವರದಿ ಮಾಡಬೇಕು ಎಂದು ಸೂಚನೆ ನೀಡಿದರು.
ಜಿಪಂ ಉಪ ಕಾರ್ಯದರ್ಶಿ ಕೆ.ಆರ್. ರುದ್ರಪ್ಪ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ವೆಂಕಟೇಶ್, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಆರ್. ಸುಬ್ರಹ್ಮಣ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಂಜೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶಿವಣ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹಲಿಂಗಪ್ಪ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಜಯಪ್ಪ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

