ಶಿವಮೊಗ್ಗ: ಅಡಕೆ ಕೊಳೆಗೆ 202 ಕೋಟಿ ನಷ್ಟ
ಕ.ಪ್ರ.ವಾರ್ತೆ, ಸಾಗರ, ಆ. 20-
ಶಿವಮೊಗ್ಗ ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಿಂದ ಹಬ್ಬಿರುವ ಕೊಳೆರೋಗದಿಂದ ಸುಮಾರು ರು. 202.15 ಕೋಟಿ ನಷ್ಟ ಸಂಭವಿಸಿದ್ದು, ಜಿಲ್ಲೆಯಲ್ಲಿ ಒಟ್ಟು 21,815 ಹೆಕ್ಟೇರ್ ಅಡಕೆ ಬೆಳೆ ಕೊಳೆರೋಗದಿಂದ ನಾಶವಾಗಿದೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕರೆಯಲಾಗಿದ್ದ ಕೃಷಿ, ತೋಟಗಾರಿಗೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತೀರ್ಥಹಳ್ಳಿ ತಾಲೂಕಿನಲ್ಲಿ ಕೊಳೆರೋಗದಿಂದ ಅತಿಹೆಚ್ಚು ನಷ್ಟ ಸಂಭವಿಸಿದೆ ಎಂದರು.
ಪ್ರಯೋಜವಾಗಿಲ್ಲ: ಕೊಳೆರೋಗ ನಿಯಂತ್ರಣಕ್ಕೆ ರೈತರು ಒಂದು ಬಾರಿ ಔಷಧಿ ಸಿಂಪಡಿಸಿದ್ದರೂ, ಅದು ಪ್ರಯೋಜನಕ್ಕೆ ಬಂದಿಲ್ಲ. ಉಳಿದ ಬೆಳೆ ಹಾಗೂ ಅಡಕೆ ಮರಗಳನ್ನು ಉಳಿಸಿಕೊಳ್ಳಬೇಕಾದರೆ ಎರಡು ಹಾಗೂ ಮೂರನೇ ಬಾರಿ ಔಷಧಿ ಸಿಂಪಡಣೆ ಅಗತ್ಯವಾಗಿದೆ. ಇದಕ್ಕಾಗಿ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಬ್ಸಿಡಿ ದರದಲ್ಲಿ ಔಷಧಿ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಔಷಧಿ ಸಿಂಪಡಣೆಗೆ ಪ್ರತಿ ಎಕರೆಗೆ ರು. 2,000 ಖರ್ಚು ತಗುಲುತ್ತಿದ್ದು, ಸಬ್ಸಿಡಿ ರೂಪದಲ್ಲಿ ರು. 800 ನೀಡಲಾಗುತ್ತದೆ. ಬೆಳೆಗಾರರು ಬೋರ್ಡೋ ದ್ರಾವಣ ಖರೀದಿಸಿದ ಟಿನ್ ನಂ. ಇರುವ ಬಿಲ್ಲನ್ನು ನಾಡಕಚೇರಿಗೆ ಸಲ್ಲಿಸಿ ಸಬ್ಸಿಡಿ ಹಣ ಪಡೆಯಬಹುದು. ರೈತರು ತಮ್ಮ ಬ್ಯಾಂಕ್ ಪಾಸ್ಬುಕ್ ಝೆರಾಕ್ಸ್ ನೀಡಿದರೆ ಹಣವನ್ನು ನೇರವಾಗಿ ಬೆಳೆಗಾರರ ಖಾತೆಗೆ ಜಮೆ ಮಾಡಲಾಗುವುದು ಎಂದರು.
ಹೆಚ್ಚಿನ ಪರಿಹಾರಕ್ಕೆ ಮನವಿ: ಕೊಳೆರೋಗದಿಂದ ಹಾನಿಗೊಳಗಾದವರಿಗೆ ಹೆಕ್ಟೇರಿಗೆ ರು. 12,000 ಪರಿಹಾರ ನೀಡಲು ಅವಕಾಶವಿದ್ದು, ಇದು ತೀರ ಕಡಿಮೆಯಾಗುತ್ತದೆ. ಪರಿಹಾರದ ಮೊತ್ತ ಹೆಚ್ಚಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಅವರಲ್ಲಿ ಚರ್ಚಿಸಲಾಗಿದೆ. ಜೊತೆಗೆ ಮುಖ್ಯಮಂತ್ರಿಗಳಿಗೂ ಪತ್ರ ಬರೆಯಲಾಗಿದೆ ಎಂದರು.
ತೋಟಗಾರಿಕೆ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಡಾ. ವಿಶ್ವನಾಥ್ ಸಾಗರ ತಾಲೂಕಲ್ಲಿ 4,884 ಹೆಕ್ಟೇರ್ ಪೈಕಿ 3362 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಕೊಳೆರೋಗದಿಂದ ನಾಶವಾಗಿದ್ದು, ಶೇ. 75ರಷ್ಟು ನಷ್ಟ ಉಂಟಾಗಿದೆ. ಸುಮಾರು 35 ಕೋಟಿ ರೂ. ನಷ್ಟ ಉಂಟಾಗಿದೆ ಎಂದರು.
ತೀರ್ಥಹಳ್ಳಿಯಲ್ಲಿ 8673 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದ್ದು, 7,283 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಕೊಳೆರೋಗದಿಂದ ಶೇ. 93ರಷ್ಟು ಬೆಳೆ ನಾಶವಾಗಿದೆ. ಅಂದಾಜು ರು. 81.93 ಕೋಟಿ ನಷ್ಟ ಸಂಭವಿಸಿದೆ ಎಂದರು.
ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಮಾತನಾಡಿ, ಸೆಪ್ಟೆಂಬರ್ 15ರೊಳಗೆ ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರ ನಿಗಧಿಪಡಿಸಿರುವ ಪರಿಹಾರದ ಮೊತ್ತ ನೀಡಬೇಕು. ನೋಡೆಲ್ ಅಧಿಕಾರಿಗಳು ತಕ್ಷಣ ಜಂಟಿ ಸರ್ವೆ ನಡೆಸಿ ಬೆಳೆಗಾರರಿಗೆ ಅರ್ಜಿ ಪಡೆದು ಅವರಿಗೆ ಪರಿಹಾರ ವಿತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಉಪವಿಭಾಗಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ, ಸಾಗರ ತಹಶೀಲ್ದಾರ್ ರಾಮೋಜಿರಾವ್, ಸೊರಬ ತಹಸೀಲ್ದಾರ್ ತೇಜಸ್ ಕುಮಾರ್, ಹೊಸನಗರ ತಹಸೀಲ್ದಾರ್ ಅರ್ಚನ, ಶಿಕಾರಿಪುರ ತಹಸೀಲ್ದಾರ್ ಪಿ.ಐ.ಗಣಚಾರಿ, ತೋಟಗಾರಿಕೆ ಹಾಗೂ ಕೃಷಿ ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಮತ್ತು ಅಡಕೆ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಪಿ.ಎಂ. ಸಾಲಿಮಠ, ಡಾ.ನಾರಾಯಣಸ್ವಾಮಿ, ಡಾ. ವಿಶ್ವನಾಥ್, ಡಾ. ಶೇಷಗಿರಿ, ಡಾ. ವಿಘ್ನೇಶ್, ಸಾಗರ ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಡಿ.ಕೆ .ತಿಮ್ಮಪ್ಪ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್ ಹಾಜರಿದ್ದರು.
ನೋಡೆಲ್ ಅಧಿಕಾರಿ ನೇಮಕ
ಕೊಳೆರೋಗದಿಂದ ಹಾನಿಗೊಳಗಾದ ಬೆಳೆಗಾರರು ತಕ್ಷಣ ಅರ್ಜಿ ಜೊತೆಯಲ್ಲಿ ಫೋಟೋ, ಪಹಣಿ ಕೊಡಬೇಕು. ಪರಿಹಾರವನ್ನು ಸಮಯಬದ್ಧವಾಗಿ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಕೊಳೆರೋಗದಿಂದ ಹಾನಿಗೊಳಗಾಗಿರುವ ಬೆಳೆ ಕುರಿತು ಸಮೀಕ್ಷೆ ನಡೆಸಲು ಪ್ರತಿ ತಾಲೂಕಿಗೆ ನೋಡೆಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜೊತೆಗೆ ಗ್ರಾಪಂ ಮಟ್ಟದಲ್ಲಿಯೂ ಉಪ ಸಮಿತಿ ರಚನೆ ಮಾಡಲಾಗಿದ್ದು, ಬೆಳೆಗಾರರು ತಕ್ಷಣ ಅರ್ಜಿ ಸಲ್ಲಿಸಬೇಕು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

