ಶಿವಮೊಗ್ಗ

ವಿವಿಧ ವಿಷಯಗಳ ಬಗ್ಗೆ ತಿಳಿವಳಿಕೆ ಅಗತ್ಯ: ಅಪ್ಪಣ್ಣ

Published On :

ಶಿವಮೊಗ್ಗ: ಮೈಸೂರು ಎಜುಕೇಷನ್ ಅಕಾಡೆಮಿ ಸಂತೆಕಡೂರಿನಲ್ಲಿರುವ ಪರಿಸರ ಅಧ್ಯಯನ ಕೇಂದ್ರದಲ್ಲಿ ಐಎಎಸ್ ಪರೀಕ್ಷಾ ತರಬೇತಿಯಲ್ಲಿರುವ ವಿದ್ಯಾರ್ಥಿಗಳಿಗೆ ಮೂರು ದಿನದ ಶಿಬಿರ ಹಮ್ಮಿಕೊಂಡಿದೆ.
ನಿವೃತ್ತ ಚಾರ್ಟ್ಟೆಡ್ ಅಕೌಂಟೆಡ್ ಅಪ್ಪಣ್ಣ ಶಿಬಿರ ಉದ್ಘಾಟಿಸಿ ನಂತರ ಮಾತನಾಡಿದ ಅವರು, ಭಾರತೀಯ ಆಡಳಿತ ಸೇವೆ ಆಯ್ಕೆಯಾಗ ಬಯಸುವ ಅಭ್ಯರ್ಥಿಗಳಿಗೆ ಕೇವಲ ಪುಸ್ತಕದ ಮಾಹಿತಿಯಲ್ಲದೆ, ಪ್ರಾಯೋಗಿಕವಾಗಿ ಸಮಾಜದ ವಿವಿಧ ಸ್ತರದ ಮಾಹಿತಿ ಇರಬೇಕು. ಐಎಎಸ್ ಪರೀಕ್ಷೆ ಕಠಿಣವಾಗಿರುತ್ತದೆ ಎಂಬುದು ನಿಜವಾದರೂ, ಅದರಲ್ಲಿರುವ ಸ್ಪರ್ಧಾ ಮನೋಭಾವ ನಮ್ಮನ್ನು ಮತ್ತಷ್ಟು ದೃಢವಾಗಿಸುತ್ತದೆ. ನಿರಂತರ ಅಧ್ಯಯನ ಹಾಗೂ ಪ್ರಾಯೋಗಿಕವಾಗಿ ಸಮಾಜದ ಆಗು- ಹೋಗುಗಳನ್ನು ಗಮನಿಸುವುದು ಪರೀಕ್ಷೆಯ ಯಶಸ್ಸಿನಲ್ಲಿ ಹೆಚ್ಚು ಉಪಯೋಗಕಾರಿ ಎಂದು ತಿಳಿಸಿದರು.
ತಿಳಿವಳಿಕೆ ಇರಲಿ: ಪರಿಸರ ಅಧ್ಯಯನ ಕೇಂದ್ರದ ಮುಖ್ಯಸ್ಥ ಜಿ.ಎಲ್. ಜನಾರ್ದನ್, ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಪಾಠ ಕೇಳಿ ಪರೀಕ್ಷೆ ಬರೆಯುವುದರ ಜೊತೆಗೆ ಅಭ್ಯರ್ಥಿಗಳಿಗೆ ಪ್ರಾಯೋಗಿಕವಾದ ನೆಲೆಗಟ್ಟಿನಲ್ಲಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಇರಬೇಕಾಗುತ್ತದೆ. ಪರಿಸರ ಹಾಗೂ ಪ್ರಾಕೃತಿಕ ಸಂಪತ್ತಿನ ತಿಳಿವಳಿಕೆ ಇಲ್ಲದೇ ಹೋದರೆ, ರಾಷ್ಟ್ರ ಮಟ್ಟದಲ್ಲಿ ನಡೆಯುವಂತಹ ಈ ಪರೀಕ್ಷೆಯಲ್ಲಿ ಯಶಸ್ವಿಯಾಗವುದು ಸಾಧ್ಯವಿಲ್ಲ ಎಂದರು.
ಈ ಪರೀಕ್ಷೆ ಬರೆಯಲು ಹೊರ ರಾಜ್ಯಗಳಿಗೆ ಹೋಗಬೇಕಾದ ಅನಿವಾರ್ಯತೆ ಶಿವಮೊಗ್ಗ ವಿದ್ಯಾರ್ಥಿಗಳಿಗೆ ಇತ್ತು. ಆದರೆ, ಈಗ ಶಿವಮೊಗ್ಗದಲ್ಲಿಯೇ ಮೈಸೂರು ಎಜುಕೇಷನ್ ಅಕಾಡೆಮಿ ಆ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಐಎಎಸ್ ಆಕಾಂಕ್ಷಿಗಳಿಗೆ ತರಬೇತಿ ನೀಡುತ್ತಿರುವುದು ಸಂತೋಷದ ವಿಚಾರ ಎಂದರು.
ಪ್ರಾಯೋಗಿಕ ತರಬೇತಿ: ಪ್ರಾಸ್ತಾವಿಕವಾಗಿ ಮಾತನಾಡಿದ ಮೈಸೂರು ಎಜುಕೇಷನ್ ಅಕಾಡೆಮಿ ನಿರ್ದೇಶಕ ಜಗದೀಶ ಸಂಪಳ್ಳಿ, ಸಂಸ್ಥೆಯು ಕಳೆದ ಎರಡು ತಿಂಗಳಿಂದ ಐಎಎಸ್ ಪರೀಕ್ಷಾ ಅಭ್ಯರ್ಥಿಗಳಿಗೆ ತರಬೇತಿ ನೀಡುತ್ತಿದ್ದು, ತರಬೇತಿಯ ಅಂಗವಾಗಿ ಈ ಮೂರು ದಿನಗಳ ಪ್ರಾಯೋಗಿಕ ತರಬೇತಿ ಶಿಬಿರವನ್ನು ಆಯೋಜನೆ ಮಾಡುತ್ತಿದೆ ಎಂದು ಮಾಹಿತಿ ನೀಡಿದರು. ಶಿವಮೊಗ್ಗದ ಜಿಲ್ಲಾ ಸ್ಕೌಟ್ ಭವನದಲ್ಲಿ ಐಎಎಸ್ ತರಗತಿಗಳು ನಡೆಯುತ್ತಿದ್ದು, ಸೆ.15ರಿಂದ ಐಎಎಸ್ ತರಬೇತಿಯ ಎರಡನೇ ತಂಡದ ತರಗತಿಗಳು ಆರಂಭವಾಗುತ್ತಿವೆ. ಈಗಾಗಲೇ ಈ ಕುರಿತ ವಿವಿಧ ಕಡೆಗಳಲ್ಲಿ ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ-9900015256, 8884082682 ಇಲ್ಲಿಗೆ ಸಂಪರ್ಕಿಸಬಹುದು ಎಂದು ತಿಳಿಸಿದರು.
ಶಿಬಿರದಲ್ಲಿ ಮೈಸೂರು ಎಜುಕೇಷನ್ ಅಕಾಡೆಮಿ ಶೈಕ್ಷಣಿಕ ವಿಭಾಗದ ಮುಖ್ಯ ಸಲಹೆಗಾರ ರಾಜೇಶ ವಿ. ಅವಲಕ್ಕಿ, ಮೂರು ದಿನಗಳ ಕಾಲ ಐಎಎಸ್ ಆಕಾಂಕ್ಷಿಗಳಿಗೆ ನೀಡಲಾಗುವ ತರಬೇತಿಯ ವಿವರ ನೀಡಿದರು. ಯೋಗ ಶಿಕ್ಷಕ ಬಿ.ಎಸ್. ಅರವಿಂದ, ಡಾ. ಮೈಥಿಲಿ, ದಿನೇಶ, ಪ್ರೊ.ಎ.ಎಸ್. ಚಂದ್ರಶೇಖರ್, ಮೈಸೂರು ಎಜುಕೇಷನ್ ಅಕಾಡೆಮಿ ಮುಖ್ಯ ಸಲಹೆಗಾರ ಡಿ.ಎನ್. ನೂರ್ ಅಹಮದ್, ಸಂಸ್ಥೆಯ ನಿರ್ದೇಶಕ ಹೆಗ್ಗೆರೆ ರೇಣುಕಾರಾಧ್ಯ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.