ಶಿವಮೊಗ್ಗ

ಕೊಳೆರೋಗ; ಸರ್ಕಾರದ ಭರವಸೆ ಭಾಗ್ಯವೂ ಇಲ್ಲ

Published On :

ಶಿವಮೊಗ್ಗ: ಕೊಳೆರೋಗದಿಂದ ಕಂಗಾಲಾಗಿರುವ ಅಡಕೆ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಈಕ್ಷಣದ ವರೆಗೆ ಒಂದೇ ಒಂದು ಭರವಸೆಯ ಮಾತೂ ಸಿಕ್ಕಿಲ್ಲ, ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸವೂ ಆಗಿಲ್ಲ, ಪರಿಹಾರ ಘೋಷಿಸುವ ಉಸಿರೂ ಕೇಳಿಬಂದಿಲ್ಲ.
ಆದರೆ, ಮಲೆನಾಡಿನಲ್ಲೀಗ ರಾಜಕೀಯ ದಂಡ ಯಾತ್ರೆಗಳು ಮಾತ್ರ ಆರಂಭವಾಗಿವೆ.
ವಾಸ್ತವ ಸ್ಥಿತಿ: ಮಲೆನಾಡು-ಕರಾವಳಿಯಾದ್ಯಂತ ಈಗ ಅಯೋವುಯ ಪರಿಸ್ಥಿತಿ. ಅತಿಯಾದ ಮಳೆಯಿಂದ ಮಲೆನಾಡಿನ ಅಡಕೆ ಬೆಳೆಗಾರ ದಿಕ್ಕುತೋಚದೆ ಕುಳಿತಿದ್ದಾನೆ. ಅಡಕೆ ಮರಗಳಲ್ಲಿ ಕಾಯಿ ನಿಂತಿಲ್ಲ, ಕೆಲವು ಕಡೆಗಳಲ್ಲಂತೂ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದು, ಮರಗಳೂ ನೆಲಕ್ಕಚ್ಚಿವೆ. ಕೊಳೆರೋಗವೆಂಬ ಶತೃವಿನ ವಿಜೃಂಭಣೆ ಎಲ್ಲೆ ಮೀರಿದೆ. ಅಡಕೆ ಮರಗಳು ಧರಾಶಾಹಿಯಾಗಿರುವ ಹೊತ್ತಿನಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಲ್ಲಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ವ್ಯಾಪಕವಾಗಿ ಅಡಕೆ ಬೆಳೆ ಇರುವುದರಿಂದ ಹಳ್ಳಿಹಳ್ಳಿಗೆ ಸುತ್ತಿ ಪರಿಶೀಲನೆ ಸಾಧ್ಯವಾಗುತ್ತಿಲ್ಲ. ಶಾಸ್ತ್ರಕ್ಕೆ ಅಲ್ಲಲ್ಲಿ ಭೇಟಿಕೊಟ್ಟು ರೈತರಿಂದ ಮಾಹಿತಿ ಪಡೆದಿದ್ದಾರೆ.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಪರಶಿವಮೂರ್ತಿ ನೇತೃತ್ವದಲ್ಲಿ ಇಲಾಖೆ ಅಧಿಕಾರಿಗಳ ತಂಡ ಸಾಗರ ತೀರ್ಥಹಳ್ಳಿ ಕಡೆಗಳಲ್ಲಿ ಸಂಚರಿಸಿ ಮಾಹಿತಿ ಕಲೆ ಹಾಕಿದೆ. ಆದರೆ, ಅಧಿಕಾರಿಗಳಿಗೆ ಯಾವ ಪರಿಯಲ್ಲಿ ನಷ್ಟವಾಗಿದೆ ಎಂಬುದನ್ನು ನಿಖರ ದಾಖಲೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ.
ಶಿವಮೊಗ್ಗ ಜಿಲ್ಲೆಯರುವ 45,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಅಡಕೆ ಬೆಳೆ ಪೈಕಿ 12,896 ಹೆಕ್ಟೇರ್ ಬೆಳೆ ಹಾನಿಗೊಳಗಾಗಿದೆ ಎಂದು ತೋಟಗಾರಿಕಾ ಇಲಾಖೆ ಪ್ರಾಥಮಿಕ ಮಾಹಿತಿ. ಆದರೆ, ತೀರ್ಥಹಳ್ಳಿಯೊಂದರಲ್ಲೇ ಇಷ್ಟು ಪ್ರಮಾಣದ ಹಾನಿಯಾಗಿದೆ ಎಂಬ ಮಾಹಿತಿಯೂ ಇದೆ.
ದಂಡ ಯಾತ್ರೆ: ಪರಿಸ್ಥಿತಿಯನ್ನು ಅವಲೋಕಿಸಲು ಇದೀಗ ಯಾತ್ರೆಗಳು ಆರಂಭವಾಗಿದೆ. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರು ಆರಂಭದಲ್ಲೇ ಸಾಗರ ವ್ಯಾಪ್ತಿಯಲ್ಲಿ ಅಡಕೆ ತೋಟಗಳಿಗೆ ಭೇಟಿಕೊಟ್ಟು ಭರವಸೆ ಮಾತನ್ನಾಡಿದ್ದಾರೆ. ಎಕರೆಗೆ 15 ಸಾವಿರ ರುಪಾಯಿ, 20 ಸಾವಿರ ರುಪಾಯಿ ಪರಿಹಾರ ಸಿಗಬೇಕೆಂಬ ಮಾತನ್ನಾಡಿದ್ದಾರೆ.
ಈ ನಡುವೆಯೇ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ಬಿಜೆಪಿ ನಿಯೋಗ ತೀರ್ಥಹಳ್ಳಿ, ಹೊಸನಗರ ವ್ಯಾಪ್ತಿಯ ಅಡಕೆ ತೋಟಗಳಿಗೆ ಭೇಟಿಕೊಟ್ಟಿದ್ದಲ್ಲದೇ, ವರದಿಯೊಂದನ್ನು ಸಿದ್ಧಪಡಿಸಿ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿದೆ.
ಇದಾದ ಮೇಲೆ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕ್ಷೇತ್ರದಲ್ಲಿ ಅಡಕೆ ತೋಟಗಳಿಗೆ ಹೊರಟು ನಿಂತಿದ್ದಾರೆ. ಸೆಪ್ಟೆಂಬರ್ 1ರಂದು ಪ್ರತಿಪಕ್ಷ ನಾಯಕ, ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ತೀರ್ಥಹಳ್ಳಿ ಭಾಗದಲ್ಲಿ ಅಡಕೆ ಬೆಳೆಗಾರರ ಸಮಸ್ಯೆ ಆಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಭರವಸೆ ಮಾತು ಸಿಕ್ಕಿಲ್ಲ: ಜೂನ್ ಆರಂಭದಲ್ಲೇ ಮಲೆನಾಡಿನಲ್ಲಿ ಕೊಳೆ ರೋಗದ ತೀವ್ರತೆಯ ಸೂಚನೆಗಳು ಸಿಕ್ಕಿದ್ದವು. ಇಷ್ಟು ವರ್ಷಗಳ ವರೆಗೂ ಕಂಡುಬಂದ ಕೊಳೆರೋಗಕ್ಕೂ ಈ ಬಾರಿಯ ಕೊಳೆ ರೋಗಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಎಂದು ಅರಿವಾಗುತ್ತಿದ್ದಂತೆಯೇ ಅಡಕೆ ಬೆಳೆಗಾರರ ಕಡೆಯಿಂದ ಆತಂಕದ ದನಿಗಳು ಕೇಳಿಬಂದವು.
ತೀರ್ಥಹಳ್ಳಿಯ ಹಿರಿಯ ಅಡಕೆ ಬೆಳೆಗಾರ ಶ್ರೀನಿವಾಸ ಅವರ ಅಂದಾಜಿನಂತೆ ಈ ಬಾರಿ ಸಣ್ಣ ಹಿಡುವಳಿದಾರರ ಕಥೆ ಹೇಳತೀರದು. ಒಂದೆರಡು ಎಕರೆ ಅಡಕೆ ತೋಟ ಹೊಂದಿದವರಿಗೆ ಮುಂದಿನ ದಿನಗಳು ಅಷ್ಟು ಸುಲಭವಾಗಿಲ್ಲ ಎಂದು ಅಭಿಪ್ರಾಯಪಡುತ್ತಾರೆ. ದೊಡ್‌ಡ ಬೆಳೆಗಾರರು ಹಾಗೂ ಹೀಗೂ ಚೇತರಿಸಿಕೊಂಡರಾದರೂ, ಸಣ್ಣ ಬೆಳೆಗಾರರು ಸದ್ಯಕ್ಕಂತೂ ತಲೆ ಎತ್ತಿ ಓಡಾಡದ ಪರಿಸ್ಥಿತಿ ಬಂದೊದಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವರೆಗೆ ನಿಯೋಗಗಳು, ರಾಜಕೀಯ ವ್ಯಕ್ತಿಗಳು, ಸಚಿವ ಶಾಸಕರು ಅಡಕೆ ತೋಟಗಳಿಗೆ ಬಂದು ಹೋಗುತ್ತಿದ್ದಾರೆ ವಿನಹ ಅಡಕೆ ಬೆಳೆಗಾರರಿಗೆ ಯಾವ ರೀತಿ ಪರಿಹಾರ ಸಿಗುತ್ತದೆಂದು ಸರ್ಕಾರದಿಂದ ಒಂದೇ ಒಂದು ಮಾತು ಬಂದಿಲ್ಲ. ಮಲೆನಾಡು- ಕರಾವಳಿ ಅಡಕೆ ಬೆಳೆಗಾರರನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂಬ ಮಾತು ಅಲ್ಲಲ್ಲಿ ಕೇಳಿಬರುತ್ತಿದೆ.

ಇಂದು ಸೊರಬದಲ್ಲಿ ಪ್ರತಿಭಟನೆ


ಸೊರಬ: ಅಡಿಕೆ ಬೆಳೆಗೆ ಕೊಳೆ ರೋಗ ತಗುಲಿ ಕಂಗಾಲಾಗಿರುವ ಅಡಿಕೆ ಬೆಳೆಗಾರರು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಇಂದು (23-08-13) ಬೆಳಿಗ್ಗೆ 10-30ಕ್ಕೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಪ್ರತಿಭಟನೆಗೆ ಹೆಚ್ಚಿನ ಅಡಿಕೆ ಬೆಳೆಗಾರರು, ಕೂಲಿಕಾರರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ವಿವಿಧ ಸಂಘ-ಸಂಸ್ಥೆ, ರಾಜಕೀಯ ಪಕ್ಷಗಳ ಮುಖಂಡ, ಕಾರ್ಯಕರ್ತರು ಕೈಜೋಡಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ವೇದಿಕೆ, ಗೋಸಂರಕ್ಷಣಾ ಹೋರಾಟ ವೇದಿಕೆ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ, ಜಿಪಂ ಸದಸ್ಯ ಗುರುಕುಮಾರ್ ಪಾಟೀಲ್, ರಾತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಕೆ. ಮಂಜುನಾಥಗೌಡ, ಸಾಗರ ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ವ.ಶಂ. ರಾಮಚಂದ್ರ ಭಟ್, ಬಿ.ಆರ್. ಜಯಂತ್, ಬಂಗಾರಸ್ವಾಮಿ ಗೌಡ, ಬಿ.ಟಿ. ವೀರಭದ್ರಪ್ಪ ಗೌಡ ಕೋರಿದ್ದಾರೆ. ಬೆಳೆಗಾರರು ಬರುವಾಗ ಕೊಳೆ ಅಡಿಕೆ ತರಬೇಕು ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.