ಕೊಳೆ ರೋಗದ ತೋಟಕ್ಕೆ ಎಕರೆಗೆ ರು. 30,000 ನೀಡಿ
ಕ.ಪ್ರ.ವಾರ್ತೆ ಶಿವಮೊಗ್ಗ ಆ.23 ಕೊಳೆರೋಗ ಪೀಡಿತ ಅಡಕೆ ತೋಟಗಳ ಪ್ರತಿ ಎಕರೆಗೆ ರು. 30,000 ಪರಿಹಾರದ ಪ್ಯಾಕೆಜ್ ನೀಡುವಂತೆ ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ಅವರನ್ನು ಕಿಸಾನ್ ಖೇತ್ ಮಜ್ದೂರ್ ಕಾಂಗ್ರೆಸ್ ಉಪಾಧ್ಯಕ್ಷ ಸಚಿನ್ ಮೀಗಾ ಒತ್ತಾಯಿಸಿದ್ದಾರೆ.
ಸಚಿವರನ್ನು ಭೇಟಿಯಾದ ಸಚಿನ್ ನೇತೃತ್ವದ ನಿಯೋಗ, ಅಡಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿ, ಕೂಡಲೇ ಸ್ಪಂದಿಸುವಂತೆ ಕೋರಿದರು.
ಅಧಿಕಾರಿಗಳ ನೇಮಕ: ತಾಲೂಕು ಹಾಗೂ ಜಿಲ್ಲೆಯ ತೋಟಗಾರಿಕೆ ಕಚೇರಿಗಳಲ್ಲಿ ಸಿಬ್ಬಂದಿ ಕೊರತೆಯಿಂದ ಪುನಶ್ಚೇತನ ಕಾರ್ಯಕ್ರಮ ಸರಿಯಾಗಿ ಜಾರಿಯಾಗುತ್ತಿಲ್ಲ. ಕೂಡಲೇ ಸರ್ಕಾರ ಅಧಿಕಾರಿಗಳನ್ನು ನೇಮಿಸಬೇಕು. ಈಗಾಗಲೇ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲಾಧಿಕಾರಿಗಳು ಲಿಖಿತವಾಗಿ ಜಿಲ್ಲಾ ಅಡಕೆ ಬೆಳೆಗಾರರಿಗೆ ಪುನಶ್ಚೇತನ ಪ್ಯಾಕೇಜ್ನಡಿಯಲ್ಲಿ ಅನ್ಯಾಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗೂ ಕೊಳೆರೋಗ, ರೈತರು ನಷ್ಟ ಅನುಭವಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಲೆನಾಡು ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸತತ ಮಳೆ ಬೀಳುತ್ತಿರುವುದರಿಂದ ಅಡಕೆ ಬೆಳೆಗೆ ಕೊಳೆರೋಗ ತಗುಲಿ ಶೇ.80 ಅಡಕೆ ಫಸಲು ಕೊಳೆರೋಗದಿಂದ ನಾಶವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
3 ವರ್ಷ ಬೇಕು: ಕೊಳೆರೋಗ ನಿಯಂತ್ರಣಕ್ಕೆ ಔಷಧ ಸಿಂಪಡಿಸಲು ಅವಕಾಶ ನೀಡದೇ ಮಳೆ ಅವಾಂತರ ಸೃಷ್ಟಿಸಿ, ಅಡಕೆ ಮರಗಳು ಸಾಯುತ್ತಿವೆ. ಪರಿಣಾಮ ಇನ್ನೂ 3 ವರ್ಷ ಕಾಲ ಅಡಕೆ ಮರಗಳು ಚೇತರಿಸಿಕೊಳ್ಳಲು ಅವಕಾಶ ಬೇಕಾಗುತ್ತದೆ. ಆದ್ದರಿಂದ ಇನ್ನೂ 3 ವರ್ಷ ಅಡಕೆ ಬೆಳೆಗಾರರಿಗೆ ನಿರೀಕ್ಷಿತ ಮಟ್ಟದಲ್ಲಿ ಫಸಲು ಸಿಗುವುದು ಕಷ್ಟವಾಗಿದೆ ಎಂದರು.
ಈಗಾಗಲೇ ರಾಜ್ಯದ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳು ಅಡಕೆ ಬೆಳೆಗಾರರ ಸಾಲ ವಸೂಲಿ ಮಾಡುವ ದೃಷ್ಟಿಯಿಂದ ನಿರಂತರ ನೋಟಿಸ್ ಜಾರಿ ಮಾಡುವುದು ಹಾಗೂ ರೈತರ ಮೇಲೆ ಸಿವಿಲ್ ದಾವೆ ಹೂಡಲು ಮುಂದಾಗುತ್ತಿದ್ದಾರೆ ಎಂದರು.
ರೈತರ ಗುಳೇ: ಆದರೆ, ಮಲೆನಾಡು ಹಾಗೂ ಕರಾವಳಿ ಭಾಗದ ಅಡಕೆ ಬೆಳೆಗಾರರು ಸತತ ಹಲವು ವರ್ಷದಿಂದ ಹಳದಿ ಎಲೆ ರೋಗ, ಕೊಳೆರೋಗ, ಬೇರುಹುಳ ರೋಗ, ಹಾಗೂ ಇತರೆ ರೋಗಗಳಿಂದ ಫಸಲು ಕಳೆದುಕೊಂಡು ಬ್ಯಾಂಕುಗಳಿಂದ ಪಡೆದ ಸಾಲ ತೀರಿಸಲಾಗದೇ ಸಾಕಷ್ಟು ರೈತರು ಈಗಾಗಲೇ ಗುಳೇ ಹೋಗಿದ್ದಾರೆ.
ಈಗಲೂ ಬ್ಯಾಂಕುಗಳು ಬಲತ್ಕಾರವಾಗಿ ರೈತರ ಸಾಲ ವಸೂಲಿ ಮಾಡಲು ಮುಂದಾದರೆ ಹಲವಾರು ರೈತರು ಆತ್ಮಹತ್ಯೆಯಂತಹ ಘಟನಾವಳಿಗಳಿಗೆ ಮುಂದಾಗುವ ಲಕ್ಷಣಗಳಿವೆ ಎಂದವರು ಎಚ್ಚರಿಸಿದ್ದಾರೆ.
ಗೋರಕ್ಸಿಂಗ್ ವರದಿ ಆಧಾರಿತ ಅಡಕೆ ಬೆಳೆಗಾರರಿಗೆ ಪುನಶ್ಚೇತನ ಕಾರ್ಯಕ್ರಮದಡಿ 5 ಎಕರೆವರೆಗೆ ರು. 30,000 ಸರ್ಕಾರ ಹಣ ವಿತರಿಸಬೇಕು ಎಂದರು.
ಕೊಳೆರೋಗ ಪೀಡಿತ ಎಕರೆಗೆ ರು. 30 ಸಾವಿರದಂತೆ ವಿತರಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ರೈತ ಸಂಘದ ಸಿ. ಕುಮಾರಸುಬ್ರಹ್ಮಣ್ಯ ಶಾಸ್ತ್ರಿ, ಬಿ. ಶ್ರೀಧರ ಶೆಟ್ಟಿ, ಈಶ್ವರಗೌಡ, ಮನೋಹರ ಶೆಟ್ಟಿ, ವಿಜಯಕುಮಾರ್ ದಂಬೆ ಮೊದಲಾದರು ಈ ಸಂದರ್ಭದಲ್ಲಿ ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

