ಈ ಬಾರಿ ದಸರಾ ಎಲ್ಲಿ?
ಕ.ಪ್ರ.ವಾರ್ತೆ ಶಿವಮೊಗ್ಗ ಆ.24
ಇನ್ನೊಂದೆರಡು ವರ್ಷದಲ್ಲಿ ಹಾಲಿ ಜೈಲು ಸ್ಥಳಾಂತರವಾದ ನಂತರ ಅಲ್ಲಿಯೇ ದಸರಾ ಬನ್ನಿ ಮುಡಿಯುವ ಕಾರ್ಯಕ್ರಮ ಮಾಡಬಹುದು ಎನ್ನುವುದಾದರೆ ಈ ವರ್ಷವೇ ಬೇರೆಡೆ ಮಾಡಲು ಇರುವ ಸಮಸ್ಯೆಯಾದರೂ ಏನು?
ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಶನಿವಾರ ದಸರಾ ಆಚರಣೆ ಬಗ್ಗೆ ಕರೆಯಲಾದ ಸಭೆಯಲ್ಲಿ ಮೂಡಿಬಂದ ಪ್ರಶ್ನೆ ಇದು. ಚರ್ಚೆ ತೀವ್ರವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಂಚಾಲಕ ದೀನದಯಾಳು ಹೇಳಿದ ಮಾತೆಂದರೆ- ಎರಡು ವರ್ಷಗಳ ನಂತರ ನೀವು ಎಲ್ಲಿ ಹೇಳುತ್ತೀರೋ ಅಲ್ಲಿಯೇ ಮಾಡೋಣ. ಆದರೆ ಈ ವರ್ಷ ಮಾತ್ರ ನೆಹರೂ ಕ್ರೀಡಾಂಗಣದಲ್ಲಿಯೇ ಆಗಬೇಕು.
ಇದೇ ವೇಳೆ ಕರ್ನಾಟಕ ಜನತಾ ಪಕ್ಷದ ಜಿಲ್ಲಾಧ್ಯಕ್ಷ, ಸಹ್ಯಾದ್ರಿ ಸ್ನೇಹ ಸಂಘದ ಜ್ಯೋತಿಪ್ರಕಾಶ್, ಇಲ್ಲಿ ನಡೆದಿರುವ ಕಾಮಗಾರಿ ಕಳಪೆ ಎಂಬ ಆರೋಪ ಬಂದಿದೆ. ಈ ಬಗ್ಗೆ ಮೊದಲು ತನಿಖೆ ಆಗಬೇಕು. ಇಲ್ಲಿ ದಸರಾ ಆಚರಣೆ ಮಾಡಿ ಗುತ್ತಿಗೆದಾರರು ಬಚಾವ್ ಆಗಿಬಿಡುತ್ತಾರೆ ಎಂದು ಮಾರ್ಮಿಕವಾಗಿ ಹೇಳಿದರು.
ವಿಷಯವನ್ನು ಇನ್ನೂ ಮುಂದಕ್ಕೆ ಕೊಂಡೊಯ್ದ ಜಿಲ್ಲಾ ಒಲಂಪಿಕ್ ಅಸೋಸಿಯೇಷನ್ನ ಕಾರ್ಯ ಕೆ.ಎಸ್. ಶಶಿ ಅವರು ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ, ಇಲ್ಲಿ ದಸರಾ ಹಬ್ಬ ನಡೆಯಲಿ, ಬಿಡಲಿ ಟ್ರ್ಯಾಕ್ ಹಾಳಾಗುವುದಂತೂ ಸತ್ಯ. ಹಾಗಾಗಿ ಮೊದಲು ಕಾಮಗಾರಿಯ ಬಗ್ಗೆ ತನಿಖೆ ನಡೆಯಬೇಕು ಎಂದರು. ಈ ಕುರಿತು ಮನವಿಯನ್ನೂ ಸಲ್ಲಿಸಿದರು.
ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಕೆ.ಎಸ್. ಈಶ್ವರಪ್ಪ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿದ ನಂತರವೂ ರಾಷ್ಟ್ರೀಯ ಹಬ್ಬ, ದಸರಾ ಆಚರಿಸಬಹುದು ಎಂದು ಕೈಗೊಂಡ ತೀರ್ಮಾನವು ಶನಿವಾರದ ಸಭೆಯಲ್ಲಿ ತೀವ್ರ ವಿಮರ್ಶೆಗೊಳಪಟ್ಟಿತು.
ತೀರ್ಮಾನಗಳು: ಮೈಸೂರು ಬಿಟ್ಟರೆ ಅದ್ದೂರಿ ದಸರಾ ನಡೆಯುವುದು ಶಿವಮೊಗ್ಗದಲ್ಲಿಯೇ.
ಈ ಸಂದರ್ಭದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮವನ್ನು ನೆಹರೂ ಕ್ರೀಡಾಂಗಣದಲ್ಲಿಯೇ ಮಾಡಬೇಕೇ, ಬೇರೆ ಸ್ಥಳ ನೋಡಬೇಕೇ- ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿ ವಿಪುಲಲ್ಬನ್ಸಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ.
ಆದರೆ, ನೆಹರೂ ಕ್ರೀಡಾಂಗಣದಲ್ಲಿ ದಸರಾ ಕಾರ್ಯಕ್ರಮ ನಡೆಸಲು ಸಾಧ್ಯವೇ ಅಲ್ಲಿ ಅಳವಡಿಸಿರುವ ಸಿಂಥೆಟಿಕ್ ಟ್ರ್ಯಾಕ್ ತಾಳಿಕೊಳ್ಳಬಹುದೇ ಎಂಬ ಬಗ್ಗೆ ಮೂವರು ತಜ್ಞರ ಸಮಿತಿ ರಚಿಸಿ ವರದಿ ನೀಡಿದ ನಂತರ ಚರ್ಚಿಸಲು ನಿರ್ಧರಿಸಲಾಯಿತು. ಇನ್ನೊಂದು ವಾರದಲ್ಲಿ ಮತ್ತೆ ಸಭೆ ಕರೆದು ತಜ್ಞರ ವರದಿ ಆಧಾರದ ಮೇಲೆ ಚರ್ಚಿಸಿ, ಸಾಧ್ಯವಾಗದಿದ್ದರೆ ಪರ್ಯಾಯ ಸ್ಥಳಗಳನ್ನು ನಿರ್ದರಿಸುವುದಾಗಿ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ ಅವರು, ದಸರಾ ಕಾರ್ಯಕ್ರಮ ಮೊದಲು ಮಾರ್ನವಮಿ ಬೈಲಿನಲ್ಲಿ ನಡೆಯುತ್ತಿತ್ತು. ನಂತರ ಗಾಂಧಿ ಪಾರ್ಕ್ ಎದುರು, ಸ್ವಲ್ಪ ವರ್ಷಗಳ ಬಳಿಕ ಹಳೇ ಜಿಲ್ಲಾಧಿಕಾರಿ ಕಚೇರಿ ಇದ್ದ ಜಾಗ, ಜನರು ಸೇರುವುದು ಹೆಚ್ಚಾದ ನಂತರ ಕ್ರೀಡಾಂಗಣದ ಹೊರಭಾಗ, ನಂತರ ಕ್ರೀಡಾಂಗಣದ ಒಳಭಾಗದಲ್ಲಿ ನಡೆಯಲಾರಂಭಿಸಿತು. ಈ ಬಾರಿಯೂ ಬದಲಾವಣೆ ಆದರೆ ಅದಕ್ಕೆ ವಿಶೇಷ ಅರ್ಥ ಬೇಡ ಎಂದರು.
ಯಾರು ಹೇಗೆ?: ನೆಹರೂ ಕ್ರೀಡಾಂಗಣದಲ್ಲಿಯೇ ದಸರಾ ಆಚರಣೆ ನಡೆಯಬೇಕು ಎಂದು ಬಲವಾಗಿ ವಾದ ಮಂಡಿಸಿದ್ದು ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ನಗರಸಭೆ ಮಾಜಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ, ಬಜರಂಗದಳ ಜಿಲ್ಲಾ ಸಂಚಾಲಕ ದೀನದಯಾಳು. ರಾಮ್ಪ್ರಸಾದ್, ಡಿ.ಎಸ್. ಅರುಣ್.
ಅಲ್ಲಿ ದಸರಾ ಮಾಡಲು ಅವಕಾಶ ಮಾಡಿಕೊಟ್ಟರೆ ಸಿಂಥೆಟಿಕ್ ಟ್ರ್ಯಾಕ್ ಹಾಳಾಗುತ್ತದೆ, ಅವಕಾಶ ಮಾಡಿಕೊಡಬಾರದು ಎಂದು ಹೇಳಿದ್ದು ಕರ್ನಾಟಕ ಜನತಾ ಪಕ್ಷದ ಪುರುಷೋತ್ತಮ್, ಜ್ಯೋತಿಪ್ರಕಾಶ್, ಐಡಿಯಲ್ ಗೋಪಿ.
ತಜ್ಞರ ವರದಿ ಪಡೆದು, ಅವರು ದಸರಾ ಆಚರಣೆಯಿಂದ ಟ್ರ್ಯಾಕ್ ಹಾಳಾಗುವುದಿಲ್ಲ ಎಂದು ನಡೆಸಲು ನಮ್ಮ ಅಭ್ಯಂತರವೇನೂ ಇಲ್ಲ ಎಂದವರು ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ಎಸ್.ವಿ. ತಿಮ್ಮಯ್ಯ, ಎಂ. ರಮೇಶ್.
ಹಾಲಿ ಸಿಂಥೆಟಿಕ್ ಟ್ರಾಕ್ ಇರುವುದರಿಂದ ಕ್ರೀಡೆ ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ ಎಂದವರು ಕ್ರೀಡಾಪಟುಗಳಾದ ಸತೀಶ್ ಕುಮಾರ್, ರಾಜುವೇಲು, ಫಿಲೋಮಿನಾ ರಾಜ್.
ಈ ನಡುವೆ ಜೆಎನ್ಎನ್ಸಿಇ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸದಾನಂದ, ಅಂತಾರಾಷ್ಟ್ರೀಯ ಮಟ್ಟದ ಒಲಂಪಿಕ್ ಇತ್ಯಾದಿ ಕೂಟದ ಉದ್ಘಾಟನಾ ಸಮಾರಂಭಗಳನ್ನು ಕ್ರೀಡಾಂಗಣದಲ್ಲಿಯೇ ಮಾಡುತ್ತಾರೆ ಎಂದರು. ಆದರೆ ಅವರು ಕಾರ್ಯಕ್ರಮವನ್ನು ಟ್ರ್ಯಾಕ್ಮೇಲೆಯೇ ಮಾಡುತ್ತಾರೆ ಎಂದು ಹೇಳದೇ ಟೀಕೆಯಿಂದ ಬಚಾವಾದರು.
ಕೊನೆಗೆ ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಅವರು, ನೆಹರೂ ಕ್ರೀಡಾಂಗಣದಲ್ಲಿಯೇ ನಡೆಸುವುದಕ್ಕೆ ಆದ್ಯತೆ ಕೊಡೋಣ.
ಸಾಧ್ಯವಾಗದಿದ್ದರೆ ಮಿಳಘಟ್ಟ, ಎನ್ಇಎಸ್ ಮೈದಾನ, ಸಹ್ಯಾದ್ರಿ ಕಾಲೇಜಿನ ಮೈದಾನ ಇತ್ಯಾದಿ ಜಾಗಗಳನ್ನು ಮನಸ್ಸಿನಲ್ಲಿಕೊಂಡು ಬನ್ನಿ. ಮುಂದಿನ ಸಭೆಯಲ್ಲಿ ಚರ್ಚಿಸೋಣ ಎಂದು ಸಭೆ ಮುಗಿಸಿದರು.
ಕೋಲಾಹಲ... ಸಭಾತ್ಯಾಗ
ಗಲಾಟೆ ಕೋಲಾಹಲಗಳ ನಡುವೆ ಈ ಬಾರಿ ದಸರಾ ಹಬ್ಬವನ್ನು ನೆಹರೂ ಕ್ರೀಡಾಂಗಣದಲ್ಲಿ ಆಚರಿಸಬೇಕೇ, ಬೇಡವೇ ಎಂಬುದರ ಬಗ್ಗೆ ಬಿರುಸಿನ ಚರ್ಚೆ ನಡೆಯಿತು.
ಈಗ ಸಭೆಯಲ್ಲಿ ಭಾಗವಹಿಸಿರುವ ಮೇವರಿಕ್ ಟರ್ಫ್ ಕಾರ್ಪೋರೇಷನ್ ಹಾಗೂ ಸಿಂಥೆಟಿಕ್ ಟ್ರ್ಯಾಕ್ ಗುತ್ತಿಗೆದಾರರು ಹಿಂದಿನ ಸಭೆಯಲ್ಲಿ ತಪ್ಪು ಮಾಹಿತಿ ನೀಡಿದ್ದೇಕೆ ಎಂದು ಪ್ರಶ್ನಿಸಿದಾಗ, ನನಗೆ ಕನ್ನಡ ಬರುವುದಿಲ್ಲ ಎಂದು ಸಂದೀಪ್ ಲಿಂಗಾಡೆ ಅವರು ಹೇಳಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಒಂದು ಹಂತದಲ್ಲಿ ಕರ್ನಾಟಕ ಜನತಾ ಪಕ್ಷದ ಪುರುಷೋತ್ತಮ್ ಅವರು ತಾವು ನೆಹರೂ ಕ್ರೀಡಾಂಗಣದಲ್ಲಿಯೇ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಬೇಕು ಎಂದು ತೀರ್ಮಾನಿಸಿದ್ದ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಹೇಳಿದಾಗ ಸುಳ್ಳು ಸುಳ್ಳು ಎಂಬ ಕೂಗು ಕೇಳಿಬಂತು. ಹಿಂದಿನ ಸಭೆಯ ನಡಾವಳಿಯಲ್ಲಿ ಅವರ ಹೆಸರಿದ್ದುದನ್ನು ತೋರಿಸಲಾಯಿತು.
ಇನ್ನೊಂದು ಸಂದರ್ಭದಲ್ಲಿ ಪುರುಷೋತ್ತಮ್ ಮಾತನಾಡಲು ಎದ್ದಾಗ ರಾಮ್ಪ್ರಸಾದ್ ಕುತ್ಕೊಳ್ರಿ ಅಂತ ಹೇಳಿದ್ದು ಕೋಲಾಹಲಕ್ಕೆ ಕಾರಣವಾಯಿತು. ಇಬ್ಬರ ನಡುವೆ ವಾಗ್ಯುದ್ಯ ನಡೆಯಿತು. ಡಿಸಿ ಬನ್ಸಲ್ ಅವರೇ ಎದ್ದುನಿಂತು ಸಮಾಧಾನಪಡಿಸಿದರು.
ದೀನದಯಾಳು ಅವರು ಪದೇಪದೇ ಮಾತನಾಡಲು ಎದ್ದುನಿಂತಾಗ ಜಿಲ್ಲಾಧಿಕಾರಿಯವರು ನಿಮಗೆ ಮಾತನಾಡಲು ಅವಕಾಶ ಮಾಡಿಕೊಡಲಾಗುವುದು. ಈಗ ಕುಳಿತುಕೊಳ್ಳಿ ಎಂದು ಹೇಳಿದ್ದು ಅವರಿಗೆ ಸಿಟ್ಟು ತರಿಸಿತ್ತು. ನೀವು ಅಗೌರವ ತೋರಿಸುತ್ತಿದ್ದೀರಿ ಎಂದು ಉಚ್ಚ ಸ್ವರದಲ್ಲಿ ಹೇಳಿ, ತಮ್ಮ ಜತೆಗೆ ಬಂದಿದ್ದ ತಂಡದೊಂದಿಗೆ ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗುತ್ತಾ ಹೊರನಡೆದರು. ನಂತರ ಸಭೆ ಮುಂದುವರಿಸಿ ತಾಂತ್ರಿಕ ಸಮಿತಿಯ ಸಲಹೆ ಪಡೆಯಲು ತೀರ್ಮಾನಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

