ದುಷ್ಕರ್ಮಿಗಳ ಕೃತ್ಯ ಖಂಡಿಸಿ ಪ್ರತಿಭಟನೆ
ಕ.ಪ್ರ. ವಾರ್ತೆ ಸಾಗರ ಆ.26
ತಾಲೂಕಿನ ಬರೂರು- ಕಲ್ಕೊಪ್ಪ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎದುರಿನಲ್ಲಿ ನಿರ್ಮಿಸಲಾಗಿದ್ದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ಹೆಸರಿನ ವೃತ್ತವನ್ನು ರಾತ್ರೋರಾತ್ರಿ ನೆಲಸಮಗೊಳಿಸಿ, ವೃತ್ತದ ಮೇಲ್ಭಾಗದಲ್ಲಿದ್ದ ಕನ್ನಡದ ಧ್ವಜವನ್ನು ಕಿತ್ತೆಸೆದಿರುವ ದುಷ್ಕರ್ಮಿಗಳ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ಬೇಳೂರು ಅಭಿಮಾನಿ ಬಳಗ ಹಾಗೂ ಕಲ್ಕೊಪ್ಪ ಗ್ರಾಮಸ್ಥರು ಸೋಮವಾರ ಟೈರ್ ಸುಟ್ಟು ಪ್ರತಿಭಟನೆ ನಡೆಸಿದರು.
ಗೋಪಾಲಕೃಷ್ಣ ಬೇಳೂರು ಶಾಸಕರಾಗಿದ್ದ ಅವಧಿಯಲ್ಲಿ ತಾಲೂಕಿನ ಕಲ್ಕೊಪ್ಪ ಕಾಲೇಜು ಸಮೀಪ ಬೇಳೂರು ಅಭಿಮಾನಿ ಬಳಗ ಹಾಗೂ ಗ್ರಾಮಸ್ಥರು ಜಂಟಿಯಾಗಿ ವೃತ್ತವನ್ನು ನಿರ್ಮಿಸಿದ್ದರು. ನಿರ್ಮಾಣ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿ ಹಾಗೂ ಪಿಡಬ್ಲ್ಯೂಡಿ ಇಲಾಖೆಯಿಂದ ಒಪ್ಪಿಗೆಯನ್ನು ಪಡೆಯಲಾಗಿತ್ತು. ಬರೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ವೃತ್ತವನ್ನು ಉದ್ಘಾಟನೆ ಮಾಡಿದ್ದರು ಎಂದು ಪ್ರತಿಭಟನಾಕಾರರು ತಿಳಿಸಿದರು.
ಅಪಘಾತ ಸಂಖ್ಯೆ ಕ್ಷೀಣ: ವೃತ್ತ ನಿರ್ಮಾಣ ಮಾಡಿ ಅಕ್ಕಪಕ್ಕದ ಊರುಗಳಿಗೆ ಹೋಗುವ ಮಾರ್ಗಸೂಚಿಯ ನಾಮಫಲಕ ಅಳವಡಿಸುವ ಜೊತೆಗೆ ಧ್ವಜಸ್ತಂಭ ನಿರ್ಮಿಸಿ ಶಾಶ್ವತ ಕನ್ನಡಧ್ವಜವನ್ನು ಸ್ಥಾಪಿಸಲಾಗಿತ್ತು. ಸದರಿ ಸ್ಥಳದಲ್ಲಿ ಮೊದಲು ಸಾಕಷ್ಟು ಅಪಘಾತಗಳು ನಡೆಯುತ್ತಿದ್ದವು. ವೃತ್ತ ನಿರ್ಮಿಸಿದ ಮೇಲೆ ಅಪಘಾತ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದರು.
ಸೋಮವಾರ ರಾತ್ರಿ ದುಷ್ಕರ್ಮಿಗಳು ವೃತ್ತವನ್ನು ಒಡೆದಿದ್ದು, ಧ್ವಜಸ್ತಂಭ ಹಾಗೂ ಕನ್ನಡ ಧ್ವಜವನ್ನು ಕಿತ್ತೆಸೆದಿದ್ದಾರೆ
. ತಾಲೂಕಿನಲ್ಲಿ ಕೆಲವರು ದ್ವೇಷದ ರಾಜಕಾರಣ ಮಾಡುತ್ತಿದ್ದು, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ. ವೃತ್ತವನ್ನು ಧ್ವಂಸಗೊಳಿಸಿ ಕನ್ನಡ ಧ್ವಜಕ್ಕೆ ಅವಮಾನ ಮಾಡಿರುವವರನ್ನು ತಕ್ಷಣ ಬಂಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಪವಿಭಾಗಾಧಿಕಾರಿಗಳ ಕಚೇರಿ ಎದುರು ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಬೇಳೂರು ಅಭಿಮಾನಿ ಬಳಗದ ಗಣಪತಿ ಮಂಡಗಳಲೆ, ಬಸವರಾಜ ಕುಗ್ವೆ, ಭೀರೇಶ್ ಕಾಗೋಡು, ಗ್ರಾಮಸ್ಥರಾದ ವಿರೇಶ್ ಮಳಕೇರಿ, ಧರ್ಮಣ್ಣ ಕಲ್ಕೊಪ್ಪ, ವಸಂತ ಕೊರ್ಲಿಕೊಪ್ಪ, ಬಸಪ್ಪ ಕೊರ್ಲಿಕೊಪ್ಪ, ಮಂಜಪ್ಪ ಕಲ್ಕೊಪ್ಪ, ತಿಮ್ಮಪ್ಪ ಕುಂದೂರು, ಮಂಜು ಮಾಲ್ವೆ ಮೊದಲಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

