ಶಿವಮೊಗ್ಗ

ವಿಐಎಸ್‌ಎಲ್ ಅವ್ಯವಹಾರ: ತನಿಖೆಗೆ ಒತ್ತಾಯ

Published On :

ಕ.ಪ್ರ.ವಾರ್ತೆ  ಭದ್ರಾವತಿ   ಆ.28
ಪಟ್ಟಣದ ವಿಐಎಸ್‌ಎಲ್ ಕಾರ್ಖಾನೆಯ ಮಾರಾಟ ವಿಭಾಗದಲ್ಲಿ ನಡೆದಿರುವ ಕೋಟ್ಯಂತರ ರು.ಗಳ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಹಾಗೂ ರಾಜ್ಯ ಸರ್ಕಾರ ಗೋ ಹತ್ಯೆ ತಿದ್ದುಪಡಿ ಮಸೂದೆ ವಾಪಸ್ ಮತ್ತು ಧಾರ್ಮಿಕ ಪರಿಷತ್ ಸಮಿತಿಗಳ ರದ್ಧತಿ ವಿರೋಧಿಸಿ ಬುಧವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಭಾಜಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತತ್ತಿ ಕಾರ್ಖಾನೆಯಲ್ಲಿ ಜ.16ರಿಂದ ಜೂ.4ರ ವರೆಗೆ ಬೀಡು ಕಬ್ಬಿಣ ಮಾರಾಟ ಮಾಡಿದ್ದು ಇದರ ಬಾಬ್ತು 5.33 ಲಕ್ಷದಲ್ಲಿ 2.63 ಲಕ್ಷ ಮಾತ್ರ ಪಾವತಿಯಾಗಿದ್ದು ಉಳಿತ 2.70 ಲಕ್ಷ ಪಾವತಿಯಾಗದ ಬಗ್ಗೆ ಕಳೆದ ತಿಂಗಳ ವರೆಗಿನ ಲೆಕ್ಕ ತಪಾಸಣೆ ಮಾಡುವಾಗ ಬೆಳಕಿಗೆ ಬಂದಿರುವುದು ವಿಪರ್ಯಾಸವೆಂದು ತಿಳಿಸಿದರು.
ಅನುಮಾನಗಳಿಗೆ ಕಾರಣ: ಕಾರ್ಖಾನೆಯ ಮಾರುಕಟ್ಟೆ ವಿಭಾಗದ ಉಪ ಮಹಾಪ್ರಬಂಧಕ ವಾಸು ಅವರು ನ್ಯೂಟೌನ್ ಠಾಣೆಯಲ್ಲಿ ಮಾರುಕಟ್ಟೆ ವಿಭಾಗದ ಸಹಾಯಕ ಮಹಾಪ್ರಬಂಧಕ ಮಲ್ಲಿಕಾರ್ಜುನಪ್ಪ ಹಾಗೂ ಸರಕು ಖರೀದಿದಾರರ ಮೇಲೆ ಮಾತ್ರ ದೂರು ನೀಡಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಇದರಲ್ಲಿ ಅನೇಕ ಕಾಣದ ಕೈಗಳ ಕೈವಾಡವಿದೆ ಎಂದು ಅವರು ಆರೋಪಿಸಿದರು.
ಕಾರ್ಮಿಕರ ಸಂಘ ಈ ಬಗ್ಗೆ ಚಕಾರವೆತ್ತದಿರುವುದು ಮತ್ತಷ್ಟು ಗುಮಾನಿಗೆ ಪುಷ್ಟೀಕರಣ ನೀಡಿದೆ ಎಂದು ಸಹ ಅವರು ತಿಳಿಸಿದರು. ಕಾರ್ಖಾನೆಯಲ್ಲಿ ತಯಾರಾದ ಉತ್ಪನ್ನಗಳನ್ನು ಖರೀದಿಸುವವರು ಕಾರ್ಖಾನೆಗೆ ಮುಂಗಡವಾಗಿ ಅಥವಾ ಬ್ಯಾಂಕ್‌ಗ್ಯಾರಂಟಿ ಮೂಲಕ ಪಾವತಿ ನೀಡಿ ಸರಕುಗಳನ್ನು ಖರೀದಿಸಬೇಕಾಗಿರುವುದು ಅನಿವಾರ್ಯವಾಗಿದೆ.
80ಕ್ಕೂ ಅಧಿಕ ಲೋಡ್: ಈ ಪ್ರಕ್ರಿಯೆಯಲ್ಲಿ ಕಾರ್ಖಾನೆಯ ವಿವಿಧ ಹಂತದ ಅಧಿಕಾರಿಗಳ ಗಮನಕ್ಕೆ ವ್ಯವಹಾರ ಗಮನಕ್ಕೆ ಬಂದನಂತರವಷ್ಟೇ ಸರಕು ಸಾಗಾಣಿಕೆ ಆಗಬೇಕು. ಆದರೆ, ಜ.16, 2013ರಿಂದ ಜೂ.4, 2013ರ ವರೆಗೆ ಸುಮಾರು 80ಕ್ಕೂ ಅಧಿಕ ಬೀಡು ಕಬ್ಬಿಣದ ಲೋಡುಗಳು ಕಾರ್ಖಾನೆಯಿಂದ ಸಾಗಿಸಲ್ಪಟ್ಟಿವೆ.
ಆದರೆ, ಕೇವಲ ಮಾರುಕಟ್ಟೆ ವಿಭಾಗದ ಸಹಾಯಕ ಮಹಾಪ್ರಬಂಧಕ ಮಲ್ಲಿಕಾರ್ಜುನಪ್ಪ ಮತ್ತು ಖರೀದಿದಾರರ ಮೇಲೆ ಮಾತ್ರ ದೂರು ದಾಖಲಿಸಿ ಉಳಿದ ಹಂತದ ಅಧಿಕಾರಿಗಳ ಮೇಲೆ ಯಾವುದೇ ದೂರು ನೀಡದಿರುವುದನ್ನು ನೋಡಿದರೆ ಇದರ ಹಿಂದೆ ಪ್ರಭಾವಿಗಳ ಕೈವಾಡವಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ದತ್ತಾತ್ರಿ ಆರೋಪಿಸಿದರು.
ಸಂಘ ಪರಿವಾರದ ಮುಖಂಡ ಧರ್ಮಪ್ರಸಾದ್ ರಾಜ್ಯ ಸರ್ಕಾರ ಗೋ ಹತ್ಯೆ ತಿದ್ದುಪಡಿ ಮಸೂದೆ ವಾಪಸ್ ಪಡೆದಿರುವುದು ಮತ್ತು ಧಾರ್ಮಿಕ ಪರಿಷತ್ ಸಮಿತಿಗಳನ್ನು ರದ್ದು ಪಡಿಸಿರುವುದು ನೋಡಿದರೆ ದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತಕ್ಕಿಂದ ಬ್ರಿಟೀಷ್ ಆಡಳಿತವೇ ಮೇಲಾಗಿತ್ತೆಂದು ಕುಹಕವಾಡಿದರು.
ನಾಚಿಕೆಗೇಡಿನ ಸಂಗತಿ: ಮತ ಬ್ಯಾಂಕ್ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಓಲೈಸಲು ಈ ಮಸೂದೆಯನ್ನು ವಾಪಸ್ ಪಡೆದಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದರು.
ಅರಳಿಹಳ್ಳಿ ಪ್ರಕಾಶ್ ಹಾಗೂ ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಹಾ. ರಾಮಪ್ಪ ಸಹ ಮಾತನಾಡಿದರು. ಭಾಜಪ ನಗರ ಘಟಕದ ಅಧ್ಯಕ್ಷ ಎಂ. ಮಂಜುನಾಥ್ ಮನವಿ ಪತ್ರವನ್ನು ತಹಸೀಲ್ದಾರ್‌ಗೆ ಅವರಿಗೆ ಅರ್ಪಿಸಿದರು.
ಪಕ್ಷದ ಮುಖಂಡರುಗಳಾದ ರಮೇಶ್, ಶಿವಾಜಿರಾವ್ ಸಿಂಧ್ಯ, ಬಿ.ಎಚ್. ರುದ್ರಪ್ಪ, ಸಂಪತ್‌ರಾಜ ಬಾಂಟಿಯಾ, ಬಿ.ಕೆ. ಶ್ರೀನಾಥ್, ಕರುಣಾಕರನ್, ಹೇಮಾವತಿ ವಿಶ್ವನಾಥರಾವ್, ಆರ್.ಎಸ್. ಶೋಭ, ಸತೀಶ್, ಮೂರ್ತಿ, ಸುನಿಲ್, ಎಂ.ಎಸ್. ಸುರೇಶಪ್ಪ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.