ಕೋತಿರಾಜ್ ಹೆಸರೇ ನಂಗಿಷ್ಟ.....
ಕ.ಪ್ರ.ವಾರ್ತೆ, ಶಿವಮೊಗ್ಗ, ಆ.29
ನಾನು ಜ್ಯೋತಿಯಲ್ಲ. ಕೋತಿ. ನನ್ನನ್ನು ಕೋತಿರಾಜ್ ಎಂದು ಕರೆದರೇ ನಂಗಿಷ್ಟ.. ನನಗೆ ಅದೇ ಪ್ರೇರಣೆಯಾಗಿದ್ದು. ನನ್ನನ್ನು ಕೋತಿರಾಜ್ ಎಂದು ಸಂಭೋದಿಸಿದರೆ ಸಂತೋಷವಾಗುತ್ತದೆ. ಇದು ನಾನು ಇಟ್ಟುಕೊಂಡ ಹೆಸರಲ್ಲ. ಜನರು ಪ್ರೀತಿಯಿಂದ ಇಟ್ಟ ಹೆಸರು. ಹಾಗೆಯೇ ಕರೆಯಬೇಕು..
ಇದು ಕರ್ನಾಟಕದ ಯುವ ಸಾಹಸಿ ಕೋತಿರಾಜ್ ಅವರ ಮನವಿ.
ಕೋತಿರಾಜ್ ಎಂಬ ಹೆಸರು ಪಡೆಯುವುದು ಬಹಳ ಕಷ್ಟ. ಆದರೆ, ನನಗೆ ಈ ಹೆಸರು ದಕ್ಕಿರುವುದಕ್ಕೆ ಸಂತೋಷವಾಗಿದೆ ಎಂಬುದು ಕೋತಿರಾಜ್ ಅಭಿಮತ.
ಆತ್ಮಹತ್ಯೆ ಯತ್ನ: ನಾನು ಒಂದೆರಡು ಬಾರಿ ಅಲ್ಲ, 3 ಬಾರಿ ಆತ್ಯಹತ್ಯೆ ಮಾಡಿಕೊಳ್ಳಲು ಹೋಗಿದ್ದೆ. ಆದರೆ, ವಿಧಿ ನನ್ನನ್ನು ಕರೆದುಕೊಳ್ಳಲಿಲ್ಲ. ನಾನು ನನ್ನ ತಂದೆ, ತಾಯಿಂದ ಬೇರೆ ಇದ್ದು ಜೀವನ ನಡೆಸುತ್ತಿದ್ದೆ. ಇನ್ನೊಬ್ಬರ ಮನೆಯಲ್ಲಿ ಜೀವನ ನಡೆಸುತ್ತಿದ್ದೆ.
ಆಗ ಕಷ್ಟಗಳಿಂದ ಜೀವನ ನಡೆಸುತ್ತಿದ್ದೆ. ಈ ನೋವಿನಿಂದಲೇ ನಾನು ಸಾಯಲು ಹೋಗಿದ್ದೆ. ಮೊದಲ ಬಾರಿ ವಿಷ ತೆಗೆದುಕೊಂಡೆ ಜೀರ್ಣವಾಗಿ ಹೋಯಿತು.
ಎರಡನೇ ಬಾರಿ ನೀರಿನಲ್ಲಿ ಕಲ್ಲು ಕಟ್ಟಿಕೊಂಡು ಮುಳುಗಲು ಹೋದೆ, ಮುಳುಗುತ್ತಿದ್ದಂತೆ ಭಯವಾಗಿ ಕಲ್ಲನ್ನೂ ಹೊತ್ತುಕೊಂಡೇ ಹೊರಬಂದೆ, 3ನೇ ಬಾರಿ ಗಟ್ಟಿ ಮನಸ್ಸು ಮಾಡಿ ಚಿತ್ರದುರ್ಗದ ಬಂಡೆ ಮೇಲಿಂದ ಬಿದ್ದು ಸಾಯಲು ಹೋಗಿದ್ದೆ. ಆಗ ಕೋತಿಯೊಂದು ನಿರಾಸಯಾವಾಗಿ ಬಂಡೆ ಹತ್ತಿತ್ತು.
ಇದನ್ನು ಕಂಡು ನಾನು ಅದೇ ದಾರಿಯಲ್ಲಿ ಹತ್ತಿದೆ. 50-60 ಅಡಿ ಎತ್ತರಕ್ಕೆ ಏರಿದೆ. ಇಲ್ಲಿಂದ ಹಾರಿದರೆ, ಕೈ, ಕಾಲು ಮುರಿಯುತ್ತದೆ ಸಾಯುವುದಿಲ್ಲ ಎಂಬ ಅರಿವಾಯಿತು. ಕೊನೆಗೆ ಬಂಡೆ ಮೇಲೆ ಹತ್ತಿ ಕೆಳಗಡೆ ನೋಡಿದರೆ ನೂರಾರು ಜನ ಚಪ್ಪಾಳೆ, ಶಿಳ್ಳೆ ಹೊಡೆದರು.
ಈ ಸಂದರ್ಭಧಲ್ಲಿ ನಾನು ಸಾಯಲು ಬಂದಿದ್ದೇನೆ ಎಂದು ಹೇಳಿಕೊಳ್ಳಲು ಅಂಜಿಕೆಯಾಯಿತು. ಆಗ ಅಲ್ಲಿ ಸೇರಿದ್ದ ಜನ ರು. 6,800 ಕೊಡುಗೆ ನೀಡಿದರು. ಇದೊರಂದಿಗೆ ನನ್ನ ಸಾಹಸದ ಅರಿವು ನನಗಾಯಿತು. ಅದು ನಾನು ನನ್ನ ಜೀವನದಲ್ಲಿ ಕಂಡ ದೊಡ್ಡ ಮೊತ್ತ.
ಸಾಹಸದ ದಿನ ಪ್ರಾರಂಭ: ಇಲ್ಲಿಂದ ಶುರುವಾಯಿತು ನನ್ನ ಸಾಹಸದ ದಿನಗಳು. ನಂತರ ಚಿತ್ರದುರ್ಗದ ಕೋಟೆ ಏರಿದೆ. ಮಾಧ್ಯಮಗಳು ಹೆಚ್ಚು ಪ್ರಚಾರ ಕೊಟ್ಟವು. ಹಲವು ಬೆಟ್ಟ, ಗುಡ್ಡಗಳನ್ನು ಏರಿದೆ.
ಕಳೆದ 2 ವರ್ಷಗಳಿಂದ ಜೋಗವನ್ನು ಏರಿದೆ. ಇದು ನನ್ನ ಕನಸು. ಹೆಚ್ಚು ಜನಪ್ರಿಯಕೊಟ್ಟಿತ್ತು.
ಹಲವು ಕೆರೆ, ಕಾಲುವೆಗಳಲ್ಲಿ ಬಿದ್ದಂತಹ ಶವಗಳನ್ನು ಪತ್ತೆ ಮಾಡಿಕೊಟ್ಟಿದ್ದೇನೆ. ಆದರೆ, ಜೋಗದಂತಹ ಫಾಲ್ಸ್ಗಳಲ್ಲಿ ಎಂದೂ ಏರಿರಲಿಲ್ಲ. ಶವಗಳನ್ನು ತೆಗೆದಿರಲಿಲ್ಲ. ಆದರೆ, ಕಳೆದ ಕೆಲ ದಿನಗಳ ಹಿಂದೆ ಜೋಗದಲ್ಲಿ ಶವ ತೆಗೆಯಲು ಹೋಗಿದ್ದೆ. ಇದೊಂದು ಅಪರೂಪದ ಅನುಭವ. ರಭಸವಾಗಿ ಹರಿಯುತ್ತಿದ್ದ ನೀರಿನ ನಡುವೆ ಶವಗಳ ಶೋಧ.
ಇದರೊಂದಿಗೆ ಇಂಬಳ, ಹಾವುಗಳ ಕಾಟ. ತೆಲೆಗೆ ಪೆಟ್ಟು ಬೇರೆ ಬಿತ್ತು. ಅಂದಿನ ದಿನವೇ ನನ್ನ ಕೊನೆ ದಿನ ಎಂದು ಭಾವಿಸಿದೆ. ಆದರೆ, ಮೇಲೆ ಬಂದ ನಂತರ ನನಗೆ ಆದ ಸಂತಸ ಅಷ್ಟಿಷ್ಟಲ್ಲ.
ಇಲ್ಲಿ ನೋವಿನ ಸಂಗತಿ ಎಂದರೇ, ಜಲಪಾತವನ್ನು ಎರಡು ಜಿಲ್ಲೆಯವರು ಹಂಚಿಕೊಂಡಿರುವುದು. ರಾಜ, ರಾಣಿ ಪಾಲ್ಸ್ಗಳು ಕಾರವಾರಕ್ಕೆ, ರಾಕೇಟ್, ರೊರರ್ ಶಿವಮೊಗ್ಗ ಜಿಲ್ಲೆಯವರು ಹಂಚಿಕೊಂಡಿದ್ದಾರೆ. ಅಲ್ಲದೇ, ನಾನು ಫಾಲ್ಸ್ನಲ್ಲಿ ಇಳಿಯುವಾಗ ೊಪಲೀಸ್ ಅಧಿಕಾರಿಗಳು ಮುಚ್ಚಳಿಕೆ ಪತ್ರ ಬರೆಸಿಕೊಂಡರು.
ನನಗೆನ್ನಾದರೂ ಆದರೆ ನಾನೇ ಹೊಣೆ ಎಂದು ಬರೆಸಿಕೊಂಡರಲ್ಲ ಅದೇ ಬೇಸರದ ಸಂಗತಿ. ನಂತರ ನನ್ನ ಸಾಹಸ ನೋಡಿ ಅವರೇ ಕ್ಷೇಮೆ ಕೇಳಿದ್ದು ನನಗೆ ಮತ್ತಷ್ಟು ಪ್ರೋತ್ಸಾಹ ದೊರೆಯಿತು ಎಂದು ತಮ್ಮ ರೋಚಕದ ಅನುಭವವನ್ನು ಹಂಚಿಕೊಂಡು ಭಾವುಕರಾದರು.
ನನ್ನ ಕನಸು: ನನಗೊಂದು ಕನಸಿದೆ. ಅದೇನೆಂದರೇ ಪ್ರತಿಭಾವಂತ ಯುವಕರನ್ನು ಪ್ರೋತ್ಸಾಯಿಸಲು ಅಡ್ವೆಂಚರ್ ಇಂಡಿಯನ್ ಮಂಕಿ ಕ್ಲಬ್ ಸ್ಥಾಪನೆ ಮಾಡಿಕೊಂಡಿದ್ದೇನೆ. ಇಲ್ಲಿ ಸುಮಾರು 23 ಜನ ಯುವಕರು ತರಬೇತಿ ಪಡೆಯುತ್ತಿದ್ದಾರೆ.
ಇವರಿಗೆ ಪ್ರತಿನಿತ್ಯ ಬೆಳಗ್ಗೆ 6ರಿಂದ 8ಗಂಟೆವರೆಗೆ ಓಟ ಹಾಗೂ ವ್ಯಾಯಾಮ ಮಾಡಿಸಲಾಗುವುದು. ಶನಿವಾರ ಮತ್ತು ಭಾನುವಾರ ಕಠಿಣವಾದ ಬೆಟ್ಟ, ಗುಡ್ಡ ಹತ್ತಿಸುವ ಮೂಲಕ ತರಬೇತಿ ನೀಡಲಾಗುವುದು.
ಈ ಕ್ಲಬ್ಮೂಲಕ 2020 ರ ಒಲಂಪಿಕ್ ಸ್ಪರ್ಧೆಯಲ್ಲಿ ನನ್ನ ವಿದ್ಯಾರ್ಥಿಗಳು ಸಾಹಸ ಪ್ರದರ್ಶನದಲ್ಲಿ ಪಾಲ್ಗೊಂಡು, ಚಿನ್ನದ ಪದಕ ಪಡೆಯಬೇಕು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಬೇಕು ಎಂಬುದು ನನ್ನ ಕನಸು.
ಅದನ್ನು ಸಾಧಿಸಿಯೇ ಸಾಧಿಸುತ್ತೇನೆ. ಅದಕ್ಕಾಗಿ ನನ್ನ ವಿದ್ಯಾರ್ಥಿಗಳಿಗಾಗಿ ಕಠಿಣ ತರಬೇತಿ ನೀಡಲಾಗುವುದು ಎಂದರು.
ಪ್ರಶ್ನೋತ್ತರ
1. ನಿಮ್ಮ ಕನಸಿಗೆ ಸರ್ಕಾರದ ನೆರವು ಬಯಸುತ್ತಿರಾ?
ಇಲ್ಲ. ಸರ್ಕಾರವೇ ನಮ್ಮ ಸಾಹಸವನ್ನು ಗುರುತಿಸಿ ನೆರವು ನೀಡಿದರೆ ಸಂತೋಷ. ಇದೀಗ ಮಾಧ್ಯಮಗಳಿಂದ ಪ್ರಚಾರ ದೊರಕಿದೆ. ಮೊದಲನೇ ಸರ್ಕಾರವಾದ ಮಾಧ್ಯಮ ತನ್ನ ಕಾರ್ಯ ಮಾಡಿದೆ. ಮಂತ್ರಿಗಳಿರುವ ಎರಡನೇ ಸರ್ಕಾರ ಇದನ್ನು ಗಮನಿಸಿ, ಸಹಾಯ ಮಾಡಲು ಮುಂದಾಗಬೇಕು.
2. ಪ್ರತಿ ಮಾತಿನಲ್ಲೂ ಸಾವು ಎಂಬ ಪದ ಬಳಕೆ ಮಾಡುತ್ತಿರಾ ಏಕೆ?
ಸಾವನನ್ನು ಗೆದ್ದು ಬಂದವನು ನಾನು. ನನಗೆ ಯಾವಾಗ ಸಾವು ಬರುತ್ತದೋ ಗೊತ್ತಿಲ್ಲ. ಆದರೆ, ಸಾವಿನ ಬಗ್ಗೆ ಭಯ ಇಲ್ಲದವರು ಮಾತ್ರ ಇಂತಹ ಸಾಹಸ ಮಾಡಲು ಸಾಧ್ಯ. ಹಾಗಾಗಿ ಸಾವು ಎಂಬ ಪದ ತಾನಾಗಿಯೇ ನನ್ನಿಂದ ಹೊರ ಬರುತ್ತದೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೇ ವೇಳೆ ಸಂಘದಿಂದ ರು. 5,000 ಚೆಕ್ ಹಾಗೂ ಪತ್ರಕರ್ತ ಜೇಸುದಾಸ್ ವಾಕಿಟಾಕಿಯನ್ನು ಕೂಡಗೆಯಾಗಿ ನೀಡಿದರು. ಸಂಘದ ಅಧ್ಯಕ್ಷ ಶೃಂಗೇಶ್, ಪ್ರಧಾನ ಕಾರ್ಯದರ್ಶಿ ವೈ.ಕೆ. ಸೂರ್ಯನಾರಾಯಣ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

