ಶಿವಮೊಗ್ಗ

ಆಡಳಿತ ವೈಫಲ್ಯದಿಂದ ವಿಐಎಸ್ಎಲ್ ದುಸ್ಥಿತಿ

Published On :

ಕ.ಪ್ರ.ವಾರ್ತೆ, ಭದ್ರಾವತಿ, ಆ.31
ವಿಐಎಸ್ಎಲ್ ಕಾರ್ಖಾನೆ ಆಡಳಿತ ವರ್ಗದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರದ ಫಲವಾಗಿ ಕಾರ್ಖಾನೆ ಇಂದು ದುಃಸ್ಥಿತಿಯನ್ನು ಎದುರಿಸಬೇಕಾಗಿ ಬಂದಿದೆ ಎಂದು ವಿಐಎಸ್ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಎನ್. ಚಂದ್ರಹಾಸ ಆರೋಪಿಸಿದರು.
ಅವರು ಶನಿವಾರ ಬೆಳಗ್ಗೆ ಕಾರ್ಖಾನೆ ಮುಖ್ಯದ್ವಾರದೆದುರು ಕಾರ್ಮಿಕರ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದರು.
ರು. 2 ಕೋಟಿ ನಷ್ಟ: ಕಾರ್ಖಾನೆಯಲ್ಲಿ ಏಪ್ರಿಲ್ 2012ರಲ್ಲಿ ಪ್ರಾಮಾಣಿಕ ಅಧಿಕಾರಿಗಳು ನಿವೃತ್ತರಾದ ನಂತರ ಬೀಡು ಕಬ್ಬಿಣ ಮಾರಾಟ ವ್ಯವಹಾರದ ವಹಿವಾಟು ವಹಿಸಿಕೊಂಡ ಸಹಾಯಕ ಮಹಾಪ್ರಬಂಧಕ ಕೆ.ಎಂ. ಹಬೀದ್ ಮತ್ತು ಸಹಾಯಕ ಪ್ರಬಂಧಕ ಮಲ್ಲಿಕಾರ್ಜುನಪ್ಪ ಬೀಡು ಕಬ್ಬಿಣ ಮಾರಾಟದಲ್ಲಿ ಮಾರಾಟ ನಿಮಯ ಉಲ್ಲಂಘಿಸಿ, ಕಾರ್ಖಾನೆಗೆ ದ್ರೋಹ ಬಗೆದು ರು. 2.71 ಕೋಟಿಯ ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು.
ಈ ಇಬ್ಬರೂ ಅಧಿಕಾರಿಗಳು ಹಿಂದೆ ಬೇರೆಬೇರೆ ವಿಭಾಗಗಳಲ್ಲಿ ಭ್ರಷ್ಟಾಚಾರವೆಸಗಿದ್ದು, ಆಡಳಿತ ವರ್ಗದ ಗಮನಕ್ಕೆ ಬಂದಿದ್ದರೂ, ಅವರನ್ನು ಬಹಮುಖ್ಯ ಬೀಡುಕಬ್ಬಿಣ ಮಾರಾಟ ವಿಭಾಗದಲ್ಲಿ ನೇಮಿಸಿದ್ದು, ಆಡಳಿತ ವರ್ಗದ ನಿರ್ಲಕ್ಷ್ಯದ ನಿದರ್ಶನವಾಗಿದೆ ಎಂದು ಚಂದ್ರಹಾಸ ಹೇಳಿದರು.
ಗಮನಿಸಬೇಕಿತ್ತು: ಈ ಎಲ್ಲಾ ಬೆಳವಣಿಗೆಯನ್ನು ಕಾರ್ಯಪಾಲಕ ನಿರ್ದೇಶಕರು ಗಮನಿಸಬೇಕಿತ್ತು. ಈ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಳಗಳಲ್ಲಿ ನೇಮಿಸುವ ಮುನ್ನ ಅವರ ಪ್ರಾಮಾಣಿಕತೆ ಬಗ್ಗೆ ಕಾರ್ಯಪಾಲಕ ನಿರ್ದೇಶಕರು ವಿಚಾರಣೆ ನಡೆಸಬೇಕಿತ್ತು ಎಂದು ಚಂದ್ರಹಾಸ ಹೇಳಿದರು.
ಆಡಳಿತ ವರ್ಗದ ನಿರ್ಲಕ್ಷ್ಯದಿಂದ ಕಾರ್ಖಾನೆ ಆಸ್ತಿಪಾಸ್ತಿ, ಮನೆ, ಅಂಗಡಿ-ಮುಂಗಟ್ಟು ಲೂಟಿಕೋರರ ಪಾಲಾಗುತ್ತಿವೆ ಎಂದು ದೂರಿದ ಚಂದ್ರಹಾಸ ಹಗರಣ ಮಾಡಲೆಂದೇ ಅಧಿಕಾರಿಗಳು ಸಭೆ ನಡೆಸಿರುವುದು ಕಾರ್ಮಿಕ ಸಂಘದ ಪದಾಧಿಕಾರಿಗಳ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ಮೇಲ್ನೋಟಕ್ಕೆ ಮಲ್ಲಿಕಾರ್ಜುನಪ್ಪ ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರೂ ಇತರ ಅಧಿಕಾರಿಗಳನ್ನು ರಕ್ಷಿಸುವ ಯತ್ನವನ್ನು ಆಡಳಿತವರ್ಗ ನಡೆಸುತ್ತಿದೆ ಎಂದು ಆರೋಪಿಸಿದ ಚಂದ್ರಹಾಸ ರು. 2.71 ಕೋಟಿ  ವಂಚನೆಯ ಬೀಡುಕಬ್ಬಿಣದ ಮಾರಾಟ ಹಗರಣದಲ್ಲಿ ಇತರ ಅಧಿಕಾರಿಗಳೂ ಷಾಮೀಲಾಗಿದ್ದಾರೆಂದು ಆರೋಪಿಸಿದರು.
ವಿಐಎಸ್ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಎಲ್. ರಂಗೇಗೌಡ ಮಾತನಾಡಿ, ಗುತ್ತಿಗೆ ಕಾರ್ಮಿಕರಿಗೆ ಕಾರ್ಖಾನೆಯಲ್ಲಿ ಕೆಲಸ ಅನಿಶ್ಚಿತವಾಗುತ್ತಿದೆ.
ಒಂದೆಡೆ ಕಾರ್ಮಿಕ ಸಂಘ ಕಾರ್ಖಾನೆಗೆ ಗಣಿ ಮಂಜೂರು ಮಾಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಟ್ಟದಲ್ಲಿ ತನ್ನ ಪ್ರಾಮಾಣಿಕ ಕರ್ತವ್ಯ ಮಾಡುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳು ಕಾರ್ಖಾನೆಯನ್ನು ಲೂಟಿ ಮಾಡಲು ಸನ್ನಾಹ ನಡೆಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ಆಡಳಿತವರ್ಗ ಇಂತಹ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ಮುಂದಾಗುವುದು ಸರಿಯಲ್ಲ ಎಂದ ಅವರು ಕಾರ್ಮಿಕ ಸಂಘದ ಹೋರಾಟದಲ್ಲಿ ಗುತ್ತಿಗೆ ಕಾರ್ಮಿಕರೂ ಸಹ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಘೋಷಿಸಿದರು.
ವಿಐಎಸ್ಎಲ್ ಕಾರ್ಮಿಕ ಸಂಘದ ಉಪಾಧ್ಯಕ್ಷ ಎಸ್.ಸಿ.ಒ. ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಹೊನ್ನಯ್ಯ, ಕಾರ್ಯದರ್ಶಿ ಎನ್. ಶ್ರೀಧರ್ ಮತ್ತು ಖಜಾಂಚಿ ರೇವಣ್ಣ ಮಾತನಾಡಿ, ಆಡಳಿತವರ್ಗದ ಕಾರ್ಯವೈಖರಿಯನ್ನು ಖಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.