ಸಾಗುವಳಿ ಇಲ್ಲದ ಪ್ರದೇಶಕ್ಕೆ ತಹಸೀಲ್ದಾರ್ ಭೇಟಿ
ಸೊರಬ: ತಾಲ್ಲೂಕಿನ ಅಂದವಳ್ಳಿ ಗ್ರಾಮದ ಸಾಗುವಳಿ ಇಲ್ಲದ 30 ಎಕರೆ ಪ್ರದೇಶಕ್ಕೆ ಇಲ್ಲಿನ ತಹಸೀಲ್ದಾರ್ ಪಿ.ಜಿ. ನಟರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಅಂದವಳ್ಳಿ ಗ್ರಾಮದ ಸರ್ವೆ ನಂ. 236, 412, 413, 414, 415, 416 ಮತ್ತು 417ರಲ್ಲಿರುವ ಸುಮಾರು 30 ಎಕರೆ ಜಮೀನನ್ನು 38 ವರ್ಷಗಳ ಹಿಂದೆ ದರಖಾಸ್ತು ಮಂಜೂರಾತಿಯಲ್ಲಿ ಗ್ರಾಮಸ್ಥರಲ್ಲದ ಕೆಲವು ಖಾಸಗಿ ವ್ಯಕ್ತಿಗಳು ಕಂದಾಯ ಅಧಿಕಾರಿಗಳ ಮೇಲೆ ಪ್ರಭಾವ ಬಳಸಿ ಸಾಗುವಳಿ ಮಾಡದೇ, ಕಾನೂನು ಬಾಹಿರವಾಗಿ ಆರ್.ಟಿ.ಸಿ. ಹಾಗೂ ಇನ್ನಿತರ ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಕಬಳಿಸಲು ಹೊರಟಿದ್ದಾರೆ ಎಂದು ಗ್ರಾಮಸ್ಥರು ತಹಶೀಲ್ದಾರರ ಎದುರು ದೂರಿದರು.
ಸೂಕ್ತ ಕ್ರಮ: ಈ ದೂರಿನನ್ವಯ ಸ್ಥಳ ಪರಿಶೀಲನೆ ನಡೆಸಿದ ತಹಸೀಲ್ದಾರರು ಗ್ರಾಮಸ್ಥರಿಂದ ಮಾಹಿತಿ ಪಡೆದರು. ಸರ್ಕಾರಿ ಜಾಗದಿಂದ ಅತಿಕ್ರಮಣ ಮಾಡಿರುವವರನ್ನು ತೆರವುಗೊಳಿಸುವ ಬಗ್ಗೆ ವಿವರವಾದ ವರದಿಯನ್ನು ತಯಾರಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುವುದು ಎಂದರು.
ದುರ್ಬಳಕೆ: ಸುಮಾರು 30 ಎಕರೆ ಪ್ರದೇಶವನ್ನು ಸಾಗುವಳಿ ಇಲ್ಲದೇ ಸರ್ಕಾರಿ ಭೂಮಿಯನ್ನು ಆಕ್ರಮಿಸಲು ಹೊರಟಿರುವ ವ್ಯಕ್ತಿಗಳು ಅಂದವಳ್ಳಿ ಗ್ರಾಮದವರಲ್ಲ.
ಅಲ್ಲದೇ ಕೃಷಿಕರೂ ಅಲ್ಲ ಮತ್ತು ಕಬಳಿಸಲು ಹೊರಟಿರುವ ಜಮೀನಿನಲ್ಲಿ ಯಾವುದೇ ಬೆಳೆ ಬೆಳೆದಿಲ್ಲ. ಜಾಗದಲ್ಲಿ ಕಾಡು ಜಾತಿಯ ಬೆಲೆ ಬಾಳುವ ಮತ್ತಿ, ಹೊನ್ನೆ, ತೇಗ, ಬೀಟೆ ಜಾತಿಯ ಮರಗಳಿವೆ.
ಸೊರಬ ಪಟ್ಟಣದಲ್ಲಿ ವಾಸವಾಗಿದ್ದು, ರಸಗೊಬ್ಬರ ವ್ಯಾಪಾರ ನಡೆಸುತ್ತಿರುವ ವ್ಯಕ್ತಿಯೊಬ್ಬರು ಇಂತಹ ಕೋಟ್ಯಾಂತರ ರು. ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಕಂದಾಯ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ತಮ್ಮ ಹೆಸರಿಗೆ ಆರ್.ಟಿ.ಸಿ. ಮಾಡಿಕೊಂಡಿದ್ದಾರೆ ಎಂದು ರೈತರು ಈ ವೇಳೆ ಆರೋಪಿಸಿದರು.
ಈ ಸಮಯದಲ್ಲಿ ಹಾಜರಿದ್ದ ಎಸಿಎಫ್ ಅನ್ವರ್ಖಾನ್ ಮಾತನಾಡಿ, ಅರಣ್ಯದಿಂದ ಕೂಡಿರುವ ಈ ಜಾಗವನ್ನು ಉಳಿಸುವ ಜವಾಬ್ದಾರಿ ನಮ್ಮದಾಗಿದ್ದು, ಇದರ ಬಗ್ಗೆ ಸಮಗ್ರ ಮಾಹಿತಿ ಪಡೆದು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಜಿಪಂ ಸದಸ್ಯ ಗುರುಕುಮಾರ್ ಪಾಟೀಲ್, ಆರ್ಎಫ್ಒ ನಾಗನಗೌಡ ಪಾಟೀಲ್, ಉಪ ತಹಶೀಲ್ದಾರ್ ಮಾದಪ್ಪ, ರಾಜಸ್ವ ನಿರೀಕ್ಷಕ ಕಿರಣ್, ಸರ್ವೇಯರ್ ಅನಿಲ್ ಕುಮಾರ್, ಬಂಗಾರಪ್ಪ, ಫಾರೆಸ್ಟ್ ರಲಿಯೋ, ಗಾರ್ಡ್ ಅನಿಲ್, ಗ್ರಾಪಂ ಸದಸ್ಯ ದಯಾನಂದ, ಕೆರಿಯಮ್ಮ, ಗ್ರಾಮಸ್ಥರಾದ ಎಂ. ರಾಜು, ಜಿ.ಸಿ. ನಾಯ್ಕ, ಶಿವಾಜಿ ನಾಯ್ಕ, ದಿವಾಕರ, ನಾಗರಾಜಗೌಡ, ನವೀನ್ಗೌಡ, ಈಶ್ವರ, ಪುಟ್ಟರಾಜ ಎಸ್. ಗೌಡ, ಶಾಂತಪ್ಪ, ರಾಮಚಂದ್ರ, ರುದ್ರಗೌಡ, ಹಾಗೂ ಅಂದವಳ್ಳಿ ಮತ್ತು ಕಡಸೂರು ಗ್ರಾಮಸ್ಥರು, ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

