ಒಳ ಮೀಸಲಾತಿ ಕಲ್ಪಿಸಲು ಆಗ್ರಹ
ಶಿವಮೊಗ್ಗ: ಎ.ಜೆ. ಸದಾಶಿವ ಆಯೋಗದ ಶಿಫಾರಸ್ಸಿನಂತೆ ಮಾದಿಗ ಸಮುದಾಯಕ್ಕೆ ಶೇ. 6ರಷ್ಟು ಒಳ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ಮಾದಿಗ ದಂಡೋರ ಸಮಿತಿ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಾಮಾಜಿಕ ವ್ಯವಸ್ಥೆಯಲ್ಲಿ ಧ್ವನಿ ಕಳೆದುಕೊಂಡಿರುವ ಪರಿಶಿಷ್ಟ ಜಾತಿಯಲ್ಲಿನ ಮಾದಿಗ ಹಾಗೂ ಛಲವಾದಿ ಸಮುದಾಯಗಳು ಇಂದಿಗೂ ಸಂಕಷ್ಟದ ಜೀವನ ನಡೆಸುತ್ತಿವೆ. ಸರ್ಕಾರದಿಂದ ನ್ಯಾಯಯುತ ಸೌಲಭ್ಯ ದೊರಕಿಲ್ಲ.
ಪರಿಶಿಷ್ಟ ಜಾತಿಯಲ್ಲಿ ಮಾದಿಗ, ಛಲವಾದಿ, ಮೋಚಿ, ಅರುಂಧತಿಯಾರ್ (ಆದಿ ಕರ್ನಾಟಕ, ಆದಿ ದ್ರಾವಿಡ) ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ ಎಂದು ಎಲ್.ಡಿ. ಹಾವನೂರ್ ಅವರು ಸರ್ಕಾರಕ್ಕೆ 1976ರಲ್ಲಿ ಸಲ್ಲಿಸಿ, ಈ ಸಮುದಾಯಗಳಿಗೆ ಎಲ್ಲಾ ಕ್ಷೇತ್ರಗಳಿಂದಲೂ ಸೌಲಭ್ಯ ದೊರೆತಿಲ್ಲ ಎಂದು ತಿಳಿಸಿದ್ದರು. ಆದರೂ ಸರ್ಕಾರ ಗಮನ ಹರಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಶಿಫಾರಸು ಮಾಡಿತ್ತು: ನಂತರ 2005ರಲ್ಲಿ ಪರಿಶಿಷ್ಟ ಜಾತಿ ವಿಚಾರಣಾ ಆಯೋಗ ನ್ಯಾಯಾಧೀಶ ಎ.ಜೆ. ಸದಾಶಿವರವರ ನೇತೃತ್ವದಲ್ಲಿ ರಚಿಸಲಾಗಿತ್ತು.
ಆಯೋಗವು ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಿತ್ತು. ಈ ವರದಿಯಲ್ಲಿ ಮಾದಿಗ ಸಮಾಜಕ್ಕೆ ಅಥವಾ ಇತರೆ ಸಮಾಜಕ್ಕೆ ಮೀಸಲಾತಿಯಲ್ಲಿ ಆಗುತ್ತಿದ್ದ ತಾರತಮ್ಯ ಪರಿಶಿಷ್ಟ ಜಾತಿಗಳಲ್ಲಿನ ಇತರೆ ಎಲ್ಲಾ ಜಾತಿಗಳಿಗಿಂತ ಹೆಚ್ಚಾಗಿದ್ದು, ರಾಜಕೀಯ, ಆರ್ಥಿಕ, ಶೈಕ್ಷಣಿಕ ಹಾಗೂ ಸರ್ಕಾರಿ ಕ್ಷೇತ್ರಗಳಲ್ಲಿ ಹಿಂದುಳಿದಿವೆ. ಈ ಹಿನ್ನೆಲೆಯಲ್ಲಿ ಶೇ. 6ರಷ್ಟು ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಆಯೋಗವು ರಾಜ್ಯ ಸರ್ಕಾರಕ್ಕೆ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು ಎಂದು ಪ್ರತಿಭಟನಾಕಾರರು ತಿಳಿಸಿದರು.
ಆದ್ಯತೆ ನೀಡಿ: ಈ ಹಿಂದಿನ ಸರ್ಕಾರ ವರದಿಯಲ್ಲಿನ ಶಿಫಾರಸು ಅನುಷ್ಠಾನಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿತ್ತು. ಕೂಡಲೇ ರಾಜ್ಯ ಸರ್ಕಾರ ಸಮಿತಿಯ ಶಿಫಾರಸು ಜಾರಿಗೊಳಿಸಬೇಕು.
ಮಾದಿಗ, ಛಲವಾದಿ, ಆದಿ ಕರ್ನಾಟಕ, ಆದಿ ಜಾಂಬವ ಹಾಗೂ ಅಸ್ಪ್ರಶ್ಯ ವರ್ಗಗಳಿಗೆ ಅನ್ವಯವಾಗುವಂತೆ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಬೇಕು. ಸಾಲ ಮಂಜೂರಾತಿಯಲ್ಲಿ ಈ ವರ್ಗಕ್ಕೆ ಆದ್ಯತೆ ನೀಡಬೇಕು.
ಡಾ. ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ಈ ಹಿಂದಿದ್ದ ನೇರ ಸಾಲ ಯೋಜನೆ ಮುಂದುವರಿಸಬೇಕು. ಶಾದಿ ಭಾಗ್ಯ ಯೋಜನೆಯನ್ನು ಈ ವರ್ಗಗಳಿಗೂ ವಿಸ್ತರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ರಾಮಪ್ಪ, ಅಣ್ಣಪ್ಪ, ಮೂರ್ತಿ, ಲಕ್ಷ್ಮಯ್ಯ, ಅಡುವಪ್ಪ, ವಿಜೇಂದ್ರ, ಬಸವರಾಜ್, ಸುರೇಶ್, ಚಂದ್ರಪ್ಪ, ಮಂಜುನಾಥ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

