ಎಂಇಎಸ್ ಶಾಸಕರ ಗಡಿಪಾರಿಗೆ ಕರವೇ ಆಗ್ರಹ
ಕ.ಪ್ರ. ವಾರ್ತೆ, ಶಿಕಾರಿಪುರ, ಡಿ.5
ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿಯ ಬಗ್ಗೆ ಸರ್ಕಾರಕ್ಕೆ ಅಭಿಮಾನವಿದ್ದಲ್ಲಿ, ನಾಡಿನ ಬಗ್ಗೆ ಅತ್ಯಂತ ತುಚ್ಛವಾಗಿ ವರ್ತಿಸುತ್ತಿರುವ ಎಂಇಎಸ್ ಶಾಸಕರನ್ನು ಗಡಿಪಾರು ಮಾಡುವಂತೆ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಯಲ್ಲಪ್ಪ ಸರ್ಕಾರಕ್ಕೆ ಸವಾಲು ಹಾಕಿದರು.
ಗುರುವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಬೆಳಗಾವಿಯ ಎಂಇಎಸ್ ಶಾಸಕರ ನಾಡ ದ್ರೋಹದ ಕಾರ್ಯಚಟುವಟಿಕೆಯನ್ನು ಖಂಡಿಸಿ ಹಾಗೂ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಅಧಿಕಾರ ಶಾಶ್ವತವಲ್ಲ ಎಂದ ಅವರು ದೊರೆತ ಅವಕಾಶದಲ್ಲಿ ಸೂಕ್ತ ರೀತಿಯಲ್ಲಿ ನಾಡದ್ರೋಹಿಗಳಿಗೆ ಪಾಠ ಕಲಿಸುವ ಮೂಲಕ ಸಮಸ್ತ ಕನ್ನಡಾಭಿಮಾನಿಗಳ ಪರವಾಗಿ ಉತ್ತರ ನೀಡಿ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವಂತೆ ಸಲಹೆ ನೀಡಿದರು.
ತಾಲೂಕಿನ ರೈತರು ಬೆಳೆದ ಬತ್ತ, ಜೋಳವನ್ನು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಖರೀದಿಸುವುದಾಗಿ ತಿಳಿಸಿ ಇದುವರೆಗೂ ಖರೀದಿ ಆರಂಭಿಸದೆ ಅಧಿಕಾರಿಗಳು ಖಾಸಗಿ ವ್ಯಾಪಾರಸ್ಥರ ಜತೆ ಶಾಮೀಲಾಗಿ ರೈತ ವರ್ಗವನ್ನು ಮೋಸಗೊಳಿಸುವ ಹುನ್ನಾರ ರೂಪಿಸಿದ್ದು ಈ ಕೂಡಲೇ ಎಕರೆಗೆ 25 ಕ್ವಿಂ. ಮಿತಿಯನ್ನು ಸಡಿಲಗೊಳಿಸಿ ಖರೀದಿ ಪ್ರಕ್ರಿಯೆಯನ್ನು ತುರ್ತಾಗಿ ಆರಂಭಿಸಲು ಒತ್ತಾಯಿಸಿದ ಅವರು ರೈತರಿಗೆ ಪರವಾನಗಿಯನ್ನು ಉದ್ದೇಶಪೂರ್ವಕ ವಾಗಿ ನಿಧಾನವಾಗಿ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಕರವೇ ನಗರಾದ್ಯಕ್ಷ ಭಂಡಾರಿ ರವಿ ಮಾತನಾಡಿ, ನಿತ್ಯ ನಾಡದ್ರೋಹ ಕಾರ್ಯದಲ್ಲಿ ತಲ್ಲೀನವಾಗಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಿ ಶಾಸಕರನ್ನು ಅನರ್ಹಗೊಳಿಸುವ ಮೂಲಕ ಸಮಸ್ತ ಕನ್ನಡಿಗರು, ನಾಡಿನ ಬಗ್ಗೆ ಅಭಿಮಾನ ಹೆಚ್ಚಿಸುವ ಕಾರ್ಯಕ್ಕೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಎಂಇಎಸ್ ಸಂಘಟನೆ ನಿಷೇಧಿಸಿ ಶಾಸಕರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ಉಪ ತಹಸೀಲ್ದಾರ್ ರಾಜೀವ್ ಮೂಲಕ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಂಜುನಾಥರಾವ್ ಜಿದ್ದು, ಮಾರ್ತಾಂಡಪ್ಪ, ಚೋರಡಿ ಗಿಡ್ಡೇಶ್, ಶಿವಾಜಪ್ಪ, ಕೆಂಚೋಜಿರಾವ್, ಧರ್ಮೋಜಿರಾವ್, ಶ್ರೀಧರ್, ಅನ್ಸಾರ್, ಜಮೀರ್ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

